ಕಾರವಾರ: ಶಿವರಾಮ್ ಹೆಬ್ಬಾರ್ ಬಿಜೆಪಿಯಲ್ಲಿಯೇ ಇದ್ದು ಈ ಹಿಂದೆ ಎರಡು ಬಾರಿ ಜಿಲ್ಲಾಧ್ಯಕ್ಷರಾಗಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಕಾಂಗ್ರೆಸ್ ಗೆ ತೆರಳಿ ಶಾಸಕರಾಗಿದ್ದರು. ಆದರೆ ಇದೀಗ ಸಮ್ಮಿಶ್ರ ಸರ್ಕಾರದಿಂದ ಬೇಸತ್ತಿದ್ದಾರೆ. ಅವರು ಪಕ್ಷಕ್ಕೆ ಬಂದರೆ ಈಗಾಗಲೇ ಕಾರ್ಯಕರ್ತರಿಗೆ ಒಡನಾಟ ಇರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ ಹೇಳಿದರು.
ಸಮ್ಮಿಶ್ರ ಸರ್ಕಾರದಿಂದ ಅತೃಪ್ತಗೊಂಡ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಗೆ ಬರುವುದನ್ನು ಹೈಕಮಾಂಡ್ ಒಪ್ಪಿದರೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮುಕ್ತವಾಗಿ ಸ್ವಾಗತಿಸಲಿದ್ದೇವೆ ಎಂದರು.
ಕಾರವಾರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಕುರಿತು ಮಾಹಿತಿ ನೀಡಿದ ಬಳಿಕ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ, ಆದರೆ ಇನ್ನೂ ಪಕ್ಷಕ್ಕೆ ರಾಜಿನಾಮೆ ನೀಡಿಲ್ಲ. ಈ ನಡುವೆ ಜಿಲ್ಲೆಯಲ್ಲಿ ಬಿಜೆಪಿ ಸೇರುವುದಾಗಿ ಸುದ್ದಿಗಳು ಹರಿದಾಡುತ್ತಿದೆ. ಒಂದೊಮ್ಮೆ ಅವರು ಬಿಜೆಪಿ ಬರುವುದನ್ನು ಹೈಕಮಾಂಡ್ ಒಪ್ಪಿದಲ್ಲಿ ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಹೇಳಿದರು.