ಕೊರೋನ ವೈರಸ್ – ಕೆಲವು ತಿಂಗಳುಗಳ ಹಿಂದೆ ಪ್ರಪಂಚದಲ್ಲಿ ಯಾರಿಗೂ ಇದರ ಅರಿವಿರಲಿಲ್ಲ. ಆದರೆ ತಾನು ಹುಟ್ಟಿಕೊಂಡ ಕೆಲವೇ ಕೆಲವು ತಿಂಗಳುಗಳಲ್ಲಿ ಪ್ರಪಂಚದಾದ್ಯಂತ ತನ್ನ ಇರುವಿಕೆಯನ್ನು ಇದು ತೋರಿಸುತ್ತಿದೆ. ವಿಶ್ವದ ಬಲಾಢ್ಯ ರಾಷ್ಟ್ರಗಳೆಲ್ಲವೂ ಈ ರೋಗದ ಎದುರು ಮಂಡಿಯೂರಿ ಕುಳಿತುಕೊಂಡಿದೆ. ಮುಂದುವರಿದ ಹಾಗೂ ಮುಂದುವರೆಯುತ್ತಿರುವ ಅನೇಕ ರಾಷ್ಟ್ರಗಳು ತನ್ನೊಡಲಲ್ಲಿ ಅಣುಬಾಂಬು, ಅತ್ಯಾಧುನಿಕ ಯುದ್ಧೋಪಕರಣಗಳನ್ನು ಸಿದ್ಧಪಡಿಸಿಕೊಳ್ಳುತ್ತಾ ತನ್ನನ್ನು ತಾನು ಬಲಿಷ್ಠ ಎಂದು ಎನಿಸಿಕೊಳ್ಳುವಷ್ಟರಲ್ಲಿಯೇ ಕಣ್ಣಿಗೆ ಕಾಣದ ಈ ವೈರಸ್ ಜಗತ್ತಿನ ಜಂಘಾಬಲವನ್ನೇ ಅಡಗಿಸಿ ಬಿಟ್ಟಿದೆ. ಬಹುಶಃ ಇಂದಿನ ಈ ಪರಿಸ್ಥಿತಿಯನ್ನು ನೋಡಿದರೆ ಜೀವಮಾನದಲ್ಲಿ ಅಥವಾ ನಮ್ಮ ಪೂರ್ವಜರ ಕಾಲದಲ್ಲಿಯೂ ಇಂತಹ ಒಂದು ಪರಿಸ್ಥಿತಿ ಬಂದಿರಲಿಕ್ಕಿಲ್ಲ. ಆದರೂ ಎಲ್ಲವನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ಬುದ್ಧಿಜೀವಿಯ ಆತ್ಮಬಲವೊಂದೇ ಈ ರೋಗವನ್ನು ಹೊಡೆದೋಡಿಸಬಹುದು. ಇಂದಿಗೂ ಪರಿಪೂರ್ಣ ಹಾಗೂ ಪರಿಣಾಮಕಾರಿಯಾದ ಔಷಧಿ, ವಿಜ್ಞಾನ ಲೋಕದಿಂದ ಹೊರಬಂದಿಲ್ಲ, ಆದರೆ ಮನುಷ್ಯನ ಸುಜ್ಞಾನ ಹಾಗೂ ತಿಳುವಳಿಕೆಯಿಂದ ಇದನ್ನು ನಿಯಂತ್ರಿಸಲು ಸಾಧ್ಯ.

ರೋಗದ ಚಿತ್ರಣ
2019ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದ ವುಹಾನ್ ನಗರದಲ್ಲಿ ಪ್ರಥಮ ಬಾರಿಗೆ ಈ ರೋಗ ಕಂಡು ಬರುವ ಮೂಲಕ, ಕೊರೋನ ಎಂದು ನಾಮಾಂಕಿತಗೊಂಡಿತು. ಆನಂತರ ವಿಶ್ವದೆಲ್ಲೆಡೆ ತನ್ನ ಕದಂಬಬಾಹು ವಿಸ್ತರಿಸುತ್ತಾ ಭಾರತಕ್ಕೆ ಜನವರಿ 30ರಂದು ಪ್ರಥಮ ಬಾರಿಗೆ ಕಾಣಿಸಿಕೊಂಡಿತ್ತು.


