ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀಮತಿ ರೇಷ್ಮಾ ಪಿಂಟೋ

ನನ್ನ ಖರ್ಚಾಗದ ಸಂಪತ್ತುಗಳೆಂದರೇ ಸ್ನೇಹಿತರು. ಸಾವಿರ ಜನ ನಮ್ಮ ಬದುಕಿನ ಪಥದಲ್ಲಿ ಜೊತೆಯಾಗುತ್ತಾರೆ. ನೂರು ಜನ ನಮ್ಮ ಜೊತೆಗೆ ನೂರು ಹೆಜ್ಜೆ ನಡೆಯುತ್ತಾರೆ. ಕೊನೆಗೆ ಕಾರಣಾಂತರಗಳಿಂದ ಬಿಟ್ಟು ಹೋಗುತ್ತಾರೆ. ಆದರೆ ಬೆರಳೆಣಿಕೆಯಷ್ಟು ಜನ ಮಾತ್ರ ನಮ್ಮ ಬದುಕಿನ ಕೊನೆಯವರೆಗೂ ಗೆಳೆತನ ಎಂಬ ಪದದ ನಿಜವಾದ ಅರ್ಥ ವಿವರಿಸುತ್ತಾ ನಮ್ಮ ಜೊತೆಗೆ ಇದ್ದುಬಿಡುತ್ತಾರೆ. ಸರಿ ಸುಮಾರು ಕಳೆದ 20 ವರ್ಷಗಳಿಂದ ಸ್ನೇಹ ಸಂಬಂಧದಿಂದ ದೂರಾಗದ ನನ್ನ ಆಪ್ತ ಸ್ನೇಹಿತೆ ಶ್ರೀಮತಿ ರೇಷ್ಮಾ ಪಿಂಟೋ. ರೇಷ್ಮಾ ಎಂಬ ಹೆಸರಿನವರು ಎಷ್ಟೋ ಜನ ನನ್ನೆದುರಿಗೆ ನಿಂತಾಗೆಲ್ಲ ನನಗೆ ನನ್ನ ಪ್ರೀತಿಯ ಸ್ನೇಹಿತೆ ರೇಷ್ಮಾ ನೆನಪಾಗುತ್ತಾಳೆ ಮತ್ತು ಅವರಲ್ಲೂ ನಾನು ನಮ್ಮ ರೇಷ್ಮಾಳನ್ನೇ ಹುಡುಕುತ್ತೇನೆ.
ರೇಷ್ಮಾಳ ತವರು ಮನೆ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾವೂರು. ನಾನು ಟಿ.ಸಿ.ಹೆಚ್ ಮಾಡಲು ಕುಮಟಾಕ್ಕೆ ಹೋದ ಸಮಯಕ್ಕೆ ನನಗೆ ಸಹಪಾಠಿಯಾಗಿ ಜೊತೆಯಾದವಳು ರೇಷ್ಮಾ. ಪಾಠ ಕೊಡಲು ಹೋಗುವಾಗೆಲ್ಲ ನಮ್ಮದು ಒಂದೇ ತಂಡ. ಅವಳು R….. ನಾನು S….. ಆದದ್ದು……ನಮ್ಮ ಅಂತರವನ್ನು ಕಡಿಮೆಗೊಳಿಸಿತ್ತು. ನಮ್ಮ 60 ಜನರ batch ನಲ್ಲಿ ರೇಷ್ಮಾ ಮಾತ್ರ ಕ್ರಿಶ್ಚಿಯನ್ ಧರ್ಮದವಳು. ರೇಷ್ಮಾ ಲೋಪೀಸ್ ಎಂಬ ಹೆಸರಿನವಳಾದ ಅವಳಲ್ಲಿ ದಾದಿಯರ ಗುಣ ವಿಶೇಷವಾಗಿ ನನಗೆ ಎದ್ದು ಕಾಣುತ್ತಿತ್ತು. ನಾನು ಅದೆಷ್ಟೋ ಬಾರಿ ಅದನ್ನು ನನ್ನ ಇತರ ಸ್ನೇಹಿತರ ಜೊತೆಗೆ ಹಂಚಿಕೊಂಡಿದ್ದೂ ಉಂಟು. ಸಂಕ್ರಾಂತಿ ಹಬ್ಬಕ್ಕೆ ನಮ್ಮ ಸಹಪಾಠಿ ಹೆಣ್ಣುಮಕ್ಕಳು ಸಂಕ್ರಾಂತಿ ಸಿಹಿ ಹಂಚಿದರೆ ರೇಷ್ಮಾಳನ್ನು ಕ್ರಿಸ್ ಮಸ್ ಹಬ್ಬದ ಮಾರನೆಯ ದಿನ ಕೇಕಿಗಾಗಿ ನಾವು ಕಾಯುತ್ತಿದ್ದೆವು. ಹುಳುಕು ಕೊಳಕುಗಳಿಲ್ಲದ, ತೀರಾ ವಯ್ಯಾರ, ಬಿನ್ನಾಣ ತೋರದ ಸರಳ ಸಾದಾ ಸೀದಾ ಮನುಷ್ಯ ನಮ್ಮ ರೇಷ್ಮಾ.
