ಶ್ರಾವಣ ಮಾಸದ ಶುಕ್ಲಪಕ್ಷ ಪಂಚಮಿಯಂದು ನಾಗರ ಪಂಚಮಿ ಹಬ್ಬವನ್ನು ಆಚರಿಸುತ್ತಾರೆ. ‘ನಾಗರ ಪಂಚಮಿ ನಾಡಿಗೇ ದೊಡ್ಡದು’ ಎಂಬ ಸಾಲೇ ಸಾಕು ನಮ್ಮ ನಾಡಲ್ಲಿ ‘ನಾಗರ ಪಂಚಮಿ’ಗಿರುವ ಮಹತ್ವ ಸಾರಲು. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಸಕಲ ಶ್ರೇಯಸ್ಸು ದೊರೆಯುತ್ತದೆಯೆಂದು ಹೇಳಲಾಗಿದೆ.ನಾಗರ ಪಂಚಮಿಗೆ ಹಲವಾರು ಪುರಾಣ ಕಥೆಗಳ ಹಿನ್ನೆಲೆಯೂ ಇದೆ.
    ಒಮ್ಮೆ ರಾಜ ಜನಮೇಜಯನು ತನ್ನ ತಂದೆ ಪರೀಕ್ಷಿತನ ಸಾವಿಗೆ ಸರ್ಪವೇ ಕಾರಣವೆಂದು ತಿಳಿದು ಕೋಪದಿಂದ ಕೆಂಡಾಮಂಡಲನಾಗಿ ಸರ್ಪ ಕುಲವನ್ನೇ ನಾಶಪಡಿಸಲೆಂದು ‘ಸರ್ಪಯಜ್ಞ’ವನ್ನು ಮಾಡತೊಡಗುತ್ತಾನೆ. ಸರ್ಪಕುಲವೇ ಅಳಿವಿನ ಅಂಚಿನಲ್ಲಿದ್ದಾಗ ಆತಂಕಗೊಂಡ ದೇವತೆಗಳು ಆಸ್ತಿಕ ಎಂಬ ಋಷಿಯನ್ನು ಸಂಧಾನಕ್ಕಾಗಿ ಕಳುಹಿಸಿಕೊಡುತ್ತಾರೆ. ತನ್ನನ್ನು ಪ್ರಸನ್ನಗೊಳಿಸಿದ ಋಷಿಯನ್ನು ಕಂಡು ಸಂತಸಗೊಂಡ ಜನಮೇಜಯನು ‘ವರವನ್ನು ಕೇಳು’ ಎಂದಾಗ, ಋಷಿಯು  ಪ್ರಾಣಿಹಿಂಸೆಯು ಮಹಾಪಾಪ,ಅದಕ್ಕಾಗಿ ನೀನು ಈ ಕ್ಷಣಕ್ಕೆ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು ಎಂದು ಪುರಾಣ ಹೇಳುತ್ತದೆ.
 ಇನ್ನೊಂದು ಪುರಾಣ ಕಥೆಗಳ ಪ್ರಕಾರ, ಒಮ್ಮೆ ಯಮುನಾ ನದಿಯ ತೀರದಲ್ಲಿ ಶ್ರೀಕೃಷ್ಣನು ತನ್ನ ಗೋಪಾಲಕರ ಗುಂಪಿನೊಂದಿಗೆ ದನವನ್ನು ಕಾಯುತ್ತಾ, ಚೆಂಡಾಟವನ್ನೂ ಆಡುತ್ತಿದ್ದರು. ಆಡುವಾಗ ಆಕಸ್ಮಾತ್ ಚೆಂಡು ನದಿಯಲ್ಲಿ ಸಿಕ್ಕಿಕೊಂಡಿತು. ಅದನ್ನು ತೆಗೆದುಕಂಡು ಬರಲು ಹೇಳಿದರೆ ಗೋಪಾಲರು ಹೆದರುತ್ತಾ ನಿಂತಿದ್ದರು. ಕೃಷ್ಣ ಕಾರಣ ಕೇಳಿದರೆ ಅಲ್ಲಿ ಬಹುಕಾಲದೀ ವಾಸವಾಗಿ ಎಲ್ಲರಿಗೂ ಉಪದ್ರವ ಕೊಡುತ್ತಿರುವ ‘ಕಾಳಿಯ’ ಎಂಬ ಕ್ರೂರಸರ್ಪದ ವಿಷಯ ತಿಳಿಸಿದರು. ಗೋಪಾಲರ ತಡೆದರೂ ಅವರ ಮಾತನ್ನು ಕೇಳದ ಕೃಷ್ಣ ಒಮ್ಮೇಲೆ ಯಮುನಾ ತೀರದಲ್ಲಿ ಮುಳುಗಿದ. ದರ್ಪದಿಂದ ಎಲ್ಲರನೂ ಹೆದರಿಸಿ ಬೆದರಿಸಿ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದ ಕಾಳಿಯನಿಗೆ ಕೃಷ್ಣನ ಹುಚ್ಚು ಧೈರ್ಯ ಕಂಡು ಬೆಟ್ಟದಷ್ಟು ಕೋಪವುಕ್ಕಿ,ಆಕ್ರಮಣ ಮಾಡಿತು ಕೃಷ್ಣನ ಮೇಲೆ. ಸರಿಸುಮಾರು ತಾಸೆರಡು ಕಳೆದರೂ ಮುಗಿಯದ ಯುದ್ಧ ಕಂಡು ಯುಮನಾ ನಿವಾಸಿಗಳೆಲ್ಲಾ ಕೃಷ್ಣನ ಕುರಿತು ವ್ಯಥೆಗೊಂಡು ಚಿಂತಾಕ್ರಾಂತರಾಗಿ ಕಣ್ತುಂಬಿಕೊಳ್ಳುತ್ತಿದ್ದರು. ಪುಟ್ಟ ಬಾಲಕನೆಂದು ಸೊಕ್ಕಿಂದ ಯುದ್ಧ ಮಾಡುತ್ತಿದ್ದ ಕಾಳಿಯನಿಗೆ,ಕೃಷ್ಣನೊಬ್ಬ ಸಾಮಾನ್ಯನಲ್ಲ ಎಂಬುದು ಅರಿವಾಗಲು ಬಹಳ ಸಮಯ ಹಿಡಿಯಲಿಲ್ಲ. ಇನ್ನೇನು ಕೃಷ್ಣ ಕಾಳಿಯನ ನೆತ್ತಿಯೊಡೆಯಬೇಕು ಅಷ್ಟರಲ್ಲಿ ಅಲ್ಲಿಗೆ ಬಂದ ಕಾಳಿಯ ಪತ್ನಿಯರು ಕೃಷ್ಣನನ್ನು ಅಂಗಲಾಚಿದರು,ಕಾಳಿಯನೂ ಕೂಡ. ಇನ್ನು ಮುಂದೆ ಯಾರಿಗೂ ತೊಂದರೆ ಮಾಡುವುದಿಲ್ಲವೆಂಬ ವಚನ ತೆಗೆದುಕೊಂಡ ಕೃಷ್ಣ ಅದನ್ನು ಬಿಡುಗಡೆ ಮಾಡಿದನು. ಕಾಳಿಯ ಕೃಷ್ಣನಿಗೆ ಶರಣಾದ ದಿನವೇ ಈ ಶ್ರಾವಣದ ಪಂಚಮಿ.
ಇನ್ನೊಂದು ಕಥೆಯ ಪ್ರಕಾರ ಸಹೋದರಿಯೊಬ್ಬಳು ತನ್ನ ಐವರು ಸಹೋದರರೊಂದಿಗೆ ನಾಗರ ಪಂಚಮಿ ಹಬ್ಬಕ್ಕಾಗಿ ತಯಾರಿ ನಡೆಸುತ್ತಿರುತ್ತಾಳೆ. ಆದರೆ ದುರದೃಷ್ಟವಶಾತ್ ಅವಳ ಐವರೂ ಸಹೋದರರು ಸರ್ಪ ಕಚ್ಚಿ ಮೃತರಾಗುತ್ತಾರೆ. ಶೋಕತಪ್ತಳಾದ ಸಹೋದರಿಯು ಉಪವಾಸ ಮಾಡಿ, ನಾಗರ ಪೂಜೆಗೈದು, ಐವರಲ್ಲಿ ಒಬ್ಬ ಸಹೋದರನನ್ನು ಬದುಕಿಸಿಕೊಳ್ಳುತ್ತಾಳೆ.ಅದಕ್ಕಾಗಿಯೇ ಸಹೋದರರಿಗೆ ಅಖಂಡ ಆಯುಷ್ಯವು ದೊರಕಿ ಅವರು ಸುಖದಿಂದ ಬಾಳಲಿ ಎಂದು ಸಹೋದರಿಯರು ಉಪವಾಸ ವೃತ ಕೈಗೊಳ್ಳುತ್ತಾರೆ. ಸಹೋದರರಿಲ್ಲದ ಕೆಲವರು ತವರಿಗೆ ಒಳ್ಳೆಯದಾಗಲೆಂದು ಕೂಡ ಪೂಜೆ ಪುನಸ್ಕಾರ ಕೈಗೊಳ್ಳುತ್ತಾರೆ.
RELATED ARTICLES  ಭವಿಷ್ಯದ ಸೋಲು