ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ದತ್ತಾತ್ರೇಯ ಪಂಡಿತ – ಬರ್ಗಿ

ನಮ್ಮ ನಿಮ್ಮ ನಡುವೆ ಎಂತೆಂತಹ ಮಹಾನ್ ವ್ಯಕ್ತಿಗಳಿದ್ದಾರೆ. ನೋಡುವ ಕಣ್ಣುಗಳು, ಅನುಭವಿಸುವ ಹೃದಯ ವಿಶಾಲವಾದಷ್ಟೂ ನಮ್ಮೊಳಗಿನ ಸಂಕುಚಿತತೆ ದೂರವಾಗಿ ಅರಿವಿನ ಹೊಸ ಹೊಳಹು ಗೋಚರಿಸುತ್ತದೆ. ಅದರಲ್ಲೂ ನಮಗಿಂತ ಹತ್ತಿಪ್ಪತ್ತು ವರ್ಷ ದೊಡ್ಡವರ ಸ್ನೇಹ ಅಷ್ಟು ವರ್ಷದ ಅನುಭವವನ್ನು ಸ್ವಲ್ಪ ಮೊದಲೇ ಅನುಭವಿಸುವುದಕ್ಕೆ ನಮಗೆ ಎಡೆ ಮಾಡಿ ಕೊಡುತ್ತದೆ. ಹೆಸರಿನ ಹಾಗೆಯೇ ಇರುವವರು ಸಮಾಜದಲ್ಲಿ ಅಪರೂಪ. ಆದರೆ ಇಲ್ಲಿ ಹೆಸರಿನಂತೆಯೇ ಇರುವ ಪಂಡಿತರೊಬ್ಬರನ್ನು ನಿಮ್ಮ ಮುಂದೆ ನನ್ನ ಅಕ್ಷರಗಳು ನಿರೂಪಿಸುವುದಕ್ಕೆ ಮುಂದಾಗುತ್ತಿವೆ.
ಶ್ರೀಯುತ ದತ್ತಾತ್ರೇಯ (ಅರುಣ) ಪಂಡಿತರು ಮೂಲತಃ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬರ್ಗಿಯವರು. ರಾಜ್ಯಪ್ರಶಸ್ತಿ ಪುರಸ್ಕೃತ ಕ್ರಿಯಾಶೀಲ ಶಿಕ್ಷಕರೂ, ಸಾಹಿತಿಗಳೂ, ಅತ್ಯುತ್ತಮ ವಾಗ್ಮಿಗಳೂ, ಉತ್ತಮ ಸಂಘಟಕರೂ, ಸಕಲ ವಿಷಯಗಳ ಸಂಪನ್ಮೂಲವೇ ತುಂಬಿಕೊಂಡ ಸಂಪನ್ಮೂಲ ವ್ಯಕ್ತಿಗಳೂ, ಇಂಗ್ಲೀಷನ್ನು ಅತ್ಯಂತ ಸರಳವಾಗಿ ಭೋದಿಸಬಲ್ಲ ಅಪರೂಪದ ಸದ್ಗುಣಗಳ ಕಣಜ ನಮ್ಮ ಡಿ.ಜಿ.ಪಂಡಿತ್ ಸರ್.
