ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಗಜಾನನ ಭಟ್ಟ ದಿಬ್ಬಣಗಲ್

ಸಹೋದರ ಗಜಾನನನ್ನು ಪರಿಚಯಿಸುವುದು ನಮ್ಮದೇ ಮನೆಯ ಒಬ್ಬ ಸದಸ್ಯನನ್ನು ನಿಮಗೆ ಪರಿಚಯಿಸಿದಂತೆ. ಅತಿಶಯೋಕ್ತಿಯಾಗಿ ಒಂದು ಶಬ್ದವನ್ನೂ ಬರೆಯಬಾರದೆಂದು ಅಂದುಕೊಳ್ಳುತ್ತೇನೆ. ಯಾಕೆಂದರೆ ಈ ಲೇಖನ ಮಾಲಿಕೆಗಳು ಯಾರನ್ನೂ ಒತ್ತಾಯ ಪೂರ್ವಕವಾಗಿ ಮೆಚ್ಚಿಸುವ ಪ್ರಯತ್ನ ಅಲ್ಲ. ಅದು ನನ್ನನ್ನು ಅಭಿಮಾನ ಪ್ರೀತಿಗಳಿಂದ ನೋಡುತ್ತಿರುವವರಿಗೆ ನಾನು ನೀಡುತ್ತಿರುವ ಅಕ್ಷರ ಕಾಣಿಕೆ.
ಊರಿನಲ್ಲಿದ್ದು ಸಾಧನೆ ಮಾಡುವುದಕ್ಕೆ ಅಪ್ಪ ಮಾಡಿದ್ದೊಂದಿಷ್ಟು ಇರುತ್ತದೆ.? ಪರ ಊರಿನಲ್ಲಿದ್ದು ಸಾಧನೆ ಮಾಡುವುದಕ್ಕೆ ಬೆಂಬಲವನ್ನು ನಾವೇ ಹುಡುಕಿಕೊಂಡು ಹೋಗಬೇಕಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೀರೇರಿ ಶಾಲೆಯನ್ನು ನಾಡು ಗುರುತಿಸುವಂತೆ ಮಾಡಿದ ಎಳೆಯ ಪೋರ ನಮ್ಮ ಗಜಾನನ. ಆಹಾ! ಅವನ‌ ಸಾಧನೆಯೇ!
ಗಜಾನನನ ಮನೆ ಹೊನ್ನಾವರ ತಾಲೂಕಿನ ದಿಬ್ಬಣಗಲ್. ಶ್ರೀ ನಾರಾಯಣ ಭಟ್ಟ ಹಾಗೂ ಸಾವಿತ್ರಿ ದಂಪತಿಯ ದ್ವಿತೀಯ ಪುತ್ರ ಗಜಾನನ. ಅವನ ಅಜ್ಜನ ಮನೆ ಇರುವುದು ನಮ್ಮ ಮನೆಯ ಹತ್ತಿರದ ಸಾಣಮನೆಯಲ್ಲಿ. ಹೀಗಾಗಿ ಗಜಾನನ ನನಗೆ ಚಿಕ್ಕಂದಿನಿರುವಾಗಿಂದ ಗೊತ್ತು. ಬೆಳೆದು ದೊಡ್ಡವನಾದ ಮೇಲೂ ಅವನಿಗೆ ನನ್ನ ಕಂಡರೆ ಯಾಕೋ ಬಹಳ ಇಷ್ಟ. ನನಗೂ ಆತನ ಗುಣ ಸ್ವಭಾವಗಳು ಬಹಳ ಇಷ್ಟವಾಗುತ್ತವೆ. ಕಲಿಯುವ ಸಂದರ್ಭಗಳಲ್ಲಿ ಈ ಕಡೆ ಬಂದಾಗೆಲ್ಲಾ ಗಜಾನನ ನಮ್ಮ ಮನೆಗೆ ಬಂದು ಹೋಗುತ್ತಿದ್ದ. ನಾವು ಅನೇಕ ವಿಚಾರಗಳನ್ನು ಬಹಳ ತಮಾಷೆಯಾಗಿ ಹಂಚಿಕೊಳ್ಳುತ್ತಿದ್ದೆವು. ಶೈಕ್ಷಣಿಕ ವಿಚಾರದಲ್ಲಿ ಅವನು ನನಗಿಂತ ಹತ್ತು ಹೆಜ್ಜೆ ಮುಂದೆ.

