ಭಟ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಭಟ್ಕಳ ತಾಲೂಕು ಇದರ ಅಡಿಯಲ್ಲಿ ರಚಿತಗೊಂಡಿರುವ ಹೆಬಳೆ ವಲಯದ ಗಾಂಧಿನಗರ ಹಾಗೂ ತೆಂಗಿನಗುಂಡಿ ಒಕ್ಕೂಟಗಳ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಪರಮಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೋಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಹೆಬಳೆಯ ಗಾಂಧಿನಗರದ ಶ್ರೀ ಗಣೇಶ ಸಭಾಭವನದಲ್ಲಿ ವಿಧಿವತ್ತಾಗಿ ನಡೆಯಿತು.
ಮುಂಜಾನೆ ೯ ಗಂಟೆಯಿಂದ ೧೧ ಗಂಟೆಯವರೆಗೆ ಪುರೋಹಿತರು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನಡೆಸಿಕೊಟ್ಟರು.
ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಹೆಬಳೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಎನ್.ಡಿ.ಮೊಗೇರರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.’ಮಾಧ್ಯಮಗಳಲ್ಲಿ ನಮ್ಮ ಆಚರಣೆ ಮತ್ತು ಸಂಪ್ರದಾಯಗಳನ್ನು ಮೂಢನಂಬಿಕೆ ಎಂದು ಬಿಂಬಿಸುವ ಬುದ್ಧಿಜೀವಿಗಳು ತಮ್ಮ ಮನೆಯ ಒಳಗಡೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸುತ್ತಾರೆ.ಇಂಥ ತದ್ವಿರುದ್ಧ ಹೇಳಿಕೆ ನೀಡುವ ಬದಲು ಅಂಥವರು ಎಲ್ಲರೆದರು ಆಸ್ತಿಕರಾಗಿ ತೋರಿಸಿಕೊಳ್ಳಬೇಕಾಗಿದೆ’ ಎಂದು ನುಡಿದರು.
ನಂತರ ಮುಖ್ಯ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಭಟ್ಕಳದ ಸತ್ಯಸಾಯಿ ಸೇವಾ ಸಮಿತಿಯ ಶ್ರೀ ಭಾಸ್ಕರ ನಾಯ್ಕ ನಡೆಸಿಕೊಟ್ಟರು.
“ಧರ್ಮಸ್ಥಳ ಸಂಘ ಕೇವಲ ಸಾಲಮೇಳಕ್ಕಷ್ಟೇ ಸೀಮಿತವಾಗಿಲ್ಲ.ಕುಡಿತದ ಚಟದಿಂದ ಮುಕ್ತರಾಗಿ ನವಜೀವನವನ್ನು ಕೊಡಿಸುವಲ್ಲಿ ಯಶಸ್ವಿಯಾಗಿ ಆ ಕುಟುಂಬ ಸಮೃದ್ಧ ಜೀವನವನ್ನು,ನಾಗರಿಕ ಹಾಗೂ ಸುಸಂಸ್ಕೃತರಾಗಿ ತೋರಿಸಿಕೊಂಡ ಕುಟುಂಬಗಳು ಪ್ರತೀ ಗ್ರಾಮದಲ್ಲಿ ಇವತ್ತು ನೂರಾರು ಕುಟುಂಬಗಳು ನಮಗೆ ಸಿಗ್ತಾ ಇವೆ.ಅದಕ್ಕೆ ಸಾಕ್ಷಿಯಾದುದು ಧರ್ಮಸ್ಥಳ.ಹಾಗಾಗಿ ಧರ್ಮಸ್ಥಳ ಕೇವಲ ಧರ್ಮದ ಸ್ಥಳ ಮಾತ್ರ ಅಲ್ಲ.ಭಕ್ತಿ,ಭಯ ಮತ್ತು ಸಾಂಘಿಕತೆ,ಸೌಹಾರ್ದತೆ ಮತ್ತು ಭಾವೈಕ್ಯತೆ ಈ ಎಲ್ಲ ಸಮ್ಮಿಲನವೇ ಧರ್ಮಸ್ಥಳ.ನಾವೂ ಕೂಡ ಮಾಡುವ ಆಚರಣೆಗಳು ಮತ್ತು ಪೂಜೆಗಳು ತೋರ್ಪಡಿಕೆ ಹಾಗೂ ಆಡಂಬರವಾಗದೇ ಹೃದಯದ ಭಕ್ತಿಯಿಂದ ಕೂಡಿರಬೇಕು.ಇವತ್ತು ನಮ್ಮನಮ್ಮಲ್ಲೇ ದ್ವೇಷ,ಅಸೂಯೆಗಳು ಹೆಚ್ಚಾಗುತ್ತಿವೆ.ಹಾಗಾಗದೇ ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕು.ಈ ನಿಟ್ಟಿನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿರುವ ಧರ್ಮಸ್ಥಳ ಯೋಜನೆ ಹಾಗೂ ಇಲ್ಲಿನ ಸ್ಥಳೀಯ ಸಂಘಗಳ ಕಾರ್ಯ ಮೆಚ್ಚುವಂತಹದ್ದು” ಎಂದು ನುಡಿದರು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀ ಪುಂಡಲೀಕ ಹೆಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಜನಾಧಿಕಾರಿಗಳಾದ ಶ್ರೀ ಎಮ್.ಎಸ್.ಈಶ್ವರರವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವೇದಿಕೆಯ ಮೇಲೆ ಪೂಜಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಧರ ನಾಯ್ಕ ಹೆಬಳೆ, ಭವಾನಿಶಂಕರ ನಾಯ್ಕ, ಮುಕುಂದ ಕಟಗಿಮನೆ, ಕೇಶವ ಮೊಗೇರ, ಲಕ್ಷ್ಮಣ ನಾಯ್ಕ, ಮೊಹನ ಮೊಗೇರ, ಪ್ರಕಾಶ ನಾಯ್ಕ, ಎಫ್.ಕೆ.ಮೊಗೇರ, ಕೃಷ್ಣ ಮೊಗೇರ, ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಈಶ್ವರ ಮೊಗೇರ ಸ್ವಾಗತಿಸಿದರೆ, ಮಾದೇವ ನಾಯ್ಕ ವಂದಿಸಿದರು.ಯೋಜನೆಯ ಹೆಬಳೆ ವಲಯದ ಮೇಲ್ವಿಚಾರಕರಾದ ಶ್ರೀ ಜಯರಾಮ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ನಂತರ “ಅನ್ನಸಂತರ್ಪಣೆ” ಕಾರ್ಯಕ್ರಮ ನಡೆಯಿತು.
ಈ ಎಲ್ಲ ಕಾರ್ಯಕ್ರಮದಲ್ಲೂ ಸೇವಾ ಪ್ರತಿನಿಧಿಗಳಾದ ಶ್ರೀಮತಿ ಮುಕ್ತಾ ಶೆಟ್ಟಿ ಮತ್ತು ಶ್ರೀಮತಿ ನಾಗರತ್ನ ನಾಯ್ಕ,ಎರಡೂ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಸಂಘಗಳ ಎಲ್ಲ ಸದಸ್ಯರೂ ಹಾಜರಿದ್ದರು.
ಚಿತ್ರ-ವರದಿ: ರಾಮ ಹೆಬಳೆ