ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಪ್ರಶಾಂತ ಮೂಡಲಮನೆ
ಆಹಾ! ಅರಳು ಹುರಿದಂತೆ ಮಾತನಾಡುವ ಮೋಡಿಗಾರ, ಬಹುಮುಖ ಪ್ರತಿಭಾ ಸಂಪನ್ನ, ನಾಡಿನ ಖ್ಯಾತ ನಿರೂಪಕ, ಜಿಲ್ಲಾ ಯುವ ಸಾಹಿತಿ ಪ್ರಶಸ್ತಿ ಪುರಸ್ಕೃತ, ಕ್ರಿಯಾಶೀಲ ಕನ್ನಡ ಪ್ರಾಧ್ಯಾಪಕ, ಹೊನ್ನಾವರ ತಾಲೂಕಾ ಸಾಹಿತ್ಯ ಪರಿಷತ್ತಿನ ಖಜಾಂಚಿ, ಕಲಾವಿದ, ಏನಲ್ಲ ಮತ್ತೆ…..ಎಲ್ಲಾ. ಅಪರೂಪದ ವ್ಯಕ್ತಿ, ಸಹೋದರ ಪ್ರಶಾಂತ ಮೂಡಲಮನೆ ನನ್ನ ಇಂದಿನ ಅಕ್ಷರ ಅತಿಥಿ.
ಪ್ರಶಾಂತ ಮೂಡಲಮನೆ ಈಗಾಗಲೇ ತನ್ನ ಹೆಜ್ಜೆ ಗುರುತನ್ನು ಮೂಡಿಸಿ ನಾಡಿನಾದ್ಯಂತ ಮೆಚ್ಚುಗೆ ಗಳಿಸಿದ ಪ್ರತಿಭಾ ಸಂಪನ್ನ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ವಂದೂರು ಅವನ ಹುಟ್ಟೂರು. ಮನೆಯಲ್ಲಿದ್ದುಕೊಂಡೇ ಇಂದು ಮನೆ ಮಾತಾದ ಪ್ರಶಾಂತ ಒಬ್ಬ ಮಾದರಿ ಯುವೋತ್ಸಾಹಿ. ಸಾವಿರ ಸಾವಿರ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿ ನಿರೂಪಣೆ ಎಂದರೇ ಪ್ರಶಾಂತ ಎನ್ನುವಷ್ಟು ಬೆಳೆದು ನಿಂತ ವಿನಯವಂತ.
ನನಗಿಂತ ಐದಾರು ವರ್ಷ ಚಿಕ್ಕವನಾದ ಪ್ರಶಾಂತ ಮತ್ತು ಆತನ ಅಣ್ಣ ರಾಮಚಂದ್ರ ಇಬ್ಬರೂ ಮೊದಲಿನಿಂದಲೂ ಸತ್ವಾತಿಶಯದಿಂದ ಬೆಳೆದು ಬಂದ ಮಕ್ಕಳು. ಅವರ ಭಾಷಾ ಸ್ಪಷ್ಟತೆ, ಶೈಲಿ, ಛಲ, ಸಾತ್ವಿಕ ಮನೋಭಾವ ಬೆಳೆವ ಸಿರಿ ಮೊಳಕೆಯಲ್ಲಿ ಎಂಬುದನ್ನು ಖಾತ್ರಿಪಡಿಸುವಂತಿತ್ತು. ಅಣ್ಣ ರಾಮಚಂದ್ರ ವೇದಾಧ್ಯಯನ ಮಾಡಿ ಮೈಸೂರು ಸೇರಿದ. ಅವನ ಮಂತ್ರೋಚ್ಛಾರಣೆ, ಶ್ಲೋಕ ಹೇಳುವ ಶೈಲಿ ಅನನ್ಯವಾದದ್ದು. ಪ್ರಶಾಂತ ತಾನು ಊರಿನಲ್ಲಿದ್ದೇ ಸಾಧಕನಾದ. ಹೀಗಾಗಿ ಅಣ್ಣ ತಮ್ಮಂದಿರಿಬ್ಬರೂ ನನಗೆ ಸ್ವಂತ ಸಹೋದರರಂತೆ.
