ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಭಾಸ್ಕರ ಶಾಸ್ತ್ರಿ ಮಂಚಿಕೇರಿ

ಹಾಗೆ ನೋಡಿದರೆ ಯಾರ ಕವಿತೆಗಳು ಯಾರಿಗೆ ಬೇಕು?! ಯಾರ ಲೇಖನಗಳನ್ನು ಯಾರು ಓದಬೇಕು?! ಬರೆಯದಿದ್ದರೂ ಜಗತ್ತು ನಡೆಯುತ್ತದೆ. ಓದದಿದ್ದರೂ ಜಗತ್ತು ನಡೆಯುತ್ತದೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಅವರವರ ಸಂತೋಷಕ್ಕಾಗಿ ಅವರವರು ಏನೇನೊ ಮಾಡುತ್ತಿರುತ್ತಾರೆ. ಒಬ್ಬರಿಗೆ ಇಷ್ಟವಾದದ್ದು ಇನ್ನೊಬ್ಬರಿಗೆ ಇಷ್ಟವಾಗಬೇಕೆಂದೇನೂ ಇಲ್ಲ. ಬರೆಯಲು ಹೊರಟ ನನಗೆ ಬರವಣಿಗೆಯ ಮೂಲಕವೇ ನೂರಾರು ಜನ ಸ್ನೇಹಿತರು ಜೊತೆಯಾಗಿದ್ದಾರೆ. ಕೆಲವರು ಎಷ್ಟೋ ಜನುಮದ ಸಂಬಂಧಿಗಳಂತೆ ನನ್ನನ್ನು ಅತ್ಯಂತ ಗೌರವಾದರಗಳಿಂದ ಆಧರಿಸಿದ್ದಾರೆ. ಅಂಥವರಲ್ಲೊಬ್ಬರು ಶ್ರೀಯುತ ಭಾಸ್ಕರ ಶಾಸ್ತ್ರಿ ಮಂಚಿಕೇರಿ.
ಯಲ್ಲಾಪುರದಿಂದ ನಾರಾಯಣ ಶೇರಗಾರ ಸರ್ ಪುಸ್ತಕ ಓದಿ ಫೋನಾಯಿಸಿದ ಮೇಲೆ ಅವರು ಸುಮ್ಮನೆ ಇರಲಿಲ್ಲ. ನನ್ನ ಪುಸ್ತಕಗಳನ್ನು ತರಿಸಿಕೊಂಡು ಓದಿ ಅದನ್ನು ಶ್ರೀಯುತ ಭಾಸ್ಕರ ಶಾಸ್ತ್ರಿಯವರಿಗೆ ಓದಬೇಕೆಂದು ಹಸ್ತಾಂತರಿಸಿದರಂತೆ. ಅವರು ಓದಿ ನನಗೊಂದಿನ ಮತ್ತೆ ಮಂಚಿಕೇರಿಯಿಂದ ಫೋನ್ ಬಂತು. ನಿಮ್ಮ ಹಂಗಾಮಿ ಬಿಡಾರದ ಸಂಗಾತಿಗಳು ಪುಸ್ತಕ ಓದಿದೆ…..ಅದೆಷ್ಟು ಚಂದ ಬರೆದಿದ್ದೀರಿ ಎಂದು ಶ್ಲಾಘಿಸಿದರು. ಸಹಜವಾಗಿ ಮನಸ್ಸು ಹಿಗ್ಗಿತು. ಒಂದು ಕಾಲಕ್ಕೆ ನನ್ನ ಪುಸ್ತಕವನ್ನು ಕೊಳ್ಳುವವರೇ ಇರಲಿಲ್ಲ. ಪುಸ್ತಕ ಬರೆದಿದ್ದೀಯಂತೆ ನನಗೊಂದು ಕೊಡು ಎಂದ ಕೆಲವರು ಬಾಯ್ಮಾತಿಗೂ ಹಣ ಕೊಡಲೆ ಎಂದು ಕೇಳುತ್ತಿರಲಿಲ್ಲ. ಮತ್ತೆ ಕೆಲವರು ಬೇರೆಯವರು ತೆಗೆದುಕೊಂಡ ಪುಸ್ತಕವನ್ನೇ ಓದಿ ಬಹಳ ಚೆನ್ನಾಗಿ ಬರೆದಿದ್ದೀರಿ ಎಂದರು. ಪುಸ್ತಕ ಮೇಳಕ್ಕೊಮ್ಮೆ ಹೋದಾಗ ಸಂಜೆಯಾದ ಮೇಲೆ ಸೋವಿಯಾಗುತ್ತದೆಯೇ?! ಎಂದು ಕೇಳಿದವರೂ ಉಂಟು. ಆದರೆ ಅವೇ ಪುಸ್ತಕಗಳು ನನಗೆ ಇಂದು ಅವಮಾನವನ್ನೂ ಮೀರಿದ ಅಭಿಮಾನ ಹುಟ್ಟಿಸಿವೆ. ಭಾಸ್ಕರ ಶಾಸ್ತ್ರಿಯವರು ಓದಿ ಅಭಿಮಾನಪೂರ್ವಕ ಮಾತುಗಳನ್ನಾಡುವಾಗ ಮನಸ್ಸು ತುಂಬಿ ಬಂತು.
