ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ವಿದ್ವಾನ್ ವಿಶ್ವೇಶ್ವರ ಭಟ್ಟ ಖರ್ವಾ
ನಮಗೆ ಹಾಡಲು ಅಷ್ಟಾಗಿ ಬರುವುದಿಲ್ಲ. ಆದರೆ ನಾವು ಒಳ್ಳೆಯ ಕೇಳುಗರು ಮಾತ್ರ. ಸಂಗೀತವೆಂದರೇ ನಮಗೆ ಅಭಿಮಾನ. ಅದರಲ್ಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಗಂಟೆಗಟ್ಟಲೆ ಹಾಕಿಕೊಂಡು ನಾವು ಆಸ್ವಾದಿಸುತ್ತೇವೆ. ಸಂಗೀತಗಾರರೆಂದರೆ ಅವರು ದೇವ ಸಮಾನರೆಂದೇ ನಾವು ಭಾವಿಸುತ್ತೇವೆ. ಯಾಕೆಂದರೆ ಗುರುಮುಖವಾಗಿ ಸಂಗೀತ ಕಲಿತ ಅನೇಕರನ್ನು ನಾನು ಗಮನಿಸುವಾಗ ಅವರಲ್ಲಿ ವಿನಮ್ರತೆಯ ಭಾವವೇ ಹೆಚ್ಚು ತುಂಬಿರುತ್ತದೆ. ಅದರಲ್ಲೂ ನಮ್ಮ ವಿಶ್ವೇಶ್ವರ ಭಟ್ಟರಂತೂ ತುಂಬಿದ ಕೊಡ.
ನಮ್ಮ ಕಡೆ ಇಬ್ಬರು ಪ್ರಖ್ಯಾತ ವಿಶ್ವೇಶ್ವರ ಭಟ್ಟರಿದ್ದಾರೆ. ಒಬ್ಬರು ಪ್ರಖ್ಯಾತ ಸಾಹಿತಿ, ಅಂಕಣಕಾರ, ವಿಶ್ವೇಶ್ವರ ಭಟ್ಟ ಮೂರೂರು. ಇನ್ನೊಬ್ಬರು ಅದ್ಭುತ ಕಂಠದ ಸಂಗೀತ ವಿದ್ವಾನ್ ವಿಶ್ವೇಶ್ವರ ಭಟ್ಟ ಖರ್ವಾ. ಬಹಳ ಇಂಪಾದ ಸ್ವರ ಮಾಧುರ್ಯದ ವಿಶ್ವೇಶ್ವರ ಭಟ್ಟರು ನಮ್ಮ ಹೊನ್ನೂರಿನ ಹೆಮ್ಮೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಿವಾಸಿಯಾದ ವಿಶ್ವೇಶ್ವರ ಭಟ್ಟರು ಪ್ರಸ್ತುತ ಜಲವಳ್ಳಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಅಣ್ಣ ಗಣೇಶ ಭಟ್ಟರು ಕೂಡ ಅಷ್ಟೇ ಸಾತ್ವಿಕರು. ಪ್ರತಿಭಾ ಸಂಪನ್ನರು. ಗಣೇಶ ಭಟ್ಟರು ಬೆಳ್ತಂಗಡಿಯಲ್ಲಿ ಕಾಲೇಜು ಉಪನ್ಯಾಸಕರು. ಸಂಪ್ರದಾಯಸ್ಥ ವೈದಿಕ ಕುಟುಂಬದ ಹಿನ್ನೆಲೆಯಿರುವ ಅಣ್ಣ ತಮ್ಮಂದಿರು ಯುವಕರಿಗೇ ಒಂದು ಮಾದರಿ. ಗುರು ಹಿರಿಯರಲ್ಲಿ ಭಕ್ತಿ, ಸೌಜನ್ಯ, ವಿಧೇಯತೆಯೇ ಮೈತಳೆದಂಥ ವ್ಯಕ್ತಿತ್ವ ಸಹೋದರರದ್ದು.
