(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಓಂಕಾರಮೂಲ ಮಂತ್ರಾಢ್ಯಃ ಪುನರ್ಜನ್ಮದೃಢಾಶಯಃ|
ಗೋಭಕ್ತೋ ಭಾರತಗುರುರ್ಹಿಂದುರ್ಹಿಂಸನದೂಷಕಃ|| (ಮಾಧವ ದಿಗ್ವಿಜಯ)
ಎಲ್ಲದಕ್ಕೂ, ಎಲ್ಲ ಮಂತ್ರಗಳಿಗೂ ಪ್ರಣವವೇ ಮೂಲವೆಂದು ನಂಬುವವನು, ಸಂಸಾರವಾಸನೆಯಿರುವವರೆಗೆ ಪುನರ್ಜನ್ಮವನ್ನು ಒಪ್ಪುವವನು, ಗೋಭಕ್ತನು, ಭಾರತಧರ್ಮಸಿದ್ಧಾಂತಗಳನ್ನು ಗುರುಸ್ಥಾನದಲ್ಲಿಟ್ಟು ನಡೆದುಕೊಳ್ಳುವವನು, ಹಿಂಸೆಯನ್ನು ನಿಂದ್ಯವಾಗಿ ಕಾಣುವವನು ‘ಹಿಂದು’ ವೆನ್ನಿಸಿಕೊಳ್ಳುವನು.
ಹಿಂದು ಜನರು ಪರಮತ ಸಹಿಷ್ಣುಗಳು. ಆಶ್ರಿತಪಾಲಕರು. ಕಷ್ಟದಲ್ಲಿ ಬಿದ್ದ ಅಸಹಾಯಕನಿಗೆ ಆದಷ್ಟು ಸಹಾಯ ಮಾಡುವದರಲ್ಲಿ ಪ್ರೀತಿಯುಳ್ಳವರು.
ಹಿಂದುರ್ದುಷ್ಟೋ ನ ಭವತಿ ನಾನಾರ್ಯೋ ನ ವಿದೂಷಕ|
ಸದ್ಧರ್ಮಪಾಲಕೋ ವಿದ್ವಾನ್ ಶ್ರೌತಧರ್ಮಪರಾಯಣಃ|| (ರಾಮಕೋಶ)
ಹಿಂದುವು ಎಂದೆಂದಿಗೂ ದುಷ್ಟದುರ್ಜನನಾಗನು. ಹೀನನಾಗನು. ಸಜ್ಜನರನ್ನು ನಿಂದಿಸನು. ಅವನು ಸದೈವ ಸದ್ಧರ್ಮಪಾಲಕನು. ಅವನು ಸಂಪಾದಿಸಿದ ಸದ್ವಿವೇಕವುಳ್ಳ ವಿದ್ವಾಂಸನು. ಅವನು ವೇದ ವಿಧಿಸಿದ ತನ್ನ ಧರ್ಮಕರ್ಮಗಳಲ್ಲಿ ನಿತ್ಯನಿರತನು.
ಹಿಂದುವು ಧಾರ್ಮಿಕ, ಪ್ರಸನ್ನ, ನ್ಯಾಯಪ್ರಿಯ, ಸತ್ಯಸಂಧ, ಕೃತಜ್ಞ, ದೇವರಭಕ್ತ ಮತ್ತು ಗುರುಭಕ್ತನಾಗಿರುವನು. ಪಾತಿವ್ರತ್ಯ, ಏಕಪತ್ನೀವ್ರತಗಳು ಹಿಂದುವಿನ ಶೀಲಗಳನ್ನು ಬೆಳಗುವವು. ವರ್ಣಾಶ್ರಮಗಳು ಹಿಂದೂ ಸಂಸ್ಕೃತಿಯನ್ನು ಗುರುತಿಸುವದು. ಆತ್ಮನಿಷ್ಟೆಯು ಹಿಂದು ಸಂಸ್ಕೃತಿಯ ತಾಯಿಬೇರಾಗಿರುವದು. ವೇದೋಪನಿಷತ್ತಿನ ಮೇಲೆಯೇ ಹಿಂದು ಸಂಸ್ಕತಿಯು ನೆಲೆ ನಿಂತಿರುವದೆಂಬುದನ್ನು ಹಿಂದುವು ಮನಗಂಡಿರುವನು. ಶೀಲವೆಂಬುದು ಹಿಂದುವಿನ ರಕ್ತಗತ ಸಂಸ್ಕಾರವೇ ಸರಿ.
ಹಿಂದು ಧರ್ಮಪ್ರಲೋಪ್ತಾರೋ ಜಾಯಂತೇ ಚಕ್ರವರ್ತಿನಃ|
ಹೀನಂ ಚ ದೂಷಯಂತ್ಯೇವ ಹಿಂದುರಿತ್ಯುಚ್ಯತೇ ಪ್ರಿಯೇ|| (ಮೇರುತಂತ್ರ ಪ್ರ. ೩೩)
ಹಿಂದೂಧರ್ಮವನ್ನು ಅಳಿಸಲು ಪ್ರತಿಜ್ಞೆಮಾಡಿ, ಮತ್ತು ಅದರ ಪೂರ್ತಿಗಾಗಿ ನಿರಲಸತನದಿಂದ ಅಹೋರಾತ್ರಿ ಉತ್ಕಟ ಪ್ರಯತ್ನ ಕೈಕೊಂಬ ಮಹಾ ಮಹಾ ಚಕ್ರವರ್ತಿಗಳು ಆಗಲಿರುವರೆಂದು ಮೇರುತಂತ್ರವೆಂಬ ಗ್ರಂಥದಲ್ಲಿ ಮೊದಲೇ ಹೇಳಿರುವದು ಕಂಡುಬರುತ್ತದೆ.
ಈ ಮೇಲಿನ ಶ್ಲೋಕದಲ್ಲಿಯೇ ‘ದುಷ್ಟರನ್ನು ದೂಷಿಸುವವನೇ ಹಿಂದು’ ಎಂಬ ‘ಹಿಂದು’ ಶಬ್ದದ ವ್ಯಾಖ್ಯೆಯೂ ಇದೆ.
‘ಹಿನಸ್ತಿ ದುರ್ವೃತ್ತೀಃ ಇತಿ ಹಿಂದುಃ’ ತನ್ನ ಅಥವಾ ಪರರ ದುರ್ವೃತ್ತಿಗಳನ್ನು ಸಮೂಲ ನಷ್ಟಪಡಿಸುವವನು ಹಿಂದುವು. ಸದ್ವೃತ್ತಿಯ ಬೆಳೆಯನ್ನು ಬೆಳೆಸಿ, ದುರ್ವೃತ್ತಿಯ ಕೊಳೆಯನ್ನೆಲ್ಲ ಕಳೆದುಹಾಕುವವನೇ ಹಿಂದು. ಹಿಂದುಗಳು ತಮ್ಮ ಧರ್ಮವಿರುದ್ಧ ದಾಳಿಯಾದಲ್ಲಿ ಧರ್ಮವನ್ನು ರಕ್ಷಿಸುವದರಲ್ಲಿ ಪ್ರಾಣಪಣದಿಂದ ಕಾದಾಡುವರು.
ಹಿಂದು ಸಭ್ಯತೆ ವಿಶ್ವದಲ್ಲಿಯೇ ಹೆಸರುಗೊಂಡಿದೆ. ಅದನ್ನು ಪ್ರತಿ ಹಿಂದುವೂ ಅಳಿಯಗೊಡದೆ ಉಳಿಸಿಕೊಳ್ಳಬೇಕು.