ಕುಮಟಾ: ನಮ್ಮ ನದಿಗಳ ನೀರನ್ನು ದೂರದ ಬೆಂಗಳೂರಿಗೆ ಒಯ್ಯುತ್ತೇವೆ ಎಂಬ ಹುಚ್ಚು ಸಾಹಸಕ್ಕೆ ಕೈ ಹಾಕಿರುವ ಆಡಳಿತಗಾರರಿಗೆ ಕರಾವಳಿಯ ಜನಜೀವನ ವ್ಯವಸ್ಥೆ, ಪರಿಸರದ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಈ ಯೋಜನೆಯಿಂದ ಇಲ್ಲಿನ ಸಂಪೂರ್ಣ ಅಂತರ್ಜಲ ಬತ್ತುವುದರಲ್ಲಿ ಸಂಶಯವಿಲ್ಲ. ನದಿಯನ್ನೇ ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಬೀದಿಗೆ ಬರುತ್ತವೆ. ಬಲಾತ್ಕಾರವಾಗಿ ನದಿಯ ಹರಿವನ್ನು ಬೇರೆಡೆ ಒಯ್ಯುವುದು ಸಂಪೂರ್ಣ ಅವೈಜ್ಞಾನಿಕ. ಇಲ್ಲಿನ ಸಹಸ್ರಾರು ಕುಟುಂಬಗಳ ಬದುಕನ್ನು ಕಸಿದುಕೊಂಡು, ಹಳ್ಳಿಗಳನ್ನು, ನದಿಯ ಒಡಲನ್ನು ಬರಡಾಗಿಸಿ ಸರ್ಕಾರ ಸಾಧಿಸುವುದಾದರೂ ಏನು. ಹಲವಾರು ಯೋಜನೆಗಳಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿರುವ ಜಿಲ್ಲೆಯ ಜನತೆ, ಮುಂದಿನ ನಮ್ಮ ಪೀಳಿಗೆಗಾಗಿ ಹಾಗೂ ಉತ್ತರಕನ್ನಡದ ನೈಸರ್ಗಿಕ ಸಂಪತ್ತಿನ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧರಾಗಬೇಕಿದೆ ಎಂದು ಉತ್ತರಕನ್ನಡ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಜಿ.ಭಟ್ಟ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕನ್ನಡದ ಜೀವನದಿಗಳಾದ ಅಘನಾಶಿನಿ ಮತ್ತು ಶರಾವತಿ ನದಿ ನೀರನ್ನು ಬೆಂಗಳೂರು ಅಥವಾ ಇನ್ನಿತರ ಸ್ಥಳಕ್ಕೆ ಕೊಂಡೊಯ್ಯುವ ಯೋಜನೆಯನ್ನು ವಿರೋಧಿಸಿ ಉತ್ತರಕನ್ನಡ ಉಳಿಸಿ ಹೋರಾಟ ಸಮಿತಿ ವತಿಯಿಂದ ಪಕ್ಷಾತೀತವಾಗಿ ಶುಕ್ರವಾರ ಪಟ್ಟಣದ ಗಿಬ್ ವೃತ್ತದ ಬಳಿ ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆದು, ಬೃಹತ್ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಮೂಲಕ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮೀನುಗಾರರು, ರೈತರು, ಕೃಷಿಕರು, ಕೂಲಿ ಕಾರ್ಮಿಕರಿಂದ ತುಂಬಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಸಹಸ್ರಾರು ಕುಟುಂಬಗಳಿಗೆ ಅಘನಾಶಿನಿ ಹಾಗೂ ಶರಾವತಿ ನದಿ ಜೀವನಾಧಾರವಾಗಿದೆ. ಈಗಾಗಲೇ ಮರಾಕಲ್ ಕುಡಿಯವ ನೀರಿನ ಯೋಜನೆಯಿಂದ ಕುಮಟಾ ಹಾಗೂ ಹೊನ್ನಾವರ ಪಟ್ಟಣದ ನೀರಿನ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಈ ಯೋಜನೆಯೂ ಪ್ರಸ್ತುತ ಕಾಲಕ್ಕೆ ಸಾಲುತ್ತಿಲ್ಲ ಎಂಬ ಕಾರಣಕ್ಕೆ ಹೊನ್ನಾವರಕ್ಕೆ ಪ್ರತ್ಯೇಕ ಶರಾವತಿ ನದಿ ನೀರಿನ ಯೋಜನೆ ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆದಿದೆ.