ಅತ್ಯಂತ ಬಡತನದ ಕುಟುಂಬದಲ್ಲಿ ಬೆಳೆದು ಬಂದ ರೇಷ್ಮಾ ಪಿ.ಯು.ಸಿ ಸೈನ್ಸ ಮಾಡಿ ಶಿಕ್ಷಣ ತರಬೇತಿಗೆ ಬಂದಿದ್ದೇ ಹೆಮ್ಮೆ ಪಡುವಂತಹ ವಿಷಯ. ಅದರಲ್ಲೂ ಆಕೆ ನನ್ನ ಜೊತೆಗೆ ಪಾಠ ಮಾಡುವಾಗೆಲ್ಲ ಅವಳೊಬ್ಬ ವಾತ್ಸಲ್ಯವೇ ತುಂಬಿದ ಶಿಕ್ಷಕಿ ಎಂಬುದು ಪಕ್ಕಾ ಆಗಿತ್ತು. ನಾಳೆ ಇಂಥ ಪಾಠ ಇದೆ ಸಂದೀಪ ನಾನೇನು ಚಟುವಟಿಕೆ ಮಾಡಲಿ? ಯಾವ ಹಾಡು ಹೇಳಿ ಕೊಡಲಿ? ಹೀಗೆ ಹತ್ತಾರು ಪ್ರಶ್ನೆ ಕೇಳುವ ರೇಷ್ಮಾಳನ್ನು ಕಂಡಾಗ ಅವಳಂತಹ ಶಿಕ್ಷಕಿಯ ಕಾಳಜಿಯೊಂದು ಇದ್ದರೆ ಮಕ್ಕಳಿಗೆ ಯಾವ ಪಾಠವೂ ಮತ್ತೆ ಬೇರೆ ಬೇಡ ಎನಿಸುತ್ತಿತ್ತು ನನಗೆ. ಒಮ್ಮೆಯೂ ಗದರದೇ ಕಿಲಾಡಿ ಮಾಡುವವರನ್ನೂ ಸುಮ್ಮನಿರಿಸಿ ಅವಳು ಹೇಳಿಕೊಡುತ್ತಿದ್ದರೆ ನಾನೇ ಎಷ್ಟೋ ವಿಷಯಗಳನ್ನು ಕೇಳದೆಯೇ ಅವಳಿಂದ ಕಲಿಯುತ್ತಿದ್ದೆ.
ರೇಷ್ಮಾ, ಸುಧಾ, ಮಾಲತಿ, ಶಿಲ್ಪಾ ನಾಲ್ಕು ಜನ ಅಲ್ಲಿಯೇ ವಸತಿ ಮಾಡಿಕೊಂಡು ಕಾಲೇಜಿಗೆ ಬರುವವರು. ನಾವು ಮನೆಯಿಂದ ದಿನಾಲೂ ಪ್ರಯಾಣ ಮಾಡುವವರು. ನಮಗೆ ಸಂಗೀತ ಕಲಿಸುವುದಕ್ಕೆ ಅವಧಾನಿ ಅಂತ ಒಬ್ಬ ಗುರುಗಳು ಬರುತ್ತಿದ್ದರು. ವಾರ- ಹದಿನೈದು ದಿನಗಳಿಗೊಮ್ಮೆ ಬರುತ್ತಿದ್ದ ಅವರು ಕೆಲವೊಂದು ಹಾಡುಗಳನ್ನು ಹೇಳಿಕೊಡುತ್ತಿದ್ದರು. ನಾವೂ ಅವರಿಗಾಗಿ ಒಂದು note book ಮಾಡಿ ಅದರಲ್ಲಿ ನೂರಾರು ಹಾಡುಗಳನ್ನು ಬರೆದು ಅಂಕ ಗಿಟ್ಟಿಸಿಕೊಳ್ಳುತ್ತಿದ್ದೆವು. ಒಮ್ಮೆ ಆಕಸ್ಮಿಕವಾಗಿ ಅವರು ಭೇಟಿ ನೀಡಿ ಇಂದು ಎಲ್ಲರ ಸಂಗೀತ note book ತೋರಿಸಬೇಕೆಂದು ತಾಕೀತು ಮಾಡಿದರು. ಹಲವರು ಅದಾಗಲೇ ತಂದಿದ್ದರು. ಆದರೆ ನಾನು ಒಯ್ದಿರಲಿಲ್ಲ. ವಾರ್ಷಿಕ ಅಂಕಗಳೇ ಬೀಳದೇ ಹೋದರೆ ಎಂಬ ಹೆದರಿಕೆ ಬೇರೆ. ನಾಳೆ ತಂದು ತೋರಿಸುತ್ತೇನೆ ಎನ್ನುವ ಹಾಗೂ ಇಲ್ಲ. ಪೇಚಿಗಿಟ್ಟುಕೊಂಡಿತು ಪರಿಸ್ಥಿತಿ. ಆ ಸಮಯಕ್ಕೆ ತತ್ ಕ್ಷಣಕ್ಕೆ ನನ್ನ ಆಪ್ತ ಸ್ನೇಹಿತೆ ನನ್ನ ನೆರವಿಗೆ ಬಂದಿದ್ದು. ನನ್ನಿಂದ ಕೆಲವೇ ಮೀಟರ್ ದೂರದಲ್ಲಿ ಕುಳಿತಿದ್ದ ಅವಳು ಮೊದಲು ಹೋಗಿ ನೋಟ್ ಬುಕ್ ತೋರಿಸಿ ಸಹಿ ತೆಗೆದುಕೊಂಡು ಬಂದಳು. ಅದಾದ ನಂತರ ನನಗೆ ಕೊಟ್ಟಳು. ನಾನು ಅವರು ಸಹಿ ಮಾಡಿದ ಕೊನೆಯ page ಹರಿದು ತೆಗೆದು ಮತ್ತೊಮ್ಮೆ ಸಹಿ ಹಾಕಿಸಿಕೊಂಡು ಬಂದೆ.?? ಮನಸ್ಸಿನಲ್ಲಿ ಇದು ಕ್ರಿಮಿನಲ್ ಅಪರಾಧ ಎಂದು ಗೊತ್ತಿದ್ದರೂ ನನಗದು ಅನಿವಾರ್ಯ ಪರಿಸ್ಥಿತಿ.
‌‌‌‌‌‌ ರೇಷ್ಮಾ ಲೋಪೀಸ್ ನನ್ನನ್ನು ಅತ್ಯಂತ ಗೌರವ ಅಭಿಮಾನಗಳಿಂದ ಕಂಡವಳು. ನಾನು ಬಹುಮಾನ ಪಡೆದಾಗೆಲ್ಲ ನನಗಿಂತ ಹೆಚ್ಚು ಖುಷಿ ಪಟ್ಟವಳು. ಒಮ್ಮೆ ಎನ್.ಎಸ್.ಎಸ್.ಕ್ಯಾಂಪ್ ನಡೆದ ಸಂದರ್ಭ….ಹುಟ್ಟಿ ಬೆಳೆದು ದೊಡ್ಡವನಾದ ಈವರೆಗೆ ಸಾಂಬಾರು ಹಾಕಿಕೊಂಡು ಊಟ ಮಾಡುವ ಅಭ್ಯಾಸವಿಲ್ಲದ ನನಗೆ 10 ದಿನದ ಊಟಕ್ಕೆ ಮೊಸರು pack ಖರೀದಿಗೆಂದು ನಮ್ಮ ತಂದೆಯವರು 155 ರೂ ಕೊಟ್ಟಿದ್ದರು. ಆದರೆ ಮೂರೇ ದಿನಕ್ಕೆ ಬಿಡಿಗಾಸಿಲ್ಲದೇ ಅದು ಕಳುವಾಗಿತ್ತು. ಒಮ್ಮೆ ಹಾಸ್ಟೇಲಿನ ಆವರಣದ ಬಯಲಿನಲ್ಲಿ ನೆಲದ ಮೇಲೆ ವೃತ್ತಾಕಾರವಾಗಿ ಕುಳಿತು ಊಟ ಮಾಡುವ ಸಂದರ್ಭ. ಆ ದಿನ kitchen team ನಲ್ಲಿದ್ದ ರೇಷ್ಮಾ ನನಗಾಗಿ ಒಂದು ಲೋಟ ಮೊಸರನ್ನು ಪ್ರತ್ಯೇಕವಾಗಿ ತೆಗೆದಿಟ್ಟು ಅದನ್ನು ಸುಮ್ಮನೆ ಬಂದು ಊಟಕ್ಕೆ ಕುಳಿತ ನನ್ನ ಪಕ್ಕ ಇಟ್ಟು ಹೋದಳು. ಅವಳು ತಂದಿಟ್ಟು ಹೋದ ಒಂದು ತಟ್ಟೆಯ ಮೊಸರಿನ ಋಣ ಅದು ಜನುಮ ಜನುಮಾಂತರಕ್ಕೂ ಮರೆಯುವುದೇ ಅಲ್ಲ. ತೀರಿಸುವಂಥದ್ದೂ ಅಲ್ಲ.
