(ಇಸವಿ ಸನ ೧೯೪೩-೪೪ರ ಸುಮಾರಿಗೆ ಕುಮಾರಿ ರಾಧಾಳಿಗೆ ಅವಳ ಕಿಶೋರಾವಸ್ಥೆಯಲ್ಲಿ ಬರೆದ ಇನ್ನೊಂದು ಪತ್ರ)

FB IMG 1501136665309

ಲೇಖಕರು :- ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಓಂ
ಚಿಕ್ಕಮಗಳೂರು, ಕಾಫೀತೋಟ
ಮಗಾ,
‘ಮೊದಲು ತಿನ್ನಲು ಕಬ್ಬಿಣದ ಕಡಲೆ … ಕೊನೆಯಲ್ಲಿ ಬ್ರಹ್ಮಪದದಾ ಕುಣಿತ ನಿನಗೆ’ – ಶ್ರೀ ತುಕಾರಾಮ
ಭವಿಷ್ಯದ ಪರಮೋತ್ಕರ್ಷದೆಡೆ ಚಲಿಸುತ್ತಿರುವಾಗ ಮಾರ್ಗಮಧ್ಯ ಬಲು ಕಠಿಣ ಸಂಕಟದ ಕಂದರವನ್ನು ದಾಟಲೇ ಬೇಕಾಗುತ್ತದೆ. ಎಲ್ಲೆಡೆ ಗಾಢಾಂಧಕಾರ ತುಂಬಿರುವ ಸ್ಥಿತಿಯಲ್ಲಿ ಸೂರ್ಯ ನಾರಾಯಣನ ಮಂಗಲಮಯ ದರ್ಶನದೊಂದಿಗೆನೇ – ಆ ಕ್ಷಣದಲ್ಲೇ – ಮುಂಬೆಳಕು ಸ್ಫುಟಿಸಿ ಕಾರ್ಗತ್ತಲೆ ಕೊನೆಗೊಳ್ಳುತ್ತದೆ. ಚಿಂತೆ ಮಾಡಬೇಡ.
ಆ ಪರಮಾತ್ಮ ಅತ್ಯಂತ ಕರುಣಾಳು. ಪರಮಾತ್ಮನ ಭಕ್ತಿಯೆಂಬ ಎಳೆ ಬಳ್ಳಿ ಹಬ್ಬಿ ಹರಡಲು ಉತ್ತಮ ಗೊಬ್ಬರ ಸಂಸಾರದ ಪೀಡೆ – ಕಷ್ಟ-ಕಾರ್ಪಣ್ಯಗಳೇ. ಸಂಸಾರದ ಕಷ್ಟಗಳೆಂದರೆ ಮೂರ್ತಿಗಲ್ಲಿನ ಮೇಲಿನ ಶಿಲ್ಪಿಯ ಉಳಿಯ ಹೊಡೆತವೇ. ಹಾಗಾದಾಗ ಮಾತ್ರ ಆ ಪಾಷಾಣದಿಂದ ಭಗವಂತನ ಸುಂದರ ಮೂರ್ತಿ ಹೊರಹೊಮ್ಮುತ್ತದೆ. ಸಂಕಟಗಳೆಂದರೆ ಆ ಅತ್ಯುನ್ನತ ಪರಮಾತ್ಮ ಪದಕ್ಕೆ ಕೊಂಡೊಯ್ಯುವ ಸುಖಮಯ ಮೆಟ್ಟಲುಗಳೇ. ಆ ಎಲ್ಲ ಮೆಟ್ಟಲುಗಳ ಮೇಲೆ ಶ್ರೇಷ್ಠ ಮಹಾತ್ಮರ ಚರಣಗಳ ಸುಂದರ ಚಿನ್ಹೆ ಯಥೇಷ್ಟ ನೋಡಲು ಸಿಗುತ್ತದೆ. ಈ ಸಂಕಷ್ಟಗಳ ಪ್ರತಿಯೊಂದು ಮೆಟ್ಟಲುಗಳೂ ತಮ್ಮ ಮೃದು ಮಂಜುಳ ಶಬ್ಧಗಳಿಂದ ಸಾಧಕನ ಅಂತಃಕರಣದಲ್ಲಿ ಅಡಗಿರುವ ಖಿನ್ನತೆಯನ್ನು ಕಳಚಿ ಅಂತರಂಗದಲ್ಲಿ ಮುಂದಿನ ಪರಮೋತ್ಕರ್ಷದ ಅಪೇಕ್ಷೆಯ ಸವಿಕಿರಣವನ್ನು ಹಬ್ಬಿಸುತ್ತಲೇ ಇರುತ್ತವೆ. ಸಾಧಕನಿಗೆ ಸಂಕಟವೆಂದು ತೋರುವ ಪರಿಸ್ಥಿತಿ ಆತನ ಅಪಕಾರಕ್ಕಿರದೇ ಉಪಕಾರಕ್ಕೇ ಇರುತ್ತದೆ. ‘ಮೇಲೆ ಮುಳ್ಳಿನ ಸಾಲು; ಅದರೊಳಗೆ ರಸಭರಿತ ತೊಳೆಗಳಾ ಸಾಲೇ ಸಾಲು’ – ಈ ರೀತಿ ಹಲಸಿನ ಹಣ್ಣಿನ ವರ್ಣನೆ ಮಾಡುತ್ತಾರೆ. ಅದರಂತೆ ಮೇಲು ಮೇಲಿಂದ ನೋಡಿದಾಗ ಪರಮಾರ್ಥದ ಮಾರ್ಗ ಈ ಎಲ್ಲ ಸಂಕಷ್ಟಗಳಿಂದ ಕಷ್ಟದಾಯಕವಾಗಿ ಕಾಣಿಸಿಕೊಂಡರೂ ಅದರೊಳಗೆ ‘ನಿರ್ವಿಷಯ’ ದಂತ ಅಂತರಂಗ ಸುಖದ ಹಣ್ಣಿನ ತೊಳೆಗಳ ರಾಶಿಯೇ ತುಂಬಿಕೊಂಡಿದೆ. ಹೆರಿಗೆಯ ವೇದನೆಯ ನಂತರವೇ ಪುತ್ರಲಾಭ. ಹಾಗೆಯೇ ಇದರಲ್ಲೂ ಕೆಲ ಕಳಕಳಿಯ ಕಾಲವನ್ನು ಸಹಿಸಬೇಕಾಗುತ್ತದೆ. ಹುಲ್ಲಿನಲ್ಲಿ ಹುದುಗಿಸಿಟ್ಟು ಬೆದೆ ಹಾಕಿದ ಮಾವೇ ಚೆನ್ನಾಗಿ ಹಣ್ಣಾಗುತ್ತದೆ ಎನ್ನುವದನ್ನು ಲಕ್ಷದಲ್ಲಿಟ್ಟಿಕೋ.
ಪರಮೇಶ್ವರನು ನಿನಗೆ ಈ ಎಲ್ಲ ವಿಷಮ ಪರಿಸ್ಥಿತಿಯಿಂದ ಸುರಕ್ಷಿತ ಪಾರು ಮಾಡಲಿ!
ಅಭಿಮಾನದಿಂದ ಹೊಟ್ಟೆಗೆ ಒತ್ತಿ ಹಿಡಿದು ನಿನಗೆ ಅತಿ ಶೀಘ್ರ ಹಿತವಾಗಲಿ ಎಂದು ಇಚ್ಛಿಸುವ –
ಶ್ರೀಧರ

RELATED ARTICLES  ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸಲು ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