ಕಳೆದುಹೋಗುವ ಭಾವನೆಗಳು:

ಮನುಷ್ಯನು ಭಾವನಾ ಜೀವಿ, ಭಾವನೆಗಳು ಇಲ್ಲದಿದ್ದರೆ ಮನುಷ್ಯರಾಗಿರಲು ಸಾಧ್ಯವಿಲ್ಲ. ದುಃಖಬಂದಾಗ ಅಳುತ್ತಾ, ಸಂತೋಷ ಬಂದಾಗ ನಗುತ್ತಾ, ಬೇರೆಯವರ ಕಷ್ಟಗಳಿಗೆ ಸ್ಪಂದಿಸುವಂತಹ ಹೃದಯದ ಭಾವನೆಗಳನ್ನು ಹೊಂದಿರುವವನೇ ಮನುಷ್ಯನಾಗಲು ಸಾಧ್ಯ. ಪ್ರೀತಿಸುವ ಹೃದಯಗಳಿಗೆ ಭಾವನೆಗಳು ಬಹುಮುಖ್ಯವಾಗಿರುತ್ತದೆ.

ಇಂತಹ ಭಾವನೆಗಳು ತಾನಾಗಿಯೇ ಕಳೆದುಹೋಗಲು ಅಥವಾ ಮನುಷ್ಯ ತಾನಾಗಿಯೇ ಕಳೆದುಕೊಳ್ಳಲು ಇದೇನು ವಸ್ತುವೇ ಎನ್ನಬಹುದು. ಆದರೆ ಈ ಭಾವನೆಗಳು ಹಣಕ್ಕಿಂತ ಮಿಗಿಲಾದದದ್ದು ಎಂದರೆ ತಪ್ಪಾಗಲಾರದು. ಹಣವನ್ನು ಯಾರು ಬೇಕಾದರೂ ಸಂಪಾದಿಸಬಹುದು ಅಕಸ್ಮಾತ್ ಹಣವು ಕಳೆದುಹೋದರೂ ಬೇರೆ ಮೂಲಗಳಿಂದ ಸಂಪಾದನೆ ಮಾಡಬಹುದು. ಆದರೆ ಭಾವನೆಗಳು ಬೇಗ ಕಳೆದುಹೋಗುತ್ತದೆ ಆದರೆ ಸುಲಭವಾಗಿ ಸಂಪಾದಿಸಲು ಆಗುವುದಿಲ್ಲ. ಸಂಪಾದಿಸಿದರೂ ಬಹಳ ಎಚ್ಚರಿಕೆಯಿಂದ ರಕ್ಷಿಸಬೇಕು. ಇಲ್ಲದಿದ್ದಲ್ಲಿ ಭಾವನೆಗಳ ಜೊತೆಗೆ ಸಂಬಂಧಗಳೇ ಮುರಿದುಹೋಗುವ ಅಪಾಯ ಇರುತ್ತದೆ. ಭಾವನೆಗಳು ಮನಸ್ಸಿನಲ್ಲಿ ಹುಟ್ಟುವಂತಹುದು. ಭಾವನೆಗಳು ಹುಟ್ಟಲು ಯಾವುದಾದರೂ ಕಾರಣ ಇರಬೇಕು. ಸುಮ್ಮ ಸುಮ್ಮನೆ ಯಾರ ಮನಸ್ಸಿನಲ್ಲಿಯೂ ಭಾವನೆಗಳು ಹುಟ್ಟುವುದಿಲ್ಲ.

ಭಾವನೆಗಳು ಅನೇಕ ರೀತಿಯಲ್ಲಿ ಇರುತ್ತದೆ. ಪ್ರೀತಿಯ ಭಾವನೆ, ಅಭಿಮಾನದ ಭಾವನೆ, ದ್ವೇಷದ ಭಾವನೆ, ತಿರಸ್ಕಾರದ ಭಾವನೆ, ಅಹಂಕಾರದ ಭಾವನೆ, ಭಕ್ತಿಯ ಭಾವನೆ ಹೆಮ್ಮೆ ಗೌರವದ ಭಾವನೆ ಸ್ವಾರ್ಥ ಮತ್ತು ನಿಸ್ವಾರ್ಥ ಭಾವನೆಗಳು ಹಾಗೂ ಹೆದರಿಕೆಯ ಭಾವನೆಗಳು ಹೀಗೆ ಹಲವಾರು ಭಾವನೆಗಳು ಬೇರೆ ವ್ಯಕ್ತಿಗಳನ್ನು ನೋಡಿದ ತಕ್ಷಣ ಅಥವಾ ಸಮಯಕ್ಕೆ ತಕ್ಕಂತೆ, ಅಥವಾ ಪರಿಸ್ಥಿತಿಗೆ ಅನುಗುಣವಾಗಿ ಮನುಷ್ಯನ ಹೃದಯದಲ್ಲಿ ಹೊರಹೊಮ್ಮುತ್ತವೆ. ಇಂತಹ ಭಾವನೆಗಳು ವ್ಯಕ್ತಿಯ ಗುಣಗಳು ಮಾತಿನ ವೈಖರಿಗಳ ಮೇಲೆ ಮತ್ತು ಮನುಷ್ಯ ಮಾಡುವ ಕಾರ್ಯಗಳ ಮೇಲೆ ಅವಲಂಬಿತವಾಗಿರುತ್ತದೆ.

ಮೊದಲಿಗೆ ಪ್ರೀತಿಯ ಭಾವನೆಯಲ್ಲಿ ತಾಯಿ ಮಗುವಿನ ಪ್ರೀತಿ ಶ್ರೇಷ್ಠವಾದದ್ದು ಎಂದರೆ ತಪ್ಪಾಗುವುದಿಲ್ಲ. ಆ ಪ್ರೀತಿಯಲ್ಲಿ ಯಾವುದೇ ಅಹಂಕಾರ, ಉದಾಸೀನ ಕಲ್ಮಶಗಳು ಇರುವುದಿಲ್ಲ. ಸ್ವಾರ್ಥತೆ ಇರುವುದಿಲ್ಲ. ಮನುಷ್ಯ ಮಗುವಾಗಿ ಬಂದ ತಕ್ಷಣ ಸಿಗುವುದೇ ತಾಯಿಯ ಪ್ರೀತಿ, ನಂತರದ ದಿನಗಳಲ್ಲಿ ಮನುಷ್ಯನ ನಡವಳಿಕೆಗಳ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಒಂದು ಹೆಣ್ಣಿಗೆ ತಾನು ತಾಯಿಯಾಗುತ್ತಾ ಇದ್ದೇನೆಂದು ತಿಳಿದ ತಕ್ಷಣ ತನ್ನ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಅಪಾರವಾಗಿ ಪ್ರೀತಿಯ ಭಾವನೆ ಉಂಟಾಗುತ್ತದೆ.

ಮುಂದುವರಿಯುವುದು……