ಮಾಯೆ ಮೋಹ ಜಂಜಾಟದಲಿ
ದಿನ ಸುಮ್ಮನೆ ಹೋಯ್ತು
ನಾಮವು ಹೃದಯದಿ ನಿಲ್ಲಲಿಲ್ಲ
ಈ ಯಮ ಬಂದಾಯ್ತು-ಕಬೀರ.
ಮಾಯೆ ಮೋಹವೆಂಬ ಜಂಜಾಟದಲ್ಲಿ ದಿನ ಸುಮ್ಮನೆ ಕಳೆದುಹೋಗಿದೆ. ದೇವರ ನಾಮವು ನಮ್ಮ ಹೃದಯದಲ್ಲಿ ನಿಲ್ಲುವ ಮೊದಲೇ ಆ ಯಮನ ಆಗಮನವಾಯಿತು ಎಂದ ಕಬೀರರು ಈ ದೋಹೆಯಲ್ಲಿ ನಮ್ಮ ನಿತ್ಯದ ಬದುಕಿನ ಜಂಜಾಟದಲ್ಲಿ ನಾವು ಕಳೆದು ಹೋಗುತ್ತಿರುವುದನ್ನು ಹೇಳುತ್ತಾರೆ.
ನಾವು ಬದುಕಿನ ಸತ್ಯವನ್ನು ಅರ್ಥ ಮಾಡಿಕೊಳ್ಳದೆ ಮಿಥ್ಯದ ಹಿಂದೆ ನಾಗಾಲೋಟದಲ್ಲಿ ಸಾಗುತ್ತಿದ್ದೇವೆ. ಕಣ್ಣಿಗೆ ಕಂಡದ್ದೆಲ್ಲ ಸತ್ಯ ಕಾಣದಿರುವುದು ಮಿಥ್ಯ ಎಂಬ ವಿತಂಡ ವಾದಕ್ಕೆ ನಮ್ಮ ಬದುಕು ಬಲಿಯಾಗುತ್ತಿದೆ. ಬಣ್ಣದ ಬದುಕಿಗೆ ಮಾರು ಹೋಗಿ ನಮ್ಮ ಬದುಕಿನ ಬಣ್ಣ ಕಳೆದುಕೊಳ್ಳುತ್ತಿದ್ದೇವೆ. ಬೇಕು ಎಂಬುದರ ಸ್ಮರಣೆಯಲ್ಲಿ ದೇವರ ಸ್ಮರಣೆ ಮರೆತಿದ್ದೇವೆ. ನಮಗೆ ಎಲ್ಲದಕ್ಕೂ ಸಮಯವಿದೆ ಆದರೆ ದೇವರ ನಾಮ ಸ್ಮರಣೆ ಮಾಡಲು ಸಮಯವಿಲ್ಲ. ನಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಟ್ಟು ಅಗೋಚರ ಶಕ್ತಿಯನ್ನು ಸ್ಮರಿಸುವುದೇ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬ ತಿಳಿವಳಿಕೆ ಬರುವ ವೇಳೆಗೆ ಸಾವು ಹತ್ತಿರವಾಗಿರುತ್ತದೆ. ಮುಸುಕಿದ ಮಾಯೆ, ಮೋಹ ದೂರ ಸರಿದಿರುತ್ತದೆ. ಎಂಬುದನ್ನು ಈ ದೋಹೆ ಮಾರ್ಮಿಕವಾಗಿ ನಮಗೆ ತಿಳಿಸುತ್ತದೆ ಅದಕ್ಕೇ ನಮ್ಮ ಹಿರಿಯರು ಹೇಳಿದ್ದು ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂದು.
ಡಾ.ರವೀಂದ್ರ ಭಟ್ಟ ಸೂರಿ