ನಿಂದಕರನು ನೀ ಆಧರಿಸಿ
ವಂದಿಸಿ ಉಪಚರಿಸೈ.
ನಿನ್ನಯ ತನುಮನವನು ಬೆಳಗುವರು.
ನಿಂದಿಸಿ ನಿಂದಿಸಿಯೇ- ಕಬೀರ.
ನಿಂದಕರನ್ನು ದೂರದೇ, ದೂರವಿಡದೇ ಅವರನ್ನು ಆಧರಿಸಿ, ವಂದಿಸಿ, ಉಪಚರಿಸಬೇಕು ಏಕೆಂದರೆ ನಿಂದಕರು ನಮ್ಮ ತನುಮನವನ್ನು ಬೆಳಗುತ್ತಾರೆ. ನಿಂದನೆಯಿಂದ ಅವರು ನಮಗೆ ಒಳಿತನ್ನು ಮಾಡುತ್ತಿರುತ್ತಾರೆ. ಎಂಬುದು ಕಬೀರರ ಅಭಿಮತ.
ಹಿತ ಶತ್ರುಗಳಿಗಿಂತ ಶತ್ರುಗಳೇ ಮೇಲು ಎಂಬ ಮಾತು ಸತ್ಯ. ಕೆಲವರು ನಮ್ಮ ಹತ್ತಿರವಿದ್ದಂತೆ ನಟಿಸಿ ನಮ್ಮ ಎಲ್ಲ ಕಾರ್ಯಗಳನ್ನು ಹೊಗಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ತಮ್ಮ ಕೆಲಸವಾದ ಮೇಲೆ ನಮ್ಮ ಕೈಬಿಡುತ್ತಾರೆ. ಸಮಯ ನೋಡಿ ನಮ್ಮ ಕಾಲೆಳೆಯುತ್ತಾರೆ. ನಮ್ಮ ಏಳ್ಗೆಯನ್ನು ಸಹಿಸದ ಇಂಥವರಿಂದ ನಮಗೆ ಒಳಿತಿಗಿಂತ ಕೆಡುಕೇ ಜಾಸ್ತಿ. ಆದರೆ ನಮ್ಮನ್ನು ನಿಂದಿಸುವವರು ನಮ್ಮ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಹೆಜ್ಜೆ ಹೆಜ್ಜೆಗೂ ನಮ್ಮನ್ನು ನಾವು ತಿದ್ದಿಕೊಳ್ಳಲು ನೆರವಾಗುತ್ತಾರೆ. ತಪ್ಪು ದಾರಿಯಲ್ಲಿ ಸಾಗಿದಾಗ ಅದನ್ನು ಎತ್ತಿ ತೋರಿಸಿ ನಾವು ಸರಿದಾರಿಗೆ ಬರಲು ಸಹಕರಿಸುತ್ತಾರೆ. ನಾನು ಮಾಡಿದ್ದೇ ಸರಿ ಎನ್ನುವ ಅಹಂಕಾರಕ್ಕೆ ಅವರು ಆಗಾಗ ಪೆಟ್ಟು ಕೊಡುತ್ತಾ ನಮ್ಮ ಮಟ್ಟದ ಅರಿವು ನಮಗಾಗುವಂತೆ ಮಾಡುತ್ತಾರೆ.
ಅದಕ್ಕೆ ಪ್ರಾಜ್ಞರು ಹೇಳಿದ್ದು ನಿಂದಕರಿರಬೇಕು ಜಗದೊಳಗೆ ಕೇರಿಯೊಳು ಹಂದಿ ಇದ್ದಂತೆ ಎಂದು. ಹಂದಿ ಹೇಗೆ ಹೊಲಸನ್ನು ತಿಂದು ಕೇರಿಯನ್ನು ಸ್ವಚ್ಛವಾಗಿಡುತ್ತದೆ ಯೋ ಹಾಗೆ ನಿಂದಕರು ನಮ್ಮೊಳಗಿನ ಕೊಳಕನ್ನು ತೊಳೆದು ಬೆಳಕು ಮೂಡಲು ಕಾರಣರಾಗುತ್ತಾರೆ. ಆದ್ದರಿಂದ ನಿಂದಕರನ್ನು ಆಧರಿಸಿ, ವಂದಿಸಿ, ಉಪಚರಿಸೋಣ…!
ಡಾ.ರವೀಂದ್ರ ಭಟ್ಟ ಸೂರಿ