ಮುಂದುವರಿದ ಭಾಗ:
ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ ಎಂದರೆ ತಾನು ಮಾಡಿದ ತಪ್ಪಿನಿಂದ ತನಗೆ ಅಥವಾ ತನ್ನ ಮಕ್ಕಳಿಗೆ ನಷ್ಟವಾದರೆ ಮಾತ್ರ ಈ ರೀತಿ ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಪಡುತ್ತಾನೆ. ಅಂದರೆ ತಾನು ಮಾಡಿದ ತಪ್ಪನ್ನು ಸಮರ್ಥಿಸಿಕೊಂಡು, ಬೇರೆ ರೀತಿಯಲ್ಲಿ ಮಾಡಬೇಕಿತ್ತು ಇದರಿಂದ ನನಗೇ ತೊಂದರೆಯಾಯಿತು ಬೇರೆ ರೀತಿಯಲ್ಲಿ ಮಾಡಿದ್ದರೆ ನನಗೆ ತೊಂದರೆಯಾಗುತ್ತಿರಲಿಲ್ಲ ಎಂದು ತನ್ನ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡದೆ ಆ ತಪ್ಪನ್ನೇ ಬೇರೆ ರೀತಿಯಲ್ಲಿ ಮಾಡಬೇಕಿತ್ತು ಎಂದು ಹೇಳುವವರು ಕ್ಷಮೆಗೆ ಅರ್ಹರಾಗುವುದಿಲ್ಲ. ಮನುಷ್ಯ ತಾನು ಮನೆಯನ್ನು ಕಟ್ಟಿಸುವಾಗ ಮರಳು ಕಲ್ಲು ಅಕಸ್ಮಾತ್ ದಾರಿಯಲ್ಲಿ ಹಾಕಿದ್ದು, ಅದನ್ನು ಬೇರೆಯವರು ಎಡವಿ ಬಿದ್ದರೆ ಏನೂ ಅನ್ನಿಸುವುದಿಲ್ಲ. ಬೇರೆ ಕಡೆಯಿಂದ ಹೋಗಬಾರದಿತ್ತೆ ಎಂಬ ಉತ್ತರ ಬರುತ್ತದೆ. ಆದರೆ ತಾನೇ ಅಥವಾ ತನ್ನ ಕುಟುಂಬಸ್ತರು ಬಿದ್ದರೆ ಮಾತ್ರ ಬೇರೆ ಕಡೆ ಹಾಕಿಸಬೇಕಿತ್ತು ಎಂದು ತನ್ನ ತಪ್ಪಿನ ಅರಿವಾಗುತ್ತದೆ. ಇಲ್ಲದಿದ್ದಲ್ಲಿ ಸಾಲು ಸಾಲು ತಪ್ಪಾಗುತ್ತಿದ್ದರೂ ತನ್ನ ಅರಿವಿಗೆ ಬರುವುದಿಲ್ಲ. ಅಕಸ್ಮಾತ್ ಬಂದರೂ ಯೋಚಿಸಲೂ ಹೋಗುವುದಿಲ್ಲ.
ಮನುಷ್ಯ ಯಾವುದಾದರೂ ಒಂದು ಕೆಟ್ಟ ಕೆಲಸ ಮಾಡಲು ಹೊರಟರೆ ಅದರಿಂದ ತೊಂದರೆಗೆ ಸಿಲುಕುತ್ತೇನೆಂದು ತಿಳಿದಿರುತ್ತದೆ. ಮಾಡುತ್ತಿರುವ ಕೆಲಸ ತಪ್ಪು ಎಂದು ತಿಳಿದಿದ್ದರೂ ಸಹ ಅಂತಹ ಕೆಲಸವನ್ನು ಮಾಡಲು ಹೋಗುತ್ತಾನೆ ಅದರಿಂದ ತಾನು ಹೇಗೆ ಕಾನೂನಿನಿಂದ ತಪ್ಪಿಸಿಕೊಳ್ಳಬಹುದೆಂದು ಎಂಬ ದೂರಾಲೋಚನೆ ಮಾಡುತ್ತಾನೆ. ವಿನಃ ಆ ಕೆಲಸವನ್ನು ಮಾಡುವುದು ಬೇಡ ಎಂದೆನಿಸುವುದಿಲ್ಲ. ಏನು ಕೆಟ್ಟ ಕೆಲಸ ಮಾಡಿದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಕಸ್ಮಾತ್ ಸಿಕ್ಕಿಕೊಂಡರೆ ಮಾತ್ರ ಬೇರೆ ರೀತಿಯಲ್ಲಿ ಪ್ರಯತ್ನಿಸಬಹುದಿತ್ತು ಎಂದು ಹೇಳಬಹುದು ಏನು ಮಾಡಿದರೂ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎನಿಸುವುದಿಲ್ಲ. ತಾನು ಮಾಡಿದ ತಪ್ಪಿಗೆ ಶಿಕ್ಷೆಯಾದರೆ, ಶಿಕ್ಷೆ ಕೊಡಿಸಿದವರ ವಿರುದ್ದ ಸೇಡು ತೀರಿಸಿಕೊಳ್ಳಬಹುದು.
