ಕೆಡುಕನು ನಾ ಹುಡುಕುತ ಹೊರಟೆ
ಕೆಡುಕರಾರು ಸಿಗಲಿಲ್ಲ.
ನನ್ನಯ ಮನವನು ನಾನೇ ನೋಡೆ
ನನಗಿಂತ ಕೆಡುಕರಿಲ್ಲ- ಕಬೀರ.
ಕೆಡುಕು ಎನ್ನುವುದನ್ನು ಹೊರಗಡೆ ಹುಡುಕುವುದು ತರವಲ್ಲ. ಅದು ಅಲ್ಲೆಲ್ಲು ಸಿಗುವುದಿಲ್ಲ. ಬದಲಾಗಿ ನಮ್ಮ ಆತ್ಮಾವಲೋಕನವನ್ನು ಮಾಡಿಕೊಂಡರೆ ನಮ್ಮಷ್ಟು ಕೆಡುಕರು ಯಾರೂ ಇಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತದೆ ಎಂಬುದು ಕಬೀರರ ಅಭಿಮತ.
ನಾವು ಹೊರಗೆಲ್ಲ ಕೆಡುಕನ್ನು ಹುಡುಕುತ್ತೇವೆ. ಕೆಡುಕರನ್ನು ಗುರುತಿಸಿ ದೂರವಿಡುತ್ತೇವೆ. ಆದರೆ ನಮ್ಮೊಳಗಿರುವ ಕೆಡುಕನ್ನು ಕುರಿತು ನಾವು ಯೋಚಿಸುವುದೇ ಇಲ್ಲ. ನಾವು ಒಳ್ಳೆಯವರಾದರೆ ನಾಡೆಲ್ಲ ಒಳ್ಳೆಯದು ಎಂಬ ಮಾತನ್ನು ನಾವು ಲಕ್ಷಿಸುವುದೇ ಇಲ್ಲ. ಇದು ಸರಿಯಲ್ಲ . ನಾವು ಮೊದಲು ನಮ್ಮೊಳಗಿನ ಕೆಡುಕನ್ನು ದೂರ ಮಾಡಬೇಕು ಎಂಬುದು ಈ ದೋಹೆಯ ಆಶಯ .
ಕವಿವಾಣಿ ಯೊಂದು ಹೇಳಿದ್ದು ಅದನ್ನೇ …………………….
ಮೊದಲಾಗಿ ನೀ ಗೆಲ್ಲು ಪರಮ ಶತ್ರುಗಳನ್ನು
ಬದಲಾಗಬಹುದದುವು ನಿನ್ನ ಜೀವನವು.
ಕೆದಕದಿರು ಹೊರಗೆಲ್ಲಾ ಶತ್ರುವಿನಿರುವಿಕೆಗೆ
ಕದವ ತೆರೆ ನಿನ್ನರಿವ- ಭಾವಜೀವಿ.
✍️ ಡಾ.ರವೀಂದ್ರ ಭಟ್ಟ ಸೂರಿ