ಲೇಖಕರು :- ರಾಮ ಪ್ರಸಾದ ಜೋಶಿ.
ಜನ್ಮ ಪಡೆದ ಪ್ರತಿ ಜೀವಿಗೆ ಸಾವು ಖಚಿತ. ಅದನ್ನು ತಡೆಯುವುದು ಅಸಾಧ್ಯ. “ಪುನರಪಿ ಜನನಂ ಪುನರಪಿ ಮರಣಂ”
ಹೀಗೆಯೇ ಸಾಗುತ್ತಿರುತ್ತದೆ. ನಮ್ಮಿಂದ ಮರಣವನ್ನು ತಡೆಯಲು ಸಾಧ್ಯವಿಲ್ಲಾ ಆದರೆ ಮತ್ತೆ ಹುಟ್ಟಿ ಈ ಸಂಸಾರ ಸಾಗರದಲ್ಲಿ ತೊಳಲಾಡುವುದನ್ನು ತಡೆಯಬಹುದು. ಅದನ್ನೇ “ಮೋಕ್ಷ” ಎಂಬುದಾಗಿ ಕರೆದರು ಜ್ನಾನಿಗಳು. ‘ಧರ್ಮಾರ್ಥಕಾಮಮೋಕ್ಷ’ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಪ್ರಧಾನವಾದದ್ದು ಇದು. ಅಂದರೆ ಪ್ರತಿಯೊಬ್ಬ ಮಾನವನ ಮುಖ್ಯ ಗುರಿ ಅದೇ ಆಗಿರಬೇಕು ಎಂದಾಯಿತಲ್ಲವೇ?ಅಂತಹ ಗುರಿ ಸಾಧನೆಯೇನು ಸುಲಭವಲ್ಲ. ಆದರೆ ಸುಲಭವಲ್ಲದ ದಾರಿಯನ್ನೂ ಸುಲಭವಾಗಿಸಲು ಒಂದು ದಾರಿಯುಂಟು.ಆ ದಾರಿಯನ್ನು ತೋರಿಸುವವನೇ ಗುರು. ಹೌದು ಪ್ರತಿಯೊಬ್ಬನಿಗೂ ಮುಂದೆ ಗುರಿ ಇರಬೇಕು ಆ ಗುರಿಸಾಧನೆಗೆ ಹಿಂದೆ ಗುರು ಇರಬೇಕು ಅವನ ಕೃಪೆ ಇರಬೇಕು. ಅಂದರೆ ಮಾತ್ರ ಪ್ರತಿಯೊಬ್ಬನೂ ತನ್ನ ಗುರಿ ಸೇರಲು ಸಾಧ್ಯ.
“ಕುರುತೇ ಗಂಗಾಸಾಗರಗಮನಂ
ವ್ರತಪರಿಪಾಲನಮಥವಾ ದಾನಮ್.
ಜ್ಞಾನವಿಹೀನಃ ಸರ್ವಮತೇನ
ಮುಕ್ತಿಂ ಭಜತಿ ನ ಜನ್ಮ ಶತೇನ.
ಎಂಬ ಜಗದ್ಗುರು ಶಂಕರರ ವಾಕ್ಯದಂತೆ
ನಾವು ಯಾವ ವ್ರತ, ಯಾತ್ರೆ, ದಾನಾದಿಗಳನ್ನು ಮಾಡಿದರೂ ಜ್ಞಾನಿಯಾಗದೇ( ಜ್ಞಾನಿ ಎಂದರೆ ಬುದ್ಧಿವಂತ ಎಂದಲ್ಲ) ಮೋಕ್ಷ ದೊರೆಯುವುದಿಲ್ಲ. ಹಾಗಾದರೆ ಅಂತಹ ಜ್ಞಾನ ಪಡೆಯಲು ಏನು ಮಾಡಬೇಕು?
“ಜ್ಞಾನಿಯಾಗೋ ಮನುಜಾ ಗುರುವಾ ಧ್ಯಾನಿಸಿ ಮನದೊಳು ಪೂಜಿಸಿ ಸೇವಿಸಿ” ಎಂದರು ಜ್ಞಾನಿಗಳು.
ಹೌದು ನಮಗೆ ಮೋಕ್ಷ ಸಾಧನೆಗೆ ಜ್ಞಾನ ಬೇಕು ಅಂತಹ ಜ್ನಾನವನ್ನ ಕರುಣಿಸಲು ಗುರು ಬೇಕೇ ಬೇಕು. ಅಜ್ಞಾನವೆಂಬ ಕತ್ತಲೆಯ ಅಂಧಕಾರವನ್ನ ಜ್ಞಾನವೆಂಬ ಕಾಡಿಗೆಯ ಕಡ್ಡಿಯಿಂದ ಹೋಗಲಾಡಿಸಿ ನಮ್ಮ ಕಣ್ತೆರೆದು ಅನುಗ್ರಹಿಸುವವ ಗುರು. ಮೂರು ಮೂರ್ತಿಗಳ ರೂಪ ಅವನು. ಮೂರು ಮೂರ್ತಿಗಳು ಮುನಿದರೂ ಕಾಯ್ವವ ಅವನು.
“ಸಂಸಾರ ಹಾಲಾಹಲ ಮೋಹಶಾಂತ್ಯೈ ಗುರುಚರಣಾರವಿಂದಂ ವಂದೇ” ಎಂದರು ತಿಳಿದವರು. ದಾಸಶ್ರೇಷ್ಠರು ಎಂದರು ಗುರುವಿನಗುಲಾಮನಾಗದತನಕ ದೊರೆಯದಣ್ಣಮುಕುತಿ ಎಂದು ಹಾಗಾಗಿ ನಾವೆಲ್ಲ ಗುರುವನು ಭಜಿಸಿ ಅವನ ಸೇವಿಸಿ ಪೂಜಿಸಿ ಜ್ಞಾನಿಗಳಾಗೊಣ ಸಾಗೊಣ ನಮ್ಮ ಗುರಿ ಮುಟ್ಟೋಣ.
ಗುರುಃ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀಗುರವೇ ನಮಃ..