ಎರಡು ವರ್ಷ ಕಲಿತು, ಕಲೆತು ಬೀಳ್ಕೊಡುವಾಗ ಎಲ್ಲರೂ autograph ಬರೆಸಿಕೊಂಡರು. ನಾನು ಮಾತ್ರ ಯಾರ ಹತ್ತಿರವೂ ಬರೆಸಿಕೊಳ್ಳಲಿಲ್ಲ. ಕೆಲವರು ನನ್ನ ಹತ್ತಿರ ಕೇಳಿದರು….”ಯಾಕೆ ಎಲ್ಲರೂ ಬರೆಸಿಕೊಳ್ಳುವಾಗ ನೀನ್ಯಾಕೆ ಬರೆಸಿಕೊಳ್ಳುವುದಿಲ್ಲ” ಎಂದು. ನಾನು ಅವರಿಗೆ “ನಿಮ್ಮ ನೆನಪುಗಳು ನನ್ನಲ್ಲಿ ಸದಾ ಹಚ್ಚ ಹಸಿರಾಗಿಯೇ ಇರುತ್ತದೆ. ಅವುಗಳನ್ನು diary ಯೊಂದರಲ್ಲಿ ಬರೆಸಿಕೊಂಡು ನಂತರ ಅದನ್ನು ಕಳೆಯುವುದಕ್ಕೆ ನನಗೆ ಮನಸ್ಸಿಲ್ಲ ಎಂದು ಹೇಳಿದ್ದೆ.” ಕೊನೆಯ ದಿನ ನಾವು ಕೆಲವು ಜನ ವಾಚನಾಲಯದಲ್ಲಿ ಪುಸ್ತಕ ಓದುತ್ತಿದ್ದಾಗ ಮುಂದೆ ಕುಳಿತಿದ್ದ ರೇಷ್ಮಾ Christian ಧರ್ಮದ prayer ನ್ನು ಹೊಂದಿದ ಏಸುವಿನ ಫೋಟೋ ಇರುವ ಅತಿ ಚಿಕ್ಕ ಹಾಳೆಯೊಂದರ ಮೇಲೆ ಈ ಫೋಟೋ ಯಾವಾಗಲೂ ನಿನ್ನ ಹತ್ತಿರವಿರಲಿ ಎಂದು ಬರೆದು ನಾಲ್ಕು ಹನಿ ಕಣ್ಣೀರು ಹಾಕಿ ನನಗೆ ನೀಡಿದ್ದಳು. ಅವಳ ಸ್ನೇಹದ ಧ್ಯೋತಕವಾಗಿ ಅವಳು ನೀಡಿದ ಆ prayer 20 ವರ್ಷಗಳಿಂದಲೂ ನನ್ನ wallet ನಲ್ಲಿ ಭದ್ರವಾಗಿದೆ. ಎಷ್ಟೋ ಸಲ ನನ್ನ ಪರ್ಸ ಬದಲಾವಣೆ ಮಾಡಿದ್ದಿದೆ. ಲಕ್ಷಾಂತರ ರೂಪಾಯಿ ಗಳಿಸಿ ವ್ಯಯಿಸಿ ಆಗಿದೆ. ಆದರೆ ಅದನ್ನು ಮಾತ್ರ ನಾನಿಂದಿಗೂ ಕಳೆದಿಲ್ಲ. ಯಾಕೆಂದರೆ ರೇಷ್ಮಾಳ ನೆನಪುಗಳನ್ನು ಹೊಂದಿದ ಆ ಹಾಳೆ ನನಗೆ ನನ್ನ marks card ಗಿಂತ ಹೆಚ್ಚು value ಹೊಂದಿದೆ ಎಂಬ ನಂಬಿಕೆ.
