ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀಮತಿ ಶಿಲ್ಪಾ ಮಹಾಬಲೇಶ್ವರ

ಒಬ್ಬೊಬ್ಬ ವ್ಯಕ್ತಿ ಒಂದೊಂದು ರೀತಿಯ ವೈಶಿಷ್ಟ್ಯ ಹೊಂದಿರುತ್ತಾನೆ. ಪ್ರತಿಯೊಬ್ಬರ ಸ್ವಭಾವಗಳೂ ವಿಭಿನ್ನ. ಅದಕ್ಕೇ ಅದನ್ನು ಸ್ವ-ಭಾವ ಎನ್ನುವುದು.? ಕೆಲವರು ಸೂಕ್ಷ್ಮದರ್ಶಕ ಹಿಡಿದುಕೊಂಡು ಬರೀ ದೋಷಗಳನ್ನೇ ಹುಡುಕುತ್ತಿರುತ್ತಾರೆ. ಒಂದೇ ಒಂದು ಅಂಕ ಕಡಿಮೆ ಬಿದ್ದರೂ ಅವರನ್ನು ಫೇಲ್ ಎಂದು ಘೋಷಿಸಿ ಬಿಡುತ್ತಾರೆ. ಪಾಸಾಗುವುದಕ್ಕೆ 100 ಕ್ಕೆ 30 ಅಂಕಗಳು ಬಿದ್ದರೂ ಸಾಕು.? ಎರಡೇ ರೀತಿಯ ಜನ ನನ್ನ ಪ್ರಕಾರ. ಒಬ್ಬರು ಭಾವನೆಗಳ ಜೊತೆಗೆ ಬದುಕುವವರು. ಮತ್ತೊಬ್ಬರು ಹಣ, ಆಸ್ತಿ, ಸೌಂದರ್ಯ, FD certificate, ಹೀಗೆ ವ್ಯವಹಾರವೇ ಪ್ರಧಾನವಾಗಿ ವ್ಯಾವಹಾರಿಕವಾಗಿ ಬದುಕುವವರು. ಹಾಗಂತ ಎರಡೂ ಮುಖ್ಯವೇ. ಆದರೆ ಯಾವುದಕ್ಕೆ ನಾವು ಹೆಚ್ಚು ಒತ್ತು ಕೊಡುತ್ತೇವೆ ಎಂಬುದರ ಆಧಾರದ ಮೇಲೆಯೇ ನಮಗೆ ನಮ್ಮ ಸ್ನೇಹಿತರು ಜೊತೆಯಾಗುತ್ತಾರೆ. ಭಾವನಾ ಜೀವಿಗಳು ಭಾವನಾತ್ಮಕವಾಗಿಯೇ ಸ್ಪಂದಿಸುತ್ತಾರೆ. ವ್ಯವಹಾರವಾದಿಗಳು ವ್ಯವಹಾರ ಕುದುರುವುದನ್ನೇ ಕಾಯುತ್ತಾರೆ. ಮುಕ್ತಾಯವಾದ ಮೇಲೆ no sentiment. ಶ್ರೀಮತಿ ಶಿಲ್ಪಾ ಮಹಾಬಲೇಶ್ವರ ನನ್ನ ಆತ್ಮೀಯ ಸ್ನೇಹಿತೆ. ಭಾವನೆಗಳನ್ನು ಗೌರವಿಸುವ ಶ್ರೇಷ್ಠ ವ್ಯಕ್ತಿ. ಶಿಲ್ಪಾಳ ಬಗ್ಗೆ ಬರೆಯುವುದೇ ಒಂದು ಖುಷಿಯ ಸಂಗತಿ.
ಸಾಗರದಲ್ಲಿ Accountant Assistant ಆಗಿರುವ ಶಿಲ್ಪಾ ನನ್ನ ಜೊತೆಗೆ ಅರೆಅಂಗಡಿ ಪಿ.ಯು ಕಾಲೇಜಿನಲ್ಲಿ ಓದಿದವಳು. ನನಗಿಂತ ಒಂದು batch junior ಆದ ಅವಳು ನನ್ನ ಪತ್ನಿ ಸರಸ್ವತಿಯ classmate. ಶಿಲ್ಪಾಳ ಪತಿ ಶ್ರೀ ಮಹಾಬಲೇಶ್ವರ ಹೆಗಡೆ ಸಿದ್ದಾಪುರದ horticulture department ನಲ್ಲಿ assistant director ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಾಸವಾಗಿರುವ ಶಿಲ್ಪಾಳ ತವರುಮನೆ ಕುಮಟಾ ತಾಲೂಕಿನ ಊರಕೇರಿ.
ಪಿ.ಯು.ಸಿ. ಓದುವ ಕಾಲಕ್ಕೆ ನಮ್ಮ ಜ್ಯೂನಿಯರ್ ಬ್ಯಾಚಿನಲ್ಲಿ ಎರಡೇ ಹೆಣ್ಣುಮಕ್ಕಳು commerce ಮಾಡಿದವರು. ಒಬ್ಬಳು ನನ್ನದೇ classmate ಪ್ರತಿಭಾ. ಮತ್ತೊಬ್ಬಳು ಶಿಲ್ಪ. ಆ ಸಮಯಕ್ಕೆ ಬಹುತೇಕರೆಲ್ಲರೂ arts ಮಾಡಿ ಅಕ್ಕೋರು ಮಾಸ್ತರರಾಗುವ ಪ್ರಯತ್ನದಲ್ಲಿದ್ದರೆ ಶಿಲ್ಪಾಳ ನಡೆ ವಿಭಿನ್ನವಾಗಿತ್ತು. ಚಿಟಪಟನೆ ಮಾತನಾಡುವ ಶಿಲ್ಪಾ…. ನಡೆಯುವುದೂ ಅದೇ ರೀತಿ. ಕಾಲೇಜಿನ ದಿನಗಳಲ್ಲಿ ಸೌಜನ್ಯ ಪೂರಿತವಾಗಿ ಮಾತನಾಡುವ ಶಿಲ್ಪಾಳ ಜೊತೆ ಎಣಿಸುವಷ್ಟೇ ಅಕ್ಷರಗಳನ್ನು ನಾನು ಮಾತನಾಡಿದ್ದು. ಯಾಕೆಂದರೆ ಬದುಕೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿರುವಾಗ ನಗುವುದಕ್ಕೂ ಖರ್ಚಿಗೆ ಕೊರತೆ ಆಗ. ಹೆಲ್ಮೇಟ್ ಹಾಕಿಕೊಂಡಾಗ ಹೇಗೆ ಎಡ ಬಲ ಕಾಣದೇ ಮುಂದೆ ಮಾತ್ರ ಕಾಣುವುದೋ ಹಾಗೆ ಅಭ್ಯಾಸ ಮತ್ತು ಅಂಕಗಳಿಕೆಯೊಂದೇ ಪರಮೋಚ್ಛ ಗುರಿ ನಮಗೆ.
