ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ರಘುರಾಮ, ಡಾ ರಶ್ಮಿ ( ಅಪರೂಪದ ಅಣ್ಣ ತಂಗಿ)
ಮಕ್ಕಳೆಂದರೆ ಹೀಗಿರಬೇಕು….. ಎಂದು ಕೊಳ್ಳುವವರಿಗೆ ಒಂದು ಆದರ್ಶ ಅಣ್ಣ ತಂಗಿ ಜೋಡಿಯನ್ನಿಲ್ಲಿ ಪರಿಚಯಿಸ ಬಯಸುತ್ತಿದ್ದೇನೆ. ಬಹಳ ಅಪರೂಪದ ಅಪ್ರತಿಮ ಪ್ರತಿಭಾವಂತ ರಘು ಮತ್ತು ರಶ್ಮಿ ನನ್ನ ಇಂದಿನ ಅಕ್ಷರ ಅತಿಥಿಗಳು.
ನನಗಿಂತ ಕಿರಿಯರೂ ನನ್ನ ಅತ್ತೆಯ ಮೊಮ್ಮಕ್ಕಳೂ ಆದ ರಘು ಮತ್ತು ರಶ್ಮಿ ನಮ್ಮ ಕುಟುಂಬದವರೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ವ್ಯಕ್ತಿಗಳು. ವಯಸ್ಸಿನಲ್ಲಿ ನನಗಿಂತ ನಾಲ್ಕೈದು ವರ್ಷ ಸಣ್ಣವರಾದ ರಘು ಮತ್ತು ರಶ್ಮಿ ಇಂದು ವಿದ್ಯೆ ಹಾಗೂ ಹುದ್ದೆಯಿಂದ ಎಷ್ಟೋ ದೊಡ್ಡವರು. ದೊಡ್ಡವರೆಲ್ಲರೂ ಗುಣದಲ್ಲಿ ದೊಡ್ಡವರೆಂದು ಹೇಳಲಿಕ್ಕಾಗುವುದಿಲ್ಲ. ಆದರೆ ಇವರು ಗುಣದಲ್ಲೂ ದೊಡ್ಡವರಾದುದರಿಂದಲೇ ನನ್ನ ಮನಸ್ಸಿಗೂ, ಅಕ್ಷರಗಳಿಗೂ ಅವರು ಪ್ರೀತಿಯಾದದ್ದು.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ನನ್ನ ಗೌರಕ್ಕ ಹಾಗೂ ಮಧುಕರ ಬಾವ ಇದ್ದಾರೆ. ಅವರಿಗೆ ಭಗವಂತನ ವರ ಪ್ರಸಾದವೇ ಆಗಿ ಹುಟ್ಟಿದ ಮಕ್ಕಳು ಇವರು. ನಮ್ಮ ಬಾವ ಮಧುಕರ ಹೆಗಡೆಯವರು ಪಂಚಾಯತ ಸೆಕ್ರೆಟರಿ ಆಗಿ ಬಹಳ ವರ್ಷ ಪ್ರಾಮಾಣಿಕವಾಗಿ ದುಡಿದು ನಂತರ ಪಿ.ಡಿ.ಒ ಆಗಿ ನಿವೃತ್ತಿ ಹೊಂದಿದವರು. ಗೌರಕ್ಕ ಗೃಹಿಣಿ. ಮೂಲತಃ ಕೃಷಿ ಕುಟುಂಬ ಅವರದು.