‌‌‌ಗಜಾನನನಿಗೆ ಶಿವಮೊಗ್ಗದಲ್ಲಿ ಹೊಸನಗರ ತಾಲೂಕಿಗೆ appointment ಆಯ್ತು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೀರೇರಿಯಲ್ಲಿ ಆತ ಸೇವೆಗೆ ಸೇರಿದ. (ಈಗಲೂ ಅಲ್ಲೇ ಇದ್ದಾನೆ.) ತರುಣನೂ, ಕ್ರಿಯಾಶೀಲನೂ, ಪ್ರತಿಭಾವಂತನೂ ಆದ ಗಜಾನನ ಕಿಂಚಿತ್ತೂ ಬೇಸರಗೊಳ್ಳಲಿಲ್ಲ. ಹುದ್ದೆ, ಅಧಿಕಾರ, ಕೊಟ್ಟ ಕೆಲಸ ಯಾವುದು ಎನ್ನುವುದು ಮುಖ್ಯವಲ್ಲ. ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎನ್ನುವುದು ಮುಖ್ಯ. ಬಡತನವನ್ನೇ ಉಂಡು ಬೆಳೆದ ನಮಗೆ ಆ ಥರದ ಸೋಗಲಾಡಿತನ ಹತ್ತಿರವೂ ಸುಳಿಯುವುದಿಲ್ಲ.
ಇಂದು ನೀರೇರಿ ಶಾಲೆ ಇಡೀ ಕರ್ನಾಟಕದ ಅತ್ಯುತ್ತಮ ಶಾಲೆಗಳಲ್ಲಿ ಒಂದು. ಬರೀ ಫೋಟೋಕ್ಕಾಗಿ ಮಾಡಿದ ಉತ್ತಮ ಶಾಲೆಯಲ್ಲ ಅದು. ಅಲ್ಲಿಲ್ಲಿ ನಿಂತು ಫೋಟೋ ಹೊಡೆಸಿಕೊಂಡು ಪ್ರಶಸ್ತಿಗೆ ಆಸೆ ಪಡುವ ಮನುಷ್ಯನೂ ಅಲ್ಲ ನಮ್ಮ ಗಜಾನನ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಈ ಕಿರಿಯ ಪ್ರಾಥಮಿಕ ಶಾಲೆಯನ್ನು ಸಜ್ಜುಗೊಳಿಸಿದ ಗಜಾನನನ ಪರಿ ಅಚ್ಚರಿ ಮೂಡಿಸುವಂತದ್ದು. ಆ ಶಾಲೆಯಲ್ಲಿ ಏನುಂಟು ಏನಿಲ್ಲ?! ಎಲ್ಲವೂ ಇದೆ. ಖಾಸಗಿ ಶಾಲೆಯನ್ನೂ ಮೀರಿಸಿ ಸರಕಾರಿ ಶಾಲೆಯನ್ನು ಊರವರ, ದಾನಿಗಳ, ಹಳೆಯ ವಿದ್ಯಾರ್ಥಿಗಳ, ಹಾಗೂ ಅಧಿಕಾರಿ ವರ್ಗದವರ ಸಹಕಾರದಿಂದ ಆತ ಮಾದರಿಗೊಳಿಸಿದ್ದಾನೆ. ಶಾಲೆಯ ಉದ್ಯಾನವನ ನೋಡುವುದಕ್ಕೆ ಎರಡು ಕಣ್ಗಳು ಸಾಲವು. ಮುದ್ದಾದ ಮಕ್ಕಳು ಮೂರು ಮೂರು ರೀತಿಯ ಯೂನಿಫಾರ್ಮ ಹಾಕಿಕೊಂಡು ಮಿಂಚುವ ಪರಿ ಅನನ್ಯ. ಜಿಲ್ಲಾಧಿಕಾರಿಗಳು ತಮ್ಮ ಹುಟ್ಟಿದ ದಿನವನ್ನು ನೀರೇರಿ ಶಾಲೆಗೆ ಬಂದು ಮಕ್ಕಳು ಮತ್ತು ಗಜಾನನನ ಜೊತೆ ಆಚರಿಸಿಕೊಳ್ಳುತ್ತಾರೆಂದರೆ ಅವನ ಕಾರ್ಯತತ್ಪರತೆ ಎಷ್ಟು ಎಂಬುದರ ಚಿಕ್ಕ ಅರಿವಾದೀತು. ಯಾವುದೇ ಅಧಿಕಾರಿ ವರ್ಗ ಬರಲಿ ಮೊದಲು ಭೇಟಿ ನೀಡುವ ಶಾಲೆ ಅದು ನೀರೇರಿ.
