ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀಮತಿ ಚಂದ್ರಕಲಾ ಅನಿಲ ದೇಶಭಂಡಾರಿ
ನಮ್ಮ ಸುತ್ತಲಿನ ಜನ ಒಳ್ಳೆಯವರಿದ್ದಾಗ ಮಾತ್ರ ನಾವು ಒಳ್ಳೆಯ ಬದುಕನ್ನು ಸಾಗಿಸುವುದಕ್ಕೆ ಸಾಧ್ಯ. ಅದಕ್ಕೂ ಭಗವಂತನ ದಯ ಬೇಕು ಬಿಡಿ. ಅಲ್ಲದೇ ಹೋದರೆ ಆರಾಮಾಗಿ ಇದ್ದ ಜೀವನ ಸಂಕಟವನ್ನನುಭವಿಸುವಂತಾಗುವುದಕ್ಕೆ ಹೆಚ್ಚು ಹೊತ್ತು ಬೇಕಾಗುವುದೇ ಇಲ್ಲ. ನಮಗಾಗದೇ ಹೋದ ಕಾಲಕ್ಕೆ ಆ ಸ್ಥಳವನ್ನು ಬಿಟ್ಟು ಎದ್ದು ಹೊರಟು ಬಿಡಬೇಕು. ಹಾಗಂತ ಎಲ್ಲಾ ಸಂದರ್ಭಗಳಲ್ಲಿ ಇದು ಸಾಧ್ಯವಿಲ್ಲ ಎನ್ನುವುದೂ ನನಗೆ ಗೊತ್ತು. ನನ್ನ ಗೌರವಾದರದ ಚಂದ್ರಕಲಾ ಬಾಯೋರನ್ನು ನಿಮ್ಮ ಮುಂದೆ ಪರಿಚಯಿಸುವುದಕ್ಕಿಲ್ಲಿ ಕರೆತಂದಿದ್ದೇನೆ. ನನ್ನನ್ನು ಸರಕಾರಿ ಸೇವೆಗೆ ಹಾಜರು ಪಡಿಸಿಕೊಂಡ ಗರಡಿಬೈಲ ಶಾಲೆಯ ಕ್ರಿಯಾಶೀಲ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಅನಿಲ ದೇಶಭಂಡಾರಿ.
ಚಂದ್ರಕಲಾ ಬಾಯೋರ ಮನೆ ಇರುವುದು ಕುಮಟಾದಲ್ಲಿ. ಅವರ ತವರು ಮನೆ ಕುಮಟಾ ತಾಲೂಕಿನ ಬಡಾಳ ಸಂತೇಗುಳಿ ಸಮೀಪದ ಹರವಳ್ಳಿ. ಅಪ್ಪನ ಮನೆಯ ಸಮೀಪದ ತಾನು ಕಲಿತ ಶಾಲೆಯಲ್ಲಿಯೇ ಸತತ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಂದ್ರಕಲಾ ಬಾಯೋರು ನನ್ನ ಪಾಲಿಗೆ ಒಬ್ಬ ಒಳ್ಳೆಯ ಸಹೋದರಿ, ಸ್ನೇಹಿತೆ, ಸಹೋದ್ಯೋಗಿ, ಹೆಡ್ಡಕ್ಕೋರು? ಎಲ್ಲಾ…….
ನನಗೆ ಸರಕಾರಿ ಸೇವೆಗೆ ಸೇರುವಾಗ 20 ವರ್ಷ 10 ತಿಂಗಳು. ನಾನು ನಮ್ಮ ಅಣ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರಡಿಬೈಲ ಅರಸಿಕೊಂಡು ಹೋಗಿ ಅಂಗಳದಲ್ಲಿ ಗಾಡಿ ನಿಲ್ಲಿಸಿದಾಗ ನಮ್ಮನ್ನು ಅತ್ಯಂತ ಸಂತೋಷದಿಂದ ನಗುನಗುತ್ತಾ ಬರಮಾಡಿಕೊಂಡ ಪ್ರಥಮ ವ್ಯಕ್ತಿ ಚಂದ್ರಕಲಾ ಬಾಯೋರು. Order copy ತೆಗೆದುಕೊಂಡು ಔಪಚಾರಿಕ ಪರಿಚಯ ಮಾಡಿಕೊಂಡ ಚಂದ್ರಕಲಾ ಬಾಯೋರು ಅದೂ ಇದೂ ಮಾತನಾಡುತ್ತಾ ಸ್ವಲ್ಪ ಸಮಯದ ನಂತರ ನಮ್ಮಣ್ಣನ ಹತ್ತಿರ serious ಆಗಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು ಹೇಳಿದರು.? ನಮ್ಮಣ್ಣ ನಾನಲ್ಲ ನಮ್ಮ ತಮ್ಮ ಎಂದು ನನ್ನತ್ತ ಕೈ ತೋರಿದರು. ಆವಾಗ ಚಂದ್ರಕಲಾ ಬಾಯೋರು ನೀಡಿದ expression ನೆನೆಸಿಕೊಂಡರೆ ನನಗೀಗಲೂ ನಗು ಬರುತ್ತದೆ. ? ಅವರಿಗೂ ನಗು ಬಂತು. ಅಂತೂ ಮೊದಲ ಬಾರಿಗೆ ಶಾಲೆ ನೋಡಿದಾಗ ನನಗಾದ ಖುಷಿ ಅಪಾರ. ಸಹ್ಯಾದ್ರಿ ತಪ್ಪಲಿನ ಮಧ್ಯೆ ಕಂಗೊಳಿಸುವ ಗರಡಿಬೈಲ ಶಾಲೆ ನನಗೆ ಮೊದಲ ನೋಟಕ್ಕೆ ಹಿಡಿಸಿ ಹೋಯ್ತು. ಆದರೆ ಮೂರೂ ಜನ ಅಕ್ಕೋರು ನಾನೊಬ್ಬ ಮಾಸ್ತರ ಅನ್ನುವುದು ಸ್ವಲ್ಪಮಟ್ಟಿಗೆ ಬೇಸರ ತಂತು. ಮತ್ಯಾಕೂ ಅಲ್ಲ. ಮಾತನಾಡುವುದಕ್ಕೆ ಹಿರಿಯಣ್ಣನಂತಿದ್ದ ಒಬ್ಬ ಮಾಸ್ತರರು ಇದ್ದರೆ ಚೆನ್ನ ಎಂಬ ಆಕಾಂಕ್ಷೆ ನನ್ನದಾಗಿತ್ತು.
ಮಾರನೆಯ ದಿನದಿಂದ ನನ್ನ ನಿಜವಾದ duty ಪ್ರಾರಂಭ. ನಾನು ಮಾರ್ಚದಲ್ಲಿ ಶಾಲೆಗೆ ಹೋಗಿದ್ದರಿಂದ ಬಹುತೇಕ ಪಾಠ ಪ್ರವಚನಗಳೆಲ್ಲ ಮುಕ್ತಾಯವಾಗಿದ್ದವು. ಚಂದ್ರಕಲಾ ಬಾಯೋರು ನನ್ನ ಹತ್ತಿರ ನೀವು ಏಳನೇ class ಗೆ ಹೋಗಿ ಆ ಮಕ್ಕಳು ನಿಮಗೆ ಮುಂದೆ ಸಿಗುವುದಿಲ್ಲ ಎಂದು ನನ್ನನ್ನು ರಂಗಸ್ಥಳಕ್ಕೆ ಕಳುಹಿಸಿದರು?. ಶಾಲೆಯಲ್ಲಿ ಕೋಣೆಯ ಕೊರತೆ ಇದ್ದುದರಿಂದ ನಾವು ಮಕ್ಕಳು Full air condition ಇರುವ ಸಭಾಂಗಣ ಸೇರಿದೆವು. ? ಶಾಲೆಯಲ್ಲಿ ಒಂದು ದೊಡ್ಡ ಹಾಲ್ ಇರುವುದಾಗಿಯೂ ಮುಂದಿನ ಜೂನ್ ದಲ್ಲಿ ಅಲ್ಲಿ ಪಾರ್ಟಿಶನ್ ವ್ಯವಸ್ಥೆ ಮಾಡೋಣ ಎಂದು ಚಂದ್ರಕಲಾ ಬಾಯೋರು ಭರವಸೆ ನೀಡಿದರು. ಹೊಸದಾಗಿ ಸೇವೆಗೆ ಸೇರಿದ ನನಗೆ ಗದ್ದೆಯ ಬಯಲಿನಲ್ಲಿ ತರಗತಿ ನಡೆಸಿ ಎಂದರೂ ಚಿಂತೆಯಿರಲಿಲ್ಲ.