‌‌‌‌‌ ಭಾಸ್ಕರ ಶಾಸ್ತ್ರಿಯವರು ಮೂಲತಃ ಕೃಷಿಕರು. ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಗೊಣಸರಮನೆಯಲ್ಲಿ ಅವರ ವಾಸ. ಹೀಗೊಮ್ಮೆ ಪರಿಚಯವಾದದ್ದೇ ಅವರು ನನ್ನನ್ನು ಮಂಚಿಕೇರಿಯ ವಸಂತ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬರಬೇಕೆಂದು ಕರೆಸಿಕೊಂಡೇ ಬಿಟ್ಟರು. ಅಲ್ಲಿ ಹೋದ ಮೇಲೆ ನನಗೆ ಅವರ ಸಂಪೂರ್ಣ ವ್ಯಕ್ತಿತ್ವದ ಅರಿವಾದದ್ದು.
ಭಾಸ್ಕರ ಶಾಸ್ತ್ರಿಯವರು ಮಂಚಿಕೇರಿಯಲ್ಲಿ ಪ್ರತಿವರ್ಷ ಸುಮಾರು15 ದಿನಗಳ ಮಕ್ಕಳ ಶಿಬಿರವನ್ನು ಆಯೋಜಿಸುತ್ತಿದ್ದರು. ಅದಕ್ಕೆ ನೀನಾಸಂ ಸಂಸ್ಥೆಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ ವಿಶೇಷ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿಸುತ್ತಿದ್ದರು. ಲಕ್ಷಕ್ಕೂ ಅಧಿಕ ವೇತನ ನೀಡಿ ನಾಡಿನ ವಿವಿಧ ಭಾಗಗಳಿಂದ ಸಾಧಕರನ್ನು ಕರೆಸಿ ಅವರಿಂದ ಆ ಭಾಗದ ಮಕ್ಕಳಿಗೆ ತರಬೇತಿ ಕೊಡಿಸುವ ಅವರ ನಿಸ್ವಾರ್ಥ ಸೇವಾ ಮನೋಭಾವ ನನ್ನನ್ನು ತೀರಾ ಆಕರ್ಷಿಸಿತು. ಅವರು ಯಾವುದೇ ರಾಜಕೀಯ ಪಕ್ಷದ ಮುಖಂಡರಲ್ಲ…ಆದರೆ ಮಕ್ಕಳಿಗಾಗಿ ಈ ಥರದ ಅದ್ದೂರಿ ಬೇಸಿಗೆ ಶಿಬಿರವನ್ನು ಆಯೋಜಿಸುವ ಅವರನ್ನು ನಾನು ಕೇಳಿದೆ…” ನಿಮಗೆ ಇದರಿಂದ ಏನು ಲಾಭ?!” ಅಂತ. ಆಗ ಅವರು ನೀಡಿದ ಉತ್ತರ ಅತ್ಯಂತ ಮಾರ್ಮಿಕವಾಗಿತ್ತು. ” ಸಂದೀಪ ಭಟ್ಟರೆ ನಾವು ಈ ಥರದ ಶಿಬಿರಗಳನ್ನು ಆಯೋಜಿಸದಿದ್ದರೆ ನಿಮ್ಮಂಥವರ ಪರಿಚಯವೇ ನಮಗಾಗುತ್ತಿರಲಿಲ್ಲ. ಅಲ್ಲದೇ ನಾವು ಧಾರ್ಮಿಕ ಕಾರ್ಯಗಳಿಗಾಗಿ, ವೈಯಕ್ತಿಕ ಮನರಂಜನೆಗಾಗಿ ಎಷ್ಟೋ ವ್ಯಯಿಸುತ್ತೇವೆ. ಆದರೆ ನಮ್ಮ ಮಕ್ಕಳಿಗಾಗಿ ಮಾಡುವ ಕೆಲಸ ನನಗೆ ದೇವರಿಗೆ ಮಾಡುವ ಯಜ್ಞ ಯಾಗಾದಿಗಳಿಗಿಂತ ಹೆಚ್ಚು ಖುಷಿ ಕೊಡುತ್ತದೆ” ಎಂದರು. ನಾನು ಅರೆಕ್ಷಣ ಅವಾಕ್ಕಾದೆ. ಕೈಯಿಂದ 25000 ರೂ ಹೋದರೂ ಚಿಂತೆಯಿಲ್ಲ ನಾನು ಇಂತಹ ಸಮಾಜಸೇವೆ ಮಾಡುತ್ತೇನೆ ಎನ್ನುವ ಸಹೃದಯಿಯೊಬ್ಬರನ್ನು ಇಂದು ನಿಮ್ಮ ಮುಂದೆ ಪರಿಚಯಿಸುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ.
ಭಾಸ್ಕರ ಶಾಸ್ತ್ರಿಯವರು ಗಿಡಗಳಿಗೆ ಕಸಿ ಕಟ್ಟುವುದರಲ್ಲಿ expert. ಅವರದ್ದೊಂದು ನರ್ಸರಿ ಕೂಡ ಇದೆ. ಎಲ್ಲಕ್ಕಿಂತ ಹೆಚ್ಚಿಗೆ ಅವರ ಸಜ್ಜನಿಕೆ ಅತ್ಯಂತ ಅಪರೂಪವಾದದ್ದು. ಹಾಡುವವರು,ಕವಿತೆ ಬರೆಯುವವರು, ಕಲಾವಿದರು, ವಾದ್ಯ ನುಡಿಸುವವರು, ಉಪನ್ಯಾಸಕರು ಸಿಗಬಹುದು ಆದರೆ ಅವರಿಗೆ ಪ್ರೋತ್ಸಾಹ ನೀಡುವವರೇ ಇಲ್ಲದೇ ಹೋದರೆ ಪ್ರತಿಭೆಗಳಿದ್ದೂ ಪ್ರಯೋಜನವಿಲ್ಲ. ಅಷ್ಟಲ್ಲದೇ ಪ್ರತಿಭೆಯೊಂದೇ ಇದ್ದು ಹೃದಯ ವೈಶಾಲ್ಯತೆ ಇಲ್ಲದೇ ಹೋದರೂ ಅದು ವ್ಯರ್ಥ. ಭಾಸ್ಕರ ಶಾಸ್ತ್ರಿಯವರು ನನ್ನ ಪರಮಾಪ್ತ ವ್ಯಕ್ತಿಯಾಗಿ ಉಳಿದುಕೊಂಡಿದ್ದಕ್ಕೆ ಅವರ ನಿಷ್ಕಲ್ಮಶ ಪ್ರೀತಿಯೇ ಕಾರಣ.
ನನ್ನ ಮಾತುಗಳನ್ನು ಕೇಳಿದಂದಿನಿಂದ ಅವರು ನನ್ನನ್ನು ಬಿಟ್ಟುಕೊಡಲೇ ಇಲ್ಲ. ಕುಂದರಗಿ ಶಾಲೆಯ ಸುವರ್ಣ ಮಹೋತ್ಸವಕ್ಕೆ ಮುಖ್ಯ ಉಪನ್ಯಾಸ ನೀಡಲು ನನ್ನನ್ನು ಕರೆಸಿಕೊಂಡರು. ಮಗ ಧ್ರುವ ನ ಚೌಲ ಸಂಸ್ಕಾರದ ದಿನವೂ ನನ್ನ ಮಾತುಗಳನ್ನು ಕೇಳ ಬಯಸಿ ನನ್ನನ್ನು ಕರೆಸಿಕೊಂಡರು. ನಮ್ಮ ಮನೆಗೆ ಬಂದು ನಮ್ಮ ಆತಿಥ್ಯವನ್ನೂ ಸ್ವೀಕರಿಸಿದರು. ಅವರು, ಅವರ ತಂದೆ, ತಾಯಿ, ಮಡದಿ, ಮಗಳು, ಹೆಣ್ಣು ಕೊಟ್ಟ ಮಾವ, ಅಕ್ಕ ಹೀಗೆ ಎಲ್ಲರೂ ಸಂಸ್ಕಾರ ಪೂರ್ಣರು. ತುಂಬಿದ ಕುಟುಂಬ ಅದು.