ಪ್ರಶಾಂತ ಗದ್ದೆಯಲ್ಲಿ ಮಣ್ಣು ಹೊರುವುದಕ್ಕೂ ಸೈ, ಮೈಕ್ ಹಿಡಿದು ಮಾತಾಡುವುದಕ್ಕೂ ಸೈ. ಹೀಗಾಗಿ ಅವನು ಎಲ್ಲರಿಗೂ ಇಷ್ಟವಾಗುತ್ತಾನೆ. ಇತ್ತೀಚೆಗಂತೂ ಅವನು ಬೆಳೆದ ಪರಿ ಎಲ್ಲರನ್ನೂ ಹುಬ್ಬೇರಿಸಿದ್ದು ಸುಳ್ಳಲ್ಲ. ಎಲ್ಲಾ ರಂಗಗಳಲ್ಲೂ ತಾನು ರಾಜಕುಮಾರನಾಗಿ ಮೆರೆವ ಪ್ರಶಾಂತ ಎಂದಿಗೂ ತಲೆ ಮೇಲೆರಡು ಕೋಡು ಮೂಡಿಸಿಕೊಂಡವನಲ್ಲ. “ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು” ಎಂದು ತನ್ನ ತಾಯಿ ಯಾವಾಗಲೂ ಹೇಳುತ್ತಿರುತ್ತಾಳೆ ಎನ್ನುವ ಆತ ಗುರುಗಳಿಗೂ ಪ್ರೀತಿಯ ಶಿಷ್ಯೋತ್ತಮ.
ಪ್ರಶಾಂತ ಒಬ್ಬ ಆಶುಕವಿ. ಕುಳಿತಲ್ಲೆ ಅರ್ಥಪೂರ್ಣವಾಗಿ ಸಾಲು ಗೀಚಿ ಅದನ್ನು ಸೊಗಸಾಗಿ ಮಂಡಿಸುವ ಪರಿ ಆತನಿಗೆ ದೇವನಿತ್ತ ಕೌಶಲ್ಯ. ಎಂ.ಎ ಪದವೀಧರನಾದ ಪ್ರಶಾಂತ ಎಸ್.ಡಿ.ಎಂ. ಕಾಲೇಜು ಹೊನ್ನಾವರದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಾನೆ. ವಿದ್ಯಾರ್ಥಿಗಳ ಮನ ಗೆಲ್ಲುವ ಬೋಧನಾ ಸಾಮರ್ಥ್ಯ ಆತನದ್ದು.
ಪ್ರಶಾಂತನ ಮತ್ತು ನನ್ನ ಹವ್ಯಾಸಗಳು ಬಹುತೇಕ ಒಂದೇ ಆದರೂ ನಾವು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ವಾಹನಗಳಲ್ಲ.? ಹೀಗಾಗಿ ನಮ್ಮ ನಡುವೆ ಅಪಘಾತವಾಗುವ ಅವಕಾಶಗಳು ವಿರಳಾತಿ ವಿರಳ. ನಾವು ಜೊತೆಗೆ ಸಾಗುವ ಪಯಣಿಗರಾದುದರಿಂದ ಪ್ರಶಾಂತ ಮತ್ತು ನಾನು ಪರಸ್ಪರ ಚರ್ಚಿಸುತ್ತಾ, ಸ್ಪಂದಿಸುತ್ತಾ ಸ್ನೇಹಿತರಂತೆ ಒಂದೇ ದಿಕ್ಕಿನಲ್ಲಿ ಪಯಣಿಸುತ್ತೇವೆ. ಒಬ್ಬರನ್ನೊಬ್ಬರು ಗೌರವಿಸುವ ಮತ್ತು ಪ್ರೀತಿಸುವ ಸಂಸ್ಕಾರ ಅದು ನಮಗೆ ನಮ್ಮವರು ನೀಡಿದ ಪಿತ್ರಾರ್ಜಿತ ಆಸ್ತಿ.
ಪ್ರಶಾಂತನ ಮಾತುಗಳು ಅತ್ಯಂತ ಪ್ರಖರ ಮತ್ತು ಅಷ್ಟೇ ಅರ್ಥಪೂರ್ಣ. ಸಮಯೋಚಿತವಾಗಿ ಆತ ವಿಷಯವನ್ನು ಮಂಡಿಸಲೂ ಬಲ್ಲ. ಖಂಡಿಸಲೂ ಬಲ್ಲ. ನಮ್ಮ ಸಂದೇಶ ಮಂಟಪದ ಕಿರಿಯ ಸದಸ್ಯನಾದ ಆತ ನನ್ನ ಮಾತುಗಳನ್ನು ಒಂದೂ ಬಿಡದೇ ಖಂಡಿಸುವಾಗ ನನಗೆ ಮನಸ್ಸಿನೊಳಗೇ ಖುಷಿಯಾಗುತ್ತದೆ ಮತ್ತು ಹೊಸ ಹೊಸ ಆಯುಧಗಳನ್ನು ಹುಡುಕಲು ನನ್ನನ್ನು ಪ್ರೇರೇಪಿಸುತ್ತದೆ. ಮಂತ್ರಿ ಮಹೋದಯರ, ಜನನಾಯಕರ, ಅಧಿಕಾರಿ ವರ್ಗದವರ ಮೆಚ್ಚುಗೆಗೆ ಪಾತ್ರನಾದ ಪ್ರಶಾಂತ ಮುಂದೊಂದು ದಿನ ಆತನ ಶಾಲು ಫಲಕಗಳನ್ನು ಇರಿಸುವುದಕ್ಕೆ ಪ್ರತ್ಯೇಕ ಮನೆ ಕಟ್ಟಬೇಕಾಗಿ ಬರಬಹುದೆಂದರೂ ಅತಿಶಯೋಕ್ತಿಯಲ್ಲ.
