ಸಂಬಂಧಗಳಲ್ಲಿ ನಿಂತು ಹೋಗುವ ಮಾತು ಕತೆಗಳು – 19
ಹೆಣ್ಣು ಮಕ್ಕಳೆಂದೆರೆ ಹೆತ್ತವರಿಗೆ ಒಂದು ರೀತಿಯ ವಿಶೇಷ ಪ್ರೀತಿ ಇರುತ್ತದೆ ಎಂದರೆ ತಪ್ಪಾಗಲಾರದು. ಹೆಣ್ಣು ಮಕ್ಕಳನ್ನು ಅಕ್ಕರೆಯಿಂದ ಸಲಹಿ ಬೆಳೆಸಿ ಏನು ತಪ್ಪು ಮಾಡಿದರೂ ಸಹಜವಾಗಿ ಸಣ್ಣ ಪುಟ್ಟ ತಪ್ಪು ಮಾಡಿದ್ದಾಗ್ಯೂ ಗಂಡು ಮಕ್ಕಳನ್ನು ಶಿಕ್ಷಿಸುವ ರೀತಿಯಲ್ಲಿ ಶಿಕ್ಷಿಸುವುದಿಲ್ಲ. ಹೆಣ್ಣು ಮಗಳೆಂದು ಒಂದು ರೀತಿಯ ರಿಯಾಯಿತಿ ತೋರಬಹುದು.
ಹೆಣ್ಣು ಮಕ್ಕಳು ದೊಡ್ಡವರಾಗಿ ಬೆಳೆಯುತ್ತಿದ್ದಂತೆ ಅವರ ಮೇಲೆ ಅಭಿಮಾನವೂ ಜಾಸ್ತಿಯಾಗುತ್ತಾ ಹೋಗುತ್ತದೆ. ಒಂದು ಪಕ್ಷ ಗಂಡು ಮಕ್ಕಳು ಮನೆಗೆ ಬರುವುದು ತಡವಾದರೆ ಈಗಿನ ಕಾಲದಲ್ಲಿ ಮೊಬೈಲ್ ಇರುವುದರಿಂದ ವಿಚಾರಿಸಿ ಎಷ್ಟೊತ್ತಾದರೂ ಬರುತ್ತಾನೆಂದು ಧೈರ್ಯವಾಗಿರಬಹುದು. ಆದರೆ ಹೆಣ್ಣು ಮಕ್ಕಳು ಫೋನಿನ ಮೂಲಕ ಬರುತ್ತೇವೆಂದು ತಿಳಿಸಿದರೂ ಸಹ ಮಕ್ಕಳು ಮನೆಗೆ ಬರುವವರೆಗೂ ಒಂದು ರೀತಿಯ ಆತಂಕ ಕಳವಳ ಇದ್ದೇ ಇರುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಹೆಣ್ಣು ಮಕ್ಕಳಿಗೆ ಎಲ್ಲೂ ಹೋಗಲು ಸ್ವತಂತ್ರವಿಲ್ಲವೇ ಎನ್ನಬಹುದು. ಅಥವಾ ಹೆಣ್ಣು ಮಕ್ಕಳ ಮೇಲೆ ನಂಬಿಕೆ ಇಲ್ಲವೇ ಎನ್ನಬಹುದು. ಆದರೆ ಖಂಡಿತ ನಂಬಿಕೆ ಇರುತ್ತದೆ. ಸ್ವತಂತ್ರವೂ ಇರುತ್ತದೆ. ಆದರೆ ಅವರ ಮೇಲಿರುವ ಒಂದು ರೀತಿಯ ಕಾಳಜಿಯಾಗಿರುತ್ತದೆ.
