(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)

ದೇವತೆಗಳ ಪ್ರೀತ್ಯರ್ಥವಾದ ಹೋಮ-ಹವನ ಕಾರ್ಯಗಳಿಗೆ ‘ಹವ್ಯ’ ಮತ್ತು ಪಿತೃಗಳ ಪ್ರೀತ್ಯರ್ಥವಾದುದಕ್ಕೆ ‘ಕವ್ಯ’ ಎಂದು ಹೇಳುತ್ತಾರೆ. ದೇವತೆಗಳನ್ನು ವೇದಮಂತ್ರಗಳಿಂದ ಕರೆದು, ಮಳೆ-ಬೆಳೆಗಾಗಿ, ಆರೋಗ್ಯಕ್ಕಾಗಿ, ಆಹುತಿ ಮತ್ತು ಬ್ರಾಹ್ಮಣರಿಗೆ ಭೋಜನದ ಮೂಲಕ ತೃಪ್ತಿಪಡಿಸುವ ಕರ್ಮವಿಶೇಷಕ್ಕೆ ದೇವಕಾರ್ಯವೆಂದೆನ್ನುತ್ತಾರೆ. ದೇವತೆಗಳು ಕುಂಡಗತ ಅಗ್ನಿಯಲ್ಲಿ ಅವಿರ್ಭವಿಸಿ ವಾಯುಗತ ಸೂಕ್ಷ್ಮ ಶರೀರದಿಂದ ಹವ್ಯಗಳನ್ನು ಸ್ವೀಕರಿಸುವರು.

‘ಶ್ರದ್ಧಯಾ ದತ್ತಂ ಶ್ರಾದ್ಧಂ’ , ‘ಶ್ರಾದ್ಧ’ ಶಬ್ಧದಲ್ಲಿ ‘ಶ್ರದ್ಧಾ’ ಶಬ್ಧವೇ ಮುಖ್ಯವಾದದ್ದು. ತನ್ನ ಜನ್ಮವು ಯಾವ ಕುಲದಲ್ಲಿ ಆಗಿರುವದೋ ಆ ಕುಲದ ಮೃತ ಪೂರ್ವಜರ ತೃಪ್ತಿಗಾಗಿಯೂ, ಅವರ ತೃಪ್ತಿಯಿಂದ ಒದಗುವ ಸತ್ಸಂತತಿ, ಚಿರಸಂಪತ್ತಿಗಾಗಿಯೂ, ತಿಲ, ದರ್ಭ ಮಂತ್ರಗಳಿಂದ ಅನುಷ್ಠಾನಮಾಡಲ್ಪಡುವ ಅನ್ನೋದಕ ದಾನರೂಪವಾದ ಪಿತೃಯಜ್ಞಕ್ಕೆ, ಶ್ರಾದ್ಧವೆಂದು ಕರೆಯುವರು. ಇದೇ ಪಿತೃಕಾರ್ಯವು. ಪಿತೃಗಳು ಸೂಕ್ಷ್ಮರೂಪದಿಂದ ಬಂದು ಕವ್ಯಗಳನ್ನು ಸ್ವೀಕರಿಸುವರು.

ವಿದ್ಯೆ, ತಪಸ್ಸುಗಳಿಂದ ಸಮೃದ್ಧರಾದ ಬ್ರಾಹ್ಮಣರ ಮುಖಾಗ್ನಿಯಲ್ಲಿ ಸಮರ್ಪಿಸಿದ ಅನ್ನವು ಹವ್ಯ-ಕವ್ಯವಾಗಿ ಯಜಮಾನನ್ನು ಎಲ್ಲಾ ಕಷ್ಟ-ಸಂಕಟಗಳಿಂದ, ಎಲ್ಲಾ ಪಾಪ-ತಾಪಗಳಿಂದ, ಮರಣೋತ್ತರ ಪ್ರಾಪ್ತವಾಗುವ ನರಕದಿಂದಲೂ ಮುಕ್ತನನ್ನಾಗಿ ಮಾಡುವದಷ್ಟೇ ಅಲ್ಲ; ನರಕದಲ್ಲಿ ಬಿದ್ದ ಪಿತೃಗಳನ್ನೂ ಉದ್ಧರಿಸುವದು.

RELATED ARTICLES  ಹಿಂದು ಮತ್ತು ಹಿಂದುಗಳ ಸ್ವಾಭಾವಿಕ ಗುಣ-ಧರ್ಮ (‘ಶ್ರೀಧರಾಮೃತ ವಚನಮಾಲೆ’).