ಆದರೆ ತನ್ನ ತಪ್ಪಿನಿಂದ ಬೇರೆಯವರಿಗೆ ತೊಂದರೆಯಾದರೂ ಅಥವಾ ತೊಂದರೆಯಾಗುತ್ತಿದ್ದರೂ ಅದಕ್ಕೆ ತಲೆ ಕೆಡೆಸಿಕೊಳ್ಳುವುದಿಲ್ಲ. ಬೇರೆಯವರು ಬಂದು ತೊಂದರೆಯಾಗುತ್ತಿದೆ ಎಂದು ಹೇಳಿದರೂ ಸಹ ನನ್ನಿಷ್ಟ ನಾನು ಏನು ಬೇಕಾದರೂ ಮಾಡುತ್ತೇನೆ ಎಂಬ ಉದ್ಧಟತನ ತೋರಬಹುದು. ಅದರಲ್ಲೂ ಶ್ರೀಮಂತನಿಂದ ಬಡವನಿಗೆ ತೊಂದರೆಯಾಗುತ್ತಿದ್ದರೆ ಅದು ಕಿವಿಗೆ ಬೀಳುವುದಿಲ್ಲ. ಹೆಚ್ಚಿಗೆ ಕೇಳಿದರೆ ಕೋರ್ಟ್ಗೆ ಹೋಗು ಎಂಬ ಉತ್ತರ ಬರುತ್ತದೆ. ಪಾಪ ಬಡವ ಕೋರ್ಟ್ಗೆ ಹೋಗಿ ಶ್ರೀಮಂತರ ವಿರುದ್ದ ಹೋಗಲು ಸಾಧ್ಯವೇ? ಅಕಸ್ಮಾತ್ ಹೋದರೂ ಸಹ ಅವನನ್ನು ಹೆದರಿಸಿ ಬೆದರಿಸಿ ಕೇಸ್ ವಾಪಸ್ ಪಡೆಯುವಂತೆ ಒತ್ತಾಯ ಮಾಡಬಹುದು.
ಕೆಲವೊಂದು ತಪ್ಪುಗಳು ಕಾನೂನಿಗೆ ವಿರುದ್ದವಾಗಿದೆ ಎಂದು ಗೊತ್ತಿದ್ದರೂ ಸಹ ಅದನ್ನೇ ಮುಚ್ಚುಮರೆ ಯಲ್ಲಿ ಮಾಡಿ ತನ್ನ ಕಾರ್ಯವನ್ನು ಸಾಧಿಸಿಕೊಳ್ಳಬಹುದು. ಉದಾಹರಣೆಗೆ ಚುನಾವಣೆಯಲ್ಲಿ ಹಣ ಹೆಂಡ ನೀಡಬಾರದು ಎಂದು ಹೇಳಿದ್ದರೂ ಸಹ ಯಾರಿಗೂ ತಿಳಿಯದಂತೆ ಹಣವನ್ನು ಮತ್ತು ಹೆಂಡವನ್ನು ಹಂಚಿ ಚುನಾವಣೆಯಲ್ಲಿ ಗೆಲ್ಲಬಹುದು. ಒಟ್ಟಿನಲ್ಲಿ ತನ್ನ ಧ್ಯೇಯ ಈಡೇರಿಕೆಯಾಗಬೇಕು ಹಾಗೂ ಜಯಗಳಿಸಬೇಕು ಎಂಬ ಏಕೈಕ ಉದ್ದೇಶವಿರುತ್ತದೆ. ಇಂತಹ ವಾಮ ಮಾರ್ಗ ಬಿಟ್ಟು ಆಯ್ಕೆಯಾದ ಅವಧಿಯಲ್ಲಿ ಚೆನ್ನಾಗಿ ಕೆಲಸಮಾಡಿ ಜನತೆಯಲ್ಲಿ ವಿಶ್ವಾಸ ಗಳಿಸಿಕೊಂಡಲ್ಲಿ ಮುಂದಿನ ಚುನಾವಣೆಯಲ್ಲಿಯೂ ಜಯ ಗಳಿಸಬಹುದು. ಈ ರೀತಿ ಮಾಡಿದರೆ ಆಯ್ಕೆದಾರರಿಗೂ ಮನಸ್ಸಿನಲ್ಲಿ ಸಂತೋಷ ಇರುತ್ತದೆ. ಒಂದು ರೀತಿಯ ಸಂತಸದ ಜೊತೆಗೆ ಅಭಿಮಾನವೂ ಮೂಡುತ್ತದೆ.
ಮುಂದುವರಿಯುವುದು….