:- ಪ್ರಮೋದ ಹೆಗಡೆ :-
“ಅಭಯಾಕ್ಷರ” ಶ್ರೀ ರಾಮಚಂದ್ರಾಪುರ ಮಠವು, ಭಾರತೀಯ ಗೋ ತಳಿಗಳ ಸಂರಕ್ಷಣೆಗೆ ಕೈಗೊಂಡ ಒಂದು ಬೃಹತ್ ಆಂದೋಲನ. ಈ ಆಂದೋಲನದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣೆಯ ಕುರಿತಾಗಿ ನಮ್ಮ ಹಕ್ಕೊತ್ತಾಯ ತಿಳಿಸಿ ಕರ್ನಾಟಕ ಹಾಗೂ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಆ ಮನವಿ ಪತ್ರಕ್ಕೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಸಹಿ ಸಂಗ್ರಹಿಸುವ ಉದ್ದೇಶ ಈ ಆಂದೋಲನದ್ದು.
ಶ್ರೀಮಠದ ಇತಿಹಾಸದ ಪುಟಗಳನ್ನು ತಿರುಗಿ ನೋಡಿದರೆ ಗೋ ಸಂರಕ್ಷಣೆಗಾಗಿ ಮಾಡಿರುವ ಹೋರಾಟ ಹಲವಾರು ಕಂಡು ಬರುತ್ತದೆ.
ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳು ಗೋ ಸಂರಕ್ಷಣೆಗೆ ಸರಳವಾದ ‘ಸಪ್ತ ಸೂತ್ರ’ಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಿದ್ದಾರೆ
೧. ಸ್ವಗೃಹದಲ್ಲಿ ಗೋಪಾಲನೆ ಮಾಡಿ
೨. ಗೋಪಾಲನೆ ನೆಡೆಯುವಲ್ಲಿ ಸಹಕಾರ ನೀಡಿ
೩.ಮನೆಯಲ್ಲಿ ಗೋಧನದ ಹುಂಡಿ ಇಡಿ
೪. ಗೋಜನ್ಯ ವಸ್ತುಗಳನ್ನು ಬಳಸಿ
೫. ಗೋ ವಧಜನ್ಯ ವಸ್ತುಗಳನ್ನು ತ್ಯಜಿಸಿ
೬. ಸ್ವತಃ ಗೋಕಿಂಕರರಾಗಿ
ಇದಾವುದೂ ಆಗದಿದ್ದರೆ ಅತ್ಯಂತ ಸರಳ ಸೂತ್ರ
೭. ಆಳುವವರನ್ನು ಗೋವಧೆ ನಿಷೇಧಿಸಲು ಆಗ್ರಹಿಸುವ “ಅಭಯಾಕ್ಷರ”ಕ್ಕೆ ಹಸ್ತಾಕ್ಷರ ನೀಡಿ
ನಮ್ಮ ಒಂದು ಸಹಿ ಭಾರತೀಯ ಗೋ ತಳಿಗಳ ಸಂಕುಲವನ್ನೇ ಉಳಿಸಬಹುದು. ಬೆಂಗಳೂರಿನ ಅಭಿಯಾನದ ನಂತರ ರಾಜ್ಯದಾದ್ಯಂತ ಹಾಗು ದೇಶದಾದ್ಯಂತ ಇದರ ವ್ಯಾಪ್ತಿ ವಿಸ್ತಾರ ಗೊಳಿಸುವ ಯೋಜನೆ ಶ್ರೀಮಠದ್ದು.
ಅಭಯಾಕ್ಷರ ಅಭಿಯಾನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಾರ್ಯಕರ್ತನಿಗೂ ಒಂದು ಸುಂದರ ಅನುಭವವಾಗಿರುತ್ತದೆ.
ಸಮಾಜದ ಪರಿಚಯ, ಜನರ ಸಂಪರ್ಕ, ಪ್ರತಿಯೊಬ್ಬರ ಯೋಚನೆಗಳು ನಮಗೆ ತಿಳಿಯುತ್ತದೆ.
