ಮುಂದುವರಿದ ಭಾಗ:

ಆ ವೇಳೆಯಲ್ಲಿ ತನ್ನ ಒಳ ಮನಸ್ಸು, ಹೋಗುತ್ತಿರುವ ವೇಗದಲ್ಲಿಯೇ ಹೋಗೋಣ ಎಂದು ಹೇಳಬಹುದು ಆದರೆ ಹೊರ ಮನಸ್ಸು ವೇಗವಾಗಿ ಹೋಗೋಣ ಎಂದು ಪ್ರೇರೇಪಿಸಿ ಅದರಂತೆ ನಡೆದರೆ ಅಥವ ಪಕ್ಕದಲ್ಲಿ ಕುಳಿತಿರುವವರು ಹುರಿದುಂಬಿಸಿದರೆ ಅಪಾಯಕ್ಕೆ ಸಿಲುಕಬಹುದು. ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡುವಾಗ ಆತುರ ಪಡೆದೆ ಒಂದಲ್ಲ ನಾಲ್ಕಾರೂ ಬಾರಿ ಆಗುಹೋಗುಗಳ ಬಗ್ಗೆ ಪರಾಮರ್ಶಿಸಿ ಆ ಕಾರ್ಯವನ್ನು ಕೈಗೊಂಡರೆ ಅಪಾಯದಿಂದ ಪಾರಾಗಬಹುದು. ಆದರೆ ಯಾವುದೇ ಕೆಟ್ಟ ಕೆಲಸಮಾಡಲು ಹವಣಿಸಿ ಅದರ ಬಗ್ಗೆ ಹತ್ತಲ್ಲ ನೂರು ಬಾರಿ ಯೋಚಿಸಿ ಮಾಡಿದರೂ ಮುಂದೆ ಆಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಟ್ಟ ಕೆಲಸ ಮಾಡುವಾಗ ಸೋತರೆ ಸೋಲಿನ ಜೊತೆಗೆ ಜನಗಳ ನಿಂದನೆ ಎದುರಿಸಬೇಕಾಗುತ್ತದೆ. ಹಣವಂತಾದರೆ ಮುಖತಃ ಹೇಳುವುದಿಲ್ಲ ಪರೋಕ್ಷವಾಗಿ ಹೀಗೆಳೆಯುತ್ತಾರೆ.

ಒಳ್ಳೆಯ ಕೆಲಸ ಮಾಡಿ ಪರಾಜಿತರಾದರೂ ಯಾರೂ ನಿಂದಿಸುವುದಿಲ್ಲ. ಕೆಟ್ಟ ಕೆಲಸ ಮಾಡಲು ಹೋಗಿ ಅದರಲ್ಲಿ ಜಯವನ್ನು ಹೊಂದಿದರೂ ಮಾಡಿರುವ ಕೆಟ್ಟ ಕೆಲಸ ಬೆಳಕಿಗೆ ಬರುವವರೆಗೆ ಅಂದರೆ ಎಲ್ಲರಿಗು ತಿಳಿಯುವವರೆಗೆ ಯಾರೂ ನಿಂದಿಸುವುದಿಲ್ಲ. ಎಲ್ಲರಿಗೂ ತಿಳಿದ ಮೇಲೆ ಜನಗಳ ವಿರೋಧದ ಜೊತೆಗೆ ನಿಂದನೆ ಕೇಳಬೇಕಾಗುತ್ತದೆ.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2)

ಮನುಷ್ಯ ತಾನು ಅರಿಯದೇ ಕೆಲವು ತಪ್ಪುಗಳನ್ನು ಮಾಡುತ್ತಿದ್ದು, ಮಾಡುತ್ತಿರುವ ಕಾರ್ಯವು ತಪ್ಪಾಗಿದೆ ಎಂದು ತಿಳಿದಿದ್ದರೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರೆ ಅಂತಹವನಿಗೆ ಕ್ಷಮೆ ಇರುವುದಿಲ್ಲ. ತಾನು ಮಾಡುತ್ತಿರುವ ಕೆಲಸ ತಪ್ಪಾಗಿದೆ ಎಂದು ತಿಳಿದಿದ್ದು, ಅದರಿಂದ ಬೇರೆಯವರಿಗೆ ತೊಂದರೆಯಾಗುತ್ತಿದ್ದರೂ ಸುಮ್ಮನಿದ್ದು, ಯಾವಾಗ ಇವನಿಗೆ ತಿರುಗುಬಾಣವಾಗುತ್ತದೋ ಆಗ ಎಚ್ಚೆತ್ತುಕೊಂಡು ತಪ್ಪನ್ನು ಸರಿಪಡಿಸಿಕೊಳ್ಳಲು ಯತ್ನಿಸಿದರೆ ಕಾಲ ಮಿಂಚಿಹೋಗಿರುತ್ತದೆ. ಎಲ್ಲೋ ಒಂದು ಕಡೆ ಇಟ್ಟ ಬೆಂಕಿ ತನ್ನ ಕಾಲಿನ ಬುಡದಲ್ಲಿ ಬರುವವರೆಗೂ ಸುಮ್ಮನಿದ್ದು, ಅದು ಹತ್ತಿರ ಬಂದಾಗ ಎಚ್ಚೆತ್ತುಕೊಂಡರೆ ಪ್ರಯೋಜನವಿಲ್ಲ. ಏಕೆಂದರೆ ಎಲ್ಲೋ ಇಟ್ಟ ಬೆಂಕಿ ತನ್ನ ಕಾಲಬುಡದಲ್ಲಿ ಬರುವವರೆಗೆ ಎಲ್ಲವನ್ನೂ ಸುಟ್ಟು ಭಸ್ಮಮಾಡಿರುತ್ತದೆ. ಆ ಸಮಯದಲ್ಲಿ ಉಳಿಸಲು ಏನೂ ಉಳಿದಿರುವುದಿಲ್ಲ.