ಗರಡಿಬೈಲ ಶಾಲೆಯ ಕೋಣೆಯ ಗೋಡೆಯ ಮೇಲೆ ದೊಡ್ಡ ದೊಡ್ಡ ಆಕಾರಗಳಲ್ಲಿ ಮದರ್ ಥೆರೆಸಾ, ಸ್ವಾಮಿ ವಿವೇಕಾನಂದ, ಚೈತನ್ಯ, ರಾಷ್ಟ್ರಪಿತ ಗಾಂಧೀಜಿ ಮುಂತಾದವರ ಚಿತ್ರ ಬಿಡಿಸಲಾಗಿತ್ತು. ನಾನು ಇದನ್ಯಾರೋ ಅದ್ಭುತ ಚಿತ್ರಕಾರರರನ್ನು ಕರೆಸಿ ಬಿಡಿಸಲಾಗಿದೆ ಎಂದು ಭಾವಿಸಿದ್ದೆ. ಕೊನೆಗೆ ವಿಚಾರಿಸಲಾಗಿ ಅದನ್ನು ನಮ್ಮ ಚಂದ್ರಕಲಾ ಬಾಯೋರು ತಮ್ಮ ಬಿಡುವಿನ ಅವಧಿಯಲ್ಲಿ ಬಿಡಿಸಿದ್ದೆಂದು ತಿಳಿದು ಆಶ್ಚರ್ಯವಾಗಿ ಹೋಯ್ತು. ಅವರು ಒಬ್ಬ ಅತ್ಯುತ್ತಮ ಶಿಕ್ಷಕಿಯಾಗಿ ಕೆಲಸ ಮಾಡುವುದಷ್ಟೇ ಅಲ್ಲದೇ ಇಡೀ ಶಾಲೆಯನ್ನು ತೂಗಿಸಿಕೊಂಡು ಹೋಗುವ ಒಳ್ಳೆಯ ಮನುಷ್ಯ ಎನ್ನುವುದು ನನಗೆ ಪಕ್ಕಾ ಆಗಿತ್ತು. ಧ್ವಜ ಕಟ್ಟೆಯ ಮುಂದೆ ಒಂದು ಭಾರತ ನಕಾಶೆ ಬಿಡಿಸಿ ಅದರ ಅಂಚಿಗೆ ರಾಗಿ ಬಿತ್ತಿ ಹಸಿರುಗೊಳಿಸಿದ್ದರು. ಶಾಲೆಯ ಪರಿಸರವಂತೂ ಅತ್ಯಾಕರ್ಷಕವಾಗಿ ಕಂಗೊಳಿಸುತ್ತಿತ್ತು.
