ಬೆಂಗಳೂರು :ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್ ಭಾರತಕ್ಕೆ ಆಗಮಿಸುತ್ತಿರುವ ಖಚಿತ ಮಾಹಿತಿಯನ್ನು ಆಧರಿಸಿ ಎಸ್ ಐಟಿ ಅಧಿಕಾರಿಗಳು ಗುರುವಾರ ಮಧ್ಯರಾತ್ರಿ 1.50 ಕ್ಕೆ ದೆಹಲಿಯಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
2 ಸಾವಿರ ಕೋಟಿ ರೂ. ವಂಚನೆ ಮಾಡಿ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಮನ್ಸೂರ್ ಖಾನ್ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ತನಗೆ ಆರೋಗ್ಯ ಸರಿಯಿಲ್ಲದ ಕಾರಣ ವಿಶ್ರಾಂತಿ ಪಡೆಯುತ್ತಿದ್ದೆ ಎಂದು ವಿಡಿಯೋ ಮಾಡಿ ಪೊಲೀಸ್ ಕಮಿಷನರ್ಗೆ ಕಳುಹಿಸಿದ್ದ ಮನ್ಸೂರ್ ಖಾನ್ ಕಳೆದ ಭಾನುವಾರ 24 ಗಂಟೆಗಳಲ್ಲಿ ಬೆಂಗಳೂರಿಗೆ ವಾಪಾಸ್ ಆಗುವುದಾಗಿ ತಿಳಿಸಿದ್ದ. ಆದರೆ, ಆತ ಸುಳ್ಳು ಹೇಳಿದ್ದಾನೆಂದು ಗೊತ್ತಾಗುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಮತ್ತೆ ಚುರುಕಾಗಿದ್ದರು ಎನ್ನಲಾಗಿದೆ.
ನಿನ್ನೆ ದೆಹಲಿ ವಿಮಾನ ನಿಲ್ದಾಣಕ್ಕೆ ದುಬೈನಿಂದ ತಡರಾತ್ರಿ ಆಗಮಿಸಿದ ಮನ್ಸೂರ್ ಖಾನ್ನನ್ನು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ, ಎಸ್ಐಟಿ ಬದಲಿಗೆ ಇಡಿ ವಶಕ್ಕೆ ಮನ್ಸೂರ್ ಖಾನ್ನನ್ನು ನೀಡಲಾಯಿತು. ಸಂಜೆ ವೇಳೆಗೆ ಮನ್ಸೂರ್ ಖಾನ್ನನ್ನು ಬೆಂಗಳೂರು ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.