ಕಾರವಾರ : ತಮ್ಮ ಹೇಳಿಕೆಗಳ ಮುಖಾಂತರವೇ ಸುದ್ದಿಯಾಗುತ್ತಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಇದೀಗ ಮತ್ತೆ ಹೇಳಿಕೆ‌ ನೀಡಿ ದಲಿತ ಪರ ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಸಂಬದ್ಧ ಹೇಳಿಕೆಗಳನ್ನು  ನೀಡುತ್ತಿರುತ್ತಾರೆ ಎಂದು ಆರೋಪಿಸಿ, ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೊಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಉತ್ತರಕನ್ನಡ ಜಿಲ್ಲೆಯ ದಲಿತಪರ ಸಂಘಟನೆಗಳ ಮುಖಂಡರು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಕುಮಟಾ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ಧತೆ ಚುರುಕು: ಅಲ್ಲಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ

ಕಾರವಾರ ಪತ್ರಿಕಾ ಭವನದಲ್ಲಿ ಇಂದು ನಡೆದ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದ ಬಣದ ರಾಜ್ಯಾದ್ಯಕ್ಷ ಚಂದ್ರಕಾಂತ ಎಸ್ ಕಾದ್ರೋಳ್ಳಿ ಅವರು, ಮುಂದಿನ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆಗೆ ಟಿಕೆಟ್ ಕೊಡಬಾರದು, ಕೊಟ್ಟಿದ್ದೇ ಆದರೆ ಉತ್ತರ ಕನ್ನಡ ಜಿಲ್ಲೆಯ ದಲಿತರು ಒಗ್ಗಟ್ಟಾಗಿ ಅವರನ್ನು ಸೋಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರೂ ಇಲ್ಲಿವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅಲ್ಲದೇ ದಲಿತರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಜಿಲ್ಲೆಯಲ್ಲಿರುವ ದಲಿತ ಕೇರಿಗಳ ಅಭಿವೃದ್ಧಿಗೆ ಇಲ್ಲಿವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಹಾಗಾಗಿ ಈ ಬಾರಿ ಅನಂತಕುಮಾರ್​ಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದರು.

RELATED ARTICLES  ರಕ್ತದಾನದ ಮೂಲಕ ಮಡಿದ ಯೋಧರಿಗೆ ಶ್ರದ್ಧಾಂಜಲಿ: ಮಾದರಿಯಾಯ್ತು ಅಂಕೋಲಾದ ಈ ಸಂಘಟನೆ.

ಇದು ಕೇವಲ ಪತ್ರಿಕಾ‌ಹೇಳಿಕೆಗೇ ಸೀಮಿತವಾಗಿರದೇ ಅಕ್ಟೋಬರ್ 30 ರಂದು ಜಿಲ್ಲೆಯ ದಲಿತಪರ ಸಂಘಟನೆಗಳು ಮತ್ತು ಮಹಿಳಾಪರ ಸಂಘಟನೆಗಳು ಈ ಕುರಿತು ಬೃಹತ್ ಪ್ರತಿಭಟನೆ ನಡೆಸಲಿವೆ ಎಂಬ ಬಗ್ಗೆಯೂ ಮಾಹಿತಿ ಇದೇ ಸಂದರ್ಭದಲ್ಲಿ‌ ಲಭ್ಯವಾಗಿದೆ.