ಬಹುತೇಕ ನಮ್ಮ ಪ್ರತಿದಿನ ಪ್ರಾರಂಭವಾಗುವುದೇ ಶ್ರೀಯುತ ವಿಶ್ವೇಶ್ವರ ಭಟ್ಟರ ಭಜನೆಯ ಮೂಲಕ. ನಾವು ಎಷ್ಟು ಸಂಗೀತ ಪ್ರಿಯರೆಂದರೆ ನನ್ನದೂ ನನ್ನ ತಂದೆಯವರಿದೂ ಪ್ರತ್ಯೇಕ sound system ಇದೆ. ಅವರು ಹಾಡಿರುವ ಬಹುತೇಕ ಎಲ್ಲಾ ಹಾಡಿನ c.d ಗಳೂ ನಮ್ಮ ಹತ್ತಿರ ಇವೆ. ನಾವು ಒಂದು ಲೆಕ್ಕಕ್ಕೆ ಅವರಿಗೆ ಗಾಳಿ ಹಾಕದ fans.?
ವಿಶ್ವೇಶ್ವರ ಭಟ್ಟರು ನಮಗೆ ಯಾಕೆ ಬಹು ಇಷ್ಟವಾಗುತ್ತಾರೆಂದರೆ…. ಅವರದು ಕರ್ಕಶವೆನಿಸದ ಮಧುರವಾದ ಧ್ವನಿ. ಎಂತಹ ಬೇಸರಕ್ಕೂ ಅವರ ಧ್ವನಿ ಸಂತೋಷದ ಮದ್ದಾಗಬಲ್ಲದು. ವರದಹಳ್ಳಿಯ ಶ್ರೀಧರ ಸ್ವಾಮಿಗಳ ಕುರಿತಾಗಿ ಅವರು ಹಾಡಿರುವ ಹಾಡುಗಳು ಅನನ್ಯವಾದದ್ದು. ಅನೇಕ ದೇವರ ಸುಪ್ರಭಾತಗಳನ್ನೂ, ರಾಘವೇಶ್ವರ ಶ್ರೀಗಳ ರಾಮಕಥಾದ ಗೀತೆಗಳನ್ನೂ ಸೊಗಸಾಗಿ ಹಾಡಿ ಜನಮನ ಸೂರೆಗೊಂಡ ವಿಶ್ವೇಶ್ವರ ಭಟ್ಟರು ನಿಗರ್ವಿ. ಅವರ ಹಾಡುಗಳನ್ನು ಎಷ್ಟು ಬಾರಿ ಕೇಳಿದರೂ ಬೇಸರವೆನಿಸುವುದೇ ಇಲ್ಲ. ಅದು ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನು ಓದಿದ ಹಾಗೆ.
ಡಾ|| ಅಶೋಕ ಹುಗ್ಗಣ್ಣವರ ಹಾಗೂ ಡಾ|| ಭಾರತಿ ವೈಶಂಪಾಯನ ಕೊಲ್ಲಾಪುರ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ ವಿಶ್ವೇಶ್ವರ ಭಟ್ಟರು ಹಿಂದೂಸ್ತಾನಿ ಸಂಗೀತದಲ್ಲಿ ನಾಡು ಗುರುತಿಸಬಹುದಾದ ಕೆಲವೇ ಕೆಲವು ಶ್ರೇಷ್ಠ ಪ್ರತಿಭಾವಂತ ಯುವ ಗಾಯಕರಲ್ಲಿ ಒಬ್ಬರು. ಸಂಗೀತ ತರಗತಿಗಳನ್ನು ನಡೆಸುತ್ತಾ ಅಬಾಲ ವೃದ್ಧರವರೆಗೂ ತಮ್ಮ ಜ್ಞಾನವನ್ನು ದಾನ ಮಾಡುವ ಅವರು ಯಾವ ಪ್ರತಿಷ್ಠೆಗೂ ಪರದಾಡದ ಸ್ಥಿತಪ್ರಜ್ಞರು.
ವಿಶ್ವೇಶ್ವರ ಭಟ್ಟರ ಹಾಡುಗಳಲ್ಲಿ ಭಕ್ತಿರಸ ತನ್ನಿಂದ ತಾನೇ ಪ್ರವಹಿಸುತ್ತದೆ. ದೇವರ ಮೇಲೆ ಅವರಿಗಿದ್ದ ಶೃದ್ಧೆಗೆ ದೇವರು ಅವರಿಗೆ ಸುಂದರ ಶರೀರದ ಜೊತೆಗೆ ಶಾರೀರವನ್ನೂ ನೀಡಿದ ಎಂಬುದೇ ನನ್ನ ಭಾವನೆ. ಎದುರಿಗಿರುವವರನ್ನು ತನ್ನ ಗಾಯನದಿಂದ ತನ್ಮಯರಾಗಿಸುವ ಅವರಿಗೆ ಸಂಗೀತ ಸರಸ್ವತಿ ಒಲಿದಿದ್ದಾಳೆ ಎನ್ನುವುದು ನಿಸ್ಸಂಶಯ.
