(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ಮಾನವರಲ್ಲಿ ಕೆಲವರು ವಿರಕ್ತರಾಗಿರುತ್ತಾರೆ. ಕೆಲವರು ವಿಷಯಿಗಳಾಗಿರುತ್ತಾರೆ. ಕೆಲವರು ನೀತಿವಂತರಾದರೆ ಕೆಲವರು ಅನೀತಿವಂತರಾಗಿರುತ್ತಾರೆ. ಅವರವರ ವಾಸನಾ, ಕರ್ಮ, ಸಂಸ್ಕಾರ ಇವುಗಳ ವೈಚಿತ್ರ್ಯದಿಂದ, ವಿಭಿನ್ನತೆಯಿಂದ ಮರಣೋತ್ತರ ಆಗುವ ಸ್ಥಿತಿಯಲ್ಲಿಯೂ ವೈಚಿತ್ರ್ಯ ಮತ್ತು ಭಿನ್ನತೆ ಇರಬೇಕಾಗಿ ಬರುವದು ಸೂಕ್ತ ಮತ್ತು ಸಯುಕ್ತಿಕವಾಗಿದೆ.

‘ಯ ಏಕೋ ವಿಶ್ವಸ್ಯ ಭುವನಸ್ಯ ರಾಜಾ’ ಎಂಬುದಾಗಿ ಋಗ್ವೇದದಲ್ಲಿ ಬಂದಿರುವದು. ಸರ್ವಜ್ಞ, ಸರ್ವಶಕ್ತ ಪರಮಾತ್ಮ ಒಬ್ಬನೇ. ಆತನ ಸತ್ತೆಯಡಿಯಲ್ಲೇ ಬ್ರಹ್ಮ, ವಿಷ್ಣು, ರುದ್ರ ಮತ್ತು ಇಂದ್ರಾದಿ ದೇವತೆಗಳು ಮತ್ತು ಆಯಾ ಲೋಕಗಳೂ ಅವರವರ ಸ್ಥಾನದಲ್ಲಿರುವವು. ಭಿನ್ನ-ಭಿನ್ನ ಸಂಸ್ಕಾರದ, ಭಿನ್ನ-ಭಿನ್ನ ಕರ್ಮಗಳನ್ನು ಆಚರಿಸಿದ ಜನರು ತಮ್ಮ-ತಮ್ಮ ಶ್ರದ್ಧೆ-ಕರ್ಮಕ್ಕೆ ಅನುಸಾರವಾಗಿ ಆಯಾ ಸ್ಥಳಕ್ಕೆ ಹೋಗಲೇಬೇಕಾಗುತ್ತದೆ. ಈ ದೃಷ್ಟಿಯಿಂದ ಸ್ವರ್ಗ ಕಾಮನೆಯಿಂದ ಕರ್ಮಾನುಷ್ಟಾನ ಮಾಡಿದ ಪುಣ್ಯವಂತರಿಗೆ ಸ್ವರ್ಗವೂ, ನಿಷ್ಕಾಮ ಕರ್ಮ ಮಾಡಿದ ವಿರಕ್ತರಿಗೆ ಬ್ರಹ್ಮಲೋಕವೂ, ಐಹಿಕ ಸುಖದ ಲಾಲಸೆಯಿಂದ ಕರ್ಮಮಾಡಿದ ಜನರಿಗೆ ಈ ಮೃತ್ಯುಲೋಕವೂ ಮತ್ತು ನಿಂದ್ಯ-ನಿಷಿದ್ಧ ಕರ್ಮ ಮಾಡಿದವರಿಗೆ ನರಕವೂ ಅಪರಿವಾರ್ಯವಾಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಯಾರು ‘ಇಷ್ಟಾ-ಪೂರ್ತ’ ಎಂದರೆ ದೇವತೆಗಳ ಮತ್ತು ಪಿತೃಗಳ ತೃಪ್ತಿಗಾಗಿ ಕರ್ಮ ಮಾಡುವರೋ ಅವರು ‘ಚಂದ್ರಲೋಕ’ದ್ವಾರಾ ಸ್ವರ್ಗಲೋಕವನ್ನು ಪಡೆದು, ಆ ಸುಖವನ್ನು ಅನುಭವಿಸಿ, ಪುಣ್ಯಕ್ಷಯವಾದಮೇಲೆ ಮರಳಿ ಜನ್ಮವನ್ನೆತ್ತುವರು. ಅಗ್ನಿಹೋತ್ರ, ಕೃಚ್ಛ್ರ-ಚಾಂದ್ರಾಯಣಾದಿ ತಪಸ್ಸು, ವೇದ ರಕ್ಷಣೆ, ಆತಿಥ್ಯ ಮತ್ತು ವೈಶ್ವದೇವ ಇವುಗಳಿಗೆ ‘ಇಷ್ಟ’ ವೆಂದೂ, ಬಾವಿ-ಕೆರೆ-ಉದ್ಯಾನ-ದೇವಾಲಯ ಕಟ್ಟಿಸುವದು ಮತ್ತು ಅನ್ನದಾನ ಏರ್ಪಡಿಸುವದು

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

‘ಪೂರ್ತ’ವೆಂದೂ ಹೇಳಿಸಿಕೊಳ್ಳುವದು. ದಾನ ಮಾಡಿದರೆ ‘ದತ್ತ’ ಎನ್ನುವರು.
ಅರಣ್ಯಾದಿ ಏಕಾಂತ ಸ್ಥಳಗಳಲ್ಲಿ ತಪಸ್ಸು ಮಾಡುವದರಿಂದಲೂ, ಇಂದ್ರಿಯ ಜಯದಿಂದಲೂ, ಬ್ರಹ್ಮಚರ್ಯದಿಂದಲೂ, ಮೋಕ್ಷದಲ್ಲಿಟ್ಟಿರುವ ಶ್ರದ್ಧೆಯಿಂದಲೂ, ಆಧ್ಯಾತ್ಮಶಾಸ್ತ್ರದ ಅಭ್ಯಾಸದಿಂದಲೂ ಆತ್ಮಪ್ರಾಪ್ತಿಯ ಮಾರ್ಗದಲ್ಲಿರುವವರೆಲ್ಲಾ ‘ಆದಿತ್ಯಲೋಕ’ಕ್ಕೆ ಹೋಗುವರು. ಇಲ್ಲಿಂದಲೇ ಬ್ರಹ್ಮಲೋಕಕ್ಕೆ ಹಾದಿಯಿರುವದು. ಬ್ರಹ್ಮಲೋಕವನ್ನು ಹೊಂದಿದ ವಿರಕ್ತರು ಕಲ್ಪಾಂತ್ಯದಲ್ಲಿ ಮುಕ್ತರಾಗುವರು.
ಈ ರೀತಿ ಜೀವಿಗೆ ಅವನ ಕರ್ಮಾನುಸಾರ ಫಲ ಭೋಗಿಸಲು ಆಯಾ ಲೋಕಕ್ಕೆ ತೆರಳಬೇಕಾಗಿ ಬರುವದು!