ಮುಂದುವರಿದ ಭಾಗ:
ತಂದೆ ಹಾಗೂ ಮಕ್ಕಳ ನಡುವೆ ಮನಸ್ತಾಪ ಬರಲು ಆಸ್ತಿಯ ವಿಚಾರವೇ ಮುಖ್ಯ ಕಾರಣ. ಯಾರದ್ದೋ ಮೂರನೆಯವರ ಮಾತು ಕೇಳಿ ಅಥವಾ ತನ್ನ ಪತ್ನಿಯ ಬಲವಂತಕ್ಕೆ ಬಿದ್ದು ಆಸ್ತಿಯಲ್ಲಿ ತನ್ನಪಾಲನ್ನು ಕೇಳಿದಾಗ ತಂದೆಯು ಇದರಿಂದ ನೊಂದುಕೊಳ್ಳುವುದೇ ಜಾಸ್ತಿ. ತಂದೆ ಹೋದಮೇಲೆ ಆಸ್ತಿ ಎಲ್ಲವೂ ಮಕ್ಕಳಿಗಲ್ಲದೆ ಬೇರೆಯವರಿಗೆ ಹೋಗುವುದಿಲ್ಲ ಎಲ್ಲವೂ ನಮಗೇ ಬರುತ್ತದೆ ಎಂದು ಎಷ್ಟು ಸಮಾಧಾನ ಮಾಡಿದರೂ ಕೇಳುವ ಮನಸ್ಸು ಮಕ್ಕಳಿಗೆ ಇರುವುದಿಲ್ಲ.ಈಗಲೇ ಭಾಗ ಮಾಡಿಕೊಟ್ಟರೆ ಇನ್ನೆಲ್ಲಿ ಎಲ್ಲಾ ಆಸ್ತಿಗಳನ್ನು ಹಾಳು ಮಾಡಿಕೊಳ್ಳುತ್ತಾರೋ ಎಂಬ ಭಯದಿಂದ ತನ್ನಲ್ಲಿಯೇ ಕೆಲವರು ಉಳಿಸಿಕೊಂಡಿರಬಹುದು.
ಇನ್ನೂ ಕೆಲವರು ತಾನು ಬದುಕಿದ್ದಾಗಲೇ ಇರುವ ಆಸ್ತಿಯನ್ನು ಪಾಲು ಮಾಡಿ ಬಿಡೋಣ ನನ್ನ ನಂತರ ಮಕ್ಕಳಿಗೆ ಆಸ್ತಿ ಪಾಲು ಮಾಡಿಕೊಳ್ಳಲು ಕಷ್ಟವಾಗಬಹುದು ಎಂದು ತಿಳಿದು ತಮೆ ಸ್ವಲ್ಪ ಭಾಗ ಉಳಿಸಿಕೊಂಡು ಮಿಕ್ಕ ಆಸ್ತಿಯನ್ನು ಹಂಚಿ ಬಿಡುತ್ತಾರೆ. ಅಕಸ್ಮಾತ್ ಆಸ್ತಿಯನ್ನು ಪಾಲು ಮಾಡದೇ ತನ್ನಲ್ಲಿಯೇ ಉಳಿಸಿಕೊಂಡಿದ್ದಾಗ ಮಕ್ಕಳು ಪಾಲು ಕೇಳಿ ಕೊಡದಿದ್ದಾಗ ಮಕ್ಕಳು ಕಠಿಣವಾದ ನಿಷ್ಠೂರವಾದ ಮಾತನ್ನು ಆಡಬಹುದು. ‘ನೀನೇನು ಸಂಪಾದನೆ ಮಾಡಿದ್ದಲ್ಲ ತಾತನ ಆಸ್ತಿ ತಾನೆ’ ನೀನು ಆಸ್ತಿಯನ್ನು ಮಕ್ಕಳಿಗೆ ಕೊಡದೆ ಬೇರೆ ಇನ್ಯಾರಿಗೆ ಕೊಡಬೇಕೆಂದಿದ್ದೀಯಾ? ಸತ್ತ ಮೇಲೆ ನೀನೇನೂ ತೆಗೆದುಕೊಂಡು ಹೋಗುವುದಿಲ್ಲ. ಇರುವ ಆಸ್ತಿಯನ್ನು ಈಗಲೇ ಕೊಟ್ಟು ಬಿಡು ಎಂದು ಹೇಳುವುದುಂಟು.
