ಜಗತ್ತು ಓಡುತ್ತಿದೆ. ಸುಮ್ಮನೆ ಓಡುತ್ತಿಲ್ಲ. ಅಲ್ಲೊಂದು ಸ್ಪರ್ಧೆ ಇದೆ. ಆ ಸ್ಪರ್ಧೆಯಲ್ಲಿ ನಾನೇ ಗೆಲ್ಲ ಬೇಕು ಎನ್ನುವ ಹಠವಿದೆ. ಗೆಲ್ಲ ಬೇಕು ಎನ್ನುವ ಹಠವೇನೋ ಸೂಕ್ತ. ಆದರೆ ನಾನೇ ಗೆಲ್ಲಬೇಕು ಎಂದುಕೊಳ್ಳುವ ವಿಪರೀತ ಮೊಂಡು ಹಠ ಯಾಕೆ? ಅಲ್ಲಿ ಸೋಲನ್ನು ಪಡೆಯುವ ಚಾನ್ಸೇ ಇಲ್ಲ. ಹಾಗೆ ಸೋತರೆ ಅವಮಾನ. ಹಾಗಾಗಿ ಗೆಲ್ಲ ಬೇಕು. ಇದನ್ನು ಒಪ್ಪಿಕೊಳ್ಳೋಣ. ಆದರೆ ಮತ್ತೊಬ್ಬನನ್ನು ತುಳಿದು ಗೆಲ್ಲುವುದರಲ್ಲಿ ಅರ್ಥವಿದೆಯೇ!
ನಾಲ್ಕು ಮಕ್ಕಳು ಒಂದೇ ವಠಾರದವರು ಒಂದೆ ತರಗತಿಯಲ್ಲಿ ಓದುತ್ತಿದ್ದಾರೆ. ಎಲ್ಲರೂ ಜಾಣರು ಹಾಗೆ ಉತ್ತಮ ಅಂಕ ಗಳಿಸುವವರು. ಆದರೆ ಅವರಿಗೆ ತಾನೆ ಮೊದಲು ಬರಬೇಕು ಎನ್ನುವ ಹಂಬಲ. ಶಾಲೆಯಲ್ಲಿ ಉತ್ತಮ ಅಂಕ ಒಂದನೇ ಹುಡುಗ ಹೆಚ್ಚಿಗೆ ತೆಗೆದುಕೊಂಡರೆ ನಾನೇ ಬುದ್ಧಿವಂತ ಎನ್ನಿಸುತ್ತದೆ, ಎರಡನೇಯವನು ತನ್ನದು ಎಲ್ಲಿ ತಪ್ಪಾಯಿತು ಎಂದು ತಿಳಿದುಕೊಳ್ಳದೆ. ಮುಂದಿನ ಬಾರಿ ಪರೀಕ್ಷೆಯ ಸಮಯದಲ್ಲಿ ಅವನ ಪುಸ್ತಕ ಕಾಣೆ ಮಾಡಿಬಿಡಬೇಕು. ನೋಟ್‍ಬುಕ್ ಹರಿದುಬಿಡಬೇಕು. ಹೀಗೆಲ್ಲ ಯೋಚನೆಗಳು ಬೆಳೆಯುತ್ತದೆ ಮತ್ತೊಬ್ಬನಿಗೆ. ಮೂರನೆಯವನಿಗೆ ತಾನು ಅವನು ಓದಿದಂತೆ ಓದ ಬೇಕು ಎಂದುಕೊಂಡು ಅವನ ಗೆಳೆತನ ಬಯಸುತ್ತಾನೆ. ನಾಲ್ಕನೆಯವನಿಗೆ ಮೊದಲನೆಯವನ ಅಂಕ ಕಂಡು ತಾನು ಓದಲು ಸರಿಯಾದವನಲ್ಲ. ಅವನು ಬುದ್ಧಿವಂತ ನಾನು ದಡ್ಡ ಎನ್ನುವ ರೀತಿಯಲ್ಲಿ ಕೀಳರಿಮೆ ಬೆಳಸಿಕೊಳ್ಳುತ್ತಾನೆ.