ಪ್ರಶಾಂತ ಸಾಕ್ಷ್ಯಚಿತ್ರಗಳಲ್ಲಿ, ನಾಟಕಗಳಲ್ಲಿ ಅಭಿನಯಿಸಿ ನೋಡುಗರ ಮನಸೂರೆಗೊಂಡ ಕಲಾವಿದ. ವ್ಯಕ್ತಿಯೊಬ್ಬ ಎಷ್ಟೂ ರಂಗಗಳಲ್ಲಿ ತನ್ನ ಸಾಮರ್ಥ್ಯ ತೋರಬಲ್ಲ ಎಂಬುದಕ್ಕೆ ನಮ್ಮೂರ ಹಳ್ಳಿಯ ಹುಡುಗ ಪ್ರಶಾಂತ ಸ್ಪಷ್ಟ ಉದಾಹರಣೆ.
ಹಿರಿಯರನ್ನು, ತನಗೆ ಕಲಿಸಿದ ಗುರುಗಳನ್ನು ಆತ ವಿನಮ್ರವಾಗಿ ನೆನೆಸಿಕೊಳ್ಳುತ್ತಾನೆ. ಹಿರಿಯಣ್ಣನಂತಿರುವ ನಾನೂ ಏನಾದರೂ ಸಲಹೆ ಸೂಚನೆ ನೀಡಿದರೆ “ಸಂದೀಪಣ್ಣ ನೀ ಹೇಳದ್ದೂ ಹೌದೋ” ಎನ್ನುವನೇ ವಿನಹ ನನಗೆ ಹೇಳುವುದಕ್ಕೆ ಇವನ್ಯಾರು ಎನ್ನುವ ಧಾರ್ಷ್ಟ್ಯ ಅವನದ್ದಲ್ಲ.
ಉಪನ್ಯಾಸಕನಾಗಿಯೂ ಅನೇಕ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಂಡ ಪ್ರಶಾಂತ ನಿಜವಾಗಿಯೂ ರಾಜಾ ಮನುಷ್ಯ. ಸಹಜ ನಡೆ, ನುಡಿ, ಸರಳ ಸಜ್ಜನಿಕೆ ಅವನನ್ನು ಮತ್ತೂ ಎತ್ತರಕ್ಕೆ ಕೊಂಡೊಯ್ಯುತ್ತದೆನ್ನುವುದು ನಿಸ್ಸಂಶಯ.
ತಂದೆ, ತಾಯಿ, ಮಡದಿ, ಮುದ್ದಾದ ಮಗಳು ತೋಟ, ಮನೆ ಪ್ರಶಾಂತ ನಿಜಕ್ಕೂ ಯಾವ ಸಿರಿವಂತನಿಗೂ ಕಡಿಮೆಯಲ್ಲ. ಸಮಸ್ಯೆಗಳನ್ನು ದಿಟ್ಟವಾಗೆದುರಿಸುವ ನನ್ನಲ್ಲಿಲ್ಲದ ಧೈರ್ಯ ಅವನಿಗಿದೆ. ಸಂದೀಪಣ್ಣನ ಬಗ್ಗೆ ಹಿಂಬದಿಯಿಂದ ಒಂದು ಮಾತಾಡುವುದನ್ನೂ ಆತ ಸಹಿಸಲಾರ ಎಂಬುದು ನನಗೆ ಸ್ಪಷ್ಟ. ಅದಕ್ಕೇ ಆತ ನನಗೆ ಈ ಕ್ಷಣಕ್ಕೂ ಪ್ರೀತಿ.