ಭಾಸ್ಕರ ಶಾಸ್ತ್ರಿಯವರು ಕ್ರಿಯಾಶೀಲರು. ಊರಿನಲ್ಲಿದ್ದುಕೊಂಡೇ ಸಾಧಿಸಬಹುದೆಂಬುದನ್ನು ತೋರಿಸಿಕೊಟ್ಟ ಉತ್ಸಾಹಿ ಯುವಕರು. ಶಾಲೆಯೆಂದರೆ ಅವರಿಗೆ ಅಪ್ಪಟ ಅಭಿಮಾನ. ತಮ್ಮೂರ ಶಾಲೆಗಾಗಿ ಅವರು ಮಾಡುವ ಕೆಲಸ ಅಪೂರ್ವವಾದದ್ದು.
‌‌‌‌‌‌‌ ಬೇರೆಯವರ ಬಗ್ಗೆ ಒಂದು ಮಾತಾಡುವಾಗಲೂ ಅವರಿಂದ ನನಗೇನು ಸಿಗುತ್ತದೆ?! ಎನ್ನುವ ಲೆಕ್ಕಾಚಾರವನ್ನೇ ಮನಸ್ಸಿನೊಳಗಿಟ್ಟುಕೊಂಡವರು ಬಹಳ ಮಂದಿ. ದೋಣಿ ದಾಟಿದ ಮೇಲೆ ಅಂಬಿಗನ ಹಂಗೇಕೆ?! ಎಂಬಂತೆ ನಮ್ಮಿಂದ ಉಪಕೃತರಾದವರು ಮತ್ತೆ ಉಪಕಾರ ಸ್ಮರಣೆ ಮಾಡುವುದಿರಲಿ. ಸ್ವಲ್ಪ ಕಾಲದ ಮೇಲೆ ತಿರುಗಿ ಬಿದ್ದರೂ ಬಿದ್ದಾರು.‌ ಆದರೆ ನನ್ನಂತಹ ಸಾಮಾನ್ಯನಲ್ಲೂ ಅಸಾಮಾನ್ಯವನ್ನು ಗುರುತಿಸಿ ಗೌರವಪೂರ್ವಕವಾಗಿ ನಡೆಸಿಕೊಂಡ ಭಾಸ್ಕರ ಶಾಸ್ತ್ರಿಯವರನ್ನು ನಾನೆಂದಿಗೂ ಮರೆಯಲಾರೆ. ಪುಸ್ತಕ ಓದಿ ಜೊತೆಯಾದವರು ನನ್ನ ಬದುಕಿಗೆ ಬಣ್ಣ ತುಂಬಿದವರು ಪುಸ್ತಕದಲ್ಲಿ ರಾರಾಜಿಸಬೇಕು. ಅವರ ಈ ನಗು ನನ್ನ ಬದುಕಿನ ಮೌಲ್ಯ ಹೆಚ್ಚಿಸಿದೆ ಎಂಬುದು ನಿಸ್ಸಂಶಯ. ಅವರು ನನ್ನ ಅಕ್ಷರಗಳ ಅಭಿಮಾನಿ ನಿಜ. ಆದರೆ ನಾನು ಅವರ ವ್ಯಕ್ತಿತ್ವದ ಅಭಿಮಾನಿ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಭಾಸ್ಕರ ಶಾಸ್ತ್ರಿಯವರಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ನಿಂದಕರು

ಭಾಸ್ಕರ ಶಾಸ್ತ್ರಿಯವರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