ಮುಂದುವರಿದ ಭಾಗ:
ಮನುಷ್ಯ ತನ್ನ ಪಾಡಿಗೆ ತಾನು ಅವನ ನಂಬಿಕೆಯ ಮೇಲೆ ಸ್ನೇಹ ಮಾಡಿಕೊಂಡು ಅನ್ಯೋನ್ಯವಾಗಿದ್ದು ಪರಸ್ಪರ ಸಹಾಯ ಮಾಡುತ್ತ ಅಥವಾ ಪಡೆಯುತ್ತಾ ಇದ್ದರೆ ಇದನ್ನು ಕಂಡು ಆಗದವರು ಏನಾದರೂ ಮಾಡಿ ಇವರ ಸ್ನೇಹವನ್ನು ಕೊನೆಗೊಳಿಸಬೇಕೆಂದು ಇಲ್ಲದ ಸಂಚು ಹೂಡಿ ಇಬ್ಬರನ್ನೂ ಬೇರೆ ಮಾಡುವ ಪ್ರಸಂಗ ಬರಬಹುದು.
ಸ್ನೇಹ ಎಂದರೆ ತ್ಯಾಗ ಸಹಾಯ ಸಹಾನುಭೂತಿ ಸಹಕಾರ ತಾಳ್ಮೆ ಒಳಗೊಂಡಿದ್ದರೆ ಮಾತ್ರ ನಿಜವಾದ ಸ್ನೇಹ ಎನಿಸಿಕೊಳ್ಳುತ್ತದೆ. ಸ್ವಾರ್ಥ ಅಸೂಯೆ, ಮೋಸ ದುರಹಂಕಾರ ಏನಾದರೂ ಒಳ ನುಸುಳಿದ್ದಲ್ಲಿ ಆ ಸ್ನೇಹ ದ್ವೇಷಕ್ಕೆ ತಿರುಗಿ ಏನು ಪರಿಣಾಮ ಬೇಕಾದರೂ ಬೀರಬಹುದು. ಆತ್ಮೀಯತೆ ಪರೋಪಕಾರ ಗುಣ ಇದ್ದಲ್ಲಿ ಬಹುಬೇಗನೆ ಎಲ್ಲರ ಸ್ನೇಹ ಸಂಪಾದಿಸಬಹುದು.
ಪ್ರೀತಿ ಅಭಿಮಾನ ಎರಡೂ ಒಟ್ಟಿಗೆ ಹೆತ್ತವರಲ್ಲಿ ಒಡಹುಟ್ಟಿದವರಲ್ಲಿ ಹಾಗೂ ಕೆಲವೊಮ್ಮೆ ಸ್ನೇಹಿತರಲ್ಲಿ ಇರುತ್ತದೆ. ಆದರೆ ಕೆಲವೊಮ್ಮೆ ಸ್ನೇಹವೇ ಬೇರೆ ಅಭಿಮಾನವೇ ಬೇರೆಯಾಗಿರುತ್ತದೆ. ಅಭಿಮಾನ ಹೊಂದಿದ್ದರೂ ಸಹ ಸ್ನೇಹವನ್ನು ಸಂಪಾದಿಸಲು ಆಗುವುದಿಲ್ಲ. ಆಟಗಾರರ, ಕಲಾವಿದರ ಹಾಗೂ ರಾಜಕೀಯದವರ ಅಭಿಮಾನಿಯಾಗಬಹದು ಅದರೆ ಅವರ ಸ್ನೇಹ ಪಡೆಯಲು ಸುಲಭವಾಗಿ ಆಗುವುದಿಲ್ಲ. ಸ್ನೇಹಿತರೇ ಆಗಿದ್ದರೆ ಸ್ನೇಹದ ಜೊತೆಗೆ ಅಭಿಮಾನ ಇರಬಹುದು.
ಮನುಷ್ಯನ ಜೀವನದಲ್ಲಿ ತಾನು ಮಗುವಾದಾಗಿನಿಂದಲೂ ಸಾಯುವವರೆಗೆ ಅನೇಕ ಸ್ನೇಹಿತರು ಬಂದು ಹೋಗುತ್ತಾರೆ. ಕೆಲವರು ಮನಸ್ಸಿನಲ್ಲಿ ಉಳಿಯುತ್ತಾರೆ ಇನ್ನೂ ಕೆಲವರು ಮರತೇ ಹೋಗುತ್ತಾರೆ. ಎಲ್ಲರನ್ನೂ ಜ್ಞಾಪಕ ಇಟ್ಟುಕೊಳ್ಳಲು ಆಗುವುದಿಲ್ಲ. ಆದರೆ ಯಾವುದೇ ಕಾರಣಕ್ಕೂ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಸ್ನೇಹಿತರನ್ನು ಮರೆಯಲೇಬಾರದು. ಅವರೂ ಸಹ ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ಬೇರೆಯಾಗುವ ಸಂಭವ ಇರುತ್ತದೆ. ಅವರಿಗೆ ಅವಸ್ಯಕತೆ ಇದ್ದಲ್ಲಿ ಪ್ರತ್ಯಪಕರಿಸಿದರೆ ಆತ್ಮಸಾಕ್ಷಿ ಒಪ್ಪುತ್ತದೆ.
ಮುಂದುವರಿಯುವುದು……..