ಹಲವಾರು ಜನರು ನಮ್ಮ ಸೇವೆ ಯಶಸ್ವಿಯಾಗಲಿ ಎಂದು ಹರಸುತ್ತಾರೆ, ಸಾಧ್ಯವಾದಲ್ಲಿ ಅವರು ಕೂಡ ನಮ್ಮೊಂದಿಗೆ ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಗೋ ಸೇವೆಯಲ್ಲಿ ಪಾತ್ರರಾಗುತ್ತಾರೆ. ಹಲವರಿಂದ ನಮಗೆ ಗೊತ್ತಿಲ್ಲದ ವಿಷಯಗಳು ತಿಳಿಯುತ್ತದೆ. ಇನ್ನು ಕೆಲವರಿಗೆ ಮುಗಿಯದ ಸಮಸ್ಯೆ, ಆಧಾರವಿಲ್ಲದ ವಾದ, ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೂ ಸ್ವೀಕರಿಸಲು ಮನಸ್ಸಿರುವುದಿಲ್ಲ, ಇದರಿಂದ ಹಿಂದೂ- ಮುಸಲ್ಮಾನರ ಜಗಳ ಹೆಚ್ಚಾಗುತ್ತದೆ ಎಂಬ ಅನಿಸಿಕೆಗಳು, ಆದರೆ ಇವರಿಗೆ ಅದೆಷ್ಟೋ ಮುಸಲ್ಮಾನರು ಅಭಯಾಕ್ಷರ ನೀಡಿರುವುದು ತಿಳಿದಿಲ್ಲ. ಯಾರೊಂದಿಗೂ ಜಗಳ ಮಾಡದೇ,ಇವರೆಲ್ಲರಿಗೂ ಗೋವಿನ ಮಹತಿಯನ್ನು ತಿಳಿಸುವ ಎಲ್ಲಾ ಪ್ರಯತ್ನವನ್ನು ಪ್ರತಿಯೊಬ್ಬ ಗೋ ಕಿಂಕರನು ಮಾಡುತ್ತಾನೆ. ಪ್ರತಿಯೊಬ್ಬ ಕಾರ್ಯಕರ್ತನಿಗೂ ಜನರನ್ನು ಎದುರಿಸುವ ಶಕ್ತಿ ದೊರಕುತ್ತದೆ.
ಅಭಯಾಕ್ಷರ ಕೇವಲ ಧರ್ಮ, ಜಾತಿ, ರಾಜಕೀಯ ಅಥವಾ ಯಾರೋ ಒಬ್ಬನಿಗೆ ಬೇಕಾಗಿರುವುದಲ್ಲ. ಗೋ ಸಂರಕ್ಷಣೆ ಇಡೀ ಭಾರತಕ್ಕೆ ಸಂಬಂಧಿಸಿದ್ದು.
ಪ್ರತಿ ದಿನ ಬೆಳಿಗ್ಗೆ ಕುಡಿಯುವ ಹಾಲಿಗೋಸ್ಕರ ಅಭಯಾಕ್ಷರ ನೀಡಿ.
ಅಡುಗೆಗೆ ಬಳಸುವ ತುಪ್ಪಕ್ಕೋಸ್ಕರ ಅಭಯಾಕ್ಷರ ನೀಡಿ.
ರುಚಿ ಹೆಚ್ಚಿಸುವ ಬೆಣ್ಣೆಗಾಗಿ ಅಭಯಾಕ್ಷರ ನೀಡಿ.
ಊಟ ಪೂರ್ತಿಗೊಳಿಸುವ ಮೊಸರು ಅಥವಾ ಮಜ್ಜಿಗೆಗೋಸ್ಕರ ಅಭಯಾಕ್ಷರ ನೀಡಿ.
ಅದೆಷ್ಟೋ ಖಾಯಿಲೆ ವಾಸಿ ಮಾಡುವ ಗೋ ಮೂತ್ರ ಹಾಗು ಗೋಮಯಕ್ಕಾಗಿ ಅಭಯಾಕ್ಷರ ನೀಡಿ.
ಭಾರತೀಯ ಗೋ ತಳಿಗಳನ್ನು ಉಳಿಸಲು, ಸಂವರ್ಧನೆಗೊಳಿಸಲು, ಗೋ ಮಾತೆಯನ್ನು ರಕ್ಷಿಸಲು ನಿಮ್ಮ ಅಭಯಾಕ್ಷರ ನೀಡಿ.