ರಘುರಾಮ ಮತ್ತು ರಶ್ಮಿ ಕಡತೋಕಾದ ಜಡ್ಡಿಗದ್ದೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದವರು. ಸಣ್ಣವರಿರುವಾಗಿನಿಂದಲೂ ತುಂಬಾ ಪ್ರತಿಭಾವಂತ ಮಕ್ಕಳು. ಬಾವ ಮಧುಕರ ಹೆಗಡೆಯವರು ಮಕ್ಕಳನ್ನು ಬಹಳ ಸುಸಂಸ್ಕೃತವಾಗಿ ಬೆಳೆಸಿದವರು. ಮನೆಗೆ ಬಂದವರನ್ನು ಮಾತನಾಡಿಸುವ ರೀತಿ, ನಡೆದುಕೊಳ್ಳುವ ರೀತಿ ಹೀಗೆ ಪ್ರತಿಯೊಂದರಲ್ಲೂ ಇಂದಿಗೂ ಆದರ್ಶ ಅವರು. ಮಕ್ಕಳಿಗೆ ಏನೂ ಕಡಿಮೆಯಾಗದಂತೆ ಅವರು ಕಲಿಯುವವರೆಗೂ ಓದಿಸುತ್ತೇನೆ…ಅದು ಎಷ್ಟೇ ಕಷ್ಟವಾದರೂ ಸರಿ….ಎಂದು ನೂರಾರು ಬಾರಿ ನನ್ನ ಹತ್ತಿರ ಹೇಳುತ್ತಿದ್ದರು.
ರಘುರಾಮ ಇಂದು ತಾನು ಇಂಜನಿಯರಿಂಗ್ ಓದಿದ ಎಸ್.ಡಿ.ಎಮ್ ಕಾಲೇಜಿನಲ್ಲೇ lecturer ಆಗಿದ್ದಾನೆ. ಮೃದು ಸ್ವಭಾವದ, ಮೆಲು ಮಾತಿನ ಸದ್ಗುಣಗಳ ಸರದಾರ ನಮ್ಮ ರಘುರಾಮ. ಚಿಕ್ಕವನಿರುವಾಗಿನಿಂದ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಈತ ಏಕಲವ್ಯನಂತೆ ಅಪಾರ ಶೃದ್ಧೆಯಿಂದ ಕಲಿತ. ನೋಡಿದವರನ್ನು ಯಥಾವತ್ತಾಗಿ ಚಿತ್ರಿಸುವಷ್ಟು ಕೌಶಲ್ಯವನ್ನು ಬಾಲ್ಯದಿಂದಲೇ ರೂಢಿಸಿಕೊಂಡ ಈತನ ಕೌಶಲ್ಯಕ್ಕೆ ಎಂಥವರೂ ಬೆರಗಾಗುತ್ತಿದ್ದರು. ಚಿತ್ರಕಲೆಯಲ್ಲಿ ಹೋದ ಹೋದಲ್ಲಿ ಬಹುಮಾನಗಳನ್ನು ಗೆದ್ದು ಬಂದ ರಘುರಾಮ ಓದಿನಲ್ಲೂ ಅಷ್ಟೇ ಮುಂದು. ತಾನಾಯ್ತು ತನ್ನ ಓದಾಯ್ತು. ಅವನು ಹೈಸ್ಕೂಲ್ ಓದುವ ಕಾಲಕ್ಕೆ ನಾನು ಟಿ.ಸಿ.ಹೆಚ್ ಅಭ್ಯಾಸ ಮಾಡುತ್ತಿದ್ದೆ. ನನಗೆ ನನ್ನ ಪಾಠಕ್ಕಾಗಿ ಚಿತ್ರಪಟಗಳು ಬೇಕಾದಗೆಲ್ಲಾ ನಾನು ರಘುರಾಮನ ಮನೆಗೆ ಹೋಗುತ್ತಿದ್ದೆ. ಅದೆಷ್ಟೇ ರಾತ್ರಿಯಾಗಲಿ ತನ್ನ ಅಭ್ಯಾಸ ಪೂರೈಸಿಕೊಂಡು ನನಗೆ ಸುಂದರವಾದ ಚಿತ್ರಗಳನ್ನು ಬಿಡಿಸಿಕೊಡುತ್ತಿದ್ದ ರಘುರಾಮ ಯಾವತ್ತೂ ಅದಕ್ಕೆ ಬೇಸರಿಸುತ್ತಿರಲಿಲ್ಲ. ರಘುರಾಮನ ಚಿತ್ರದ ಪ್ರಭಾವದಿಂದ ನನಗೆ ಪಾಠಗಳಿಗೆ ಅಧಿಕ ಅಂಕಗಳು ಬೀಳುತ್ತಿದ್ದವು. ಹಾಗೆ ಚಿತ್ರ ಬಿಡಿಸುತ್ತಿದ್ದ ರಘುರಾಮ ನೋಡುತ್ತಾ ನೋಡುತ್ತಾ ಜೇಡಿಮಣ್ಣಿನಿಂದ ಗಣಪತಿ ಮೂರ್ತಿ ಮಾಡುವುದನ್ನೂ ರೂಢಿಸಿಕೊಂಡ. ಅಂದಿನಿಂದ ಇಂದಿನವರೆಗೂ ಎಷ್ಟೇ ಅವಸರದ ನಡುವೆಯೂ ಗಣೇಶ ಚತುರ್ಥಿ ಹಬ್ಬಕ್ಕೆ ಮನೆಯ ಗಣಪತಿ ವಿಗ್ರಹವನ್ನು ತಾನೇ ಮಾಡುವ ರಘುರಾಮ ವ್ಯಕ್ತಿಶಃ ಒಬ್ಬ ನಿಷ್ಠಾವಂತ ಆಸ್ತಿಕ. ಇಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳು ಅಲ್ಲಿ ಇಲ್ಲಿ ಉದ್ಯೋಗ ಅರಸಿಕೊಂಡು ಹೋಗುವದನ್ನು ನಾವು ಕಾಣುತ್ತೇವೆ. ಆದರೆ ಇಂಜಿನಿಯರಿಂಗ್ ಕಾಲೇಜೊಂದು ತನ್ನಲ್ಲಿಯೇ ಕಲಿತ ವಿದ್ಯಾರ್ಥಿ ಓರ್ವನನ್ನು ತತ್ಕ್ಷಣದಿಂದಲೇ ತನ್ನದೇ ಕಾಲೇಜಿನಲ್ಲಿ lecturer ಆಗಿ ನೇಮಿಸಿಕೊಳ್ಳುತ್ತದೆಂದರೆ ನಮ್ಮ ರಘುರಾಮನ ಸಾಮರ್ಥ್ಯ, ಹಾಗೂ ಪ್ರತಿಭೆ ಎಂತಹುದು ಎಂಬುದರ ಅರಿವಾದೀತು. ರಘುರಾಮ ಇಂದಿಗೂ ನನ್ನನ್ನು ಸ್ವಂತ ಸಹೋದರನಂತೆ ಕಾಣುತ್ತಾನೆ ಮತ್ತು ನನ್ನ ಅನೇಕ ಪುಸ್ತಕಗಳಿಗೆ ಸುಂದರ ಮುಖಪುಟ ಮಾಡಿ ಕೊಡುತ್ತಾನೆ. ನಿಗರ್ವಿಯಾದ ರಘುರಾಮ ಧಾರವಾಡದಲ್ಲಿದ್ದೂ ನಮ್ಮ ಭಾಷೆಯ ಸೊಗಡನ್ನು, ಮಣ್ಣಿನ ಸೊಗಡನ್ನು ಬಿಟ್ಟುಕೊಟ್ಟವನಲ್ಲ. ಅಷ್ಟಕ್ಕೂ ಅವನ ಸರಳತನ ಕಂಡಾಗ ನಮಗವನು ಅಷ್ಟು ದೊಡ್ಡಮನುಷ್ಯನೆಂದು ಅನ್ನಿಸುವುದೇ ಇಲ್ಲ. ಮನ ಮೆಚ್ಚಿದ ಮಡದಿ ವನಿತಾ…ಮುದ್ದಾದ ಎರಡು ಗಂಡು ಮಕ್ಕಳು ಶ್ರೀವರ್ಧನ್, ಮತ್ತು ಶ್ರೀವಿಧ್ವನ್… ರಘುರಾಮನ ಸಂಸಾರ ಆನಂದವೇ ತುಂಬಿಕೊಂಡ ಸಂಸಾರ.