ನಾನು ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹಾಲ್ಟಿಂಗ್ ಬಸ್ ಹತ್ತಿ ಪ್ರಯಾಣ ಮಾಡುತ್ತಿದ್ದೆ. ಚಂದಾವರದಲ್ಲಿ ಇಳಿದು ಮತ್ತೆ ಉಳ್ಳೂರಮಠ ಎಂಬ ಬಸ್ ಹತ್ತಬೇಕಿತ್ತು. ಸ್ವಲ್ಪ ಸಮಯ ವ್ಯತ್ಯಾಸ ಆದರೂ ಸುಮಾರು 3 ಕಿ.ಮೀ ನಷ್ಟು ನಡೆಯಬೇಕು. ಹೀಗಾಗಿ ನಾನು ಬಹುತೇಕ ಮುಂಜಾನೆ 7.30 ರಿಂದ 7.45 ರೊಳಗೆ ಗರಡಿಬೈಲ ಶಾಲೆಗೆ ಹಾಜರ್. ನನ್ನ ಪ್ರಾರಂಭದ ದಿನಗಳಲ್ಲಿ ನನಗೆ ಸಂಪೂರ್ಣ ಮಾರ್ಗದರ್ಶನ ಮಾಡುತ್ತಾ ನನ್ನನ್ನು ಸ್ವಂತ ತಮ್ಮನಂತೆ ಚಂದ್ರಕಲಾ ಬಾಯೋರು ನೋಡಿಕೊಳ್ಳುತ್ತಿದ್ದರು. ತಾನು ಸೀನಿಯರ್….. ಇವನು ಸಣ್ಣ ಪೋರ…ಎಂಬ ದರ್ಪವನ್ನು ಅವರು ಎಂದೂ ತೋರದ್ದಿಲ್ಲ. ಇಡೀ ದಿನ ತಮಾಷೆ, ನಗು, ಚಟುವಟಿಕೆಗಳಲ್ಲಿ ನಮ್ಮ ದಿನ ಸಾಗುತ್ತಿತ್ತು.
ಕೊಟ್ಟ ಮಾತಿನಂತೆ ಚಂದ್ರಕಲಾ ಬಾಯೋರು partition ವ್ಯವಸ್ಥೆ ಮಾಡಿದರು. ಈಚೆಗೆ ನಾನು. ಆಚೆಗೆ ಅವರು. ಮೊದಲೇ ನನ್ನ ಬಾಯಿ ದೊಡ್ಡ. ಹೇಗೆ ಸಹಿಸಿಕೊಂಡರೋ ದೇವರಿಗೇ ಗೊತ್ತು. ನಾನು ಒಂದಿಷ್ಟು ಹೊತ್ತು ಕಲಿಸಿ ಆಯಾಸಗೊಂಡು ಕುಳಿತ ಮೇಲೆ ಚಂದ್ರಕಲಾ ಬಾಯೋರ ಪಾಠ ಶುರು. ಪಾಪ ಒಂದು ದಿನವೂ ನೀವು ಸಣ್ಣಗೆ ಕಲಿಸಿ…..ನಾನೂ ಕಲಿಸಬೇಕು ನೀವೊಬ್ಬರೇ ಅಲ್ಲ….ಇಂತಹ ಕೊಂಕು ಮಾತುಗಳನ್ನು ಆಡಲೇ ಇಲ್ಲ ಅವರು.
ಚಂದ್ರಕಲಾ ಬಾಯೋರ ಮನೆಯವರು…. ಶ್ರೀ ಅನಿಲ ದೇಶಭಂಡಾರಿ ಅತ್ಯುತ್ತಮ ಸಂಪನ್ಮೂಲ ಶಿಕ್ಷಕರು. ಆ ಕಾಲಕ್ಕೆ ಅವರ ಶಾಲೆಗೂ ನಮ್ಮ ಶಾಲೆಗೂ ಪ್ರತಿಭಾ ಕಾರಂಜಿಯಲ್ಲಿ ಆರೋಗ್ಯಕರ ಸ್ಪರ್ಧೆ. ಚಂದ್ರಕಲಾ ಬಾಯೋರ ನೇತೃತ್ವದಲ್ಲಿ ನಮ್ಮದು ಅಮೋಘ ಪ್ರದರ್ಶನ. ನಮ್ಮ ಮಕ್ಕಳು ಅತಿ ಹೆಚ್ಚಿನ ಸ್ಪರ್ಧೆಗಳಲ್ಲಿ ಬಹುಮಾನ ತರುತ್ತಿದ್ದರು.