ಗಜಾನನ ಮಕ್ಕಳನ್ನು ತುಂಬಾ ಇಷ್ಟಪಡುವ ವ್ಯಕ್ತಿ. ಫ್ಯಾಷನ್ ಮಾಡಿಕೊಂಡು ಅಲ್ಲಿಲ್ಲಿ ಅಡ್ಡಾಡುತ್ತ ಗಡ್ಡ ಬಿಟ್ಟು…ಅಲ್ಲಿಲ್ಲಿ ಸುತ್ತಾಡಿ ಸಲ್ಲದ ರಾಜಕೀಯ ಮಾಡುತ್ತಾ ವೃತ್ತಿಗೆ ಅಪಚಾರ ಎಸಗುವ ಮನುಷ್ಯನೇ ಅಲ್ಲ ಆತ. ತಾನಾಯ್ತು, ತನ್ನ ಶಾಲೆಯ ಕೆಲಸವಾಯ್ತು. ಹೀಗಾಗಿಯೇ ಆತನಿಗೆ ಅರ್ಹವಾಗಿಯೇ ಈಗಾಗಲೇ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಾಯವಾಗಿದೆ.
ಎಲ್ಲೇ ಏನೇ ಉತ್ತಮವಾದುದು ಕಾಣಲಿ. ಅದನ್ನು ತಾನೂ ಮಾಡಬಹುದಾ ಎಂದು ಯೋಚಿಸುವ ಆತ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅವಿರತ ಶ್ರಮಿಸುತ್ತಾನೆ. ಹಾಗಂತ ಬೇರೆಯವರು ಮಾಡಿದ್ದನ್ನೂ ತಾನೇ ಮಾಡಿದ್ದೇನೆ ಎಂದು ಕಾಲರ್ ಮೇಲೆತ್ತಿಕೊಳ್ಳುವ ಜಾಯಮಾನದವನಲ್ಲ.
ಗಜಾನನನಿಗೆ ನಾನು ಮತ್ತು ನನ್ನ ಬರಹಗಳು ತುಂಬಾ ಇಷ್ಟವಾಗುತ್ತವೆ. ನಮ್ಮ ಸಂದೀಪಣ್ಣ ಎಂದು ಪ್ರೀತಿಯಿಂದ ಯಾವಾಗಲೂ ಹೇಳುವ ಗಜಾನನ ನನಗೆ ಸ್ವಂತ ತಮ್ಮನಂತೆ. ಸ್ಫುರದ್ರೂಪಿ ಸುಗುಣವಂತ ಆತ. ಅವನ ಮಡದಿಯೂ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದವಳು.
