ಜಗದ ಮೋಹ ಇರುವನಕ
ಭಕ್ತಿ ಮೊಳೆಯದಲ್ಲಿ
ಮೋಹವ ತ್ಯಜಿಸಿ ಹರಿಯನು ಭಜಿಸು
ಭಕ್ತಿ ಬೆಳೆವುದಲ್ಲಿ -ಕಬೀರ.
ಜಗದ ಮೋಹ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಭಕ್ತಿ ಮೊಳೆಯುವುದಿಲ್ಲ. ಮೋಹವನ್ನು ತ್ಯಜಿಸಿ ಹರಿಯನ್ನು ಭಜಿಸಲು ಪ್ರಾರಂಭಿಸಿದರೆ ಅಲ್ಲಿ ಭಕ್ತಿ ಬೆಳೆಯುತ್ತದೆ ಎಂದು ಕಬೀರರು ಈ ದೋಹೆಯಲ್ಲಿ ಹೇಳುತ್ತಾರೆ.
ಮೋಹದ ಬಲೆಯೇ ಅಂಥದ್ದು. ಅದರಲ್ಲಿ ಸಿಲುಕಿದರೆ ಉಳಿದುದರ ಬೆಲೆಯು ಅರಿವಿಗೆ ಬರುವುದಿಲ್ಲ. ಜಗದ ಮೋಹ ಅದರಲ್ಲೂ ಹೊನ್ನು-ಹೆಣ್ಣು- ಮಣ್ಣಿನ ಮೋಹಕ್ಕೆ ಸಿಲುಕಿದವರು ಅದರಿಂದ ಹೊರಬರುವುದು ಕಷ್ಟ ಸಾಧ್ಯ. ಎಷ್ಟು ಇದ್ದರೂ ಮತ್ತಷ್ಟು ಬೇಕೆಂಬಾಸೆ ಅಂತಿಮವಾಗಿ ಅವರ ಬದುಕನ್ನೇ ನಾಶ ಮಾಡುತ್ತದೆ. ಆದ್ದರಿಂದ ಮೋಹದ ಮೇಲಿನ ಭಕ್ತಿ ಬಿಟ್ಟು ಭಗವಂತನ ಮೇಲೆ ಭಕ್ತಿ ಇಟ್ಟು ಬದುಕಿ. ಭಗವಂತ ನಂಬಿದವರನ್ನು ಕೈಬಿಡುವುದಿಲ್ಲ ನಿಮ್ಮ ಬಾಳು ಬಂಗಾರವಾಗುತ್ತದೆ ಎಂಬುದು ಈ ದೋಹೆಯ ಭಾವಾರ್ಥ.
ಮೋಹ ಭಗವಂತನ ಮೇಲಿರಲಿ. ಮೋಹ ಕರ್ತವ್ಯದ ಮೇಲಿರಲಿ. ಮೋಹ ಈ ನೆಲ- ಜಲ -ನಾಡು -ನುಡಿಯ ಮೇಲಿರಲಿ ಹೆಣ್ಣು- ಹೊನ್ನು- ಮಣ್ಣಿನ ಮೇಲೆ ಬೇಡ ಎಂಬ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳೋಣ. ಅದರಂತೆ ನಮ್ಮ ನಡೆ ನುಡಿಯನ್ನು ರೂಪಿಸಿಕೊಳ್ಳೋಣ.
ಕವಿವಾಣಿ ಯೊಂದು ಅದನ್ನು ಹೇಳಿದ್ದು ಹೀಗೆ………………….
ದಾಹವೆಂಬುದು ಅದುವು ಹೆಚ್ಚುತ್ತ ಹೋಗುವುದು
ಮೋಹದಾ ವಸ್ತುಗಳು ಲಭಿಸಿದಾ ಹಾಗೆ
ಮೋಹಿಸಿದ ಹೆಣ್ಣಲ್ಲಿ- ಹೊನ್ನಲ್ಲಿ- ಮಣ್ಣಲ್ಲಿ
ಸಾಯಿಸುವ ಶಕ್ತಿಯಿದೆ- ಭಾವಜೀವಿ.
ಡಾ.ರವೀಂದ್ರ ಭಟ್ಟ ಸೂರಿ