ದೇಹಧಾರಿ ಯಾರೇ ಇರಲಿ
ದಂಡವ ತೆರಬೇಕು.
ಅಜ್ಞಾನಿಯು ತೆರುವನು ರೋಧಿಸುತ.
ಜ್ಞಾನಿಯು ನಗುನಗುತಾ- ಕಬೀರ.

ದೇಹಧಾರಿ ಯಾರೇ ಆಗಿದ್ದರೂ ಕೂಡ ತಾನು ಮಾಡಿದ ತಪ್ಪಿಗೆ ದಂಡ ತೆರಲೇಬೇಕು. ಆದರೆ ದಂಡ ತೆರುವಾಗ ಜ್ಞಾನಿ ಮತ್ತು ಅಜ್ಞಾನಿಯಲ್ಲಿ ವ್ಯತ್ಯಾಸವಿಷ್ಟೇ ಜ್ಞಾನಿ ನಗುನಗುತ್ತಾ ದಂಡ ತೆತ್ತರೆ ಅಜ್ಞಾನಿ ಆದವನು ರೋಧಿಸುತ್ತಾ ದಂಡ ತೆರುತ್ತಾನೆ. ಎಂಬುದು ಈ ದೋಹೆಯ ಅರ್ಥ.

ತಪ್ಪು ಮಾಡದವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ತಪ್ಪು ಮಾಡಿದವರು ಅದಕ್ಕೆ ತಕ್ಕ ದಂಡ ತೆರಬೇಕಾದದ್ದು ಅಂದರೆ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸಬೇಕಾದದ್ದು ವಿಧಿ ನಿಯಮ. ಅದನ್ನು ಎಲ್ಲರೂ ಅನುಭವಿಸಲೇಬೇಕು. ಅದರಲ್ಲಿ ಯಾರಿಗೂ ವಿನಾಯಿತಿ ಸಿಗುವುದಿಲ್ಲ. ಆದರೆ ಈ ರೀತಿ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸುವಾಗ ಅಜ್ಞಾನಿ ರೋಧಿಸುತ್ತಾನೆ. ತನ್ನ ತಪ್ಪಿನ ಅರಿವಿಲ್ಲದೆ ತಾನು ಅನುಭವಿಸುತ್ತಿರುವ ಶಿಕ್ಷೆ ಇದು ಯಾತಕ್ಕಾಗಿ ? ಎಂದು ಮರುಗುತ್ತಾನೆ. ಭಗವಂತನನ್ನು ಹಳಿಯುತ್ತಾನೆ. ಆದರೆ ಕೊನೆಯವರೆಗೂ ಆತನಿಗೆ ತನ್ನ ತಪ್ಪಿನ ಅರಿವಾಗುವುದೇ ಇಲ್ಲ. ಆದರೆ ಜ್ಞಾನಿಗೆ ತನ್ನ ತಪ್ಪಿನ ಅರಿವು ಇರುವುದರಿಂದ ತಾನು ಅನುಭವಿಸುತ್ತಿರುವುದು ಶಿಕ್ಷೆಯಲ್ಲ ಅದು ತಪ್ಪಿಗೆ ತಕ್ಕ ಪ್ರಾಯಶ್ಚಿತ ಎಂದು ತಿಳಿದು ಸಂತೋಷದಿಂದ ಅದನ್ನು ಸ್ವೀಕರಿಸುತ್ತಾನೆ ಎಂಬುದು ಕಬೀರರ ಅಭಿಮತ.

RELATED ARTICLES  ತಮ್ಮದೆಂದು ಒಪ್ಪಿಕೊಂಡದನ್ನು ಕಾದುಕೊಳ್ಳಬೇಕು ಎಂದರು ಶ್ರೀಧರರು.

ಜೀವನದಲ್ಲಿ ಎದುರಾಗುವ ಕಷ್ಟ ನಷ್ಟಗಳನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಸಮುದ್ರದ ಅಲೆಗಳಂತೆ ಇವು ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ ಎಂಬ ಸತ್ಯವನ್ನು ನಾವು ಅರಿತರೆ ಬದುಕನ್ನು ನಾವು ಇಷ್ಟಪಡಲು ಸಾಧ್ಯವಾಗುತ್ತದೆ.

RELATED ARTICLES  ಮಗು ಮತ್ತು ಕೋಪ

ಇದನ್ನು ಕವಿವಾಣಿಯೊಂದು ಹೇಳಿದ್ದು ಹೀಗೆ…………….

ಕಷ್ಟ ನಷ್ಟಗಳೆಲ್ಲ ಸಹಜವದು ಜೀವನದಿ.
ಸ್ಪಷ್ಟವಿರಲದು ಸತ್ಯ ನಿನ್ನ ಮನದಿ.
ದೃಷ್ಟಿ ಬದಲಿಸಿ ನೀನು ಜೀವನವ ನೋಡಿದರೆ
ಇಷ್ಟಪಡುವೆಯೊ ಅದನು-ಭಾವಜೀವಿ.

ಡಾ.ರವೀಂದ್ರ ಭಟ್ಟ ಸೂರಿ