ಗುರುವೇ ಅಗಸ ಶಿಷ್ಯನೆ ವಸ್ತ್ರ
ದೇವರೆ ಸಾಬೂನು.
ಜ್ಞಾನ ಶಿಲೆಯ ಮೇಲೊಗೆಯುವನು
ಜ್ಯೋತಿಯು ಹೊಮ್ಮುವುದು -ಕಬೀರ.
ಸಂತ ಕಬೀರರು ಇಲ್ಲಿ ಗುರುವನ್ನು ಅಗಸನಿಗೆ ಶಿಷ್ಯನನ್ನು ವಸ್ತ್ರಕ್ಕೆ ದೇವರನ್ನು ಸಾಬೂನಿಗೆ ಹೋಲಿಸಿದ್ದಾರೆ.
ಗುರುವೇ ಅಗಸನಾಗಿ ದೇವರೆಂಬ ಸಾಬೂನಿನಿಂದ ಶಿಷ್ಯ ನೆಂಬ ವಸ್ತ್ರವನ್ನು ಜ್ಞಾನ ಶಿಲೆಯ ಮೇಲೆ ಒಗೆಯುತ್ತಾನೆ ಎಂಬುದು ಕಬೀರರ ಅಭಿಮತ. ಹಾಗೆ ಒಗೆದಾಗ ಅಲ್ಲಿ ಜ್ಯೋತಿ ಹೊಮ್ಮುತ್ತದೆ ಎನ್ನುತ್ತಾರೆ ಅವರು.
ಶಿಷ್ಯನಲ್ಲಿ ಅರಿವಿನ ಜ್ಯೋತಿ ಬೆಳಗಬೇಕಾದರೆ ಅಲ್ಲಿ ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಶಿಷ್ಯನಲ್ಲಿ ಇರುವ ಒಳ್ಳೆಯ ಗುಣಗಳು ಪ್ರಕಟವಾಗಬೇಕಾದರೆ ಹೇಗೆ ಗುರು ದಾರಿ ತೋರುತ್ತಾನೋ ಹಾಗೆ ಶಿಷ್ಯನಲ್ಲಿರುವ ಕೆಟ್ಟ ಗುಣಗಳನ್ನು ದೂರ ಮಾಡುವಲ್ಲಿಯೂ ಗುರುವು ಮಹತ್ವದ ಪಾತ್ರ ವಹಿಸುತ್ತಾನೆ. ಹಾಗೆ ದೂರ ಮಾಡುವಾಗ ಗುರುವು ದೇವರನ್ನು ಸಾಧನವಾಗಿ ಇಟ್ಟುಕೊಂಡು ಶಿಷ್ಯನಲ್ಲಿ ಜ್ಞಾನ ತುಂಬುವ ಕಾರ್ಯ ಮಾಡುತ್ತಾನೆ. ಆಗ ಅಲ್ಲಿ ಅರಿವೆಂಬ ಜ್ಯೋತಿ ಹೊರಹೊಮ್ಮುತ್ತದೆ ಎಂಬುದನ್ನು ಕಬೀರರು ಈ ದೋಹೆಯಲ್ಲಿ ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.
ಕವಿ ವಾಣಿಯೊಂದು ಗುರುವಿನ ಮಹತ್ವವನ್ನು ಕುರಿತು ಹೇಳಿದ್ದು ಇದನ್ನೇ…………………
ಗುರುವು ತಿಳಿ ಹೇಳುವನು ಬದುಕನರಿಯುವ ಪರಿಯ.
ಅರಿಯುವುದು ಹಿತ ನಿನಗೆ ವಿರಳ ಬದುಕಿನಲಿ.
ಸರಿ ದಾರಿ ಹೇಳುವಾ ಗುರು ನಿನ್ನ ಜೊತೆಗಿರಲು
ಹರಿಕರುಣೆ ಲಭ್ಯವದು-ಭಾವಜೀವಿ.
ಡಾ.ರವೀಂದ್ರ ಭಟ್ಟ ಸೂರಿ