ಚಂದ್ರಕಲಾ ಬಾಯೋರು ಹೋದ ಕಾಲದಿಂದಲೂ ನೀವು ಇಲ್ಲಿ ಸಲ್ಲುವವರಲ್ಲ…..ನೀವು ಎಲ್ಲೋ ಇರಬೇಕಾದವರು ಆದಷ್ಟು ಬೇಗ ಇಲ್ಲಿಂದ ಹೊರಟು ಹೋಗಿ ಎನ್ನುತ್ತಿದ್ದರು.? ಅವರು serious ಆಗಿ ಹೇಳುತ್ತಾರೋ…… ತಮಾಷೆಗೆ ಹೇಳುತ್ತಾರೋ ನನಗೆ ಗೊತ್ತೇ ಆಗುತ್ತಿರಲಿಲ್ಲ. ಯಾವುದೇ ಕೆಲಸ ಮಾಡಲಿ ಇದು ತಾನು ಮಾಡಿದ್ದು ಎನ್ನುವವರಲ್ಲ ಅವರು. ಇದು ಎಲ್ರೂ ಸೇರಿ ಮಾಡಿದ್ದು ಎನ್ನುತ್ತಿದ್ದರು.
ಚಂದ್ರಕಲಾ ಬಾಯೋರು ಮತ್ತು ಅನಿಲ ಸರ್ ದಾಂಪತ್ಯದಲ್ಲಿ ಮದುವೆಯಾಗಿ ಎಂಟತ್ತು ವರ್ಷ ಕಳೆದರೂ ಮಕ್ಕಳ ಭಾಗ್ಯ ದೊರೆತಿರಲಿಲ್ಲ. ಅಪರೂಪಕ್ಕೆ ಊರಿನಲ್ಲಿ ಯಾರಾದರೂ ಛೇಡಿಸಿದರೆ ಮಾತ್ರ ಚಂದ್ರಕಲಾ ಬಾಯೋರು ಬಹಳ ಬೇಸರದಿಂದ ಇರುತ್ತಿದ್ದರು. ಸ್ವಂತ ಸಹೋದರಿಯಂತಿದ್ದ ಚಂದ್ರಕಲಾ ಬಾಯೋರಿಗೆ ಸಂಕಷ್ಟ ಚತುರ್ಥಿ ವ್ರತ ಮಾಡಿ….. ಒಳ್ಳೆಯದಾಗುತ್ತದೆ….. ಎಂದು ನಾನು ಸಲಹೆ ನೀಡಿದ್ದೆ. ಇಡಗುಂಜಿ ಮಹಾಗಣಪತಿ ಅವರಿಗೆ ಮುದ್ದಾದ ಮಗಳನ್ನು ನೀಡಿ ಹರಸಿದ. ಅನಿಲ ಸರ್ ಭವ್ಯವಾದ ಮನೆಯನ್ನು ಕಟ್ಟಿಸಿದರು. ಇಂದು ಅವರ ಸಂಕಷ್ಟಗಳೆಲ್ಲ ದೂರವಾಗಿ ಸುಖ ಸಂತೋಷದಿಂದ ಅವರು ಬಾಳ್ವೆ ಮಾಡುತ್ತಾರೆ.