ರಶ್ಮಿ ಕೂಡ ಬಹಳ ಚುರುಕಿನ ವ್ಯಕ್ತಿ. ಅಣ್ಣ ತಂಗಿ ಎಲ್ಲರ ಮನೆಯಲ್ಲೂ ಕಿತ್ತಾಡಿಕೊಳ್ಳುವದನ್ನು ನೋಡುತ್ತೇವೆ. ಆದರೆ ಈ ಅಣ್ಣ ತಂಗಿ ಬಹಳ ವಿಭಿನ್ನ. ಅವರು ಸಣ್ಣಪುಟ್ಟದ್ದಕ್ಕೂ ಜಗಳವಾಡಿದವರಲ್ಲ. ರಶ್ಮಿಗೆ ಹಾಡುವುದರಲ್ಲಿ ಬಹಳ ಆಸಕ್ತಿ. ಶ್ರೀಯುತ ಶ್ರೀಧರ ಹೆಗಡೆ ಕಲಭಾಗ ಇವರಲ್ಲಿ ಸಂಗೀತ ಕಲಿಯುತ್ತಿದ್ದ ರಶ್ಮಿ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದು ಬರುತ್ತಿದ್ದಳು. ಸಂಜೆಯಾದರೆ ತಂಗಿಯ ಗಾಯನ ಅಣ್ಣನ ತಬಲಾ. ಎಂಥವರೂ ಹೊಟ್ಟೆಕಿಚ್ಚು ಪಡಬಹುದಾದ ಮಕ್ಕಳು ಅವರು. ದೇವರು ರೂಪ ಗುಣಗಳೆರಡನ್ನೂ ರಶ್ಮಿಗೊಬ್ಬಳಿಗೇ ಧಾರೆಯೆರೆದಿದ್ದಾನೆ ಅನ್ನಿಸುತ್ತಿತ್ತು ನನಗೆ. ನಾನು ಅವರ ಮನೆಗೆ ಹೋದಾಗಲೆಲ್ಲ ತಂಗಿ……… ಅಣ್ಣ ಇಂಜನಿಯರಿಂಗ್ ಮಾಡಿದರೆ ನೀನು ಡಾಕ್ಟರ್ ಆಗು…..ನಾವು ಮುದುಕರಾದಾಗ ಬೇಕಾಗುತ್ತದೆ ಎಂದು ತಮಾಷೆ ಮಾಡುತ್ತಿದ್ದೆ. ಅಂತೆಯೆ ಎಂ.ಬಿ.ಬಿ.ಎಸ್ ಮುಗಿಸಿ ಎಂ.ಡಿ. ಯನ್ನೂ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಇಂದು ಡಾ|| ರಶ್ಮಿ ಕಿಶನ್ ಆಗಿರುವ ಅವಳು ನಮ್ಮ ಕುಟುಂಬದ ನಿಜವಾದ ಹೆಮ್ಮೆ. ಗಂಡ ಡಾ|| ಕಿಶನ್ ಕೂಡ ಮೂಳೆ ತಜ್ಞರು. ರಶ್ಮಿ …….ಡಾ|| ರಶ್ಮಿಯಾದ ಕಾಲಕ್ಕೂ ನಮ್ಮ ತಂಗಿಗೆ ತಲೆ ಮೇಲೆರಡು ಕೋಡು ಮೂಡಿದ್ದಿಲ್ಲ. ಎಲ್ಲೇ ಕಣ್ಣಿಗೆ ಕಂಡರೂ ತಾನಾಗಿಯೇ ಬಂದು ಮಾತನಾಡಿಸುವ ಸೌಜನ್ಯ ಎಷ್ಟು ಜನರಲ್ಲಿ ಇರುತ್ತದೆ ಹೇಳಿ?! ತನ್ನ ಕೆಲಸದ ಅವಸರದ ನಡುವೆಯೂ ನನ್ನ ಕರೆಗಳನ್ನು ಸ್ವೀಕರಿಸಿ ನನ್ನ ಬರಹಗಳನ್ನು ಪುರುಸೊತ್ತಾದಗೆಲ್ಲ ಓದುವ ಡಾ|| ರಶ್ಮಿ ಅನಸ್ತೀಶಿಯಾ ಸ್ಪೆಷಲಿಸ್ಟ. ತಂಗಿ ರಶ್ಮಿ, ಅವಳ ಪತಿ ಕಿಶನ್, ಅತ್ತೆ, ಮಾವ, ಹೀಗೆ ಇಡೀ ಕುಟುಂಬವೇ ವೈದ್ಯ ಕುಟುಂಬ ಅದು. ನಾನು ನಿನ್ನ ಬಗೆಗೊಂದು ಲೇಖನ ಬರೆಯುತ್ತೇನೆ ಎಂದು ಫೋನಾಯಿಸಿದ ಕಾಲಕ್ಕೂ ನಾನು ನಿನ್ನ ಬದುಕಿಗೇನೂ ಬಣ್ಣ ತುಂಬಿದ್ದಿಲ್ಲ ಸಂದೀಪಣ್ಣ ಎಂದು ವಿನಯಪೂರಿತವಾಗಿ ಹೇಳುವ ರಶ್ಮಿ ತುಂಬಿದ ಕೊಡ. ಮುದ್ದಾದ ಮಗಳು ಪುಣ್ಯ…ರಶ್ಮಿಯ ಪಡಿಯಚ್ಚು.
