ರಾಜ, ರಾಯ ,ಸಿರಿವಂತನಿಗಿಂತ
ಸ್ಮರಿಸುವವನೆ ದೊಡ್ಡವ.
ಯಾವ ಕಾಮನೆಯು ಇಲ್ಲದ ಅವನು
ದೊಡ್ಡವರಲು ದೊಡ್ಡವ- ಕಬೀರ.

ರಾಜ, ರಾಯ, ಸಿರಿವಂತರಿಗಿಂತ ದೇವರ ಸ್ಮರಣೆ ಮಾಡುವವನೇ ದೊಡ್ಡವ. ಯಾವ ಆಸೆ ಆಕಾಂಕ್ಷೆಗಳಿಲ್ಲದ ಅವನು ದೊಡ್ಡವರಲ್ಲೂ ದೊಡ್ಡವ ಎಂಬುದು ಕಬೀರರ ಅಭಿಮತ.

ಹೃದಯ ಸಿರಿವಂತಿಕೆಗಿಂತ ದೊಡ್ಡ ಸಿರಿವಂತಿಕೆ ಇಲ್ಲ. ಆದರೆ ಹಣ ,ಆಭರಣ, ಆಸ್ತಿ ಇದುವೇ ಶ್ರೀಮಂತಿಕೆಯ ಸಂಕೇತ ಎಂದು ನಾವು ನಂಬಿದ್ದೇವೆ. ಶ್ರೀಮಂತಿಕೆಯ ಮದದಲ್ಲಿ ದೇವರನ್ನೇ ಮರೆಯುತ್ತೇವೆ. ಅವನೇ ಎಲ್ಲವನ್ನೂ ನೀಡಿದವನು ಎಂಬ ಅರಿವು ಮರೆಯಾಗಿ ಹೋದಂತೆ ವರ್ತಿಸುತ್ತೇವೆ. ಸಂಪತ್ತಿನ ಸಂಗ್ರಹದ ಆಸೆಯೇ ತುಂಬಿರುವ ಮನಕ್ಕೆ ದೇವನ ಸ್ಮರಣೆ ಮಾಡಲು ಸಮಯ ಇರುವುದಿಲ್ಲ. ಸಂಪತ್ತಿನ ಸ್ಮರಣೆಯಲ್ಲಿ ಕಾಲ ಕಳೆಯುವವರು ಆಪತ್ತನ್ನು ಆಹ್ವಾನಿಸುತ್ತಿರುತ್ತಾರೆ . ಆದರೆ ಅದು ಅವರಿಗೆ ಅರಿವಿಗೇ ಬರುವುದಿಲ್ಲ . ಯಾವಾಗ ಆಪತ್ತು ಎದುರಾಗುತ್ತದೆಯೋ ಆಗ ದೇವರ ನೆನಪಾಗುತ್ತದೆ. ಅವನಿಗೆ ಮೊರೆಹೋಗುತ್ತಾರೆ. ಆಗ ಅವರಿಗೆ ಸ್ಮರಣೆಯ ಮಹತ್ವ ತಿಳಿದು ಬರುತ್ತದೆ. ಯಾರು ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೇ ದೇವರನ್ನು ನಂಬಿ ಆತನ ಸ್ಮರಣೆಯಲ್ಲಿ ಕಾಲ ಕಳೆಯುತ್ತಾರೋ ಅವರು ನಿಜಕ್ಕೂ ದೊಡ್ಡವರಲ್ಲಿ ದೊಡ್ಡವರು ಎನ್ನುತ್ತಾರೆ ಸಂತ ಕಬೀರರು.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

ಇನ್ನಾದರೂ ದಡ್ಡತನ ಬಿಟ್ಟು ದೊಡ್ಡವರಾಗೋಣ
ಕವಿವಾಣಿಯೊಂದು ಹೇಳಿದ್ದು
ಹೀಗಿರು ಎಂದು………..
ಮನದ ಮಂದಿರದಲ್ಲಿ ನೆಲೆಸಿರಲಿ ಎಂದೆಂದು
ಘನ ತತ್ತ್ವ ಆದರ್ಶ ಒಳಿತಾದುದೆಲ್ಲ.

ನಿನ್ನದಲ್ಲದುದಕ್ಕೆ ಆಸೆಯದು ಒಳಿತಲ್ಲ. ಕನವರಿಸದಿರು ಅದಕೆ -ಭಾವಜೀವಿ.

ಡಾ. ರವೀಂದ್ರ ಭಟ್ಟ ಸೂರಿ