ನಾನು ಶಿಕ್ಷಕ ವೃತ್ತಿಗೆ ಸೇರಿದ ಹೊತ್ತಿಗೆ ಅನೇಕ ತರಬೇತಿ ಕಾರ್ಯಾಗಾರಗಳು ನಡೆಯುತ್ತಿದ್ದವು. ಅದರಲ್ಲಿ ಕೆಲವರನ್ನು resource person ಆಗಿ ಕರೆಸಿ ಹಲವಷ್ಟು ವಿಷಯಗಳಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ಮಾಡಲಾಗುತ್ತಿತ್ತು. ಹಾಗೆ ತರಬೇತಿಗೆ ಹೋದ ಕಾಲಕ್ಕೆ ಮೊದಲ ಬಾರಿಗೆ ನನಗೆ ಇವರು ನಿಜವಾಗಿಯೂ resource ಇರುವ person ಆಗಿ ಕಂಡರು. ದೂರದಿಂದಲೇ ಎಸೆಯುವ ನನ್ನ ಪ್ರಶ್ನೆಗಳಿಗೆ ಕೋಪಗೊಳ್ಳದೇ, ದ್ವೇಷಿಸದೇ, ಗಂಭೀರವಾಗಿ ತೆಗೆದುಕೊಂಡು ಯೋಚಿಸಿ ಉತ್ತರ ನೀಡುವ ಅವರನ್ನು ಕಂಡಾಗ…. ಶಿಕ್ಷಕ ವೃತ್ತಿ ಸೇರಿ ಕೆಲ ಕಾಲಕ್ಕೇ ಬೇಸರ ಹುಟ್ಟಿ ಹೋಗಿದ್ದ ನನಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಆಯಿತು. ನಾನು ಕ್ಲರ್ಕ ಆಗಿ ಎಲ್ಲಾದರೂ ಪರೀಕ್ಷೆ ಬರೆದು ಹೋಗಿ ಬಿಡೋಣ ಎಂಬ ತೀರ್ಮಾನಕ್ಕೆ ಬರುವುದರೊಳಗೆ ಅವರು ನನ್ನಲ್ಲಿರುವ ನಿಜವಾದ ಶಿಕ್ಷಕನನ್ನು ಬಡಿದೆಬ್ಬಿಸಿದರು. ಇಂದಿನ ನನ್ನ ಯಶಸ್ಸಲ್ಲದ ಯಶಸ್ಸಿನ ಪ್ರತಿಯೊಂದೂ ಹೆಜ್ಜೆಯ ಹಿಂದೆ ಡಿ.ಜಿ.ಪಂಡಿತ ಸರ್ ಇದ್ದಾರೆ.
ಸಂದೀಪ್ ನಿಮ್ಮೊಳಗೊಬ್ಬ ಅದ್ಭುತ ಸಾಹಿತಿಯಿದ್ದಾನೆ ದಯವಿಟ್ಟು ಅವನನ್ನು ಹೊರತನ್ನಿ… ಎಂದು ಪ್ರಪ್ರಥಮ ಬಾರಿಗೆ ಭವಿಷ್ಯ ನುಡಿದ ಪುಣ್ಯಾತ್ಮ ಅವರು. ಬೋರ್ ವೆಲ್ ಎಲ್ಲಿ ತೋಡಿದರೆ ನೀರು ಬರುತ್ತದೆಂದು ಕೆಲವೇ ಕೆಲವರಿಗೆ ಗೊತ್ತಾಗುವ ಹಾಗೆ ಪಂಡಿತ್ ಸರ್ ನನ್ನ ಅಂತರಂಗದ ಜೀವ ಜಲ ಶೋಧಿಸಿ ಹೊರ ತೆಗೆದವರು. ನನ್ನ ಮಾತು, ಹಾಗೂ ಕೆಲಸಗಳನ್ನು ಒಂದು ನಿರ್ದಿಷ್ಟ ಕಾಲುವೆಯಲ್ಲಿ ಪ್ರವಹಿಸುವಂತೆ ಪ್ರಚೋದಿಸಿದವರು.
ಮೊನ್ನೆ ಮೊನ್ನೆ ಮೇಜರ್ ಸಿದ್ದಲಿಂಗಯ್ಯ ಅವರಿಂದ ಶಹಭಾಸ್ ಗಿಟ್ಟಿಸಿಕೊಂಡ ಪಂಡಿತ್ ಸರ್ ಜಿಲ್ಲೆಯ…. ಅಷ್ಟೇನು ನಾಡಿನ….. ಬಹು ಜನರಿಗೆ ಚಿರಪರಿಚಿತರು. ಮಕ್ಕಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪಂಡಿತರು ತನ್ನ ಸಂಸಾರ ಸಾಗಿಸಲು ಆರಿಸಿಕೊಂಡ ಉದ್ಯೋಗ ಅಲ್ಲ ಇದು. ಆ ಜನ್ಮ ಬ್ರಹ್ಮಚಾರಿಗಳಾಗಿರುವ ಇವರಿಗೆ ಶಾಲೆಯೇ ನಿಜವಾದ ಮನೆ. ವಿದ್ಯಾರ್ಥಿಗಳೇ ನಿಜವಾದ ಮಕ್ಕಳು. ಹಣ, ಬಂಗಾರ, ಆಸ್ತಿ, ಇದ್ಯಾವುದರ ವ್ಯಾಮೋಹವಿಲ್ಲದ ಪಂಡಿತರ ವೇಷ, ಭಾಷೆ ಅತ್ಯಂತ ಸರಳ. ಸಜ್ಜನಿಕೆಯೇ ಅವರ ಉಸಿರು.