ಮನುಷ್ಯನ ಸ್ಥೂಲದೇಹ ಅನ್ನಮಯವಾದ ಕಾರಣ ದೇಹ ಇರುವವರೆಗೆ ಅನ್ನ, ಆಹಾರ ಬೇಕಾಗುವದು. ದೇಹವು ಬಿದ್ದು ಹೋದ ನಂತರ ಈ ದೇಹವಿರದು. ದೇಹಪಾತದ ನಂತರ ಸೂಕ್ಷ್ಮದೇಹದ ಪ್ರಾಧಾನ್ಯವಿರುವದು. ಆಗ್ಗೆ, ಇದಕ್ಕೆ ಮೊದಲು ಬೇಕಾಗುವ ಅನ್ನವು ಬೇಕಾಗುವದಿಲ್ಲ. ಸೂಕ್ಷ್ಮದೇಹವು ವಾಸನಾಮಯವಾದುದು. ‘ಅನ್ನ ಸೇವನೆಯ ವಾಸನೆ’ ಇದ್ದ ಕಾರಣ ಸಂಕಲ್ಪದಿಂದ ಕೊಟ್ಟ ಕವ್ಯದಿಂದ ತೃಪ್ತರಾಗುವರು.
‘ಸಂಕಲ್ಪಾತ್ಮಕಂ ಮನಃ’ ಮನಸ್ಸು ಸಂಕಲ್ಪರೂಪವಾದುದು. ಮನೋಮಯ ಸೂಕ್ಷ್ಮದೇಹವು ಸಂಕಲ್ಪರೂಪವಾದುದರಿಂದ, ಸೂಕ್ಷ್ಮದೇಹದಿಂದ ಜೀವಿಸುವ ಪಿತೃಗಳಿಗೆ ಅವರ ಹೆಸರಿನಿಂದ ಸಂಕಲ್ಪಿಸಿ ಕೊಟ್ಟ ಕವ್ಯದಿಂದ ತೃಪ್ತಿಯಾಗುವದು. ‘ತಮಗಾಗಿ ಆತನು ಅನ್ನವನ್ನು ಕೊಟ್ಟನು’ ಇಷ್ಟು ಅವರಿಗೆ ತಿಳಿದ ಮಾತ್ರಕ್ಕೆ ಪಿತೃಗಳು ತೃಪ್ತರಾಗುವರು.
‘ಸ ಯದಾ ಮನಸಾ ಮನಸ್ಯತಿ ಮಂತ್ರಾನಧೀಯಿಯೇ ……………………………..ಮನೋಹಿ ಲೋಕಃ’ ಎಂದು ಛಾಂದೋಗ ಉಪನಿಷತ್ತಿನಲ್ಲಿ ಹೇಳಿದ್ದಿದೆ.

RELATED ARTICLES  ಪುಸ್ತಕದ ಬದನೆಕಾಯಿ ಜೀವನದ ಮೇಲೊಗರವಾಗಬೇಕಿದೆ.

ಮನಸ್ಸಿನಿದ ಸಂಕಲ್ಪಿಸಿದಾಗ ಮಂತ್ರಗಳನ್ನು ಉಚ್ಚರಿಸುವನು, ಅಧ್ಯಯನವನ್ನು ಮಾಡುವನು, ಕರ್ಮಗಳನ್ನು ಮಾಡುವನು. ಇಚ್ಛೆಯ ಸಂಕಲ್ಪಮಾಡಿದಾಗ ಪುತ್ರ-ಪಶ್ವಾದಿಗಳಲ್ಲದೆ, ಲೋಕ-ಪರಲೋಕಗಳನ್ನೂ ಇಚ್ಛಿಸುವನು. ಒಟ್ಟೂ ಮನಸ್ಸೇ ಈ ಎಲ್ಲ ಲೋಕವೂ ಆಗಿರುವದು. ಈ ಎಲ್ಲದಕ್ಕೂ ಮನಸ್ಸೇ ಕಾರಣ. ಎಲ್ಲಾ ವ್ಯವಹಾರವೂ ಮನೋಮಯ. ಪರಮಾತ್ಮನ ಮನೋಸಂಕಲ್ಪವೇ ಈ ಸೃಷ್ಟಿ. ಈ ಸೃಷ್ಟಿಯೇ ಮನೋಮಯ. ಮನಸ್ಸಿನ ಸಂಕಲ್ಪವೇ ಜಗದಾಕಾರವಾಗಿ ಮೂಡಿರುವದು. ಸ್ವಪ್ನಸೃಷ್ಟಿಯಂತೆಯೇ ಜಾಗೃತಿಯ ಈ ಸೃಷ್ಟಿಯ ವ್ಯವಹಾರವೂ ಕೂಡ ಮನೋಮಯವೇ!

ಎಲ್ಲವೂ ಮನೋಮಯವಾದರೂ ಆಯಾ ಮನಸ್ಸಿನ ಸಂಕಲ್ಪದ ಪ್ರಕಾರ ಪ್ರತಿ ಪ್ರಾಣಿ, ಪದಾರ್ಥಗಳಿಗೆ ಒಂದು ಸ್ವರೂಪ ಪ್ರಾಪ್ತವಾಗುವದು. ಅದಕ್ಕನುಗುಣವಾಗಿ ಅದಕ್ಕೆ ವ್ಯಾವಹಾರಿಕ ಸತ್ಯತ್ವ ಒದಗಿ ಜಗತ್ತಿನ ವ್ಯವಹಾರ ಯಥೋಕ್ತವಾಗಿ ನಡೆಯುತ್ತಲಿರುವದು.
ಜಾಬಾಲಿಗಳೇ, ‘ಸಂಕಲ್ಪಾತ್ಮಕ ಮನಸ್ಸಿನ’ ಶ್ರಾದ್ಧ ಕರ್ಮಗಳಿಂದ ಅದೆಂತು ದೇಹನಾಶವಾದಮೇಲೂ, ‘ವಾಸನಾತ್ಮಕ ಲೋಕ’ದಲ್ಲಿ ಪಿತೃಗಳು ತೃಪ್ತರಾಗುವರೆಂದು ನೋಡಿದ್ದಾಯಿತು.