(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಈಗಾಗಲೇ ನೋಡಿದಂತೆ ಪ್ರಪಂಚದಲ್ಲಿ ಎತ್ತ ನೋಡಿದತ್ತ ಕೆಲಸಗಳ, ಕರ್ಮಗಳ ಗಲಭೆಯೇ ತೋರಿಬರುತ್ತಿರುವದು. ಎಲ್ಲಿ ಯಾರನ್ನು ಕೇಳಿದರೂ ಕರ್ಮತತ್ಪರರೇ! ‘ಯಾಕೆ?’ ಎಂದು ಕೇಳಿದರೆ ಪ್ರತಿಯೊಬ್ಬರೂ ತಮ್ಮ-ತಮ್ಮ ಕೆಲಸಗಳಿಗೆ ಬೇರೆಬೇರೆ ಉದ್ದೇಶವನ್ನು ಹೇಳಬಹುದು. ಎಲ್ಲರ ಕೆಲಸಗಳೂ ಬೇರೆಬೇರೆ ಉದ್ಯೋಗರೂಪದಿಂದ ಭಿನ್ನ-ಭಿನ್ನ ದಿಶೆಗಳಲ್ಲಿ ಸಾಗಿರಬಹುದು. ಅವುಗಳಿಗೆ ಬೇರೆಬೇರೆ ಪ್ರಯೋಜನಗಳೂ ಇರಬಹುದು.
ಆದರೆ ಒಟ್ಟಿನಲ್ಲಿ ನೋಡಿದಾಗ ಅವೆಲ್ಲವುಗಳಉದ್ದೇಶ ಬರೇ ಎರಡು. ಒಂದು ಸುಖಪ್ರಾಪ್ತಿ; ಇನ್ನೊಂದು ದುಃಖನಿವೃತ್ತಿ.
‘ಯಃ ಕಶ್ಚಿತ್ ಸೌಖ್ಯಹೇತೋಃ ತ್ರಿಜಗತಿ ಯತತೇ ನೈವ ದುಃಖಸ್ಯ ಹೇತೋಃ’
ಎಲ್ಲ ಕರ್ಮಗಳಿಗೂ ಸುಖದ ಸಂಪಾದನೆಯೇ ಮೂಲ ಉದ್ದೇಶ; ದುಃಖದ ಸಲುವಾಗಿ ಯಾರೂ ಏನೂ ಮಾಡುವದಿಲ್ಲ. ದುಃಖದ ಬಗ್ಗೆ ಏನಾದರೂ ಮಾಡುವದು ಎಂದರೆ ಅನಪೇಕ್ಷಿತವಾಗಿ ಬಂದ ದುಃಖದ ನಿವಾರಣೆಗಾಗಿ ಮಾತ್ರ. ಕಷ್ಟ ಬಂದಾಗ ಅಳುವದೂ ಸಹ ಸುಖಪ್ರಾಪ್ತಿಗಾಗಿ; ದುಃಖ ನಿವೃತ್ತಿಗಾಗಿ. ಏಕೆಂದರೆ ಅಂಥ ದುಃಖಸಮಯದಲ್ಲಿ ಅತ್ತ ಹೊರತು ಸಮಾಧಾನವಾಗುವದಿಲ್ಲ.
ಹಾಗಾದರೆ ನಿಜಸುಖ ಯಾವುದು? ಅದರ ಸ್ವರೂಪವೇನು?
ಯಾವುದು ನಾವು ‘ಸುಖ’ ಎಂದುಕೊಳ್ಳುತ್ತವೆಯೋ ಅದರ ಮೇಲೆ ಎಂದಾದರೊಮ್ಮೆ ಜುಗುಪ್ಸೆಯುಂಟಾಗುವದನ್ನು ಅನುಭವಿಸುತ್ತೇವೆ ಮತು್ತ ಪ್ರಸಂಗವಶಾತ್ ಒಮ್ಮೊಮ್ಮೆ ಇವನ್ನೆಲ್ಲ ಬಿಟ್ಟು ಬಿಡಬೇಕೆಂಬ ಮನಸ್ಸೂ ಹುಟ್ಟುತ್ತದೆ. ಇದೆಂಥ ಸುಖ? ಇದು ನಿಜಸುಖವಲ್ಲ!
ನಿಜಸುಖದಲ್ಲಿ ಜುಗುಪ್ಸೆಗೆ ಎಂದೆಂದೂ ಆಸ್ಪದವಿಲ್ಲ. ಅಲ್ಲಿ ದುಃಖದ ನೆರಳೂ ಹಾಯುವದಿಲ್ಲ!
‘ಯೋವೈ ಭೂಮಾ ತತು್ಸಕಂ’ ಇದು ಶೃತಿಯ ಮಾರ್ಗದರ್ಶನ.
ಯಾವುದು ಎಲ್ಲಕ್ಕಿಂತ ಶ್ರೇಷ್ಟವಾಗಿರುವದೋ, ಮೇರೆಯ ನಿರ್ಬಂಧವನ್ನರಿಯದೋ ಅದುವೇ ನಿಜವಾದ ಸುಖ!
ನಿಜಸುಖವೇನೆಂದು ಸರಿಯಾಗಿ ತಿಳಿಯುವದಕ್ಕಾಗಿಯೂ, ಮತ್ತು ಅದರ ಪ್ರಾಪ್ತಿಗಾಗಿಯೂ ಪ್ರಯತ್ನಿಸುವದು ‘ವಿವೇಕಿ’ಯ ಕರ್ತವ್ಯ.
ತನ್ನ ಕರ್ಮದ-ಉದ್ಯೋಗದ ಓಘದಿಂದ ಒಮ್ಮೆ ಹೊರಬಂದು, ಕಾಲಮೀರುವ ಮುನ್ನ ನಾವು ನಡೆಯುತ್ತಿರುವ ದಿಶೆಯನ್ನು ಸಮೀಕ್ಷಿಸಿ, ಬದಲಿಸುವವನೇ ವಿವೇಕಿ!