ಗುಣಕ್ಕೆ ಮತ್ಸರವಿಲ್ಲ…..ಎಂಬಂತೆ ನಾವಿಬ್ಬರೂ ಒಂದೇ ಗುಣ ಸ್ವಭಾವದವರಾದ್ದರಿಂದ ಪರಸ್ಪರ ಗೌರವಿಸುತ್ತಾ ಜೀವನವನ್ನು ಸಂಭ್ರಮಿಸುತ್ತೇವೆ. ಊರಿನಲ್ಲಿ ರಂಗ ಪರ ಊರಿನಲ್ಲಿ ಮಂಗ… ಎನ್ನುವ ಗಾದೆಗೆ ಗಜಾನನ ತದ್ವಿರುದ್ಧ. ದೂರವಿರುವ ಎಷ್ಟೋ ಜನ ಮನೆ ಹತ್ತಿರ ವರ್ಗಾವಣೆಗೊಂಡು ಹೋಗಬೇಕೆನ್ನುವ ಯೋಚನೆಯಲ್ಲಿ ಇದ್ದ ಜಾಗಕ್ಕೆ ತಾವೇನಾದರೂ ಕೊಟ್ಟು ಬರಬೇಕೆನ್ನುವುದನ್ನೂ ಮರೆತು ಬಿಡುತ್ತಾರೆ. ಆದರೆ ಗಜಾನನ ನೀರೇರಿಯ ಒಬ್ಬ ಸದಸ್ಯನೇ ಆಗಿ ಹೋಗಿದ್ದಾನೆ.
ಅವನ ಶಾಲೆಗೆ ಎಂಥವರಾದರೂ ಭೇಟಿ ಕೊಡುವಂತಿದೆ. ಅವನ ಎಷ್ಟೋ idea ಗಳನ್ನು ನಾವೂ ಪ್ರಯತ್ನಿಸಬಹುದಾಗಿದೆ. ಕುಂಟು ನೆಪ ಹೇಳಿ ಕೆಲಸದಿಂದ ವಿಮುಖವಾಗದವರಿಗೆ… ಸಾಧನೆಯ ಪಥದಲ್ಲೇ ಮುನ್ನುಗ್ಗಿ ಸಾಗುವವರಿಗೆ ಗಜಾನನನ ಬಳಿ ಔಷಧ ಗುಳಿಗೆಗಳಿವೆ. ಶಿಕ್ಷಕನಾಗಿ ಮಕ್ಕಳ ಮನಸ್ಸನ್ನಷ್ಟೇ ಗೆಲ್ಲದ ಗಜಾನನ ತನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರ ಮನಸ್ಸನ್ನೂ ಗೆಲ್ಲಬಲ್ಲ ಸಾತ್ವಿಕ. ಸ್ನೇಹಜೀವಿ.
ಅವನು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ನಾನು ಅದನ್ನು ಕಣ್ತುಂಬ ನೋಡಬೇಕು. ನನ್ನ ಜೊತೆ ಜೊತೆಯಾಗಿ ಗಜಾನನ ಯಾವತ್ತೂ ಇದ್ದರೆ ಅದು ನನಗೆ ಆನೆ ಬಲವಿದ್ದಂತೆ. ಖುಷಿ ಕೊಡುವ ವ್ಯಕ್ತಿಗಳಿಗಾಗಿ ನನ್ನ ಹುಡುಕಾಟ ಸಾಗಿಯೇ ಇರುತ್ತದೆ. ನಿಮಗೂ ಅವರನ್ನು ಪರಿಚಯಿಸುವುದಕ್ಕೆ ನಾನು ಮರೆಯುವುದಿಲ್ಲ. ಅವನ ಬಗ್ಗೆ ಬರೆದು ನಾಳೆ ಅವನಿಂದ ಏನು ಉಪಕಾರ ಸಿಗುತ್ತದೆ ಎಂದು ಕೊರಳು ಉದ್ದ ಮಾಡುವ ಮನುಷ್ಯ ನಾನಲ್ಲ. ಸಾರ್ಥಕ ಕ್ಷಣಗಳನ್ನು ಅನುಭವಿಸಿ ನನ್ನ ಲೇಖನಿ ವಿರಮಿಸುತ್ತದೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಗಜಾನನನಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

ಗಜಾನನನಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