ಭಟ್ಕಳ : ತಾಲೂಕಿನಲ್ಲಿ ಬೆಳೆವ ಮಲ್ಲಿಗೆ ದೇಶ ದಲ್ಲಷ್ಟೆ ಅಲ್ಲದೇ ವಿದೇಶಗಳಲ್ಲೂ ಭಾರಿ ಬೇಡಿಕೆ. ಭಟ್ಕಳದ ಪ್ರಮುಖ ತೋಟಗಾರಿಕಾ ಬೆಳೆಯಾಗಿರುವ ಮಲ್ಲಿಗೆ ಬೆಳೆಗಾರರ ಬದುಕು ದುಸ್ತರವಾಗಿದೆ. ಲಾಕ್ ಡೌನ್ ನಿಂದಾಗಿ ಗಿಡದಲ್ಲೇ ಮೊಗ್ಗು ಅರಳಿ ಬಾಡಿ ಹೋಗಲಾರಂಭಿಸಿವೆ. ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಾಗಿದ್ದ ಈ ಮಲ್ಲಿಗೆ ಮೇಲೆ ಕೊರೋನಾ ಕರಿನೆರಳು ಬಿದ್ದು ತನ್ನ ಕಂಪನ್ನು ಸೂಸದೆ ಅಲ್ಲಿಯೆ ಮುದುಡಿಕೊಳ್ಳುತ್ತಿದೆ.
ಮಲ್ಲಿಗೆಯನ್ನು ಬೆಳೆಯುವ ರೈತರು ಅತ್ತ ಗಿಡದಲ್ಲೂ ಬಿಡಲಾಗದೆ, ಅದನ್ನು ತೆಗೆದು ಮಾರಾಟ ಮಾಡಲಾಗದೆ ಅತಂತ್ರರಾಗಿದ್ದಾರೆ.
ಭಟ್ಕಳ ತಾಲೂಕಿನ ಸುಮಾರು 90 ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆಯನ್ನು ಒಂದು ಪ್ರಮುಖ ಬೆಳೆಯನ್ನಾಗಿ ಬೆಳಸಲಾಗುತ್ತಿದೆ. ಕೃಷಿಯಲ್ಲಿ ಮಲ್ಲಿಗೆಯೂ ಒಂದು ಪ್ರಮುಖ ಪಾತ್ರ ಪಡೆದಿದ್ದು, ಭಟ್ಕಳ ತಾಲ್ಲೂಕೊಂದರಲ್ಲೇ 8ರಿಂದ 10 ಸಾವಿರ ಕುಟುಂಬಗಳು ಮಲ್ಲಿಗೆಯನ್ನು ಆಶ್ರಯಿಸಿ ಬದುಕು ಸಾಗಿಸುತ್ತಿವೆ.
ಭಟ್ಕಳ ತಾಲೂಕಿನ ಮುಠ್ಠಳ್ಳಿ, ಮಣ್ಕುಳಿ, ತಲಾಂದ, ಮುಂಡಳ್ಳಿ, ಶಿರಾಲಿ, ಬೆಂಗ್ರೆ, ಮಾವಳ್ಳಿ- 1 ಹಾಗೂ ಮಾವಳ್ಳಿ-2, ಬೈಲೂರು ಪಂಚಾಯತಿ ವ್ಯಾಪ್ತಿಯಲ್ಲಿ ಮಲ್ಲಿಗೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಇವರೆಲ್ಲರೂ ಆರ್ಥಿಕವಾಗಿ ಸಬಲರಾಗುವ ಕಾರಣಕ್ಕೆ ಉಳಿದ ಕೃಷಿಯನ್ನು ಕೈ ಬಿಟ್ಟು ಮಲ್ಲಿಗೆಯನ್ನು ನಂಬಿಕೊಂಡಿದ್ದಾರೆ. ಆದರೆ, ಇದೀಗ ದೇಶದಲ್ಲಿ ಕೊರೋನಾ ಕಂಟಕ ಎದುರಾಗಿದ್ದು, ಲಾಕ್‌ಡೌನ್ ಸಂಕಟದಲ್ಲಿ ದೇಶವಿದೆ. ಇದರಿಂದ ಹೂವಿನ ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿದ್ದು, ಇದನ್ನೇ ಆಶ್ರಯಿಸಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.