ಆಷಾಢ ಶುಕ್ರವಾರದ ಲಕ್ಷ್ಮೀ ಪೂಜೆ ಮತ್ತು ಬಹುಳ ಅಮವಾಸ್ಯೆಯಂದು ಮಾಡುವ ಅಳಿಯನ ಅಮವ್ಯಾಸೆ ಬಿಟ್ಟರೆ,ಈ ಮಾಸದಲ್ಲಿ ಮತ್ಯಾವುದೇ ಶುಭಕಾರ್ಯಗಳನ್ನು ಮಾಡುವ ಸಂಪ್ರದಾಯ ನಮ್ಮಲ್ಲಿಲ್ಲ. ಈ ಭೀಮನ ಅಮವಾಸ್ಯೆಯನ್ನೇ ಅಳಿಯನ ಅಮವಾಸ್ಯೆ,ಆಟಿ ಅಮವಾಸ್ಯೆ, ಕೊಡೆ ಅಮವಾಸ್ಯೆ, ಜ್ಯೋತಿರ್ಭಿಮೇಶ್ವರ ವೃತ,ಪತಿಯ ಪೂಜೆ ಎಂದೆಲ್ಲಾ ಕರೆಯುವುದೂ ಉಂಟು. ಮದುವೆಯಾಗದ ಹೆಣ್ಣು ಮಕ್ಕಳು ಒಳ್ಳೆಯ ಪತಿ ಸಿಗಲೆಂದೂ, ಮದುವೆಯಾದ ಹೆಣ್ಣು ಮಕ್ಕಳು ಪತಿಯ ಆಯಸ್ಸು ಹೆಚ್ಚಾಗಲೆಂದು ಭೀಮನ ಅಮವಾಸ್ಯೆಯನ್ನು ಆಚರಿಸುತ್ತಾರೆ. ಕೆಲವರ ಪ್ರಕಾರ ಆಷಾಢದಲ್ಲಿ ಗಂಡನ ಮನೆಯನ್ನು ಬಿಟ್ಟು ತವರಿಗೆ ಬಂದಿರುವ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಲು ಬಂದಿರುವ ಅಳಿಯನಿಗೆ ಉಪಚರಿಸಿ,ಯಥಾಶಕ್ತಿ ಉಡಗೊರೆಯಿತ್ತು, ಮಗಳಿಂದ ಅಳಿಯನ ಪಾದಪೂಜೆ ಮಾಡಿಸಿ ಸಂಪ್ರದಾಯಬದ್ಧವಾಗಿ ಪತಿಯ ಗೃಹಕ್ಕೆ ಕಳುಹಿಸಿಕೊಡುತ್ತಿರೆಂಬ ಮಾತಿದೆ. ಆದರೆ ಪುರಾಣ ಕಥೆಗಳನ್ನು ಓದುವಾಗ ಅಲ್ಲಿ ವಿವಿಧ ರೀತಿಯ ಕಥೆಗಳನ್ನು ಉಲ್ಲೇಖ ಮಾಡಿದ್ದಾರೆ.
ಶಿವನು ಪಾರ್ವತಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದು ಇದೇ ಭೀಮನ ಅಮಾವಾಸ್ಯೆ ದಿನ. ಶಿವ-ಪಾರ್ವತಿಯರೆಂಬ ಪ್ರಕೃತಿ-ಪುರುಷರ ಸಮಾಗಮವಾದ ಈ ಶುಭದಿನ, ನೆಮ್ಮದಿ ಸಂತೃಪ್ತಿ,ಸಮೃದ್ಧಿ, ಸಂತಾನವೆಂಬ ಹಲವು ಶಕ್ತಿಗಳ ಸಂಕೇತವೆಂದು ನಂಬಿದ್ದಾರೆ. ಹೀಗಾಗಿ ಈ ದಿನದಂದು ಹೆಂಗಳೆಯರು ವೃತ ಕೈಗೊಂಡು ಶಿವ ಮತ್ತು ಪಾರ್ವತಿಯನ್ನು ಆರಾಧಿಸಿದರೆ ಅವರಿಗೆ ಉತ್ತಮನಾದ ಗಂಡ ಸಿಗುತ್ತಾನೆ, ವಿವಾಹಿತರಾದರೆ ಅವರ ಗಂಡನ ಆಯಸ್ಸು ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ.
