ಮುಂದುವರಿದ ಭಾಗ:
ಕೆಲವರು ಬೆಳಿಗ್ಗೆ ಬೇಗ ಎದ್ದು ಎಲ್ಲೋ ಹೋಗಿ ದುಡಿದು ತಡರಾತ್ರಿಯಲ್ಲಿ ಕುಡಿದು ಮನೆಗೆ ಬಂದು ಪುನಃ ಬೆಳಕು ಹರಿಯುವ ಮೊದಲೇ ಮನೆ ಬಿಟ್ಟು ಹೊರಟು ಹೋದರೆ ಮಕ್ಕಳಿಗೆ ಅಪ್ಪನಿದ್ದು ಇಲ್ಲದಂತೆ ಆಗುತ್ತದೆ. ಆದರೂ ರಜೆ ದಿನಗಳಲ್ಲಿ ಮಕ್ಕಳ ಯೋಗಕ್ಷೇಮಗಳನ್ನು ನೋಡಿಕೊಂಡರೆ ಸಮಸ್ಯೆ ಇರುವುದಿಲ್ಲ. ಇಲ್ಲದಿದ್ದಲ್ಲಿ ಎಲ್ಲಾ ಜವಾಬ್ದಾರಿಗಳು ತಾಯಿಯ ಮೇಲೆ ಬೀಳುತ್ತದೆ. ಮಕ್ಕಳ ಲಾಲನೆ ಪೋಷಣೆ ಜೊತೆಗೆ ಶಾಲೆಗೆ ಕರೆದುಕೊಂಡು ಹೋಗುವುದರಿಂದ ಹಿಡದು ಪ್ರತಿಯೊಂದು ಕೆಲಸವೂ ತಾಯಿಯ ಹೆಗಲ ಮೇಲೆ ಮೇಲಿರುತ್ತದೆ. ತಿಂಗಳಾದ ನಂತರ ಸಂಸಾರದ ಖರ್ಚಿಗೆಂದು ಒಂದಷ್ಟು ಹಣ ಕೊಟ್ಟು ತನ್ನ ಕರ್ತವ್ಯ ಮುಗಿಯಿತು ಎಂದು ಅಪ್ಪನಾದವನು ಸುಮ್ಮನಿದ್ದರೆ ಮಕ್ಕಳ ಆಗುಹೋಗುಗಳನ್ನು ನೋಡುವವರು ಯಾರು? ತಾಯಿಯಾದವಳು ಪಾಪ ಎಷ್ಟು ತಾನೆ ಮಾಡಲು ಸಾಧ್ಯ? ತಂದೆಯಾದವನಿಗೂ ಜವಾಬ್ದಾರಿ ಎನ್ನುವುದು ಇರುವುದಿಲ್ಲವೇ? ಮಕ್ಕಳು ಒಳ್ಳೆಯವರ ಸಹವಾಸ ಮಾಡಿದ್ದರೆ ಯೋಚನೆ ಇರುವುದಿಲ್ಲ.
ಅಕಸ್ಮಾತ್ ಗ್ರಹಚಾರಕ್ಕೆ ಕೆಟ್ಟ ಸ್ನೇಹಿತರು ಸಿಕ್ಕಿದ್ದರೆ ಯಾರ ಭಯವೂ ಇಲ್ಲದೆ ಕೆಟ್ಟ ಅಭ್ಯಾಸಗಳನ್ನು ಕಲಿಯುತ್ತಾರೆ. ಯಾವಾಗಲೂ ಮಕ್ಕಳು ಎಲ್ಲಿ ಹೋಗುತ್ತಾರೆ? ಏನು ಮಾಡುತ್ತಾರೆ? ಎಂದು ತಿಳಿಯಲು ಅವರ ಹಿಂದೆ ಹೋಗಿ ವರ ಚಲನವಲನಗಳನ್ನು ನೋಡಬೇಕು ಎಂದು ಹೇಳುವುದಿಲ್ಲ. ತಂದೆಯಾದವನು ತನ್ನ ಮಾತಿನ ಧಾಟಿಯಲ್ಲಿಯೇ ನಿಯಂತ್ರಣದಲ್ಲಿಟ್ಟುಕೊಂಡಿರಬೇಕು. ಮಕ್ಕಳಿಗೆ ತಂದೆ ಎಂಬ ಪ್ರೀತಿಯ ಜೊತೆಗೆ ಸ್ವಲ್ಪ ಭಯವೂ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಎಂದು ಅತಿಯಾದ ಪ್ರೀತಿ ತೋರಿದರೆ ತಂದೆ ಎನ್ನುವ ಭಯ ಹೋಗಿ ಏನು ಮಾಡಿದರೂ ಅಪ್ಪ ಬೈಯ್ಯವುದಿಲ್ಲ ಎಂಬ ಭಂಡ ಧೈರ್ಯ ಬಂದು ಅಡ್ಡದಾರಿ ಹಿಡಿಯಬಹುದು. ಆಗ ಕಾಲವು ಮಿಂಚಿಹೋಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಕ್ಕಳಿಗೆ ಸ್ವತಂತ್ರವನ್ನು ನೀಡುವುದರಲ್ಲಿ ಮಿತಿ ಇರಬೇಕು.
