ಮಗು ಹುಟ್ಟಿದ ಮೇಲೆ ಅದು ಹೆಣ್ಣಾಗಿರಲೀ ಅಥವಾ ಗಂಡಾಗಿರಲೀ ಒಂದೇ ರೀತಿಯ ಭಾವನೆ ಇಮ್ಮಡಿಯಾಗುತ್ತದೆ. ಮಗು ಬೆಳೆದಂತೆಲ್ಲಾ ಪ್ರೀತಿಯ ಜೊತೆಗೆ ಅಭಿಮಾನವೂ ಬೆಳೆಯುತ್ತಾ ಹೋಗುತ್ತದೆ. ತಾಯಿಗೆ ಮಗುವೇ ಒಂದು ಚಿಕ್ಕದಾದ ಪ್ರಪಂಚ ಇದ್ದಂತೆ. ಮಗುವನ್ನು ಬಿಟ್ಟು ಬೇರೆ ಪ್ರಪಂಚವೇ ಇಲ್ಲವೆನ್ನುವಂತೆ ಇರುತ್ತಾಳೆ ಎಂದರೆ ಅತಿಶಯೋಕ್ತಿಯಲ್ಲ. ತನ್ನ ಮಗುವನ್ನು ಪ್ರೀತಿಯಿಂದ ನೋಡುತ್ತಾ, ಆರೈಕೆ ಮಾಡುತ್ತಾ, ಇರುತ್ತಾಳೆ. ಗಂಡನ ಸಹಾಯದಿಂದ ಮಗುವಿನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ಇರುತ್ತಾಳೆ. ಮಗುವಿನ ಲಾಲನೆ ಪೋಷಣೆ ಮಾಡುವುದರಲ್ಲೇ ಪ್ರಪಂಚವನ್ನೇ ಮರೆಯುತ್ತಾಳೆ. ಸರಿಯಾದ ಸಮಯಕ್ಕೆ ಊಟ ತಿಂಡಿ ನೀಡುತ್ತಾ, ಮಗುವಿನ ಎಲ್ಲಾ ಕರ್ತವ್ಯಗಳನ್ನು ಮಾಡುತ್ತಾಳೆ. ಇದರಿಂದ ಅವಳು ಏನನ್ನೂ ಬಯಸುವುದಿಲ್ಲ ತನ್ನ ಮಗು ಚೆನ್ನಾಗಿ ಬಾಳಲೆಂಬ ಹಾರೈಕೆಯೊಂದನ್ನು ಮಾತ್ರ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾಳೆ.
ಎಲ್ಲರಂತೆ ತನ್ನ ಮಗನೂ ಸಮಾಜದಲ್ಲಿ ಗೌರವದಿಂದ ಬಾಳಲಿ ಎಂಬುದೇ ಪ್ರತಿಯೊಬ್ಬ ತಾಯಿಯ ಸದಾಶಯವಾಗಿರುತ್ತದೆ. ದೊಡ್ಡವನಾಗಿ ತನ್ನೆತ್ತರಕ್ಕೆ ಬೆಳೆದು ನಿಂತಾಗ ಅದೆನೋ ಒಂದು ರೀತಿಯ ಅಭಿಮಾನ ಉಕ್ಕಿಬರುತ್ತದೆ. ಯಾರಾದರೂ ನಿಮ್ಮ ಮಗ ಎಲ್ಲಿ ಎಂದು ಪ್ರಶ್ನಿಸಿದಾಗ ತನ್ನ ಮಗನನ್ನು ಬೇರೆಯವರಿಗೆ ಆತ್ಮಾಭಿಮಾನದಿಂದ ಪರಿಚಯಿಸುತ್ತಾಳೆ ಆ ಹೆತ್ತ ತಾಯಿ. ಮಗುವಿಗೆ ವಯಸ್ಸಾದಂತೆಲ್ಲಾ ಆ ವಯಸ್ಸಿಗೆ ತಕ್ಕಂತೆ ವಿದ್ಯೆ ಕಲಿಸಿ ಕೆಲಸ ಸಿಗುವವರೆಗೂ ಇದ್ದು ನಂತರ ವಿವಾಹ ಮಾಡಿಸಿ ಒಂದು ನೆಲೆ ನಿಲ್ಲುವಂತೆ ಮಾಡುತ್ತಾಳೆ. ಈ ಎಲ್ಲಾ ಕೆಲಸಗಳನ್ನು ಒಬ್ಬಳೇ ಮಾಡಲು ಸಾಧ್ಯವಿಲ್ಲ. ತನ್ನ ಗಂಡನ ಸಹಾಯದಿಂದ ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಾಳೆ.
