ಆ ಮನೆಯಲ್ಲಿಹ ಲೆಕ್ಕಿಸುವವನು
ಈ ಮನೆ ಕಟ್ಟುವುದೇಕೆ..?
ಪರಗೃಹದಲಿ ಇರುವಂದದಿ
ಇರದಂತಿರಬೇಕು -ಕಬೀರ.
ಆ ಮನೆಯಲ್ಲಿ ನಮ್ಮನ್ನು ಲೆಕ್ಕಿಸುವವನು ಇರುವಾಗ ಈ ಮನೆಯನ್ನು ಕಟ್ಟುವುದೇಕೆ..? ಎಲ್ಲವೂ ಅವನದೇ ಆಗಿರುವಾಗ ನಾವು ಇಲ್ಲಿ ಬೇರೆಯವರ ಮನೆಯಲ್ಲಿ ಇರುವಂತೆ ಇರಬೇಕು. ನಮ್ಮದು ಎನ್ನುವುದು ಇಲ್ಲಿ ಯಾವುದೂ ಇಲ್ಲ ಎಲ್ಲವೂ ಅವನದೇ ಎನ್ನುವ ಭಾವ ಕಬೀರರದ್ದು.
ನಾವು ಬದುಕಿನಲ್ಲಿ ನಾನು ನನ್ನದು ಎನ್ನುತ್ತಾ ಭವ ಬಂಧನದಲ್ಲಿ ಸಿಕ್ಕು ಒದ್ದಾಡುತ್ತಿದ್ದೇವೆ. ನನ್ನ ಮನೆ, ನನ್ನ ಕುಟುಂಬ, ನನ್ನ ಆಸ್ತಿ ಹೀಗೆ ಸ್ವಾರ್ಥಿಗಳಾಗುತ್ತಿದ್ದೇವೆ. . ಆದರೆ ಇದೆಲ್ಲ ಆ ದೇವನ ಭಿಕ್ಷೆ ಎಂಬುದನ್ನು ನಾವು ಮರೆತಿದ್ದೇವೆ. ನಾನು ನನ್ನದು ಎಂಬುದು ಶಾಶ್ವತ ಎಂಬ ಭ್ರಮೆಯಲ್ಲಿದ್ದೇವೆ. ಬೇಡುವವರು ನಾವು ನೀಡುವವನು ಅವನು ಎಂಬ ಅರಿವಿದ್ದರೂ ದೇವರಿಗೇ ನೀಡುವಷ್ಟರ ಮಟ್ಟಿಗೆ ಮುಂದುವರಿದಿದ್ದೇವೆ.
ದೇವನು ಆ ಮನೆಯಲ್ಲಿ ಕುಳಿತು ಎಲ್ಲವನ್ನೂ ಲೆಕ್ಕ ಹಾಕುತ್ತಿದ್ದಾನೆ. ನೀನು ಈ ಭ್ರಮಾಲೋಕದ ಮನೆಯಲ್ಲಿ ಕುಳಿತು ಅಹಂಕಾರ ಪಡಬೇಡ ಎಂಬುದು ಕಬೀರರ ಹಿತನುಡಿ.
ಅದಕ್ಕೇ ಹೇಳಿದ್ದು…………… ಅಲ್ಲಿಹುದು ನಮ್ಮನೆ ಇಲ್ಲಿಯದು ಸುಮ್ಮನೆ ಅಂತ.
ಡಾ.ರವೀಂದ್ರ ಭಟ್ಟ ಸೂರಿ