ಈ ಮಳೆಗಾಲಕ್ಕೂ ಮುನ್ನ ಅಘನಾಶಿನಿ ನದಿ ನೀರು ಎಂದೂ ಕಾಣದಷ್ಟು ಭೀಕರವಾಗಿ ಬತ್ತಿದೆ. ತಿಂಗಳಾನುಗಟ್ಟಲೆ ನದಿ ಪಾತ್ರದ ಜನರಿಗೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ. ವಿವಿಧ ಯೋಜನೆಗಳಿಂದ ಶರಾವತಿ ನದಿಯ ಪ್ರಾಕೃತಿಕ ಸಂಪತ್ತು ಹಾಗೂ ಮೂಲ ಲಕ್ಷಣಗಳು ಸಾಕಷ್ಟು ಕೆಟ್ಟಿವೆ. ನದಿಯ ಉದ್ದಕ್ಕೂ ಕ್ಷಾರತೆ ಹೆಚ್ಚುತ್ತಿದೆಸಿದರಿಂದಾಗಿ ಜಲಮೂಲಗಳು ಸವುಳಾಗುತ್ತಿದೆ. ನದಿಯ ಹರಿವಿನ ಪ್ರಮಾಣ ಕಡಿಮೆಯಾದಂತೆ ಕುಡಿಯುವ ನೀರಿನ ಮೂಲಗಳು ಬತ್ತುವ ಕ್ಷೇತ್ರ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಇದರಿಂದ ಕೃಷಿ, ತೋಟಗಾರಿಕೆ, ಮೀನುಗಾರಿಕೆ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಭವಿಷ್ಯದ ವರ್ಷಗಳು ನಮ್ಮ ಜೀವ ನದಿಗಳನ್ನು ಹಾಗೂ ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಸೂಚಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೋರಾಟ ಸಮಿತಿಯ ಕಾನೂನು ವಿಭಾಗದ ಮುಖ್ಯಸ್ಥ ಆರ್.ಜಿ.ನಾಯ್ಕ ಮಾತನಾಡಿ, ಸರ್ಕಾರ ಹಾಗೂ ರಾಜಕಾರಣಿಗಳು ಉತ್ತರಕನ್ನಡ ಜಿಲ್ಲೆಯ ಜನತೆ ಶಾಂತಪ್ರಿಯರು ಎಂಬ ವಿಷಯವನ್ನು ದುರುಪಯೋಗಪಡಿಸಿಕೊಳ್ಳುವುದು ಬೇಡ. ಈ ಹೋರಾಟ ನಮಗಾಗಲ್ಲ, ನಮ್ಮ ಮುಂದಿನ ಪೀಳಿಗೆಗಾಗಿ. ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಬಗ್ಗೆ 2012ರಲ್ಲಿ ವರದಿ ಸಿದ್ಧವಾಗಿ 2014ರಲ್ಲಿ ಸರ್ಕಾರ ಪ್ರಸ್ತಾವನೆ ಸ್ವೀಕರಿಸಿದಾಗಲೂ ನಮ್ಮ ಜಿಲ್ಲೆಯ ಸಂಸದರು, ಉಸ್ತುವಾರಿಗಳು, ಸಚಿವರು, ಶಾಸಕರು ಬಾಯಿ ಮುಚ್ಚಿ ಕುಳಿತಿದ್ದು ಯಾಕೆ. ಜಿಲ್ಲೆಗೆ ಬೇಡವಾದ ಮಾರಕ ಯೋಜನೆಗಳ ಬದಲು ಒಂದಾದರೂ ಉತ್ತಮ ಯೋಜನೆಗಳು ರೂಪಿಸಿ. ನದಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ಮುಂದಿನ ಹಂತದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟಿಸಲಾಗವುದು. ಆದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉತ್ತರಕನ್ನಡ ಜಿಲ್ಲೆಯ ಜನತೆಯ ಸಾಮರ್ಥ್ಯ ಎನು ಎಂಬುದನ್ನು ನೀವೇ ನೋಡಲಿದ್ದೀರಿ ಎಂದು ಎಚ್ಚರಿಸಿದರು.
ಹೋರಾಟ ಸಮಿತಿಯ ಉಪಾಧ್ಯಕ್ಷ ಎಮ್.ಎಸ್ ಗೌಡ, ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ, ಜಿ.ಪಂ ಸದಸ್ಯ ಶಿವಾನಂದ ಹೆಗಡೆ, ರೋಟರಿ ಅಧ್ಯಕ್ಷ ಸತೀಶ ಭಟ್, ಎಂ.ಆರ್.ಹೆಗಡೆ ಹೊಲನಗದ್ದೆ, ಡಾ. ಜಿ.ಜಿ.ಹೆಗಡೆ ಉತ್ತರ ಕನ್ನಡದ ಜೀವನದಿಗಳಾದ ಅಘನಾಶಿನಿ ಮತ್ತು ಶರಾವತಿ ನದಿ ನೀರನ್ನು ಬೆಂಗಳೂರು ಅಥವಾ ಇನ್ನಿತರ ಸ್ಥಳಕ್ಕೆ ಕೊಂಡೊಯ್ಯುವ ಯೋಜನೆಯನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿದರು.
ವಿನೋದ ಪ್ರಭು, ಹೇಮಂತಕುಮಾರ ಗಾಂವಕರ, ಸುಧಾಕರ ತಾರಿ, ಪಲ್ಲವಿ ಮಡಿವಾಳ, ಎಂ.ಎಂ.ಹೆಗಡೆ, ಬಿ.ಎಸ್.ಗೌಡ, ಸೇರಿದಂತೆ ನೂರಾರು ಸಾರ್ವಜನಿಕರು, ಹಲವು ಪಕ್ಷದ ಮುಖಂಡರು, ಕೆಲ ಸಮಾಜದ ಪ್ರಮುಖರು, ಅನೇಕ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.