ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಬ್ಯಾಂಕ್‍ಗಳು ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ. ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಅವರು, ಬ್ಯಾಂಕ್‍ಗಳೂ ಸೇರಿದಂತೆ ರಾಜ್ಯದಲ್ಲಿ ಅಸ್ತಿತ್ವವಿರುವ ಎಲ್ಲ ಸಾರ್ವಜನಿಕ ಸೇವೆಯ ಸಂಸ್ಥೆಗಳು ಕನ್ನಡದಲ್ಲಿಯೇ ವ್ಯವಹರಿಸಬೇಕೆಂಬ ಆದೇಶವಿದೆ. ಅಂತೆಯೇ ಉತ್ತರ ಕನ್ನಡದಲ್ಲಿ ಬ್ಯಾಂಕ್‍ಗಳ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಅವರು ಹೇಳಿದರು.
ಅಂತರ್ಜಾಲ ಬ್ಯಾಂಕ್ ಪದ್ಧತಿ ಅನುಷ್ಠಾನಕ್ಕೆ ಬಂದಮೇಲೆ ಬ್ಯಾಂಕ್ ಸಿಬ್ಬಂದಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಕರ್ನಾಟಕಕ್ಕೆ ವರ್ಗಾವಣೆಗೊಂಡು ಬಂದ ಬ್ಯಾಂಕ್ ಸಿಬ್ಬಂದಿ ಎರಡು ಮೂರು ವರ್ಷಗಳ ನಂತರ ವಾಪಸು ಹೋಗುವ ಇಚ್ಚೆಯಲ್ಲಿ ಕನ್ನಡ ಕಲಿಯುವ ಗೋಜಿಗೆ ಹೋಗುವುದಿಲ್ಲ. ಆದರೆ ಬ್ಯಾಂಕ್‍ನಲ್ಲಿ ವ್ಯವಹರಿಸುವ ಸಾರ್ವಜನಿಕರಿಗೆ ಕಷ್ಟವಾಗುತ್ತದೆ. ಲೀಡ್‍ಬ್ಯಾಂಕ್ ಮ್ಯಾನೇಜರ್ ಮೂಲಕ ಎಲ್ಲ ಬ್ಯಾಂಕ್‍ಗಳಿಗೆ ಈ ಬಗ್ಗೆ ಪತ್ರ ಕಳಿಸಲಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಸಾಧ್ಯತೆ ಇದೆ ಎಂದರು.