ಎಲ್ಲರಿಗೂ job ಸಿಕ್ಕಿತು. ಆದರೆ ಒಬ್ಬ ಅತ್ಯುತ್ತಮ ಶಿಕ್ಷಕಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದ ರೇಷ್ಮಾಳಿಗೆ ಸರಕಾರಿ ಉದ್ಯೋಗದ ಕನಸು ಕನಸಾಗಿಯೇ ಉಳಿಯಿತು. ಮನಸ್ಸಿಗೆ ತುಂಬಾ ವೇದನೆಯಾಯಿತು ನನಗೆ. ಕಡು ಬಡತನದ ಕುಟುಂಬಕ್ಕೆ ಆಧಾರವಾಗಬೇಕಿದ್ದ ರೇಷ್ಮಾ ಮನೆಗೆಲಸಕ್ಕಾಗಿ ಹೊರಟು ನಿಂತಾಗ ಸಂಕಟವಾಗಿ ಹೋಯಿತು. ವಿಧಿಲಿಖಿತಕ್ಕಾಗಿ ನಾನೂ ಪರಿತಪಿಸಿದೆ. ನೋವು ನಲಿವುಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದ ರೇಷ್ಮಾ ಸ್ವಲ್ಪ ಕಾಲದ ಮೇಲೆ ಮನೆಗೆಲಸ ಬಿಟ್ಟು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಆಯ್ಕೆಯಾದಳು. ಹೊನ್ನಾವರದ ಶ್ರೀಭಾರತಿ ಸಂಸ್ಥೆಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದಳು.
ಇದೀಗ ರೇಷ್ಮಾ ಲೋಪೀಸ್, ಶ್ರೀಮತಿ ರೇಷ್ಮಾ ಅಲೆಕ್ಷಿಯಸ್ ಪಿಂಟೋ ಆಗಿದ್ದಾಳೆ. ನಮ್ಮ ರೇಷ್ಮಾಳನ್ನು ಅತ್ಯಂತ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವ ಪತಿ Railway Department ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇಬ್ಬರು ಮುದ್ದಾದ ಮಕ್ಕಳು. ರೇಷ್ಮಾ Saint Mary’s KHPS Hubballi ಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ನಿಜವಾಗಿಯೂ ಅವಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪುಣ್ಯವಂತರು ಎಂಬುದರಲ್ಲಿ ಎರಡು ಮಾತಿಲ್ಲ.
ರೇಷ್ಮಾ ಇಂದಿಗೂ ಮಾಸದ ನೆನಪಾಗಿಯೇ ಇದ್ದಾಳೆ. ಅವಳು ನನ್ನ ನಿತ್ಯ ಪ್ರಾರ್ಥನೆಯ ಒಂದು ಭಾಗ. ಅದೇ ಸ್ನೇಹ, ಪ್ರೀತಿ, ಅಭಿಮಾನ ಇಂದಿಗೂ….. ದೇವರು ಕೊಟ್ಟ ಗೆಳತಿ ಅವಳು. ಮತ್ತೊಂದು ವಿಶೇಷ ಎಂದರೆ ನನ್ನ ಮಗಳು ಸನ್ನಿಧಿ ಮತ್ತು ರೇಷ್ಮಾಳ ಮಗ ಎಲ್ರಿಕ್ ಹುಟ್ಟಿದ ಹಬ್ಬ ಎರಡೂ ನವಂಬರ್ 28 ರಂದೇ. ಭಗವಾನ್ ಏಸು ನಮ್ಮ ರೇಷ್ಮಾಳನ್ನು ಸದಾ ಸುಖ ಸಂತೋಷದಲ್ಲೇ ಇಟ್ಟಿರಲಿ.
ಸಂತೋಷ ಎನ್ನುವುದು ಎಣಿಸುವ ಸಂಬಳದಲ್ಲಿ ಇಲ್ಲ. ಅದು ಸ್ನೇಹಿತರ ನೆನಪುಗಳಲ್ಲಿ ಇದೆ. ಹುದ್ದೆ, ಅಧಿಕಾರ, ಸೌಂದರ್ಯ, ಎಲ್ಲ ಕ್ಷಣಿಕ ಎಂಬುದು ವೇದಾಂತದ ಮಾತಲ್ಲ ಅದು ವಾಸ್ತವಿಕ. ನನ್ನ ಸ್ನೇಹಿತರ ನೆನಪುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವಾಗ ನಿಮ್ಮ ಸ್ನೇಹದ ಬುತ್ತಿಯೂ ತೆರೆದುಕೊಂಡರೆ ನನ್ನ ಅಕ್ಷರಗಳು ಧನ್ಯವಾಗುತ್ತವೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ರೇಷ್ಮಾ ಪಿಂಟೋ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ನಿಜ ಗುರು

ರೇಷ್ಮಾಳಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