ಹಿಂದೆ ಪಾಂಡವರು ವಾನಪ್ರಸ್ಥಕ್ಕೆಂದು ಹೊರಟು ದಂಡಕಾರಣ್ಯ ಸೇರುತ್ತಾರೆ. ಹತ್ತಿಕಾಳು ಚುಚ್ಚಿದರೂ ನೋವಲ್ಲಿ ಒದ್ದಾಡುವ ನಯ-ನಾಜೂಕಿನ ರಾಜಕುಮಾರಿ ದ್ರೌಪದಿ,ಬರೀ ಕಲ್ಲು-ಮುಳ್ಳುಗಳಿರುವಂತಹ ದಟ್ಟ ಕಾಡಲ್ಲಿ ನಡೆಯಲಾಗದೇ ಒಮ್ಮೆ ಬವಳಿ ಬಂದು ಬೀಳುತ್ತಾಳೆ. ‘ವಾನಪ್ರಸ್ಥಕ್ಕೆಂದು ಹೊರಟವರು ಹಿಂತಿರುಗಿ ನೋಡುವಂತಿಲ್ಲ’ ಎಂಬ ಮಾತನ್ನು ಚಾಚೂತಪ್ಪದೇ ಪಾಲಿಸುವ ಭರದಲ್ಲಿ ಧರ್ಮರಾಯ,ಅರ್ಜುನ,ನಕುಲ-ಸಹದೇವರು ದ್ರೌಪದಿ ಬಿದ್ದುದು ಗೊತ್ತಾದರೂ ಏನೂ ಮಾಡಲು ತೋಚದವರಂತೆ ಅವಳನ್ನಲ್ಲೇ ಬಿಟ್ಟು ಮುನ್ನಡೆಯುತ್ತಿರುತ್ತಾರೆ. ಆಗ ಭೀಮನು ಆಚಾರ-ವಿಚಾರಗಳ ಬಗೆಗೆ ಅತಿಯಾಗಿ ಯೋಚಿಸದೆ ಹಿಂತಿರುಗಿ ಬಂದು ದ್ರೌಪದಿಯನ್ನು ಹೆಗಲ ಮೇಲೆ ಹೊತ್ತು ಕರೆದೊಯ್ಯುತ್ತಾನಂತೆ. ಇಂತಹ ಅನೇಕ ಸಂದರ್ಭಗಳಲ್ಲಿ ಭೀಮನೊಬ್ಬ ಆದರ್ಶ ಪತಿಯೆನಿಸಿಕೊಂಡಿರುವುದಕ್ಕೇ, ಭೀಮನಂತ ಗಂಡ ಬೇಕೆಂದು ‘ಭೀಮನ ಅಮವಾಸ್ಯೆ’ ವೃತವನ್ನಾಚರಿಸುವ ಸಂಪ್ರದಾಯ ಜಾರಿಗೆ ಬಂತೂ ಅಂತಲೂ ಹಿರಿಯರು ಹೇಳುತ್ತಾರೆ.