ಸಾಮಾನ್ಯ ಜ್ವರದಂತೆ ಕಾಣಿಸಿಕೊಳ್ಳುವ ಈ ರೋಗ ಕ್ರಮೇಣ ತನ್ನ ಭೀಕರತೆಯನ್ನು ಹೆಚ್ಚಿಸುತ್ತದೆ. ಆರಂಭದ ಕೆಲವು ದಿನಗಳ ಕಾಲ ಜ್ವರ ತದನಂತರ ಗಂಟಲು ನೋವು ಆನಂತರ ಉಸಿರಾಟದ ಸಮಸ್ಯೆ ಇವು ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳು ಎನ್ನಲಾಗುತ್ತಿದೆ. ಇನ್ನು ಕೆಲವು ರೋಗಿಗಳಲ್ಲಿ ಅಜೀರ್ಣದ ಸಮಸ್ಯೆ ವಾಂತಿ-ಬೇಧಿ ಅಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇನ್ನು ಕೆಲವು ರೋಗಿಗಳಲ್ಲಿ ಯಾವುದೇ ಗುಣಲಕ್ಷಣಗಳು ಇಲ್ಲದೆಯೂ ಕರೋನವೈರಸ್ ಕಂಡುಬಂದಿದೆ. ಈ ರೋಗದ ಭೀಕರ ಹಾಗೂ ವಿಶಿಷ್ಟ ಲಕ್ಷಣವೆಂದರೆ ಇದರ ಸಾಂಕ್ರಾಮಿಕ ಶಕ್ತಿ. ಇದರ ಸಾಂಕ್ರಾಮಿಕ ಶಕ್ತಿ ಎಷ್ಟಿದೆ ಎಂದರೆ ಒಬ್ಬ ರೋಗಗ್ರಸ್ಥ ವ್ಯಕ್ತಿ ತನ್ನ ರೋಗಗ್ರಸ್ಥ ಅವಧಿಯಲ್ಲಿ ಸರಿ ಸುಮಾರು ನಾಲ್ಕುನೂರು ಜನರಿಗೆ ರೋಗವನ್ನು ಹರಡಬಹುದು. ಇದು ಅತ್ಯಂತ ತ್ವರಿತಗತಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ. ಆದರೆ ಈ ಕಾಯಿಲೆಗೆ ತುತ್ತಾದ ಎಲ್ಲರೂ ಸಾಯುವುದಿಲ್ಲ. ಈ ರೋಗದಿಂದ ಮರಣ ಹೊಂದುವವರ ಪ್ರಮಾಣ ಕಡಿಮೆ ಎನ್ನಬಹುದು.ಆದರೆ ಊರಿನಲ್ಲಿ ಒಬ್ಬರಿಗೆ ಈ ರೋಗ ಬಂದರೂ ಇಡೀ ಊರನ್ನೇ ಮಕಾಡೆ ಮಲಗಿಸಿ ಬಿಡುವ ಸಾಮರ್ಥ್ಯ ಇದಕ್ಕಿದೆ. ಆ ಮೂಲಕ ಇಡೀ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಎಲ್ಲವೂ ಪಾತಾಳಕ್ಕೆ ತಳ್ಳಿದ ಕುಖ್ಯಾತಿ ಈ ರೋಗಕ್ಕಿದೆ.

ರೋಗಕಾರಕ ಅಂಶಗಳು
-ಕೊರೋನ ರೋಗ ಬಂದ ವ್ಯಕ್ತಿಯೊಡನೆ ವ್ಯವಹರಿಸುವುದರಿಂದ, ಮಾತನಾಡುವುದರಿಂದ, ಸಹಭೋಜನ ಮಾಡುವುದರಿಂದಲೂ ಈ ರೋಗ ಇನ್ನೊಬ್ಬರಿಗೆ ಹರಡಬಹುದು.
-ಈ ರೋಗದ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೆಚ್ಚು ಪ್ರಮಾಣದ ವೈರಸ್ಸನ್ನು ಬಿಡುಗಡೆ ಮಾಡುತ್ತಾನೆ ಆ ಕ್ಷಣದಲ್ಲಿ ಅಕ್ಕಪಕ್ಕದಲ್ಲಿರುವ ವ್ಯಕ್ತಿ ಈ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ.
-ಯಾವುದೇ ಗುಣಲಕ್ಷಣಗಳು ಇಲ್ಲದ ಹಂತದಲ್ಲಿಯೂ ರೋಗಗ್ರಸ್ಥ ವ್ಯಕ್ತಿಯು ಈ ರೋಗವನ್ನು ಇನ್ನೊಬ್ಬರಿಗೆ ಹರಡಬಹುದು.(Asymptomatic carrier)
-ವೈಜ್ಞಾನಿಕ ಅಂಕಿ-ಅಂಶಗಳ ಪ್ರಕಾರ ರೋಗ ನಿರೋಧಕ ಶಕ್ತಿಯ ಕೊರತೆ ಇರುವವರು ಹಾಗೂ ಈಗಾಗಲೇ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವವರು, ಬಾಲ್ಯ ಹಾಗೂ ವೃದ್ಧಾವಸ್ಥೆಯಲ್ಲಿ ಇರುವವರು ಈ ರೋಗಕ್ಕೆ ಬೇಗ ತುತ್ತಾಗಬಹುದು ಎಂದು ಹೇಳಲಾಗುತ್ತಿದೆ.