ಭಾಷಣ, ಹಾಡು, ಪ್ರಬಂಧ, ಕವಿತೆ ಬರೆಯುವುದು ಇವುಗಳೆಲ್ಲ ತುಂಬಾ ಇಷ್ಟದ ಸಂಗತಿ ನನಗೆ. ಶಿಲ್ಪಾ ನನ್ನ ಅಪರೂಪದ ಅಭಿಮಾನಿ ಸ್ನೇಹಿತೆ. ಕೆಲವರು ಕಾಲೇಜು ಬಿಟ್ಟ ಮೇಲೆ ಮತ್ತೆ ಮಾತನಾಡಿಸುವುದಿಲ್ಲ. ಆದರೆ ಶಿಲ್ಪಾ ಮತ್ತು ಆಕೆಯ ತಮ್ಮ ಒಮ್ಮೆ ಕುಮಟಾದಲ್ಲಿ ನಾನು ಓದುವ ಸಮಯದಲ್ಲಿ ಅವರೇ ಹುಡುಕಿಕೊಂಡು ಬಂದು ಖುಷಿಯಿಂದ ಮಾತಾನಾಡಿಸಿ ಹೋದರು. ಕೆಲವರನ್ನು ನಾವೇ ಹೋಗಿ ಮಾತನಾಡಿಸಿದರೂ ಮಾತನಾಡಿಸುವ ಸೌಜನ್ಯವಿರುವುದಿಲ್ಲ. ಸಾಮಾನ್ಯನಾದ ನನ್ನನ್ನು ಅಕ್ಕ-ತಮ್ಮ ಬಂದು ಮಾತನಾಡಿಸುತ್ತಾರೆಂದರೆ ಇವರು ಎಷ್ಟು ಒಳ್ಳೆಯ ಜನ ಅಂತ ನಾನು ಲೆಕ್ಕ ಹಾಕಿದ್ದು. ಹಾಗೆ ಸಿಕ್ಕ ಶಿಲ್ಪಾ ಮತ್ತೆ ಸಿಗಲೇ ಇಲ್ಲ. ಈ…. ಸಿನಿಮಾಗಳಲ್ಲೆಲ್ಲ ಬರುವ ಹಾಗೆ ಸರಿಸುಮಾರು 18 ವರ್ಷಗಳ ನಂತರ ಮತ್ತೆ Facebook ಮುಖಾಂತರ ಕಾಣಿಸಿಕೊಂಡಳು.
ನನ್ನದು ಆಗ ಡಬ್ಬಾ ಡಕೋಟಾ ಮೊಬೈಲ್. Facebook, Wats app ಗಳಿಗೆಲ್ಲಾ ನಾನು ಎಷ್ಟೋ ಸಮಯದ ನಂತರ entry ಕೊಟ್ಟಿದ್ದು. ನನ್ನ ಚಿಕ್ಕ mobile ನಲ್ಲಿ ಶಿಲ್ಪಾಳ ಮುಖ ಕೂಡ ಸರಿಯಾಗಿ ಕಾಣುತ್ತಿರಲಿಲ್ಲ.?ಮಬ್ಬು ಮಬ್ಬಾದ ಮುಖ ಕಂಡು ನಮ್ಮ ಶಿಲ್ಪ ಇಷ್ಟು ಮಬ್ಬಾಗಿ ಹೋದಳಾ ಅಂತ ನಾನೆಣಿಸಿದ್ದು.? ಅವಳೇ ನಾನು ಶಿಲ್ಪಾ ಅಂದ ಮೇಲೆ ಇವಳು ನಮ್ಮ ಶಿಲ್ಪಾ ಅಂತ ಗುರುತು ಹತ್ತಿದ್ದು. ಹಾಗೆ ಎಷ್ಟೋ ವರ್ಷಗಳ ಮೇಲೆ ಭೇಟಿಯಾದ ಶಿಲ್ಪಾ ನನ್ನ ಪುಸ್ತಕಗಳನ್ನು ಓದಬೇಕೆಂಬ ಬಯಕೆಯಿಂದ ತರಿಸಿಕೊಂಡಳು. ಬಹಳ ಖುಷಿಯಾಯ್ತು. ಅವರಿಗೆ ಅವರ ಸ್ನೇಹಿತನೊಬ್ಬ ಲೇಖಕನಾಗಿ ಲೋಕ ಮುಖಕ್ಕೆ ಪರಿಚಯ ಆದ ಎನ್ನುವ ಖುಷಿಯಿದ್ದರೆ….ನಮಗೆ ನಮ್ಮವರು ಓದಿ ಅವರು ನೀಡುವ ಪ್ರತಿಕ್ರಿಯೆಗಳೇ ಪರಮಾನ್ನ. ಆಗ ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಲ್ಪಾ ಆ ಕಡೆಗೆ ಬಂದಾಗ ತಪ್ಪದೇ ಮನೆಗೆ ಬರುವಂತೆ ಆಹ್ವಾನಿಸಿದಳು.