ತಂದೆಯಾದವನು ಹಣವನ್ನು ಕೊಡಬಹುದು ಆದರೆ ಮುಕ್ಕಾಲು ಭಾಗ ತಾಯಿಯದೇ ಕಾಣಿಕೆಯಾಗಿರುತ್ತದೆ. ಅಕಸ್ಮಾತ್ ಗಂಡ ಮೃತನಾದರೂ ಎದೆ ಗುಂದದೆ ತನ್ನ ಕರ್ತವ್ಯವನ್ನು ಮಾಡುತ್ತಾಳೆ. ಮಗನ ಸಾಧನೆಗೆ ಹೆಮ್ಮೆ ಪಡುವ ಮೊದಲ ಜೀವ ತಾಯಿಯದು. ತನ್ನ ಮಗನನ್ನು ಸಮಾಜದಲ್ಲಿ ಗೌರವದಿಂದ ಕಾಣುತ್ತಾ ಇದ್ದರೆ ಮನಸ್ಸಿನಲ್ಲಿ ಒಳಗೊಳಗೇ ಸಂತೋಷ ಪಡುತ್ತಾ ಇರುತ್ತಾಳೆ. ತನ್ನ ಮಗ ಯಾವುದಾದರೂ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಪ್ರಶಸ್ತಿಪಡೆದರೆ ಆನಂದ ಬಾಷ್ಪ ಹೊರಹೊಮ್ಮುತ್ತದೆ. ಮಗನು ಎಷ್ಟೇ ಕೆಟ್ಟವನಾಗಿದ್ದರೂ ಸಹ ಪ್ರೀತಿ ಅಭಿಮಾನ ಕಡಿಮೆಯಾಗುವುದಿಲ್ಲ. ತನ್ನ ಮಗನ ಪರವಾಗಿಯೇ ವಾದ ಮಾಡುತ್ತಾಳೆ.
ಇನ್ನು ಮುಂದಾದರೂ ತನ್ನ ಮಗ ಒಳ್ಳೆಯವನಾಗಲೀ ಎಂಬ ಆಸೆಯಿಂದ ಮಗನ ಪರವಾಗಿ ವಾದಿಸಬಹುದು. ನಿಜವಾದ ಸಂಗತಿ ತಿಳಿದಾಗ ಬುದ್ದಿ ಹೇಳುತ್ತಾಳೆ. ಆದರೆ ದ್ವೇಷಿಸುವುದಿಲ್ಲ. ಇದಕ್ಕೆ ವಿರುದ್ದವಾಗಿ ಸಾವಿರಕ್ಕೂ ಅಥವಾ ಲಕ್ಷಕ್ಕೋ ಒಂದು ಅಥವ ಎರಡು ಪ್ರಕರಣ ಇರುಬಹುದು. ತನಗೆ ಎಷ್ಟೇ ಕಷ್ಟವಾದೂ ಸಹ ಅದನ್ನು ಮಗನಿಗೆ ತೋಪೃಡಿಸದೆ ದುಡಿಯುವ ಜೀವ ತಾಯಿಯದು ಮಕ್ಕಳನ್ನು ಯಾವತ್ತೂ ತಿರಸ್ಕಾರ ಭಾವದಿಂದಾಗಲೀ ಉದಾಸೀನದಿಂದಾಗಲೀ ನೋಡುವುದಿಲ್ಲ. ಬೇರೆಯವರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ಹೇಳುತ್ತಾ ದೆವರಲ್ಲಿ ಹಾಗೂ ದೇಶದ ಮೇಲೆ ಭಕ್ತಿ ಮೂಡುವಂತೆ ಮಾಡುತ್ತಾಳೆ.
ಒಬ್ಬ ಮನುಷ್ಯನು ತನ್ನ ತಾಯಿಯ ಪ್ರೀತಿ ಭಾವನೆಯಿಂದ ಜನ್ಮ ತಳೆದು ತಾಯಿಯ ಪ್ರೀತಿ ಏನು ಎಂದು ತಿಳಿದ ನಂತರ ಸಿಗುವುದೇ ತಂದೆಯ ಪ್ರೀತಿ. ತಂದೆಯಾದವನು ಮೊದಲು ಹುಟ್ಟಿದ ಮಗು ಹೆಣ್ಣೋ ಅಥವಾ ಗಂಡೋ ಎಂಬುದಾಗಿ ಕೇಳುತ್ತಾನೆ. ಇದರಲ್ಲಿ ಅವಮಾನ ಎನ್ನುವಂತೆ ಕೆಲವರು ಆ ರೀತಿ ಇರುವುದಿಲ್ಲ. ಯಾವ ಮಗುವಾದರೂ ಪ್ರೀತಿಯಿಂದ ಸ್ವೀಕರಿಸುವ ಮನೋಭಾವ ಉಳ್ಳವರಾಗಿರುತ್ತಾರೆ. ಕೆಲವರಿಗೆ ಮೊದಲು ವಂಶೋದ್ದಾರಕ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಒಳಮನಸ್ಸಿನಲ್ಲಿರುತ್ತದೆ.
ಮುಂದುವರಿಯುವುದು……..