RELATED ARTICLES  ಮಾನವನ ನಿಜ ಸುಖ ಮತ್ತು ಸನಾತನ ಧರ್ಮ! ಈ ಬಗ್ಗೆ ಶ್ರೀಧರರು ಹೇಳಿದ್ದೇನು ಗೊತ್ತಾ?

ರೋಗ ನಿಗ್ರಹಿಸುವಲ್ಲಿ ಸಾಮಾನ್ಯ ಪ್ರಜೆಯ ಕರ್ತವ್ಯ:
-ಇಡೀ ಪ್ರಪಂಚವೇ ಸಾಮಾಜಿಕ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ದೇಶ ಕೆಲವು ಕಾನೂನು ಕಟ್ಟಳೆಗಳನ್ನು ಮಾಡುತ್ತದೆ. ಆ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ.
-ರೋಗದ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಪಡೆದುಕೊಂಡು ಸಾಮಾಜಿಕ ಅಂತರವನ್ನು ವ್ಯಕ್ತಿಯು ಕಾಯ್ದುಕೊಳ್ಳಬೇಕಾಗುತ್ತದೆ.

  • ಇನೊಬ್ಬರೊಡನೆ ಮಾತನಾಡುವಾಗ ಕನಿಷ್ಠ ಮೂರರಿಂದ ಆರು ಅಡಿ ದೂರದಿಂದಲೇ ಮಾತನಾಡುವುದು ಉತ್ತಮ.
    -ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ಅತ್ಯವಶ್ಯಕವಾಗಿ ಮಾಸ್ಕನ್ನು ಬಳಸಲೇಬೇಕು.
  • ಸೀನುವಾಗ, ಕೆಮ್ಮುವಾಗ ಸೂಕ್ತ ಮಾಸ್ಕ್ ಇರದೇ ಇದ್ದ ಸಂದರ್ಭದಲ್ಲಿ ಕರವಸ್ತ್ರದಿಂದ ಬಾಯಿಯನ್ನು ಮುಚ್ಚಿ ಕೊಳ್ಳಲೇಬೇಕು.
    -ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ಸಾಮಾಜಿಕ ಅಂತರವನ್ನು ಆ ಸಮಯದಲ್ಲಿ ಕಾಯ್ದುಕೊಳ್ಳಬೇಕು.
    -ತಂಪು ಪಾನೀಯಗಳು, ಫ್ರಿಜ್ನಲ್ಲಿ ಇರಿಸಿದ ಆಹಾರ ವಸ್ತುಗಳ ಬಳಕೆ ಯೋಗ್ಯವಲ್ಲ.
    -ಕುದಿಸಿದ ಬಿಸಿ ನೀರಿನ ಸೇವನೆ, ಆಗ ತಾನೇ ತಯಾರಿಸಿದ ಉಷ್ಣ ಆಹಾರವನ್ನು ಸೇವಿಸಬೇಕು.
    -ಪ್ರತಿದಿವಸ ಅಮೃತಬಳ್ಳಿ, ಶುಂಠಿ, ತುಳಸಿ, ಕಾಳು ಮೆಣಸು ಹಾಗೂ ಕಲ್ಲುಸಕ್ಕರೆ ಸೇರಿಸಿ ಕಷಾಯಮಾಡಿ 1/4 ಭಾಗಕ್ಕೆ ಇಳಿಯುವಷ್ಟು ನೀರನ್ನು ಕುದಿಸಿ, 100ml ಅಷ್ಟು ಕುಡಿಯಬಹುದು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಜ್ವರ, ಶೀತ, ಕೆಮ್ಮು ಬರದೇ ಇರುವಂತೆ ನೋಡಿಕೊಳ್ಳಬಹುದು.
    -ಪ್ರತಿದಿನ 3 ರಿಂದ 5 ಲೀಟರ್ ನಷ್ಟು ಬಿಸಿ ನೀರಿನ ಸೇವನೆ ಆಗಾಗ ಮಾಡುತ್ತಿರುವುದು ಉತ್ತಮ.