ಇದರಿಂದ ಮಕ್ಕಳ ಮೇಲಿನ ಪ್ರೀತಿ ಭಾವನೆ ಕಡಿಮೆಯಾಗುತ್ತಾ ಹೋಗುತ್ತದೆ. ತಂದೆಯು ಮಕ್ಕಳಿಗೆ ಆಸ್ತಿ ಕೊಡದೇ ಇದ್ದಾಗ ಆ ಮಕ್ಕಳಿಗೆ ತಂದೆಯೇ ಯಾರೋ ಬೇರೆಯವರಂತೆ ಕಾಣುತ್ತಾನೆ. ಮಗುವಾದಾಗಿನಿಂದ ನನ್ನ ಮಕ್ಕಳೆಂದು ಪ್ರೀತಿ ಅಭಿಮಾನದಿಂದ ಕಷ್ಟಪಟ್ಟು ಬೆಳೆಸಿ ಮಕ್ಕಳು ಆಡುವ ಒಂದೊಂದು ಮಾತುಗಳೂ ತಂದೆಯ ಹೃದಯಕ್ಕೆ ಈಟಿಯಿಂದ ತಿವಿದಂತೆ ಆಗುತ್ತದೆ. ಇಂದಿನಿಂದ ನೀನು ಯಾರೋ ನಾನು ಯಾರೋ ಎಂದು ಹೇಳಿ ಮನೆ ಬಿಟ್ಟು ಹೊರಟುಹೋಗಬಹುದು. ಆಗ ಆಸ್ತಿ ಮತ್ತು ಮಗನು ಪ್ರೀತಿಸಿ ವಿವಾಹವಾದ ಪತ್ನಿಯ ಮುಂದೆ ತಂದೆಯ ಅಗಾಧವಾದ ಪ್ರೀತಿ ನಗಣ್ಯವೆನಿಸುತ್ತದೆ. ಮಕ್ಕಳು ಕೆಲವೊಮ್ಮೆ ಕ್ಷಮಿಸಲಾರದ ತಪ್ಪು ಮಾಡಿ ತಂದೆಯೇ ಅಂತಹ ಮಕ್ಕಳನ್ನು ಮನೆಬಿಟ್ಟು ಕಳುಹಿಸಿದರೆ ಆಗ ಎರಡೂ ಸನ್ನಿವೇಶಗಳಲ್ಲೂ ಅಪ್ಪ ಮಕ್ಕಳಲ್ಲಿನ ಪ್ರೀತಿ ಭಾವನೆಗಳು ಮುಸುಕಾಗುತ್ತಾ ಬಂದು ದಿನಕಳೆದಂತೆ ಕಳೆದುಹೋಗಬಹುದು.
ಮಕ್ಕಳಿಗೆ ತಂದೆಯೇ ಸರ್ವಸ್ವವಾಗಿರುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಆರ್ಥಿಕವಾಗಿ ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಮಕ್ಕಳು ಕೇಳುವುದನ್ನ ಕೊಡಿಸಲು ಮನಸ್ಸಿನಾಳದಲ್ಲಿ ಅದೇನೋ ಒಂದು ರೀತಿಯ ಖುಷಿ ಇರುತ್ತದೆ. ಹಣವಿಲ್ಲದಿದ್ದಾಗ ಮನಸ್ಸಿಗೆ ಅಷ್ಟೇ ಭಾರವಾಗುತ್ತದೆ. ಮಕ್ಕಳು ಕೇಳಿದ್ದನ್ನು ಕೊಡಿಸಲು ಆಗಲಿಲ್ಲವಲ್ಲಾ ಎಂದು ಮನಸ್ಸಿಗೆ ಹೇಳಿಕೊಳ್ಳಲಾರದಷ್ಟು ನೋವಾಗುತ್ತದೆ. ಮಕ್ಕಳ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಂಡು ಪೂರೈಸುತ್ತಿದ್ದರೆ ಅಮತಹ ತಂದೆಗೆ ಮನೆಯಲ್ಲಿಯೂ ಗೌರವ ಇರುತ್ತದೆ. ಜೊತೆಗೆ ಸಮಾಜದಲ್ಲಿಯೂ ಗೌರವ ಇರುತ್ತದೆ. ತಂದೆಯಾದವನು ತನ್ನ ಐಚ್ಛಿಕ ಕರ್ತವ್ಯದಿಂದ ವಿಮುಖನಾದರೆ ಸಮಸ್ಯೆಗಳು ತಲೆದೋರುತ್ತವೆ.
ಮುಂದುವರಿಯುವುದು……..