ನನ್ನನ್ನು ಮೊದಲ ದಿನ ನಗುನಗುತ್ತಾ ಸ್ವಾಗತಿಸಿದ್ದ ಚಂದ್ರಕಲಾ ಬಾಯೋರು……ನಾನು ಶಾಲೆಯಿಂದ ವರ್ಗಾವಣೆಗೊಂಡು ಹೊರಡುವಾಗ ಸ್ಥಿತಪ್ರಜ್ಞರಂತೆ ಗೇಟಿನವರೆಗೂ ಬಂದು ಬೀಳ್ಕೊಟ್ಟರು. ಆದಷ್ಟು ಬೇಗ ಇಲ್ಲಿಂದ ಹೊರಟುಹೋಗಿ ಎಂದು ನೂರಾರು ಬಾರಿ ಹೇಳುತ್ತಿದ್ದ ಚಂದ್ರಕಲಾ ಬಾಯೋರು ಅವತ್ತಿನಿಂದ ಇವತ್ತಿನವರೆಗೂ ನನ್ನನ್ನು ಹರಸುತ್ತ ನನ್ನ ಜೊತೆಗೆ ಇದ್ದಾರೆ.
ಬಹಳ ವರ್ಷಗಳು ಸಂದ ಮೇಲೆ ನಾನು ಶಾಲೆಗೆ ಆಕಸ್ಮಿಕವಾಗಿ ಹೋದಾಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ. ನನ್ನ ಪುಸ್ತಕಗಳನ್ನು ತರಿಸಿಕೊಂಡು ನಮ್ಮ ಸಂದೀಪ ಸರ್ ಬರೆದ ಪುಸ್ತಕ ಎಂದು ವಿದ್ಯಾರ್ಥಿಗಳಿಗೆ ಅಭಿಮಾನದಿಂದ ಹಂಚಿದರು.
ಮಕ್ಕಳನ್ನು ಅತ್ಯಂತ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುವ , ಹಾಡು, ಹಾಸ್ಯ, ಚಿತ್ರಕಲೆ, ನಾಟಕ, ನೃತ್ಯ, ಹೀಗೆ ಪ್ರತಿಯೊಂದರಲ್ಲೂ ಮಕ್ಕಳನ್ನು ತರಬೇತುಗೊಳಿಸಿ ತಾನು ಏನೂ ಅಲ್ಲವೆಂಬಂತೆ ಎಲೆ ಮರೆಯ ಕಾಯಿಯ ಹಾಗೆ ಇದ್ದುಬಿಡುವ ಇಂತಹ ಶಿಕ್ಷಕರಿಗೆ ನಿಜವಾಗಿ ಗೌರವ ಸಿಗಬೇಕು.
ನನ್ನ ಅಕ್ಷರಗಳ ಅಭಿಮಾನಿಯಾಗಿರುವ ಚಂದ್ರಕಲಾ ಬಾಯೋರು ಸದಾ ನಗು ನಗುತ್ತಿರಬೇಕು. ಅವರ ಸಹೃದಯತೆಗೆ ನನ್ನ ಅಕ್ಷರಗಳೇ ಸೋತು ಹೋದವೇನೋ ಎಂದು ನನಗನಿಸುತ್ತಿದೆ. ನಿಮ್ಮ ಬಗೆಗೊಂದಿಷ್ಟು ಬರೆಯಬೇಕು ಒಂದು photo ಕಳಿಸಿಕೊಡಿ ಎಂದರೆ ನಕ್ಕು ಸುಮ್ಮನಿದ್ದ ಅವರ photo ವನ್ನು ಅಂತರ್ಜಾಲದಿಂದ ಹುಡುಕಿ ತೆಗೆದು ನನ್ನ ಅಂತರಂಗದ ಅನಿಸಿಕೆಗಳನ್ನು ಬಿಚ್ಚಿಟ್ಟಿದ್ದೇನೆ. ಕ್ಷಮೆಯಿರಲಿ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಚಂದ್ರಕಲಾ ಬಾಯೋರಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಚಂದ್ರಕಲಾ ಬಾಯೋರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