    -ಪ್ರತಿದಿನ ಸಾಯಂಕಾಲ ಮನೆಯ ಎದುರು ಗುಗ್ಗುಳು, ತುಳಸಿ ಎಲೆ, ನುಕ್ಕೆ ಎಲೆ ಇವುಗಳನ್ನು ಕಾಯಿ ಸಿಪ್ಪೆಯಲ್ಲಿ ಹಾಕಿ ಬೆಂಕಿಯಿಂದ ದೂಪದ ಹೊಗೆ ಮಾಡುವುದು ಅತ್ಯಂತ ಸಮಂಜಸ. ಇದನ್ನು ಮಾಡುವುದರಿಂದ ವಾತಾವರಣದಲ್ಲಿನ ಕಲುಷಿತ ಗಾಳಿ ಶುದ್ಧೀಕರಣ ಗೊಳ್ಳುತ್ತದೆ.
    -ಬಿಸಿ ನೀರಿಗೆ ಸ್ವಲ್ಪ ಲವಂಗ ದಾಲ್ಚಿನ್ನಿ ಏಲಕ್ಕಿ ಪತ್ರ ಇವುಗಳನ್ನು ಸೇರಿಸಿ ಅದರ ಉಗಿಯನ್ನು ಬಾಯಿ ಹಾಗೂ ಮೂಗಿನಿಂದ ತೆಗೆದುಕೊಳ್ಳುವುದು ಒಳ್ಳೆಯದು. ಇದು ಶೀತ ನೆಗಡಿಯನ್ನು ಹೋಗಲಾಡಿಸುತ್ತದೆ.
    -ಪ್ರತಿನಿತ್ಯ ಯೋಗ, ಧ್ಯಾನ, ಇಷ್ಟ ದೇವರ ಪ್ರಾರ್ಥನೆ ಈ ಸಮಯದಲ್ಲಿ ಮನಸ್ಸಿಗೆ ಧೈರ್ಯ ತುಂಬುತ್ತದೆ ಹಾಗೂ ಮನುಷ್ಯ ಜೀವಿಗೆ ಅಗತ್ಯವಾಗಿ ಬೇಕಾದದ್ದು.
    -ಇವೆಲ್ಲವುಗಳ ಹೊರತಾಗಿಯೂ ಜ್ವರ, ಶೀತ, ಕೆಮ್ಮು ಉಸಿರಾಟದ ಸಮಸ್ಯೆ ಹಾಗೂ ಗಂಟಲು ನೋವು ವಿಪರೀತವಾಗಿದ್ದಲ್ಲಿ ಸರ್ಕಾರವು ಅದೇಶಿಸಲ್ಪಟ್ಟ ಫೀವರ್ ಕ್ಲಿನಿಕ್ ಅಥವಾ ಜ್ವರ ತಪಾಸಣಾ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ.
    -ಯಾವುದಾದರೂ ಕೊರೋನ ಸೋಂಕಿತ ವ್ಯಕ್ತಿಯೊಡನೆ ಸಂಪರ್ಕ ಹೊಂದಿದ ಅನುಭವವಿದ್ದರೆ ಅಥವಾ ಸಂಶಯವಿದ್ದರೆ ತಾವಾಗಿಯೇ ಸರ್ಕಾರದ ಸಹಾಯವಾಣಿ ಅಥವಾ ಪೊಲೀಸರ ಸಹಾಯದೊಂದಿಗೆ ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳಬೇಕು.
  • ಹೊರಗಡೆಯಿಂದ ತಂದ ತರಕಾರಿ ಹಣ್ಣುಗಳನ್ನು ಸರಿಯಾಗಿ ಬಿಸಿನೀರಿನಲ್ಲಿ ತೊಳೆದು ನಂತರ ಬಳಸಬೇಕು. ವೈಯಕ್ತಿಕ ಸ್ವಚ್ಛತೆಯ ಕಡೆಯೂ ಗಮನ ಹರಿಸಲೇಬೇಕು ಆಗಾಗ ಕೈಯನ್ನು ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ತೊಳೆದು ಕೊಳ್ಳುವುದು ಒಳ್ಳೆಯದು.
    -ಯಾವುದೇ ಸೋಂಕಿತ ವ್ಯಕ್ತಿಯ ಸಂಬಂಧ ದೊಡನೆ ಸಂಶಯವಿದ್ದರೆ ಸರ್ಕಾರವು ಕ್ವಾರಂಟೈನ್ ಘೋಷಿಸಬಹುದು. ಆ ಸಂದರ್ಭದಲ್ಲಿ ಸರ್ಕಾರ ವಿಧಿಸಿದ್ದ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿ ಸ್ವಯಂ ಬುದ್ಧಿಯಿಂದ ಯಾವುದೇ ಸಂಪರ್ಕಕ್ಕೆ ಬಾರದೇ ಕ್ವಾರಂಟೈನ್ ಗೆ ಒಳಪಡಬೇಕು.