ಒಂದೇ ವಯಸ್ಸಿನವರು, classmate ಗಳು ಬಹುತೇಕ ಹೇಗೆ ಎಂದರೆ….. ಅವರು ತಮ್ಮ ಜೀವನದ ಜೊತೆಗೆ ಇನ್ನೊಬ್ಬರ ಜೀವನವನ್ನು ಹೋಲಿಕೆ ಮಾಡಿಕೊಂಡು ಅವರ ಗಂಡ, ಹೆಂಡತಿ, ಮನೆ, ಅಧಿಕಾರ, ಆಸ್ತಿ, ಇವುಗಳ ಮೇಲೆ ಸ್ಪರ್ಧೆ ಮಾಡುತ್ತಾ ಒಳಗೊಳಗೇ ಉರಿದು ಬೂದಿಯಾಗಿ ಬಿಡುತ್ತಾರೆ. ಹಾಗೆ ನೋಡಿದರೆ ನಮ್ಮ ಸರಸ್ವತಿ ಹಾಗೂ ಶಿಲ್ಪಾಳ ಸ್ವಭಾವಗಳು ಸಂಕುಚಿತವಾದದ್ದಲ್ಲ. ನಾವು ಪರಸ್ಪರ ಗೌರವಿಸುವ ಮತ್ತು ಹಾರೈಸುವ ಗುಣದವರಾದರೆ ಅವರಿಂದ ನಮಗೂ ಅದೇ ಸಿಗುತ್ತದೆನ್ನುವವರು.
ನಾನೊಮ್ಮೆ ಶಿರಸಿಗೆ ನನ್ನ ಕಾರಿನ servicing ಗಾಗಿ ಹೋಗಿದ್ದೆ. ಯಾರಾದರೂ ಕರೆಯುತ್ತಾರೆಂದರೆ ಅವರ ಮನೆಗೆ ನೇರವಾಗಿ ಹೋಗಿ ನುಗ್ಗುವುದು ಸೌಜನ್ಯವಲ್ಲ. ಶಿಲ್ಪಾಳಿಗೆ office ಇರುವುದರಿಂದ ಅವಳಿಗೆ ತೊಂದರೆ ಕೊಡುವುದು ನನಗೆ ಇಷ್ಟವಿರಲಿಲ್ಲ. ಆದರೂ ಆತ್ಮೀಯಳಾದ ಶಿಲ್ಪಳನ್ನು ಶಿರಸಿಯವರೆಗೆ ಬಂದು ಮಾತನಾಡಿಸದೇ ಹೋಗುವುದು ಸರಿ ಕಾಣಲಿಲ್ಲ. ಫೋನಾಯಿಸಿದೆ. ನಾನು ಶಿರಸಿಗೆ ಬಂದ ವಿಷಯ ತಿಳಿಸಿದೆ. ಕೆಲವರು ಹೇಗೆ ಎಂದರೆ…… ಹತ್ತಿರಕ್ಕೆ ಬಂದರೆ ನನಗೆ ಆ ಕೆಲಸ, ಈ ಕೆಲಸ, ನೂರೆಂಟು ಕೆಲಸ, ಇಂದು ಜಗತ್ತೇ ನನ್ನ ತಲೆಯ ಮೇಲೆ ಬಿದ್ದು ಹೋಗಿದೆ… ಎಂಬಂತೆ ಸುಖಾ ಸುಮ್ಮನೆ ವ್ಯವಹರಿಸಿ ನಮ್ಮಿಂದ ಆದಷ್ಟು ದೂರ ಉಳಿಯುವ ಪ್ರಯತ್ನ ಮಾಡುತ್ತಾರೆ. ಆದರೆ ನಮ್ಮ ಶಿಲ್ಪಾ ಮಾತ್ರ ನಿನಗೆ ಆದ ತಕ್ಷಣ ನಾನು ಗಾಡಿ ತೆಗೆದುಕೊಂಡು showroom ಹತ್ತಿರವೇ ನಾನು ಬರುವುದಾಗಿಯೂ ನಮ್ಮ ಮನೆಗೇ ನೀನು ಊಟಕ್ಕೆ ಬರಬೇಕೆಂದು ಒತ್ತಾಯಿಸಿ ಕರೆದುಕೊಂಡು ಹೋಗಿಯೇ ಬಿಟ್ಟಳು.