ಸಂಭ್ರಮವಾಗುತ್ತದೆ ನನಗೆ. ನಮ್ಮ ಪ್ರಶಾಂತ, ಗಣೇಶ ಜೋಷಿ, ಮಂಜು ಗೌಡ, ಇಂತಹ ಯುವಕರ ಉತ್ಸಾಹ. ನಮ್ಮವರೆಲ್ಲರೂ ಗೆಲ್ಲಬೇಕು. ಗೆಲ್ಲುತ್ತಲೇ ಇರಬೇಕು. ವಯಸ್ಸಿನಲ್ಲಷ್ಟೇ ಹಿರಿಯನಾದರೂ ಅವರ ಸಾಧನೆಯ ವೇಗ ನನಗಿಂತ ಹಿರಿದು. ಪ್ರಶಾಂತನ ವಾಕ್ ಪ್ರವಾಹ ಕೊಚ್ಚಿಹೋಗುವ ಸುನಾಮಿಯಾಗದೆ ಶಾಂತವಾಹಿನಿಯಾಗಬೇಕೆಂಬ ಬಯಕೆ ನನ್ನದು. ಅವನಿಂದ ಮತ್ತಷ್ಟು ಇನ್ನಷ್ಟು ಸಮಾಜಮುಖಿ ಕೆಲಸಗಳಾಗಬೇಕು. ಆತ ತನ್ನೆಲ್ಲ ಸಾಮರ್ಥ್ಯಗಳಿಂದ ಜಗಮೆಚ್ಚುವ ಪೋರನಾಗಲಿ. ಪ್ರಖರ ಲೇಖನಿಯಿಂದ ಅಪ್ರತಿಮ ಲೇಖನ ಬರೆಯುವ ಪ್ರಶಾಂತನ ಅಭಿಮಾನಿ ಓದುಗ ನಾನು. ಅವನಿಗೆ ಅವನೇ ಸಾಟಿ.
ಹುಡುಗರೆಲ್ಲರೂ ಬ್ಯಾಟ್ ಬಾಲ್ ಹಿಡಿದು ಕ್ರಿಕೆಟ್ ಆಡುವ ಕಾಲಕ್ಕೇ ಅವರು ವಿಶ್ವಭಾರತಿ ವಿದ್ಯಾರ್ಥಿ ಬಳಗ ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ಊರಿನಲ್ಲಿ ಹೆಸರು ಮಾಡಿದರು. ಗಣೇಶ ಭಾಗವತ ಉಂಚಗೇರಿ, ವಿನಾಯಕ ಹೆಗಡೆ ಹೊಸಪಟ್ಟಣ- ನೀಲಕೋಡ, ವಿನಾಯಕ ಭಾಗವತ ನೀಲಕೋಡ ಹೀಗೆ ಒಳ್ಳೆಯ ಸ್ನೇಹಿತರ ಬಳಗವೂ ಪ್ರಶಾಂತನ ಅಭ್ಯುದಯಕ್ಕೆ ನಾಂದಿಯಾದದ್ದು ಸುಳ್ಳಲ್ಲ. ಒಂದು ಸಂಘಟನೆಯನ್ನು ಅಧ್ಯಕ್ಷ ಉಪಾಧ್ಯಕ್ಷ ಎಂಬ ಪಟ್ಟವಿಲ್ಲದೇ ಬೆಳೆಸಿದ ಪರಿ ಅಚ್ಚರಿಯಾದದ್ದು. ಆದರ್ಶವಾದದ್ದು.
ಪ್ರಶಾಂತನ ಪ್ರಖ್ಯಾತಿ ದಿಗ್ದಿಗಂತ ತಲುಪಲಿ. ಅವನ ಅಭಿಮಾನಿ ಬಳಗ ಬೆಳೆಯುತ್ತಲೇ ಇರಲಿ. ಮೂಡಲಮನೆಯು ಪ್ರಶಾಂತನಿಂದ ಹೆಮ್ಮೆ ಪಡುವಂತಾಗಲಿ. ಒಂದಾನೊಂದು ಊರಿನಲ್ಲಿ ಅವನಿದ್ದನು ಇವನಿದ್ದನು ಎನ್ನುವುದಕ್ಕಿಂತ ನನಗೆ ವಂದೂರಿನಲ್ಲಿ ಪ್ರಶಾಂತನೊಬ್ಬನಿದ್ದಾನೆ ಎನ್ನುವುದಕ್ಕೆ ಬಹಳ ಖುಷಿಯಾಗುತ್ತದೆ. ಅದೇ ಅರ್ಥಪೂರ್ಣ ಎಂಬುದನ್ನು ನಾನಾದರೂ ನಂಬಿದ್ದು. ಅದಕ್ಕಾಗಿಯೇ ಈ ಬರಹ ಮಾಲಿಕೆಯಲ್ಲಿ ನಮ್ಮ ಪ್ರಶಾಂತನಿಗೂ ಆದರದ ಸ್ಥಾನ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಪ್ರಶಾಂತನಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಪ್ರಶಾಂತನಿಗೆ ಸಂದೀಪನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