ಅಂದರೆ ನಾಲ್ಕು ಮಕ್ಕಳ ಮನಸ್ಥಿತಿಗಳು ಏನು ಯೋಚಿಸುತ್ತಿವೆಯೋ ಅದೇ ಪ್ರಪಂಚ. ಯಾರು ಮುಂದಾಗಿ ಹೋಗುತ್ತಾರೋ ಅವರಿಗೆ ತನ್ನ ಬಿಟ್ಟರೆ ಯಾರೂ ಇಲ್ಲ ಎನ್ನುವ ಹಮ್ಮು ಅಹಂಕಾರ. ಅದು ಹೇಗಿರುತ್ತದೆ ಎಂದರೆ ಗೂಳಿ ನುಗ್ಗಿದ್ದೆ ಹಾದಿ ಎನ್ನುವಂತೆ ಸಾಗಿರುತ್ತದೆ. ಯಾರಿಗೆ ಅವಕಾಶ ತಪ್ಪುತ್ತೊ ಕಾಲೆಳೆಯುವ ಮನಸ್ಸು. ಆ ಬುದ್ಧಿಗೆ ಯಾವ ಮಟ್ಟಕ್ಕಾದರೂ ಕೆಳಗಿಳಿಯುತ್ತಾರೆ. ಅವನು ಬೆಳೆಯಲಿ ನಾನು ಜೊತೆಯಾಗಿ ಬೆಳೆಯುವೆ ಅನ್ನುವ ಸಾತ್ವಿಕ ಗುಣ. ಇಂತ ಮನಸ್ಸಿವರು ತುಂಬಾ ವಿರಳ. ಇವರ ಮನಸ್ಸು ಹೇಗೆ ಅಂದರೆ ಹೂವುಗಳಿದ್ದಂತೆ. ಒಂದು ಹೂ ಅರಳಿರುವುದು ನೋಡಿ ತಾನು ಅರಳುತ್ತದೆ.ಹಾಗೆಯೇ ಈ ಜನರು ಕೂಡ ಬೆಳೆಯುವವರ ನೋಡುತ್ತ ತಾವು ಬೆಳೆಯುತ್ತಾರೆ. ಕೊನೆಯವರು. ಅಲ್ಲಿ ನನಗೆ ತಿಳಿಯದು ನಾನಿಷ್ಟೆ ಎನ್ನುವ ಕೆಳಸ್ತರದ ಯೋಚನೆ ನಾನು ಅಪ್ರಯೋಜಕ, ಯಾವ ಕೆಲಸ ಮಾಡಲು ಲಾಯಕ್ಕಿಲ್ಲ. ಆತ್ಮವಿಶ್ವಾಸ ಹೊಂದಲು ಸಾಧ್ಯವಿಲ್ಲ ಎನ್ನುವ ಭಾವನೆ ಹೊಂದಿದವರು. ಇವರು ಯಾರ ಕಾಲು ಜಗ್ಗಲು ಹೋಗುವುದಿಲ್ಲ. ತಾವೇ ತಮ್ಮ ಏಳಿಗೆಯನ್ನು ಕುಂಠಿತಗೊಳಿಸಿಕೊಳ್ಳುತ್ತಾರೆ.
ಸ್ಪರ್ಧೆಗಿಳಿಯುವ ಮನಸ್ಸಿದ್ದರೆ ಸಾಲದು. ಅದನ್ನು ನಾವು ಯಾವ ರೀತಿಯಲ್ಲಿ ಸಾಗಿಸಿಕೊಂಡು ಹೋಗುತ್ತೇವೆ ಎನ್ನುವುದು ಕೂಡ ನಮ್ಮ ಆಯ್ಕೆ. ಯಾವುದೋ ಆತುರಕ್ಕೆ ಸಿಟ್ಟಿಗೆ ಬಿದ್ದು ನಾವು ಬೆರೆಯವರ ಮೇಲೆ ಸ್ಪರ್ಧೆ ಮಾಡಲು ಹೋಗಿ ಪ್ರಪಾತಕ್ಕೆ ಬೀಳುವ ಸಂದರ್ಭ ಬರಬಹುದು.
ಸ್ಪರ್ಧಾತ್ಮಕ ಮನಸ್ಸು ಒಳ್ಳೆಯದು. ಆದರೆ ಸ್ಪರ್ಧೆ ನಡೆಯಬೇಕಾದುದು ವಿಷಯದಲ್ಲಿ ಹೊರತು ಮನುಷ್ಯನಾದ ಬೆಳೆಯುವ ಜೊತೆಗಾರರಲ್ಲಿ ಅಲ್ಲ ಎನ್ನುವುದು ನನ್ನ ಭಾವನೆ