ಯಾವಾಗಲೇ ಅವರೆದುರು ಸಿಗಲಿ……ಹಂ ಹೇಳಿ…….ಅಂತ ಅವರೇ ನಮ್ಮನ್ನು ಮಾತಿಗೆ ಪ್ರಚೋದಿಸುತ್ತಾರೆ ವಿನಹ ತಾನು ಹೇಳಿದ್ದನ್ನು ಕೇಳಿ ನೀನು ಜಾಗ ಖಾಲಿ ಮಾಡು ಎನ್ನುವ ಜಾಯಮಾನದವರಲ್ಲ. ಕಿರಿಯರಲ್ಲೂ ಹಿರಿಯದನ್ನು ಹುಡುಕುವ ಪಂಡಿತ ಸರ್…. ಶಿಕ್ಷಕರ, ಅಧಿಕಾರಿ ವರ್ಗದವರ, ಸ್ನೇಹಿತ ಬಳಗದ ಪರಮಾಪ್ತ ವ್ಯಕ್ತಿ.
ಅವರಿಂದ ಕಲಿತ, ಮತ್ತು ಕಲಿಯುತ್ತಿರುವ ವಿದ್ಯಾರ್ಥಿಗಳು ನಿಜವಾಗಿಯೂ ಪುಣ್ಯವಂತರು. ಪಠ್ಯ ಪುಸ್ತಕಗಳನ್ನು ಕೈಯಲ್ಲಿ ಹಿಡಿಯದೇ ಲೀಲಾಜಾಲವಾಗಿ ಪಾಠ ಕಲಿಸಬಲ್ಲ ಪಂಡಿತ್ ಸರ್ ಗಣಿತದಲ್ಲೂ ಅಷ್ಟೇ ಪಂಡಿತರು. ಚದುರಂಗದಾಟದ ಪ್ರವೀಣರಾದ ಅವರಿಗೆ ಮಕ್ಕಳನ್ನು ಆ ಆಟದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಬಯಕೆ. ಅವರ ಕುರಿತಾಗಿ ಅನೇಕ ದಿನಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಜಿಲ್ಲೆಯ ಹಾಗೂ ರಾಜ್ಯದ ಶಿಕ್ಷಕ ಪ್ರಶಸ್ತಿಗೆ ಅವರು ಅರ್ಹವಾಗಿಯೇ ಭಾಜನರಾದರು. ಹಲವಾರು ಸಂಘ ಸಂಸ್ಥೆಗಳು ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿವೆ. ರಾಷ್ಟ್ರ ಮಟ್ಟದಲ್ಲಿ ಗುರುತಿಸಬಹುದಾದ ಹೆಮ್ಮೆಯ ಶಿಕ್ಷಕರು ನಮ್ಮ ಡಿ.ಜಿ.ಪಂಡಿತರು ಎಂಬುದು ನಿಸ್ಸಂದೇಹ.
Everyday Questions, Teach it easy ಯಂತಹ ಬೋಧನೋಪಯುಕ್ತ ಪುಸ್ತಕಗಳನ್ನು ಹೊರತಂದ ಪಂಡಿತ ಸರ್ ಅನೇಕ ಕಡೆ ಒಂದು ರೂಪಾಯಿಯನ್ನು ತೆಗೆದುಕೊಳ್ಳದೇ Spoken English Class ಗಳನ್ನು ಮಾಡಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ಅತಿಥಿ ಉಪನ್ಯಾಸ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ.