ಅವರು ಮಾತಿನ ಪ್ರಿಯರಲ್ಲ. ಅನವಶ್ಯಕ ಮಾತುಗಳನ್ನು ಅವರ ಬಾಯಿಂದ ನಾನು ಇದುವರೆಗೂ ಕೇಳಿದ್ದಿಲ್ಲ. ಅವರ ಒಂದು ನಗು…ನಮ್ಮಿಂದ ನೂರು ಮಾತುಗಳನ್ನು ಅಡಗಿಸಿ ಬಿಡುತ್ತದೆ. ಸಂಸಾರಕ್ಕಾಗಿ ಅವರು ನೀಡುವ ಸಮಯ ತುಂಬಾ ಕಡಿಮೆ. ಸಂಗೀತಕ್ಕೇ ಜಾಸ್ತಿ.
ಒಂದೊಂದು ಸಲ ಹೇಗಾಗುತ್ತದೆಂದರೆ ಸ್ವಲ್ಪ ಪ್ರಚಾರ ಸಿಕ್ಕರೆ ಸಾಕು….ಅಷ್ಟು ಕೊಟ್ಟರೆ ಮಾತ್ರ ಬರುತ್ತೇನೆ….ಇಷ್ಟು ನೀಡಿದರೆ ಮಾತ್ರ ಬರಬಹುದೇನೋ….ನೋಡುವ…… ನನಗೆ ಮೂರು ಕಡೆ ಈಗಾಗಲೇ book ಆಗಿದೆ…..ಪ್ರಯತ್ನಿಸುತ್ತೇನೆ ಈ ಥರದ ವಾಕ್ಯಗಳು ಸಾಮಾನ್ಯವಾಗಿ ಬಿಡುತ್ತವೆ. ಆದರೆ ನಮ್ಮ ವಿಶ್ವೇಶ್ವರ ಭಟ್ಟರು ಪ್ರಚಾರ ಪ್ರಿಯರೂ ಅಲ್ಲ. ಧನ ದಾಹಿಗಳೂ ಅಲ್ಲ. ಪ್ರೀತಿಯಿಂದ ಕರೆದಲ್ಲಿ ನಡು ರಾತ್ರಿ ಬಂದೂ ಹಾಡಿ ಹೋಗುವ ಸರಳ ಸಾದಾ ಸೀದಾ ಮನುಷ್ಯ ಅವರು.
ಅವರು ಸಂಗೀತ ಕಲಿಸುವ ಪರಿ ಕೂಡ ಬಹಳ ಆದರ್ಶ. ಒಂದೇ ಒಂದು ಸಲವೂ ಅವರು ಚಿಕ್ಕ ಮಕ್ಕಳ ಮೇಲೆ ರೇಗುವುದಿಲ್ಲ. ಹೇಳಿದ್ದನ್ನೇ ಹತ್ತು ಬಾರಿ ಹೇಳಿಕೊಡುವ ಪ್ರಸಂಗ ಬಂದರೂ ಬೇಸರಿಸುವುದಿಲ್ಲ. ತಾನೊಬ್ಬ ಸಂಗೀತ ವಿದ್ವಾನ್ ಎಂಬ ಅಹಮಿಕೆಯೇ ಇಲ್ಲ ಅವರಿಗೆ.
ಎಂದಿಗಾವುದೋ ನಿನ್ನ ದರುಶನ ಎಂಬ ಅವರ ಭಜನೆ ನನಗೆ ತುಂಬಾ ಇಷ್ಟವಾಗುತ್ತದೆ. ನನ್ನ ಸಾಹಿತ್ಯ ಕೃಷಿಯಿಂದ ದಣಿವಾದಾಗೆಲ್ಲ ಇದು ನನ್ನ ದಣಿವನ್ನು ನೀಗಿಸುವ ಅಮೃತ. ಅದನ್ನು ನಾನು desktop ಮೇಲೆಯೇ ಖಾಯಂ ಆಗಿ ಇರಿಸಿಕೊಂಡಿದ್ದೇನೆ.