ಶಿಲ್ಪಾಳನ್ನು ಬಹಳ ವರ್ಷಗಳ ನಂತರ ಪುನಃ ಭೇಟಿಯಾದುದು ಬಹಳ ಸಂತೋಷ ನೀಡಿತು. ಅವಳೂ ಅಷ್ಟೇ… ಎಷ್ಟೋ ವಿಷಯಗಳನ್ನು ಧಡಬಡನೇ ಸಿಕ್ಕ ಎರಡೇ ಗಂಟೆಯಲ್ಲಿ fast forward ನಲ್ಲಿ ಹೇಳಿ ಮುಗಿಸಿದಳು. ಶಿಲ್ಪಾಳ ತಂದೆಯವರ ಅಕಾಲಿಕ ನಿಧನ ವಿಷಯ ಕೇಳಿ ನನಗೆ ತುಂಬಾ ನೋವಾಯ್ತು. ತಾಯಿಯವರು ನನ್ನನ್ನು ಮನೆ ಮಗನಂತೆ ಅತ್ಯಂತ ಸಂತೋಷದಿಂದ ಮಾತನಾಡಿಸಿ ಊಟ ಬಡಿಸಿದರು. ನಾನು ಈವರೆಗೆ ಮಾಡಿದ ಊಟಗಳಲ್ಲಿ ಅನ್ನದ ಅಗುಳಗುಳಿಗೂ ವಾತ್ಸಲ್ಯದ ಸಿಹಿಯನ್ನೇ ಉಣಬಡಿಸಿದ ನನ್ನ ಜೀವನದ ಪರಮೋಚ್ಛ ಭೂರಿ ಭೋಜನ ಅದು. ಆತಿಥ್ಯವೆಂದರೆ ಹೀಗೆ ಎನ್ನುವುದನ್ನು ತೋರಿಸಿಕೊಟ್ಟಂತಿತ್ತು ಆ ಕ್ಷಣ. ಮನಸ್ಸು ತುಂಬಿ ಬಂತು. ಊಟಕ್ಕೆ ಎಲ್ಲಿ ಹೋಗಲಿ?! ಸತ್ಕಾರವೋ, ಮಧುವನವೋ, ಸಾಮ್ರಾಟವೋ ಎಂದು ಲೆಕ್ಕ ಹಾಕುತ್ತಿದ್ದವನಿಗೆ ಶಿಲ್ಪಾ ಬಡಿಸಿದ ಊಟದ ಬಿಲ್ ಬಹಳ ದುಬಾರಿಯಾಗಿತ್ತು.??.
