(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ನೀವೀಗ ಮಾನವ ಜನ್ಮದಲ್ಲಿದೀರಿ. ಈ ನರಜನ್ಮಕ್ಕೆ ತುಂಬಾ ಪ್ರಶಸ್ತಿಯುಂಟು. ಬಯಸಿದರೆ, ಬೆಲೆಕೊಟ್ಟರೆದೊರೆಯುವಂತದಲ್ಲ ಈ ಜನ್ಮ. ಕರ್ಮಪ್ರವಾಹದಲ್ಲಿ ತೇಲುತ್ತ, ಹುಟ್ಟುತ್ತ, ಸಾಯುತ್ತ ಸಾಗಿದಾಗ ಯಾವುದೋ ಪುಣ್ಯದ ಫಲವಾಗಿ ದೊರಕುವದು ಇದು!
ಸ್ವರ್ಗ-ನರಕಗಳಿಗೂ ಬಂಧ-ಮೋಕ್ಷಗಳಿಗೂ ಇಲ್ಲಿಂದಲೇ ದಾರಿ ಕವಲೊಡೆದಿರುತ್ತದೆ.
ಈ ಲೋಕದ ಬದುಕಿಗಾಗಿ ಏನು ಮಾಡಬೇಕು ಎಂಬುದನ್ನು ನಿರ್ಣಯಿಸುವಂತೆ, ಈ ಜನ್ಮದ ಅನಂತರವೂ ಅನಂತಕಾಲ ಅಸ್ತಿತ್ವದಲ್ಲಿರುವ ‘ತನಗಾಗಿ’ ಏನು ಮಾಡಬೇಕು ಎಂದು ನಿರ್ಣಯಿಸುವದೂ ಒಂದು ಅತಿ ಮಹತ್ವದ ಕರ್ತವ್ಯ.
ಆ ನಿರ್ಣಯ ಮಾಡಲಿಕ್ಕೂ, ನಿರ್ಣಯದಂತೆ ಸಾಧಿಸಲಿಕ್ಕೂ ಈ ಜನ್ಮದಲ್ಲಿ ಮಾತ್ರ ಸಾಧ್ಯ. ಇದು ತಪ್ಪಿದರೆ ಮತ್ತಾವ ಜನ್ಮ ಬರುವದೋ ಹೇಳಲಸಾಧ್ಯ. ಪಶುಜನ್ಮ ಬಂದರೆ ಈ ವಿಚಾರಕ್ಕೂ, ಸಾಧನೆಗಳಿಗೂ ಎಡೆಯೇ ಇರುವದಿಲ್ಲ. ಮುಂದಿನ ನರಜನ್ಮದ ವರೆಗೆ ಕಾಯೋಣವೆಂದರೆ ಅದೂ ಈತನ ಕೈಯಲಿಲ್ಲ. ಏಕೆಂದರೆ ವಿಷಯವಾಸನೆ ಮತ್ತು ಅದರಿಂದಾದ ಕರ್ಮ ಮನುಷ್ಯನ ಅರಿವಿಲ್ಲದಂತೆ, ಅವನ ಪಾಲಿಗೆ ಇನ್ನೆಷ್ಟು ಹೊಸ-ಹೊಸ ಜನ್ಮಗಳಿಗೆ ಹುಟ್ಟುಹಾಕುತ್ತಿದೆಯೋ?
ಕರ್ಮವಶನಾದ ಮನುಷ್ಯನು ಅವುಗಳಲ್ಲಿಲ್ಲ ಹೊಕ್ಕು, ಹುಟ್ಟಿ, ಬಾಳಿ ಬರಲೇ ಬೇಕಾಗಬಹುದು. ಹೀಗಿರುವಾಗ ವಿಷಯವಾಸನೆಗೆ ಬದ್ಧನಾಗಿ ಈಗಿನ ಜನ್ಮದಲ್ಲಿ ದೊರಕಿದ ಒಂದು ಉತ್ತಮ ಸಂದರ್ಭವನ್ನು ಉಪಯೋಗಿಸಿಕೊಳ್ಳದವನು, ಒಂದು ಉತ್ತಮ ಮಾರ್ಗ ಆಯ್ದುಕೊಳ್ಳದವನು ನಿಜವಾಗಿ ಮೋಸಹೋಗುವನು. ಏಕೆಂದರೆ, ನರದೇಹದ ಪರಮ ಯೋಗ್ಯತೆಯೆಂದರೇ ಭಗವತ್ಪ್ರಾಪ್ತಿಗಾಗಿ ಸಾಧನೆ ಮಾಡುವ ಅರ್ಹತೆ! ನರದೇಹದ ಪರಮ ಪ್ರಯೋಜನ, ಸಾರ್ಥಕ್ಯ ಭಗವತ್ಸರೂಪವನ್ನು ದೊರಕಿಸಿಕೊಳ್ಳುವದರಲ್ಲೇ ಇದೆ!