(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಸಂಪೂರ್ಣ ವಿಶ್ವ ಹಗಲೂ ಇರಳೂ ಅವಿರತವಾಗಿ ಇಷ್ಟೊಂದು ಕಷ್ಟ ಪಡುತ್ತಿರುವದು ಯಾವ ಇಷ್ಟ ಸಾಧಿಸಲಿಕ್ಕೆ ಎಂದು ವಿಚಾರಿಸಿದರೆ ಸುಖಕ್ಕಾಗಿಯೇ ಎಂದು ಕೊನೆಗೆ ಕಂಡುಬರುವದು. ನಮಗೆ ಬೇಕಾದುದು ನಿಜ ಸುಖ! ತ್ರಿಕಾಲಾಬಾಧಿತ ಸುಖ! ಈ ಸುಖದ ಶೋಧ ಮಾಡಿ ಸಾಧನೆಗಳಿಂದ ಅದನ್ನು ಪಡೆದು ಈ ನಿಜ ಸುಖದಿಂದಲೇ ಬದುಕಿ ಬಾಳುವದು ಮಾನವ ಜೀವನದ ಹೆಗ್ಗುರಿ. ಈ ಶಾಶ್ವತ ಸುಖ ವಿಶ್ವದಲ್ಲಿ ಯಾರಿಗೆ ತಾನೇ ಬೇಡ?
‘ಸನಾ ಆತನೋತೀತಿ ಸನಾತನಃ’ ವಿಶ್ವದಲ್ಲೆಲ್ಲಾ ಶಾಶ್ವತ ಸುಖದ ಪ್ರಸಾರ ಮಾಡುವದೇ ಸನಾತನ ಧರ್ಮ! ಇದು ವಿಶ್ವಧರ್ಮ. ಸನಾತನ ಧರ್ಮ ತ್ರಿಕಾಲಾಬಾಧಿತ ಸುಖದ ಸಾಕ್ಷಾತ್ಕಾರ ಮಾಡಿಕೊಡಲು ದೀಕ್ಷೆಗೊಂಡಿದೆ.
ಸತ್ಯವಸ್ತುವಿನ ಅಥವಾ ನಿತ್ಯ-ಸತ್ಯ ಸುಖದ ಜ್ಞಾನವೇ ಸನಾತನ ತತ್ವಜ್ಞಾನ. ಅದರಂತೆ ಶ್ರುತಿ-ಸ್ಮೃತಿ-ಪುರಾಣ-ಇತಿಹಾಸಾದಿ ಪ್ರಮಾಣಗ್ರಂಥೋಪಗ್ರಂಥಗಳಿಂದ ಈ ಸನಾತನ ತತ್ವಜ್ಞಾನ ಅತ್ಯಧಿಕ ಶೋಭೆಗೊಂಡಿದೆ. ತನಗೆ ಬೇಕಾದ ಎಲ್ಲ ಸಲಕರಣೆಗಳಿಂದ ಇದು ತುಂಬಿಕೊಂಡಿದೆ. ಅಂತಹ ಆದರ್ಶ ತೇಜಸ್ವಿ ವ್ಯಕ್ತಿಗಳಿಂದಲೂ ಇದು ಪೂರ್ತಿಗೊಂಡಿದೆ. ಈ ಸನಾತನ ಸಂಸ್ಕೃತಿಯು ಅತಿ ಪ್ರಾಚೀನವಾದದ್ದು. ಜಗತ್ತಿನಲ್ಲಿ, ಭಾರತವರ್ಷದಲ್ಲೇ ಈ ಧರ್ಮ ಪ್ರಾದುರ್ಭಾವವಿದ್ದುದರಿಂದಲೇ ಪಾಶ್ಚಾತ್ಯರೂ ಕೂಡ ‘India is the motherland of philosophy’ ಎಂದಿದ್ದಾರೆ.
ಪರಮಾತ್ಮನ ಸೇವೆಗೆ ಉಪಯುಕ್ತವಾದ ದೇಶ ಮತ್ತು ಜನ್ಮವೇ ಇದು. ನಮ್ಮ ಹಿತವನ್ನು ಕೋರಿ ಶಾಶ್ವತವಾದ ವಸ್ತುವನ್ನು ಗುರುತಿಸಬೇಕಾದರೆ ಈ ಸನಾತನ ಧರ್ಮಕ್ಕೆ ಅಭಿಮುಖವಾಗಿ ಅದರ ಮುಖಕಮಲದಿಂದ ಹೊರಟ ಅಮೃತವಚನವನ್ನು ಆಲಿಸುವದೊಂದೇ ಸಾಧನವಲ್ಲವೇ?