ಈ ಸಹೋದರ ಸಹೋದರಿಯರು ಈಗ ಬಹಳ ಎತ್ತರಕ್ಕೇರಿದ್ದಾರೆ ಅವರನ್ನು ಮೆಚ್ಚಿಸಿ ಮುಂದೊಂದು ದಿನ ಏನಾದರೂ ಉಪಕಾರ ಗಿಟ್ಟಿಸಿಕೊಳ್ಳಬಹುದೆಂಬ ಸ್ವಾರ್ಥ ಭಾವ ನನ್ನದಲ್ಲ. ಅಷ್ಟಕ್ಕೂ ನನ್ನ ಬರಹದಿಂದ ಅವರಿಗೂ ಏನೂ ಆಗಬೇಕಾದ್ದಿಲ್ಲ. ಆದರೂ ನಾವು ಭಾವ ಸಂಬಂಧಿಗಳು ಎನ್ನುವುದನ್ನು ಪುಷ್ಟೀಕರಿಸುವುದಕ್ಕಷ್ಟೇ ಈ ಲೇಖನ. ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡಿದ ನಮ್ಮಕ್ಕ, ಬಾವ ಸಮಾಜದ ಪಾಲಕರಿಗೊಂದು ಮಾದರಿಯಾದರೆ…ಬಡತನದ ಮಧ್ಯೆಯೂ ಬೆರಗು ಹುಟ್ಟಿಸುವ ಶ್ರೇಷ್ಠ ವ್ಯಕ್ತಿಗಳಾದ ರಘು ರಶ್ಮಿ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಮಾದರಿ. ಅಹಂಕಾರ ತೋರದ ಸದ್ಗುಣ ನನ್ನನ್ನೂ ಒಮ್ಮೊಮ್ಮೆ ನಾಚಿಸುತ್ತದೆ. ನಾಡಿನ ಅಪರೂಪದ ಅಣ್ಣ ತಂಗಿಯರನ್ನು ಪಟ್ಟಿ ಮಾಡಿದರೆ ಹತ್ತರೊಳಗೆ ಇವರು ಇರುತ್ತಾರೆಂಬುದು ನನ್ನ ಅಂಬೋಣ. ಅವರು ಸದಾ ಹಸನ್ಮುಖಿಗಳಾಗಿಯೇ ಇರಬೇಕು. ಅವರಿಂದ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಆಗುವಂತಾಗಬೇಕು. ಸನ್ಮಾನಗಳು ಅವರನ್ನು ಅರಸಿಕೊಂಡು ಬರುತ್ತವೆಂಬುದು ನಿಸ್ಸಂದೇಹ. ಅವರ ಹೆಸರು ಅಜರಾಮರವಾಗಿ ಇರಲಿ. ಬಡವರ ಬದುಕಿಗೆ ಅವರು ಬೆಳಕಾಗಲೆಂಬುದೇ ನನ್ನ ಆಶಯ. ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಉನ್ನತ ಹಂತ ತಲುಪಿದ ರಘು ರಶ್ಮಿಗೆ ಜಯವಾಗಲಿ. ಜಯವಾಗುತ್ತಲೇ ಇರಲಿ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ರಘು, ರಶ್ಮಿ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ರಘು-ರಶ್ಮಿಗೆ ಸಂದೀಪಣ್ಣನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