ನಮ್ಮ ಮೊಟ್ಟ ಮೊದಲ ಹರಟೆ ಕಾರ್ಯಕ್ರಮವನ್ನು ಬರ್ಗಿಯಲ್ಲಿ ಆಯೋಜಿಸುವುದಕ್ಕೆ ಮೂಲ ಕಾರಣವೇ ಪಂಡಿತ್ ಸರ್. ನಂತರ ಅವರೂ ನಮ್ಮ ಸಂದೇಶ ಮಂಟಪದ ಸದಸ್ಯರಾಗಿ ‌ಹರಟೆಗಳಲ್ಲಿ ಭಾಗವಹಿಸಿದರು. ತುಂಬಾ ಸರಳ ಸುಂದರವಾಗಿ ವಿಷಯ ಮಂಡಿಸುವ ಪಂಡಿತ್ ಸರ್ ಅನನ್ಯ ಎಂಬುದರಲ್ಲಿ ಎರಡು ಮಾತೇ ಇಲ್ಲ. ಆಕಾಶವಾಣಿಯಲ್ಲಿ ಕೂಡ ಅವರ ಸಂದರ್ಶನ ಭಿತ್ತರಗೊಂಡಿದೆ. ಸಾಹಿತ್ಯ ಸಮ್ಮೇಳನದಲ್ಲಿ ಕೂಡಾ ಭಾಗಿಯಾದ ಅವರು ತಾನೂ ಬೆಳೆದು….. ತನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರನ್ನೂ ಬೆಳೆಸುವ ಗುಣವಂತರು.
ಟೀಕಿಸುವದಕ್ಕೆ ನೂರಾರು ಕಾರಣ ಸಿಗಬಹುದು. ಆದರೆ ಮೆಚ್ಚುವುದಕ್ಕೆ ಮೂರೇ ಮೂರು ಅಂಶವಿದ್ದರೂ ಅದು ನನಗೆ ಇಷ್ಟವಾಗುತ್ತದೆ. ನನ್ನ ಕಡು ವೈರಿಯೇ ಆದರೂ ಅವರಲ್ಲಿರುವ ಒಳ್ಳೆಯ ತನಕ್ಕೆ ಮತ್ಸರವಿಲ್ಲ ನನ್ನಲ್ಲಿ. ಮನಸಿಂದ ಯಾರೂನೂ ಕೆಟ್ಟೋರಲ್ಲ…. ಎಂಬ ಹಾಡು ನನಗೆ ತುಂಬಾ ಇಷ್ಟವಾಗುತ್ತದೆ. ಹಾಡು ಬರುವುದಕ್ಕಿಂತ ಮುಂಚೆಯೇ ಅದನ್ನು ನನ್ನ ಜೀವನ ಪಾಠವಾಗಿಸಿದವರು ನಮ್ಮ ಡಿ.ಜಿ.ಪಂಡಿತ್ ಸರ್. ಅವರು ನನಗಿತ್ತ ಸಲಹೆಯಂತೆ ಮುನ್ನಡಿಯಿಡುವೆ. ಅವರು ಸಿಕ್ಕ ಮೇಲೆ ಅವರನ್ನು ಕೇಳದೇ ಯಾವೊಂದು ಕಾರ್ಯವನ್ನೂ ನಾನು ಮಾಡಿದ್ದಿಲ್ಲ. ಅವರ ಮಾರ್ಗದರ್ಶನ ನನಗೆ ಸದಾ ಸಿಗುತ್ತಿರುವದರಿಂದ ನಾನು ಭಗವಂತನಿಗೇ ಋಣಿ.
ಪಂಡಿತ ಸರ್ ವೈವಿಧ್ಯಮಯ ಉಡುಗೆ, ಅಡುಗೆ ಬಯಸುವವರಲ್ಲ. ವಿಪರೀತ ಹೊಗಳಿ ಅವರಿಗೇನೂ ಆಗಬೇಕಾದ್ದಿಲ್ಲ. ಹತ್ತು ತಲೆಮಾರಿಗೆ ಹಣ ಕೂಡಿಡಬೇಕೆಂಬ ಆಕಾಂಕ್ಷಿಗಳೂ ಅವರಲ್ಲ. ಅಂತಹವರ ಬಗ್ಗೆ ಬರೆದ ಪ್ರತಿಯೊಂದು ಅಕ್ಷರಗಳಿಗೂ ಧನ್ಯತೆ ಬರುತ್ತದೆಂಬ ಸ್ವಾರ್ಥ ಮಾತ್ರ ನನ್ನದು. ಪಂಡಿತ ಸರ್ ನನ್ನ ಜೊತೆಗಿದ್ದಾರೆ. ಜೊತೆಯಾಗಿಯೇ ಇದ್ದಾರೆ. ನಾನೂ ಕೂಡ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಪಂಡಿತ್ ಸರ್ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಬೆಳಕಿನೆಡೆಗೆ….

ಪಂಡಿತ ಸರ್ ಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