ಅತಿ ಪ್ರೀತಿಯೂ ಒಳ್ಳೆಯದಲ್ಲ ಅದೇ ರೀತಿ ಅತಿಯಾದ ಭಯ ಮೂಡಿಸಿ ಹಿಡಿತದಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ. ಕೆಲವು ಮಕ್ಕಳು ತಂದೆ ಎಂದರೆ ಎದುರುಗಡೆ ನಿಲ್ಲುವುದಿಲ್ಲ. ಅಪ್ಪನ ಮುಖ ನೋಡಿದರೆ ಭಯಭೀತರಾಗಿ ಮಾತನಾಡಿಸುವುದೇ ಇಲ್ಲ. ದೊಡ್ಡವರಾಗುವ ತನಕ ಭಯದಿಂದಲೇ ಇದ್ದು ದೊಡ್ಡವರಾದ ನಂತರ ಕೆಲಸಕ್ಕೆ ಸೇರಿದ ಮೇಲೆ ವಿವಾಹವಾಗಿ ತಂದೆಯ ಸಹವಾಸವೇ ಬೇಡ ಎಂದು ಬೇರೆ ಹೋಗಲು ಹಂಬಲಿಸುತ್ತಾರೆ. ಭಯದಿಂದ ಪ್ರೀತಿಯ ಭಾವನೆ ಬರುವುದೇ ಇಲ್ಲ. ಆಗ ಹೆತ್ತವರು ಕಡೆಗಾಲದಲ್ಲಿ ಒಬ್ಬಂಟಿಗರಾಗಬೇಕಾಗುತ್ತದೆ.
ಹೆತ್ತವರು ಮತ್ತು ಮಕ್ಕಳ ಸಂಬಂಧ ಒಂದು ರೀತಿಯಲ್ಲಾದರೆ ಸಹೋದರ ಮತ್ತು ಸಹೋದರಿಯರಲ್ಲಿನ ಪ್ರೀರಿಯ ಭಾವನೆಗಳು ಎಷ್ಟು ಹೇಳಿದರೂ ಕಡಿಮೆಯೇ ಎನ್ನಬಹುದು. ಕೆಲವು ಅಪರೂಪದ ಅಹಿತಕರ ಘಟನೆಗಳಲ್ಲಿ ಮಾತ್ರ ಪ್ರೀತಿಯ ಭಾವನೆಗಳು ಕಳೆದು ಹೋಗುವುದುಂಟು. ಈಗ ಕುಟುಂಬದಲ್ಲಿ ಸಾಮಾನ್ಯವಾಗಿ ಒಂದು ಗಂಡು ಅಥವಾ ಒಂದು ಹೆಣ್ಣು ಮಕ್ಕಳಿರುವ ಕುಟುಂಬಗಳೇ ಜಾಸ್ತಿ ಇದೆ ಎನ್ನಬಹುದು. ಆದರೂ ಇನ್ನೂ ಹಲವಾರು ಕುಟುಂಬಗಳಲ್ಲಿ ಒಬ್ಬೊಬ್ಬರು ಸಹೋದರ ಮತ್ತು ಸಹೋದರಿಯರು ಇರುತ್ತಾರೆ.
ಮುಂದುವರಿಯುವುದು…….