ಇನ್ನೊಂದು ಪುರಾಣ ಕಥೆಗಳ ಪ್ರಕಾರ,ಬಡ ಬ್ರಾಹ್ಮಣ ದಂಪತಿಗಳು ತಮ್ಮ ಮಗಳನ್ನು ಮಗ-ಸೊಸೆಯ ಬಳಿ ಬಿಟ್ಟು ಕಾಶಿಯಾತ್ರೆಗೆ ಹೊರಡುತ್ತಾರೆ, ಹಿಂತಿರುಗಿ ಬರುವುದು ತಡವಾದರೆ ಕನ್ಯೆಗೆ ತಕ್ಕ ವರನನ್ನ ಹುಡುಕಿ ಮದುವೆಯನ್ನು ಮಾಡೆಂದು ಭಿನ್ನವಿಸಿ ಹೊರಡುತ್ತಾರೆ. ಕೆಲಸಮಯದ ಬಳಿಕ ಪಕ್ಕದೂರಿನ ರಾಜಕುಮಾರನು ಮಾರಣಾಂತಿಕ ಖಾಯಿಲೆಯಿಂದ ನರಳುತ್ತಿರುತ್ತಾನೆ,ಅವನಿಗೆ ತಕ್ಷಣ ಒಬ್ಬ ಬ್ರಾಹ್ಮಣ ಹುಡುಗಿಯೊಂದಿಗೆ ವಿವಾಹ ಮಾಡಿದರೆ ಗಂಡಾಂತರ ತಪ್ಪುತ್ತದೆ ಎಂಬ ಜ್ಯೋತಿಷಿಗಳ ಮಾತನ್ನು ನಂಬಿದ ರಾಜ,ತನ್ನ ಮಗನನ್ನು ಮದುವೆಯಾದವರಿಗೆ ಯಥೇಚ್ಛ ಧನಕನಕ ಕೊಡುವೆನೆಂದು ಎಲ್ಲೆಡೆ ಢಂಗೂರ ಹೊರಡಿಸುತ್ತಾನೆ.ಈ ವಿಷಯ ಕನ್ಯೆಯ ಅಣ್ಣನಿಗೆ ತಿಳಿಯುತ್ತದೆ. ಮದುವೆಯ ಖರ್ಚು ಉಳಿಸಲು ಮತ್ತು ರಾಜನ ಬೊಕ್ಕಸದಿಂದ ಬರುವ ಧನ-ಕನಕದ ಆಸೆಗಾಗಿ ತನ್ನ ತಂಗಿಯನ್ನು ಮರಣಶಯ್ಯೆಯಲ್ಲಿರುವ ರಾಜಕುಮಾರನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಮದುವೆಯಾದ ದಿನವೇ ರಾಜಕುಮಾರನ ಪ್ರಾಣಪಕ್ಷಿ ಹಾರಿಹೋಗುತ್ತದೆ. ಪತಿಯ ಶವದೊಡನೆ ರೋಧಿಸುತ್ತಿದ್ದ ಶಿವಭಕ್ತೆಯಾದ ವಧುವು ತನಗೆ ತಿಳಿದಂತೆ ಶಿವಪೂಜೆ ಮಾಡಲು ತೊಡಗುತ್ತಾಳೆ.ಅತ್ಯಂತ ಶೃದ್ಧಾಭಕ್ತಿಯೊಂದಿಗೆ ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸಿದಾಗ ಭಕ್ತಿಗೆ ಮೆಚ್ಚಿ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ರಾಜಕುಮಾರನಿಗೆ ಜೀವದಾನ ನೀಡುತ್ತಾರೆ. ಅಮವಾಸ್ಯೆಯ ದಿನ ಪತಿಯ ಜೀವಕ್ಕಾಗಿ ನಡೆಸಿದ ಪೂಜೆ ನಂತರ ಜ್ಯೋತಿರ್ಭಿಮೇಶ್ವರ ವೃತವೆಂದೂ ಹೇಳಲಾಗುತ್ತದೆ.
ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನ ಹೆಂಗೆಳೆಯರು ಮಂಗಳಸ್ನಾನ ಮಾಡಿ, ಅಕ್ಕಿಯಿಂದ ಪರಿವೃತವಾದ ಕಲಶದಲ್ಲಿ ವರಲಕ್ಷ್ಮಿಯನ್ನು ಆವಾಹನೆ ಮಾಡಿ, ಅದರ ಮೇಲೆರಡು ದೀಪದ ಕಂಭವನ್ನಿಟ್ಟು,ಅದನ್ನು ಸಂಧ್ಯಾಕಾಲದಲ್ಲಿ ಅರ್ಚನೆ ಮಾಡಿ, ಬಲಗೈಗೆ ದಾರ ಕಟ್ಟಿಕೊಂಡು, ಸುಹಾಸಿನಿಯರಿಗೆ ದಕ್ಷಿಣೆ ಸಹಿತ ತಾಂಬೂಲ ನೀಡಿ ಒಂಭತ್ತು ಅಥವಾ ಹದಿನಾರು ವರುಷಗಳ ಕಾಲ ವೃತ ಆಚರಿಸಿ,ಸುಖ ನೆಮ್ಮದಿ ಸಮೃದ್ಧಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