    -ಒಮ್ಮೆ ಸೋಂಕು ಬಂದರೂ ಸಹ ವ್ಯಕ್ತಿ ಸಾಯುತ್ತಾನೆ ಎಂದು ಅರ್ಥವಲ್ಲ.” ಧೈರ್ಯಂ ಸರ್ವತ್ರ ಸಾಧನಂ” ಎಂಬ ಮಾತಿನಂತೆ ಯಾವುದೇ ರೋಗವಿದ್ದರೂ ಅದನ್ನು ಹಿಮ್ಮೆಟ್ಟಿಸುವ ಛಲಬೇಕು ಹಾಗೂ ವೈಜ್ಞಾನಿಕವಾಗಿ ಅದಕ್ಕೆ ಸೂಕ್ತ ಚಿಕಿತ್ಸೆಯು ಬೇಕು. ಇವುಗಳಿಂದ ವ್ಯಕ್ತಿಯು ಸಂಪೂರ್ಣ ಗುಣಮುಖನಾಗಿ ಹೊರಬರಲು ಸಾಧ್ಯವಾಗುತ್ತದೆ. ಆದರೆ ಕಟ್ಟುನಿಟ್ಟಾಗಿ ಒಬ್ಬ ಕೋರೋನ ರೋಗಿಯ ಸಂಪರ್ಕ ಇನ್ನೊಬ್ಬ ಸಾಮಾನ್ಯ ವ್ಯಕ್ತಿ ಮಾಡಲೇಬಾರದು.
    -ಈ ರೋಗವನ್ನು ಸಂಪೂರ್ಣ ಹೋಗಲಾಡಿಸಲು ಸೂಕ್ತವಾದ ಲಸಿಕೆ ಹಾಗೂ ಚಿಕಿತ್ಸೆಯ ವೈಜ್ಞಾನಿಕ ಸಂಶೋಧನೆ ನಡೆಯುತ್ತಿದೆ. ಅದು ಸಾಕಾರಗೊಳ್ಳುವ ಸಮಯದವರೆಗೂ ಸಾಮಾನ್ಯ ನಾಗರಿಕನ ಕರ್ತವ್ಯ ಪ್ರಮುಖವಾಗಿರುತ್ತದೆ.
    -ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು, ಶುಶ್ರೂಷಕರು, ಪೊಲೀಸರು, ಸರ್ಕಾರದ ಮಂತ್ರಿಮಂಡಲ ಇವೆಲ್ಲದರ ಜೊತೆಗೆ ಪ್ರತಿನಿತ್ಯದ ಅತ್ಯಗತ್ಯ ಸೇವೆಯನ್ನು ಒದಗಿಸುತ್ತಿರುವ ಅನೇಕರು ಶ್ರಮಿಸುತ್ತಿದ್ದಾರೆ. ಅವರಿಗೆ ಸಹಾಯ ಸೂಚಕವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ.
  • “ಧರ್ಮ ಅರ್ಥ ಕಾಮ ಮೋಕ್ಷಾನಾಂ ಆರೋಗ್ಯಂ ಮೂಲಮ್ ಉತ್ತಮಮ್”. ನಮ್ಮ ಆರೋಗ್ಯ ಸರಿಯಾಗಿದ್ದರೆ ಪುರುಷಾರ್ಥ ಚತುಷ್ಟಯಗಳನ್ನು ಸಾಧಿಸಬಹುದು ಹಾಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ.
    ಒಂದು ದೃಷ್ಟಿಕೋನದಲ್ಲಿ ನೋಡುವುದಾದರೆ ಕೊರೋನ ರೋಗ ಬರುವುದಕ್ಕಿಂತ ಮೊದಲಿನ ಪ್ರಪಂಚ ಹಾಗೂ ಕೊರೋನ ರೋಗದ ನಂತರದ ಪ್ರಪಂಚ ಸಂಪೂರ್ಣ ಭಿನ್ನವಾಗಿರಬಹುದು. ಆ ಪರಿವರ್ತನೆಗೆ ಹೊಂದಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಮತ್ತೆ ಪುಟಿದೇಳುವ ಮನೋಸಾಮರ್ಥ್ಯ ನಮ್ಮದಾಗಲಿ. ಆ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲರೂ ಹೆಗಲು ಜೋಡಿಸೋಣ. ಭಾರತ ವಿಶ್ವಗುರುವಾಗಲಿ.
RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

ಡಾ.ನಾಗರಾಜ ಭಟ್, ಕುಮಟಾ.
9535668177