ಮುಂದುವರಿದ ಭಾಗ:
ಹುಟ್ಟಿದ ಮಗು ಎಂದಾಕ್ಷಣ ಮುಖ ಅರಳುತ್ತದೆ. ಹೆಣ್ಣು ಮಗು ಎಂದರೆ ಮನಸ್ಸು ಸ್ವಲ್ಪ ಹಿಂಜರಿಯುತ್ತದೆ. ಹೆಣ್ಣಾದರೇನು? ಗಂಡಾದರೇನು? ಇಬ್ಬರೂ ಮಕ್ಕಳಲ್ಲವೇ? ಎಂದಾಗ ಮಾತ್ರ ಮನಸ್ಸಿಗೆ ಸ್ವಲ್ಪ ಸಮಾಧಾನ ಮಾಡಿಕೊಂಡು ಮಗಳ ಮೇಲೆ ಪ್ರೀತಿ ತೋರಲು ಪ್ರಾರಂಭಿಸುತ್ತಾರೆ. ಮಗಳು ನೋಡುವುದಕ್ಕೆ ಲಕ್ಷಣವಾಗಿದ್ದಲ್ಲಿ ಸ್ವಲ್ಪ ಜಾಸ್ತಿ ಅಭಿಮಾನ ಬರಬಹುದು. ಏಕೆಂದರೆ ಮಗಳು ನೋಡಲು ಲಕ್ಷಣವಾಗಿಲ್ಲದೇ ಇದ್ದರೆ ವಿವಾಹ ಯಾರಾಗುತ್ತಾರೆ? ಎಂಬ ಚಿಂತೆ ಕಾಡುತ್ತದೆ. ಮಗಳು ಹುಟ್ಟಿದಾಕ್ಷಣದಿಂದಲೂ ಅವಳ ವಿವಾಹದ ಬಗ್ಗೆ ಯೋಚಿಸುತ್ತಾ ಇರುತ್ತಾನೆ. ಈಗಿನ ಕಾಲದಲ್ಲಿ ಇದಕ್ಕೆ ವಿರುದ್ದವಾಗಿದೆ. ಹಿಂದಿನ ಕಾಲದಲ್ಲಿ ಎಲ್ಲರ ಮನೆಯಲ್ಲಿಯೂ ಮೂರು ನಾಲ್ಕು ಹೆಣ್ಣು ಮಕ್ಕಳು ಇರುತ್ತಿದ್ದರು. ವಿವಾಹ ಮಾಡಲು ಕಷ್ಟಕರವಾಗಿರುತ್ತಿತ್ತು. ಈಗಿನ ಕಾಲದಲ್ಲಿ ಒಂದು ಹೆಣ್ಣು ಅಥವಾ ಒಂದು ಗಂಡು ಮಗು ಇರುವುದರಿಂದ ಗಂಡುಮಕ್ಕಳಿಗೆ ಹೆಣ್ಣು ಸಿಗುವುದು ಸ್ವಲ್ಪ ಕಷ್ಟ ಎನಿಸಿದೆ ಎಂದರೂ ತಪ್ಪಾಗಲಾರದು. ಆ ಒಂದು ಕಾರಣದಿಂದ ಹೆಣ್ಣುಮಗುವಿನ ತಂದೆಯಾದವನು ಸ್ವಲ್ಪ ನಿರಾಳನಾಗಿರಬಹುದು.