ಈಗಾಗಲೇ ಅವರ ಹತ್ತಿಪ್ಪತ್ತು ಗಾಯನ ಧ್ವನಿಮುದ್ರಿಕೆಗಳು ಪ್ರಕಟವಾಗಿವೆ. ನಾಡಿನ ಪ್ರಮುಖ ವೇದಿಕೆಗಳಲ್ಲಿ ಅವರಿಂದ ಪ್ರದರ್ಶನ ನೀಡಲ್ಪಟ್ಟಿದೆ. ಸಾರ್ವಜನಿಕ ಸನ್ಮಾನಗಳಿಗೂ ಅವರು ಭಾಜನರಾಗಿದ್ದಾರೆ.
ವಿಶ್ವೇಶ್ವರ ಭಟ್ಟರ ಹಾಡುಗಳನ್ನು ಇಡೀ ಊರಿಗೆ ಕೇಳುವ ಹಾಗೆ ನಾವು ಹಾಕಿ ನಾವು ಆಸ್ವಾದಿಸುತ್ತೇವೆ.? ಅವರ ಹಾಡುಗಳನ್ನು ಕೇಳದ ದಿನವೆಂದರೆ ಅದು ಊಟ ಮಾಡದೇ ಉಪವಾಸ ಇದ್ದ ದಿನದಂತೆ. ಕೆಲವರಿಗೆ ಆ
…..ಈ….ಊ…..ಎಂದು ರಾಗ ಹಾಡುವುದು ಇಷ್ಟವಾಗದು. ಆದರೆ ನಮಗದು ಬೆಲ್ಲದ ಪಂಚಕಜ್ಜಾಯ ನೀಡಿದಂತೆ. ನಿಧಾನವಾಗಿ ಅಗಿದಷ್ಟೂ ರುಚಿ ಜಾಸ್ತಿ.
ವಿಶ್ವೇಶ್ವರ ಭಟ್ಟರ ಕೀರ್ತಿ ರಾಷ್ಟ್ರದಾದ್ಯಂತ ಹರಡಲಿ. ಪ್ರಶಸ್ತಿ ಪುರಸ್ಕಾರಗಳು ಅವರನ್ನೇ ಅರಸಿಕೊಂಡು ಬರಲಿ. ಅವರ ಗಾನ ಸುಧೆ ಲಕ್ಷಾಂತರ ಗಾಯನ ಪ್ರಿಯರ ಹೃನ್ಮನ ತಣಿಸಲಿ.
ಬದುಕೆಂಬುದು ಊಟ ಉಣಿಸುಗಳ ಲೆಕ್ಕವಷ್ಟೇ ಅಲ್ಲ. ಸಂಗೀತ ನಮ್ಮ ಆನಂದ ಮಾರ್ಗ. ಸಂಗೀತ ಸಾಹಿತ್ಯದ ಜೊತೆಗೆ ನಮ್ಮ ಜೀವನದ ಪಯಣ. ಒಂದೇ ಹೊತ್ತಾದರೂ ಊಟ ಮಾಡಿಯೇವು ಹಾಡು ಕೇಳದೇ ಬಿಡುವವರೇ ಅಲ್ಲ. ಯಕ್ಷಗಾನ, ಸಂಗೀತ ನಮ್ಮ ಬದುಕಿನ ಅವಿಭಾಜ್ಯ ಅಂಗ. ಕಲಾವಿದರನ್ನು ಗೌರವಿಸುತ್ತಾ ಅವರನ್ನು ಪ್ರೋತ್ಸಾಹಿಸುವ ಮಹತ್ತರ ಜವಾಬ್ದಾರಿ ಸಮಾಜದ್ದು. ಅದು ನನ್ನದು ಕೂಡ. ಏನೊಂದನ್ನೂ ಬಯಸದ ವಿಶ್ವೇಶ್ವರ ಭಟ್ಟರಿಗೆ ನನ್ನ ಮಗಳ ಪರವಾಗಿ ಇದು ಅಕ್ಷರ ಕಾಣಿಕೆ. ಸ.ರಿ ಯಾದೀತೊ ಬಿಟ್ಟೀತೋ ನಿಮ್ಮ ಸ ರಿ ಗ ಮ ಪ ದದ ಶಾಶ್ವತ ಅಭಿಮಾನಿ ನಾವು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ವಿಶ್ವೇಶ್ವರ ಭಟ್ಟರಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ವಿಶ್ವೇಶ್ವರ ಭಟ್ಟರಿಗೆ ಸಂದೀಪನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