ಗೋಧನ- ಗಜಧನ- ರತ್ನಧನ
ಏನದ್ಭುತ ಜನ ಧನ.
ಸಂತೋಷ ಧನವು ದೊರೆತಾಗ
ಎಲ್ಲವು ಧೂಳಿ ಸಮಾನ- ಕಬೀರ.
ಗೋ ಸಂಪತ್ತು, ಗಜ ಸಂಪತ್ತು ರತ್ನ ಸಂಪತ್ತು, ಜನ ಸಂಪತ್ತು ಇವೆಲ್ಲವನ್ನು ಹೊಂದಿರುವವನು ನಿಜವಾದ ಶ್ರೀಮಂತ ಎಂಬುದು ಬರೀ ಭ್ರಮೆ. ಸಂತೋಷ ಎನ್ನುವ ಸಂಪತ್ತು ನಿಜವಾದ ಸಂಪತ್ತು. ಅದರ ಮುಂದೆ ಇವೆಲ್ಲವೂ ಧೂಳಿ ಸಮಾನ ಎಂಬುದು ಕಬೀರರ ಅಭಿಮತ.
ಭ್ರಮೆಯೇ ಬೇರೆ ವಾಸ್ತವವೇ ಬೇರೆ ನಾವು ಬೇಕು ಎನ್ನುವ ಮಾಯೆಗೆ ಸಿಕ್ಕು ಸಂಪತ್ತನ್ನು ಸಂಗ್ರಹಿಸುತ್ತಾ ಸಂಪತ್ತಿನಲ್ಲಿ ಸುಖವಿದೆ ಎಂದು ಭಾವಿಸುತ್ತೇವೆ. ಆದರೆ ಸಂಪತ್ತು ಮತ್ತಷ್ಟು ವಿಪತ್ತು ಗಳಿಗೆ ದಾರಿ ಎಂಬುದನ್ನು ಮರೆತುಬಿಡುತ್ತೇವೆ. ಸಂತೋಷದ ಹುಡುಕಾಟದಲ್ಲಿ ಸಂಗ್ರಹಕ್ಕೆ ಮಹತ್ವ ಕೊಡುವ ನಾವು ದುಃಖಕ್ಕೆ ದಾರಿ ಮಾಡಿಕೊಡುತ್ತೇವೆ. ನಿಜವಾದ ನೆಮ್ಮದಿ ಎಲ್ಲಿದೆ ಎಂಬುದು ಭ್ರಮಾಲೋಕದಲ್ಲಿರುವ ನಮಗೆ ಅರಿವಿಗೆ ಬರುವುದಿಲ್ಲ. ಕೊನೆಗೆ ನೆಮ್ಮದಿಯ ಹುಡುಕಾಟದಲ್ಲಿ ನಮ್ಮ ಅಂತ್ಯ ಕಾಣುತ್ತೇವೆ. ಕಬೀರರ ದೋಹೆ ಹೇಳುವುದು ಇದನ್ನೇ…. ನೆಮ್ಮದಿಯ ಜೀವನ ಸಂಪತ್ತಿನ ಸಂಗ್ರಹ ದಲ್ಲಿಲ್ಲ ಬದಲಾಗಿ ಸಂತೋಷದ ಬದುಕಿನಲ್ಲಿದೆ ಸಂತೋಷಕ್ಕೆ ಮಿಗಿಲಾದ ಸಂಪತ್ತಿಲ್ಲ. ಹಾಗಾಗಿ ಅದನ್ನು ಸಂಗ್ರಹಿಸು ಎಂದು.
ಕವಿವಾಣಿಯೊಂದು ಹೇಳುವುದು ಅದನ್ನೇ……
ಸಂತೋಷ ಸಂತೃಪ್ತಿ ಸಂಭ್ರಮವೆ ಜೀವನವು.
ಸಂತೋಷ ಕಿಂ ಮಿಗಿಲು ತಪವಿಹುದೆ ಮತ್ತೆ.
ಸಂತೋಷದಿಂದಿರಲು ಅದೆ ದೊಡ್ಡ ಸಾಧನೆಯು.
ಸಂತೋಷವಂತಿರಲು- ಮರುಳ ಮನುಜ.
ಡಾ.ರವೀಂದ್ರ ಭಟ್ಟ ಸೂರಿ