ಹುಟ್ಟಿದಂದಿನಿಂದಲೂ ಮಕ್ಕಳ ಪೋಷಣೆಯನ್ನು ತಾಯಿಯೇ ಮಾಡುವುದರಿಂದ ತಂದೆಗೆ ಮಗುವಿನ ಲಾಲನೆ ಪೋಷಣೆ ಜವಾಬ್ದಾರಿ ಸ್ವಲ್ಪ ಕಡಿಮೆ ಎಂದು ಹೇಳಬಹುದು. ತಾಯಿಯ ಪ್ರೀತಿಯ ಭಾವನೆಗೂ ತಂದೆಯ ಪ್ರೀತಿಯ ಭಾವನೆಗೂ ವ್ಯತ್ಯಾಸ ಇಲ್ಲದಿದ್ದರೂ ಏನೊಂದು ಘಟನೆ ನಡೆದರೂ ಮಕ್ಕಳು ಮೊದಲು ಹೇಳುವುದು ತನ್ನ ತಾಯಿಯ ಬಳಿಯಲ್ಲಿಯೇ. ಅದಕ್ಕೆ ಪರಿಹಾರ ಸಿಕ್ಕಿದರೆ ತಂದೆಯವರೆಗೂ ಹೋಗುವುದೇ ಇಲ್ಲ. ಸಣ್ಣ ಮೊತ್ತದ ಹಣವನ್ನು ಸಹ ತಾಯಿಯಿಂದಲೇ ಪಡೆದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ. ದೊಡ್ಡ ಮೊತ್ತದ ಹಣ ಬೇಕಾದಾಗ ಮಾತ್ರ ತಂದೆಯ ಬಳಿ ಹೇಳಿ ಪಡೆಯುವುದುಂಟು.
ಒಂದು ವೇಳೆ ತಾಯಿಯೂ ಕೆಲಸಕ್ಕೆ ಹೋಗುತ್ತಿದ್ದರೆ ಮಕ್ಕಳ ಎಲ್ಲಾ ಬೇಡಿಕೆಗಳನ್ನು ತಾಯಿಯೇ ಪೂರೈಸುತ್ತಾಳೆ. ನಂತರದ ದಿನಗಳಲ್ಲಿ ತನ್ನ ಗಂಡನ ಬಳಿ ಹೇಳಬಹುದು. ಮಕ್ಕಳು ದೊಡ್ಡವರಾದಂತೆ ಮಕ್ಕಳಿಗೆ ಶಿಕ್ಷಣ ಕೊಡಿಸುವಾಗ ತಂದೆ ತಾಯಿ ಒಬ್ಬರಿಗೊಬ್ಬರು ಸಹಕಾರ ನೀಡಿ ಮಕ್ಕಳ ಜೊತೆಯಲ್ಲಿ ಶಾಲೆ ಕಾಲೇಜಿಗೆ ಹೋಗಿ ಅವರಿಗೆ ಪ್ರವೇಶ ಕೊಡಿಸುತ್ತಾರೆ. ತಂದೆಯಾದವನು ಮಕ್ಕಳು ದೊಡ್ಡವರಾದಂತೆ ಅವರಿಗೆ ಸರಿಯಾದ ವ್ಯವಹಾರ ಜ್ಞಾನ ನೀಡಬಹುದು. ತಾಯಿಯಂತೆಯೇ ತಂದೆಗೂ ತನ್ನ ಮಕ್ಕಳ ಮೇಲೆ ಪ್ರೀತಿ ಅಭಿಮಾನ ಇರುತ್ತದೆ.
ಮಕ್ಕಳು ಅಭಿವೃದ್ದಿ ಹೊಂದುತ್ತಾ ಇರುವಂತೆ ಹೆತ್ತವರಿಗೆ ಅಭಿಮಾನ ಹೆಚ್ಚುತ್ತಾ ಹೋಗುತ್ತದೆ. ಮಕ್ಕಳು ತಪ್ಪು ಮಾಡಿದಾಗ ಮಾತ್ರ ತಂದೆಯು ಶಿಕ್ಷಿಸಲು ಮುಂದಾಗುತ್ತಾನೆ. ತಪ್ಪು ಯಾರು ಮಾಡಿದ್ದಾರೆ ಎಂದು ಯೋಚಿಸುವುದಿಲ್ಲ. ನಂತರ ತಾಯಿಯಾದವಳು ಬಂದು ಮಕ್ಕಳ ತಪ್ಪಿಲ್ಲ ಎಂದು ಹೇಳಿದರೆ ಪಶ್ಚಾತ್ತಾಪ ಪಡುತ್ತಾನೆ.
ಮುಂದುವರಿಯುವುದು……..