ಭಕ್ತಿಗು ವೇಷಕು ಅಂತರ ಬಹಳ
ಭೂಮ್ಯಾಕಾಶಗಳಂತೆ.
ಭಕ್ತನು ಗುರುವಿನ ಚರಣದಿ ಲೀನ.
ವೇಷಕೆ ಜನ ಸನ್ಮಾನ -ಕಬೀರ

ನಿಜವಾದ ಭಕ್ತಿಗೂ ವೇಷಕ್ಕೂ ಬಹಳ ಅಂತರವಿದೆ. ಅದು ಎಷ್ಟು ಎಂದರೆ ಭೂಮಿ ಆಕಾಶ ಗಳಷ್ಟು. ನಿಜವಾದ ಭಕ್ತನು ಗುರುವಿನ ಚರಣದಲ್ಲಿ ಲೀನವಾಗುತ್ತಾನೆ. ಆದರೆ ವೇಷಕ್ಕೆ ಅಲ್ಲಿ ಸ್ಥಾನ ವಿಲ್ಲದಿದ್ದರೂ ಜನರಿಂದ ಅದಕ್ಕೆ ಗೌರವ ಸಿಗುತ್ತದೆ. ನಿಜವಾದ ಭಕ್ತಿಗೂ ವೇಷಕ್ಕೂ ಇರುವ ಅಂತರವಿದು ಎಂಬುದು ಕಬೀರರ ಅಭಿಮತ.

ಭಕ್ತಿಯೆಂದರೆ ಅಲ್ಲಿ ಶ್ರದ್ಧೆ ಇರುತ್ತದೆ , ಪ್ರೀತಿ ಇರುತ್ತದೆ, ಸಮರ್ಪಣಾ ಮನೋಭಾವ ಇರುತ್ತದೆ ,ನಂಬಿಕೆ ಇರುತ್ತದೆ, ಪ್ರಾಮಾಣಿಕತೆ ಇರುತ್ತದೆ. ಹಾಗಾಗಿ ಆ ಭಕ್ತಿ ನಿಶ್ಚಿತವಾದ ಫಲ ಕೊಡುತ್ತದೆ. ನಂಬಿ ಕರೆದರೆ ಓ ಎಂಬ ಶಿವನು ಎಂಬಂತೆ ಆ ಭಕ್ತಿಯ ಹಿಂದಿನ ಶಕ್ತಿ ಅಂತಹದ್ದು. ಅದು ಯಶಸ್ಸಿನ ಹಾದಿ ಅಲ್ಲಿ ಸೋಲೆಂಬುದಿಲ್ಲ. ಹಾಗಾಗಿಯೇ ಭಕ್ತನು ಬಯಸಿದ ಗುರುಚರಣ, ಹರಿ ಕರುಣೆ ಸಿಗಬೇಕಾದರೆ ಅಲ್ಲಿ ಶುದ್ಧ ಭಕ್ತಿ ಇರಬೇಕು ಎಂಬುದನ್ನು ಈ ದೋಹೆ ಸುಂದರವಾಗಿ ಹೇಳುತ್ತದೆ .

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಭಕ್ತಿಗಿಂತ ವೇಷಕ್ಕೆ ಮಹತ್ವ ಹೆಚ್ಚುತ್ತಿದೆ. ತೋರಿಕೆಯ ಪ್ರೀತಿ, ಶ್ರದ್ಧೆ ,ಭಕ್ತಿ ಹೆಚ್ಚಾಗುತ್ತಿದೆ. ಇಂತಹ ವೇಷಕ್ಕೆ ಜನ ಮರುಳಾಗಬಹುದು. ಸನ್ಮಾನಿಸಬಹುದು ಆದರೆ ಗುರುವಿನ ಅನುಗ್ರಹ ಶ್ರೀಹರಿಯ ಕರುಣೆ ಇಂಥವರಿಗೆ ಸಿಗಲಾರದು. ಹಾಗಾಗಿ ವೇಷ ಬೇಡ ಭಕ್ತಿ ಇರಲಿ ಎಂಬುದು ಈ ದೋಹೆಯ ನೀತಿ.

RELATED ARTICLES  ಮಕ್ಕಳು ಕಲಿಯಬೇಕಾಗಿರುವ ಗುಣಗಳು

ಕವಿವಾಣಿಯೊಂದು ಭಕ್ತಿಯ ಮಹತ್ವವನ್ನು ಹೇಳಿದ್ದು ಹೀಗೆ….

ಕಲ್ಲಿನಲಿ ಕಾಷ್ಠದಲಿ ಲೋಹದಲಿ ಮಾಡಿದಾ
ಮೂರ್ತಿಯನು ಪೂಜಿಸುವೆ ಅದು ದೇವನೆಂದು.
ನಿನ್ನೆಲ್ಲ ಇಷ್ಟಾರ್ಥ ಸಿದ್ಧಿಪುದು ಅದು ನಿಜವು
ನಿಷ್ಠೆಯೇ ಕಾರಣವು – ಭಾವಜೀವಿ.

ಡಾ.ರವೀಂದ್ರ ಭಟ್ಟ ಸೂರಿ