( ಬದುಕ ಬೆಳಗುವ ಕಬೀರರ ದೋಹೆಗಳು.)
ಗುರು ಮಹಿಮೆಯ ಗರಿಮೆಯನು
ಜನರೇನ ಬಲ್ಲರು..?
ಹರಿ ಮುನಿದರೆ ಗುರು ಪೊರೆಯುವನೈ,
ಗುರು ಮುನಿದರೆ ಗತಿ ಯಾರು..?-ಕಬೀರ.
ಗುರುವಿನ ಮಹತಿಯನ್ನರಿಯದೇ ಲಘುವಾಗಿ ಕಾಣುವ ಜನರನ್ನು ಕುರಿತು ಕಬೀರರು ಹೇಳಿದ ದೋಹೆಯಿದು. ಗುರು ವೆಂದರೆ ಭಾರವಾದದ್ದು ಎಂದರ್ಥ. ಜ್ಞಾನದ ಸಂಪತ್ತಿನಿಂದ ಭಾರವಾದವನೇ ಗುರು. ಆದರೆ ಈ ಸತ್ಯವನ್ನರಿಯದೇ ಗುರು ವೆಂದರೆ ಸಮಾಜಕ್ಕೆ ಭಾರವಾದವರು ಎಂಬಂತೆ ಜನರು ಲಘು ವಾಗಿ ವರ್ತಿಸುತ್ತಾರೆ. ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಾರೆ. ಇಂತವರನ್ನು ನೋಡಿ ಸಂತ ಕಬೀರರು ಪಶ್ಚಾತ್ತಾಪದಿಂದ ಹೇಳುವ ಮಾತಿದು.
ಒಂದು ವೇಳೆ ಹರಿ ಮುನಿದರೆ ಗುರು ನಮ್ಮನ್ನು ಕಾಪಾಡುತ್ತಾನೆ. ಆದರೆ ಗುರುವೇ ಮುನಿದರೆ ನಮ್ಮನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಗತಿಯಿಲ್ಲದ ನಮಗೆ ಅಧೋಗತಿ ಕಟ್ಟಿಟ್ಟ ಬುತ್ತಿ ಎಂಬುದು ಅವರ ಅಭಿಮತ.
ಹಾಗಾಗಿ ಗುರುವಿನ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸುವಾಗ ಎಚ್ಚರವಿರಲಿ. ಗುರು ವನ್ನು ಲಘು ವಾಗಿ ಕಾಣುವ ಮನೋಭಾವ ಬೇಡ. *ನಾನು ಎಂಬುದನ್ನು ಬಿಟ್ಟು ಗುರುವಿಗೆ ಶರಣಾದರೆ ಎಲ್ಲಾ ಸಂಕಷ್ಟಗಳಿಂದ ಗುರು ನಮ್ಮನ್ನು ಪಾರುಮಾಡಬಲ್ಲ ಎಂಬ ಸಂದೇಶ ಇಲ್ಲಿದೆ.
ಡಾ.ರವೀಂದ್ರ ಭಟ್ಟ ಸೂರಿ