ಅದೇರೀತಿ ಮನುಷ್ಯನಿಗೆ ತೊಂದರೆಯಾಗುವವರೆಗೂ ಸುಮ್ಮನಿದ್ದು, ನಂತರ ಸರಿಪಡಿಸಲು ಯತ್ನಿಸಿದರೆ ಯಾವ ಪ್ರಯೋಜನವೂ ಇಲ್ಲ. ಮನುಷ್ಯ ತನಗೆ ತಿಳಿಯದೆ ಅಥವಾ ಯಾರ ಒತ್ತಡಕ್ಕೋ ಮಣಿದು ತಪ್ಪು ಮಾಡಿದ್ದು, ತಕ್ಷಣ ಅರಿತುಕೊಂಡು ಸನ್ಮಾರ್ಗದಲ್ಲಿ ಮುನ್ನಡೆದರೆ ಕ್ಷಮಾರ್ಹವಾಗಿರುತ್ತದೆ. ಅಂತಹ ಮನುಷ್ಯನು ಮಾತ್ರ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾನೆ. ಯಾವ ತಪ್ಪಾದರೂ ಬೇರೆಯವರಿಗೆ ತೊಂದರೆಯಾದರೆ ಅದು ಕಾನೂನಿಡಿಯಲ್ಲಿ ಅಪರಾಧವಾಗುತ್ತದೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಾನು ಮಾಡಿದ ತಪ್ಪಿಗೆ ಕಾನೂನಿನಡಿಯಲ್ಲಿ ಶಿಕ್ಷೆಯಾದಾಗ ಪಶ್ಚಾತ್ತಾಪ ಪಡುತ್ತಾನೆ.

RELATED ARTICLES  ದೇಹವೇ ದೇಗುಲ.

ಯಾವ ಕಾರ್ಯವನ್ನು ಮಾಡಿದರೂ ಅದರ ಆಗುಹೋಗುಗಳನ್ನು ಚಿಂತಿಸಿ ತಾನು ಮಾಡುವ ಕಾರ್ಯದಿಂದ ಬೇರೆಯವರಿಗೆ ತೊಂದರೆಯಾಗುತ್ತಿದೆ ಎಂದು ಕಂಡು ಬಂದರೆ ಆ ಕೆಲಸದಿಂದ ಎಷ್ಟೇ ಲಾಭ ಬರುವಂತಿದ್ದರೂ ಆ ಕಾರ್ಯವನ್ನು ಮಾಡಲು ಹೋಗಬಾರದು. ಆಗ ಮನುಷ್ಯತ್ವ ಉಳಿಯುತ್ತದೆ.

ಮನುಷ್ಯ ತಾನು ಸಾಯುವ ಕಡೇಗಾಲದಲ್ಲಿ ಈ ಕಡೆ ಸಾಯಲೂ ಆಗದೆ ಆ ಕಡೆ ಬದುಕಲೂ ಆಗದೆ ನರಳುತ್ತಾ ಮರಣಶಯ್ಯೆಯಲ್ಲಿದ್ದಾಗ ಮಾತ್ರ ತಾನು ಚಿಕ್ಕಂದಿನಿಂದಲೂ ಮಾಡಿದ ಅಪರಾಧಗಳು ಒಂದೊಂದೇ ಕಣ್ಣಮುಂದೆ ಬರುತ್ತಾ ಇರುತ್ತದೆ. ಆಗ ಅಯ್ಯೋ ಈ ರೀತಿ ತಪ್ಪು ಮಾಡಬಾರದಿತ್ತು, ಬೇರೆಯವರಿಗೆ ತೊಂದರೆ ಕೊಟ್ಟಿದ್ದಕ್ಕೆ ನನಗೆ ಈಗ ನರಳುವ ಪರಿಸ್ಥಿತಿ ಬಂದಿದೆ ಎಂಬ ಅಪರಾಧ ಪ್ರಜ್ಞೆ ಕಾಡುತ್ತದೆ. ಆಗ ತನ್ನ ತಪ್ಪಿನ ಅರಿವಾಗಿ ತಾನೇ ಪಶ್ಚಾತ್ತಾಪ ಪಡುತ್ತಾ ತನ್ನ ಹಿತೈಷಿಗಳಿಗೂ ಹೇಳುವ ಪ್ರಯತ್ನವನ್ನು ಮಾಡಿ ತನ್ನ ಹೃದಯದ ಭಾರವನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.