ದೇಹ ಮಂದಿರವು ಬೆಳಗುತಲಿಹುದು.
ದೀಪ ಉರಿವ ತನಕ.
ಜೀವ ಹಂಸ ಹೊರ ಹೊರಟಾಗ
ಮನೆ ಶುಚಿಗೊಳಿಸುವರು -ಕಬೀರ.
ಈ ದೇಹವೆಂಬ ಮಂದಿರವು ಒಳಗಿನ ದೀಪ ಉರಿಯುವ ತನಕ ಬೆಳಗುತ್ತಿರುತ್ತದೆ. ಜೀವ ಹಂಸ ಹೊರ ಹೊರಟಾಗ ಆ ದೇಹವಿದ್ದ ಮನೆಯನ್ನು ಶುಚಿಗೊಳಿಸಲಾಗುತ್ತದೆ. ಜೀವನವೆಂದರೆ ಇಷ್ಟೇ ಎಂಬುದು ಸಂತ ಕಬೀರರ ಅಭಿಮತ.
ನಾವು ಹೊರಗಿನ ಬೆಳಕನ್ನು ಮಾತ್ರ ನೋಡಿದ್ದೇವೆ. ಆದರೆ ನಮ್ಮೊಳಗಿನ ಬೆಳಕಿನ ಬಗ್ಗೆ ನಮಗೆ ಅರಿವಿಲ್ಲ. ನಮ್ಮ ದೇಹವೆನ್ನುವುದು ಮಂದಿರವಿದ್ದಂತೆ. ಅದು ಬೆಳಗುವುದು ಹೊರಗಿನ ದೀಪದಿಂದ ಅಲ್ಲ ಬದಲಾಗಿ ಅಂತರಂಗದಲ್ಲಿ ಬೆಳಗುತ್ತಿರುವ ದೀಪದಿಂದ. ಅದು ಎಲ್ಲಿಯವರೆಗೆ ಬೆಳಗುತ್ತದೆಯೋ ಅಲ್ಲಿಯವರೆಗೆ ಈ ದೇಹದಲ್ಲಿ ಬೆಳಕು ಇರುತ್ತದೆ. ಅದು ಆರಿದಾಗ ಕತ್ತಲು ಆವರಿಸುತ್ತದೆ. ಆತ್ಮ ದೇಹವನ್ನು ಬಿಟ್ಟು ಹೊರಡುತ್ತದೆ. ಒಳಗಿನ ಬೆಳಕು ಆರಿದ ಮೇಲೆ ಈ ದೇಹಕ್ಕೆ ಯಾವ ಮಹತ್ವವೂ ಇಲ್ಲ. ಎಂಬುದನ್ನು ಈ ದೋಹೆ ಮನೋಜ್ಞವಾಗಿ ನಮ್ಮ ಮುಂದಿಡುತ್ತದೆ.
ಬಹಿರಂಗದ ಯುದ್ಧ ಪ್ರಾರಂಭವಾಗುವುದು ಮೊದಲು ಅಂತರಂಗದಲ್ಲಿ ಎಂಬ ಮಾತಿದೆ. ಅಂತರಂಗದಲ್ಲಿ ಬೆಳಕಿದ್ದರೆ ಬಹಿರಂಗದಲ್ಲೂ ಅದು ವ್ಯಕ್ತವಾಗುತ್ತದೆ. ಅಂತರಂಗದಲ್ಲಿ ಕೊಳಕಿದ್ದರೆ ಬಹಿರಂಗದ ಚಟುವಟಿಕೆಗಳಲ್ಲೂ ಕೊಳಕು ಪ್ರಕಟವಾಗುತ್ತದೆ. ನಮ್ಮ ಅಂತರಂಗವನ್ನು ಶುದ್ಧವಾಗಿಟ್ಟು ಕೊಳ್ಳೋಣ. ಅಂತರಂಗದ ಬೆಳಕು ನಮ್ಮ ದೇಹಕ್ಕಷ್ಟೇ ಬೆಳಕಾಗದೆ ಇತರರಿಗೂ ಬೆಳಕಾಗುವಂತೆ ಬದುಕೋಣ.
ಡಾ.ರವೀಂದ್ರ ಭಟ್ಟ ಸೂರಿ