ಶಿಲ್ಪಾಳ ಅಭಿಮಾನ ಪ್ರೀತಿ ಅದು ಅಕ್ಷರಗಳಿಗೆ ನಿಲುಕದ್ದು. ಬಹಳ ತಮಾಷೆ ಹಾಗೂ ಚಟುವಟಿಕೆಯ ಸ್ವಭಾವದವಳಾದ ಆಕೆಗೆ ಮನಮೆಚ್ಚಿದ ಪತಿ ಶ್ರೀ ಮಹಾಬಲೇಶ್ವರ ಹೆಗಡೆಯವರು ಸಾಥ್ ಕೊಡುತ್ತಾರೆ. ಒಬ್ಬ ಅತ್ಯುತ್ತಮ ಕೃಷಿ ಅಧಿಕಾರಿಯಾಗಿರುವ ಅವರು ಜನ ಸೇವೆಯೇ ಜನಾರ್ದನ ಸೇವೆ ಎನ್ನುವವರು. ಸ್ವರ್ಣವಲ್ಲಿ ಶ್ರೀಗಳಿಂದ ಸನ್ಮಾನಿತರಾದ ಈ ದಂಪತಿಗೆ ಒಬ್ಬನೇ ಮಗ. ಬಹಳ ಚೂಟಿ. ತಮ್ಮ ವಿದೇಶದಲ್ಲಿ ಉದ್ಯೋಗಿ. ಭವ್ಯವಾದ ಸ್ವಂತ ಮನೆಯನ್ನು ಮುಂದಾಗಿ ಕಟ್ಟಿಸಿ ಅಮ್ಮನ ಜೊತೆಗೆ ಇದ್ದಾಳೆ ಶಿಲ್ಪಾ. ಬಹಳ ಜವಾಬ್ದಾರಿಯುತ ಮನುಷ್ಯಳಾದ ಅವಳು ದೂರದಲ್ಲಿರುವ ತಮ್ಮನ ಜವಾಬ್ದಾರಿಯನ್ನೂ, ತಾನೇ ಮಗನಾಗಿ ನಿರ್ವಹಿಸುತ್ತಾಳೆ. ನೋವಿನಲ್ಲೂ ನಗುವವಳಾದ ಅವಳು ಒಬ್ಬ ಮಾದರಿ ಹೆಣ್ಣು ಮಗಳು. ಪ್ರಾಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಗಳಾದ ದಂಪತಿಗೆ ಇನ್ನೂ ಹೆಚ್ಚಿನ ಹುದ್ದೆ, ಸನ್ಮಾನ, ಗೌರವಗಳು ಸಿಗಲೆಂಬುದೇ ನನ್ನ ನಿತ್ಯ ಪ್ರಾರ್ಥನೆ.
ಬಿಟ್ಟು ಹೋಗುವುದಕ್ಕೆ ನೂರಾರು ಕಾರಣ ಸಿಗುತ್ತದೆ. ಇದ್ದು ಬದುಕುವುದಕ್ಕೆ ವಿಶಾಲ ಹೃದಯ ಬೇಕಾಗುತ್ತದೆ. ಶಿಲ್ಪಾಳ ಒಡನಾಟ ನಿಜಕ್ಕೂ ಬದುಕಿನ ದಿನಗಳನ್ನು ಬಣ್ಣವಾಗಿಸಿದೆ. ಬೇಸರಕ್ಕೆ ಸ್ನೇಹಿತರೇ ಮದ್ದು. ಸಂಶಯದ ಬಾಂಡಲಿಯಲ್ಲಿ ಬೇಯುವುದಕ್ಕಿಂತ ಭಾವನೆಗಳ ಜೊತೆಗೆ ಬದುಕುವುದು ವಿಶೇಷ. ನಮ್ಮೀರ್ವರಿಗೂ ನೆಚ್ಚಿನ ಸ್ನೇಹಿತೆ ಆಗಿರುವ ಶಿಲ್ಪಾ ಸದಾ ಚಿಟಪಟನೆ ನಡೆಯುತ್ತಾ ಪಟಪಟನೆ ಮಾತಾಡುವವಳೇ ಆಗಿರಬೇಕೆಂಬ ಬಯಕೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಶಿಲ್ಪಾಳಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಶ್ರೀಧರ ಸ್ವಾಮಿಗಳು ತಮ್ಮ ಪೂರ್ವಾಶ್ರಮದ ನೆನಪು ಮಾಡಿ ಹೇಳಿದ್ದೇನು ಗೊತ್ತಾ?

ಶಿಲ್ಪಾಳಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