ಮಕ್ಕಳು ಸ್ವತಂತ್ರವಾಗಿರಲೂ ಅನುಮತಿ ಇರುತ್ತದೆ. ಆದರೆ ಯಾವ ಮಕ್ಕಳಾದರೂ ಹೆಣ್ಣಾಗಲೀ ಅಥವಾ ಗಂಡು ಮಕ್ಕಳಾಗಲೀ ಅವರಿಗೆ ಹೆತ್ತವರು ಸ್ವತಂತ್ರವಾಗಿರಲು ಬಿಡಬಹುದು. ಆದರೆ ಇದು ಸ್ವೇಚ್ಛೆಯಾಗಿರಬಾರದಷ್ಟೇ. ಜೀವನದಲ್ಲಿ ಒಂದು ರೀತಿಯ ಶಿಸ್ತು ಇರಬೇಕು. ಹೆತ್ತವರು ತಮ್ಮನ್ನು ಫ್ರೀಯಾಗಿ ಬಿಟ್ಟಿದ್ದಾರೆ. ಏನು ಮಾಡಿದರೂ ಸುಮ್ಮನಿರುತ್ತಾರೆ ಎಂಬ ಮನೋಭಾವ ಇರಬಾರದು. ಯಾರೂ ಕೇಳುವುದಿಲ್ಲವೆಂದು ತಮ್ಮ ಇಷ್ಟಬಂದಂತೆ ಇದ್ದರೆ ತೊಂದರೆಗೊಳಗಾಗುವರು ಮಕ್ಕಳೇ ವಿನಹ ಹೆತ್ತವರಲ್ಲ. ಆದರೂ ಇದರಿಂದ ಹೆತ್ತವರಿಗೆ ಬಹಳವೇ ನೋವು ಸಂಕಟವಾಗುತ್ತದೆ.
ಹೆತ್ತವರಿಗೆ ಅವರ ಜೀವನದಲ್ಲಾಗಿರುವ ಅನುಭವದಿಂದ ಅವರು ಪಟ್ಟಿರುವ ಕಷ್ಟಗಳಿಂದ ಜೀವನದಲ್ಲಿ ಅರಿವಾಗಿರುತ್ತದೆ. ತಮ್ಮ ಮಕ್ಕಳು ತಮ್ಮಂತೆ ಕಷ್ಟದಲ್ಲಿ ಸಿಲುಕಬಾರದು ಜೀವನ ಹಸನಾಗಿರಬೇಕು ತಮ್ಮ ಮಕ್ಕಳು ಚೆನ್ನಾಗಿರಬೇಕೆಂಬ ಏಕೈಕ ಉದ್ದೇಶದಿಂದ ಮಕ್ಕಳು ತಪ್ಪು ಮಾಡುತ್ತಿದ್ದರೆ ಬುದ್ದಿವಾದ ಹೇಳಬಹುದು. ಬುದ್ದಿವಂತರಾದ ಮಕ್ಕಳು ತಾವೇನಾದರೂ ಅರಿಯದೆ ಅಡ್ಡದಾರಿಗೆ ಹೋಗುತ್ತಿದ್ದರೆ ಹೆತ್ತವರ ಉಪದೇಶದಿಂದ ಎಚ್ಚೆತ್ತುಕೊಂಡು ಸರಿದಾರಿಗೆ ಬರಬಹುದು. ಹೆತ್ತವರ ಮಾತನ್ನು ಕಡೆಗಣಿಸಿ ನಾವೇನು ಓದಿಲ್ಲವೇ ನಮಗೇನು ಬುದ್ದಿ ಇಲ್ಲವೇ ಎಂಬ ಧೋರಣೆ ತೋರಿ ಹೆತ್ತವರ ಮಾತನ್ನು ಕಡೆಗಣಿಸಿ ಬುದ್ದಿ ಕಲಿಯದೆ ತಮ್ಮ ದಾರಿಯಲ್ಲೇ ಮುಂದುವರೆದರೆ ಇಬ್ಬರಿಗೂ ಕಷ್ಟನಷ್ಟವಾಗುತ್ತದೆ.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)